ಮಧುಬಾಲಾ ಬಯೋಪಿಕ್‌ನಲ್ಲಿ ನಟಿಸುವ ಚಾನ್ಸ್ ಗಿಟ್ಟಿಸಿದ ʻಧುರಂಧರ್ ಬ್ಯೂಟಿʼ ಸಾರಾ ಅರ್ಜುನ್
Madhubala Biopic: ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮಧುಬಾಲಾ ಅವರ ಬಯೋಪಿಕ್‌ನಲ್ಲಿ ಸಾರಾ ಅರ್ಜುನ್ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಜಸ್ಮೀತ್ ಕೆ. ರೀನ್ ನಿರ್ದೇಶನದ ಈ ಸಿನಿಮಾದಲ್ಲಿ ಮಧುಬಾಲಾ ಅವರ ಬದುಕಿನ ಯಾರಿಗೂ ಗೊತ್ತಿರದ ಕಥೆಗಳನ್ನು ತೆರೆಯ ಮೇಲೆ ತೋರಿಸಲಿದ್ದಾರಂತೆ.
-
ಬಾಲ ನಟಿಯಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದ ನಟಿ ಸಾರಾ ಅರ್ಜುನ್, ʻಧುರಂಧರ್ʼ ಸರಣಿ ಸಿನಿಮಾಗಳಿಂದ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಸದ್ಯ ಅವರ ಮುಂದಿನ ಸಿನಿಮಾಗಳು ಯಾವುವು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ನಡುವೆ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಅದೇನಪ್ಪ ಅಂದ್ರೆ, ಸಾರಾ ಅರ್ಜುನ್ ಅವರಿಗೆ ದೊಡ್ಡ ಅವಕಾಶವೊಂದು ಹುಡುಕಿಕೊಂಡು ಬಂದಿದೆ.
ಮಧುಬಾಲಾ ಬಯೋಪಿಕ್‌ನಲ್ಲಿ ಸಾರಾ ನಟನೆ
ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಮುಂದಿನ ಚಿತ್ರದಲ್ಲಿ ಭಾರತೀಯ ಚಿತ್ರರಂಗದ ದಂತಕಥೆ ಮಧುಬಾಲಾ ಅವರ ಪಾತ್ರವನ್ನು ಸಾರಾ ಅರ್ಜುನ್ ನಿರ್ವಹಿಸಲಿದ್ದಾರೆ. ಪ್ರಸ್ತುತ ಪ್ರಿ-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವು ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಆರಂಭಿಸುವ ನಿರೀಕ್ಷೆಯಿದೆ. ಹಿಂದಿ ಚಿತ್ರರಂಗದ ಸುವರ್ಣ ಯುಗದ ಕಥೆಯನ್ನು ಹೊಂದಿರುವ ಈ ಸಿನಿಮಾ ಒಂದು ಅದ್ಭುತ ಅನುಭವ ನೀಡಲಿದೆ ಎಂದು ಹೇಳಲಾಗುತ್ತಿದೆ. ಭಾರತೀಯ ಚಿತ್ರರಂಗದ ಅತ್ಯಂತ ಪ್ರೀತಿಪಾತ್ರ ನಟಿ ಮಧುಬಾಲಾ ಅವರ ಪಾತ್ರಕ್ಕೆ ಸಾರಾ ಅರ್ಜುನ್ ಅವರನ್ನು ಆಯ್ಕೆ ಮಾಡಿರುವುದು ಅಚ್ಚರಿ ಮೂಡಿಸಿದೆ.
Sara Arjun: ʻಧುರಂಧರ್ʼ ಚಿತ್ರದ ಸಂಪೂರ್ಣ ತಂಡಕ್ಕೆ ಧನ್ಯವಾದ ಅರ್ಪಿಸಿದ ಸಾರಾ ಅರ್ಜುನ್
ಮಧುಬಾಲಾ ಚಿತ್ರಕ್ಕಾಗಿ ಭಾರಿ ತಯಾರಿ
"ಮಧುಬಾಲಾ ಅವರ ಸೌಂದರ್ಯ ಮತ್ತು ಗಾಂಭೀರ್ಯವನ್ನು ತೆರೆಯ ಮೇಲೆ ತರಲು ಸಾರಾ ಅರ್ಜುನ್ ದೊಡ್ಡ ಮಟ್ಟದ ದೈಹಿಕ ಬದಲಾವಣೆ ಮಾಡಿಕೊಳ್ಳಬೇಕಿದೆ. ಉಡುಪುಗಳ ವಿನ್ಯಾಸದಿಂದ ಹಿಡಿದು, ಭಾಷಾ ತರಬೇತಿ ಮತ್ತು ಲುಕ್ ಟೆಸ್ಟ್‌ಗಳವರೆಗೆ ತಯಾರಿಗಳು ಆರಂಭವಾಗಿವೆ. ಮಧುಬಾಲ ಅವರ ಕಾಲಘಟ್ಟವನ್ನು ಮರುಸೃಷ್ಟಿಸಲು ಚಿತ್ರತಂಡವು ಎಲ್ಲಾ ರೀತಿಯ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ" ಎಂದು ಮೂಲಗಳು ತಿಳಿಸಿವೆ.
ಆಲಿಯಾ ಭಟ್ ನಟನೆಯ ʻಡಾರ್ಲಿಂಗ್ಸ್ʼ ಸಿನಿಮಾಕ್ಕೆ ನಿರ್ದೇಶನ ಮಾಡಿ ಗಮನಸೆಳೆದಿದ್ದ ಜಸ್ಮೀತ್ ಕೆ. ರೀನ್ ಅವರು ಈ ಮಧುಬಾಲಾ ಬಯೋಪಿಕ್‌ನ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಈ ಸಿನಿಮಾವು ಮಧುಬಾಲಾ ಅವರ ಬದುಕಿಗೆ ಸಲ್ಲಿಸುವ ಗೌರವ ಎಂದು ಹೇಳಲಾಗುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ಹಣ ಹಾಕುತ್ತಿರುವುದರಿಂದ ನಿರೀಕ್ಷೆ ಡಬಲ್ ಅಗಿದೆ.
ಬಾಲಿವುಡ್ ಐಕಾನ್ ಮಧುಬಾಲಾ
1950ರ ದಶಕದಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯರಲ್ಲಿ ಮಧುಬಾಲಾ ಕೂಡ ಒಬ್ಬರು. ಎರಡು ದಶಕಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಅವರು ಹಾಸ್ಯ ಚಿತ್ರಗಳಿಂದ ಹಿಡಿದು ಐತಿಹಾಸಿಕ ಸಿನಿಮಾಗಳವರೆಗೆ ನೀಡಿದ ಕೊಡುಗೆ ಅಪಾರ. ಅವರು ನಿಧನರಾಗಿ ದಶಕಗಳೇ ಕಳೆದಿದ್ದರೂ, ಈಗಲೂ ಬಾಲಿವುಡ್‌ನ ಐಕಾನ್ ಆಗಿ ಮಧುಬಾಲಾ ಗುರುತಿಸಲ್ಪಡುತ್ತಾರೆ. ಸದ್ಯ ಧುರಂಧರ್‌ನಂತಹ ಗೆಲುವು ಪಡೆದ ಖುಷಿಯಲ್ಲಿರುವ ನಟಿ ಸಾರಾ ಅರ್ಜುನ್‌ಗೆ ಈಗ ಇಂತಹದ್ದೊಂದು ಶಕ್ತಿಯುತ ಪಾತ್ರ ಸಿಕ್ಕಿರುವುದು ಅವರ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ.