ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwanath Hegde Column: ರೈತನ ಬೆವರು- ಗ್ರಾಹಕನ ಜೇಬಿನ ನಡುವೆ ಹೊಂದಾಣಿಕೆ ಅಗತ್ಯ

ರೈತನ ಮನೆಯಿಂದ ಹೊರಟ ಹಾಲು ಹಳ್ಳಿಗಳಿಂದ ಸಂಗ್ರಹಣೆ, ಗುಣಮಟ್ಟ ಪರೀಕ್ಷೆ, ಶೀತಲೀಕರಣ, ಸಾಗಣೆ, ಸಂಸ್ಕರಣೆ, ಪೊಟ್ಟಣ ತಯಾರಿಕೆ ಮತ್ತು ವಿತರಣೆ- ಹಲವು ಹಂತಗಳನ್ನು ದಾಟಬೇಕು. ಪ್ರತಿಯೊಂದು ಹಂತಕ್ಕೂ ವೆಚ್ಚವಿದೆ. ಹೀಗಾಗಿ ಅಂಗಡಿಯಲ್ಲಿ ಅರವತ್ತು ರೂಪಾಯಿಗೆ ಸಿಗುವ ವಸ್ತುವನ್ನು ರೈತನಿಂದ ಮೂವತ್ತು ರೂಪಾಯಿಗೆ ಖರೀದಿಸಿದ್ದಾರೆ ಎಂದ ಮಾತ್ರಕ್ಕೆ ಮಧ್ಯದ ಮೂವತ್ತು ರೂಪಾಯಿ ಲಾಭ ಎಂದು ಹೇಳುವುದು ಸರಿಯಲ್ಲ. ಆ ಮಧ್ಯದ ವೆಚ್ಚ ಎಷ್ಟು ಸಕಾರಣ? ಈ ಕಥೆ ಹಾಲಿನದ್ದೊಂದೇ ಅಲ್ಲ.

ರೈತನ ಬೆವರು- ಗ್ರಾಹಕನ ಜೇಬಿನ ನಡುವೆ ಹೊಂದಾಣಿಕೆ ಅಗತ್ಯ

-

Profile
Ashok Nayak Oct 28, 2026 7:05 AM

ಬೆಲೆ ಬಾಳು

ವಿಶ್ವನಾಥ್‌ ಹೆಗಡೆ

ಒಂದು ನೂರು ರೂಪಾಯಿಯ ನೋಟನ್ನು ಕ್ಷಣಕಾಲ ಕಲ್ಪಿಸಿಕೊಳ್ಳಿ. ಬೆಳಿಗ್ಗೆ ಅದು ಗ್ರಾಹಕನ ಜೇಬಿನಲ್ಲಿತ್ತು. ಸ್ವಲ್ಪ ಹೊತ್ತಿನ ನಂತರ ಹಾಲು, ತರಕಾರಿ ಅಥವಾ ಯಾವುದೋ ಆಹಾರ ಪದಾರ್ಥ ಖರೀದಿಸಲು ಹೊರಬಂದು ಅಲ್ಲಿಂದ ಅಂಗಡಿ, ವಿತರಣೆ, ಸಾಗಣೆ, ಸಂಸ್ಕರಣೆ, ಸಂಗ್ರಹಣೆ ಹೀಗೆ ಹಲವು ಹಂತಗಳನ್ನು ದಾಟಿ ಅದರ ಒಂದು ಭಾಗ ಕೊನೆಗೆ ರೈತನವರೆಗೆ ತಲುಪುತ್ತದೆ. ಆದರೆ ಆ ನೂರು ರೂಪಾಯಿಯಲ್ಲಿ ರೈತನ ಕೈಗೆ ಎಷ್ಟು ತಲುಪಿತು? ಉಳಿದ ಹಣವೆಲ್ಲ ಯಾರ ಲಾಭ? ಈ ಎರಡು ಪ್ರಶ್ನೆಗಳ ನಡುವೆಯೇ ನಮ್ಮ ಆಹಾರದ ಬೆಲೆಯ ದೊಡ್ಡ ಕಥೆ ಅಡಗಿದೆ.

ಬೆಳಿಗ್ಗೆ ಮನೆಯ ಬಾಗಿಲಿಗೆ ಬರುವ ಹಾಲಿನ ಬೆಲೆ ಲೀಟರ್‌ಗೆ ಐದು ರೂಪಾಯಿ ಹೆಚ್ಚಾಗಿದೆ ಎಂದುಕೊಳ್ಳಿ. ದಿನಕ್ಕೆ ಎರಡು ಲೀಟರ್ ಹಾಲು ಬಳಸುವ ಕುಟುಂಬ ತಕ್ಷಣ ಲೆಕ್ಕ ಹಾಕುತ್ತದೆ- ದಿನಕ್ಕೆ ಹತ್ತು ರೂಪಾಯಿ, ತಿಂಗಳಿಗೆ ಸುಮಾರು ಮುನ್ನೂರು ರೂಪಾಯಿ ಹೆಚ್ಚುವರಿ ಖರ್ಚು. ಈಗಾಗಲೇ ಎಲ್ಲದರ ಬೆಲೆಯೂ ಏರುತ್ತಿದೆ, ಈಗ ಹಾಲೂ ದುಬಾರಿಯಾಯಿತೇ ಎಂಬ ಅಸಮಾಧಾನ ಸಹಜ. ಅದೇ ಐದು ರೂಪಾಯಿಯ ಸುದ್ದಿಯನ್ನು ಹಳ್ಳಿಯಲ್ಲಿರುವ ಹೈನುಗಾರ ಓದಿದಾಗ ಅವನ ಪ್ರಶ್ನೆ ಬೇರೆಯೇ- ಇದರಲ್ಲಿ ನನಗೆ ಎಷ್ಟು ಸಿಗುತ್ತದೆ? ಒಂದೇ ಬೆಲೆ ಏರಿಕೆ, ಆದರೆ ಎರಡು ಬೇರೆ ಲೆಕ್ಕ. ಹಾಲು ಒಕ್ಕೂಟಗಳು ಲೀಟರ್‌ಗೆ ಎಂಟರಿಂದ ಹತ್ತು ರೂಪಾಯಿವರೆಗೆ ದರ ಹೆಚ್ಚಿಸುವ ಬೇಡಿಕೆ ಮುಂದಿಟ್ಟಿವೆ. ಉತ್ಪಾದನಾ ವೆಚ್ಚದ ಏರಿಕೆಯೇ ಪ್ರಮುಖ ಕಾರಣ. ಸರ್ಕಾರವೂ ಸಮ್ಮತಿ ನೀಡಿದೆ. ಆದರೆ, ಒಂದು ಆಹಾರ ಪದಾರ್ಥಕ್ಕೆ ಸರಿಯಾದ ಬೆಲೆ ಯಾವುದು? ರೈತನಿಗೆ ಬದುಕಲು ಸಾಧ್ಯವಾಗುವ ಬೆಲೆಯೇ? ಗ್ರಾಹಕನಿಗೆ ಖರೀದಿಸಲು ಸಾಧ್ಯವಾಗುವ ಬೆಲೆಯೇ? ಮಧ್ಯದಲ್ಲಿರುವ ಸಂಸ್ಥೆಗೆ ವ್ಯವಹಾರ ನಡೆಸಲು ಸಾಧ್ಯವಾಗುವ ಬೆಲೆಯೇ? ಈ ಮೂರನ್ನೂ ಉಳಿಸುವ ಬೆಲೆಯೇ ನಿಜವಾದ ಉತ್ತರವಾಗಿರಬೇಕು. ಹಾಲನ್ನು ಹೆಚ್ಚು ಕಾಲ ಇಟ್ಟುಕೊಳ್ಳಲಾಗುವುದಿಲ್ಲ.

ಇದನ್ನೂ ಓದಿ: Vishwanath Hegde Column: ಜಾಗತಿಕ ತಾಪಮಾನ: 1.5 ಡಿಗ್ರಿ ದಾಟಿದ ಮೇಲೆ… ಮುಂದೇನು ಮಾಡೋಣ ?

ಉತ್ಪಾದನೆಯಾದ ಕೆಲವೇ ಗಂಟೆಗಳಲ್ಲಿ ಅದು ಸಂಗ್ರಹ ಕೇಂದ್ರ ತಲುಪಿ, ಗುಣಮಟ್ಟ ಪರೀಕ್ಷೆಯಾಗಿ, ಶೀತಲೀಕರಣಗೊಂಡು ಮುಂದಿನ ಹಂತಕ್ಕೆ ಸಾಗಬೇಕು. ರೈತ ಇಂದು ಬೆಲೆ ಚೆನ್ನಾಗಿಲ್ಲ, ಮುಂದಿನ ವಾರ ಮಾರುತ್ತೇನೆ ಎಂದು ಕಾಯಲು ಸಾಧ್ಯವಿಲ್ಲ. ಆದರೆ ಅವನ ಖರ್ಚು ಕಾಯುವುದಿಲ್ಲ. ಪಶು ಆಹಾರ, ಹಸಿರು ಮತ್ತು ಒಣಮೇವು, ನೀರು, ಔಷಧಿ, ಪಶುವೈದ್ಯಕೀಯ ಸೇವೆ, ಕೂಲಿ- ಎಲ್ಲವೂ ಪ್ರತಿದಿನ ಬೇಕು. ಹಾಲಿನ ಖರೀದಿ ದರ ಒಂದು ರೂಪಾಯಿ ಕಡಿಮೆಯಾದರೆ ರೈತನ ಆದಾಯ ತಕ್ಷಣ ಕಡಿಮೆಯಾಗಬಹುದು. ಆದರೆ ಅದೇ ದಿನ ಪಶು ಆಹಾರದ ಅಂಗಡಿಯವನು ನಿಮ್ಮ ಹಾಲಿನ ದರ ಕಡಿಮೆಯಾಗಿದೆ, ನಾನೂ ಆಹಾರದ ಬೆಲೆ ಕಡಿಮೆ ಮಾಡುತ್ತೇನೆ ಎನ್ನುವುದಿಲ್ಲ. ಆದರೆ ರೈತನ ಕಥೆಯೊಂದನ್ನೇ ಹೇಳಿದರೆ ಇನ್ನೊಂದು ಸತ್ಯವನ್ನು ಮರೆತಂತಾಗುತ್ತದೆ.

ರೈತನ ಮನೆಯಿಂದ ಹೊರಟ ಹಾಲು ಹಳ್ಳಿಗಳಿಂದ ಸಂಗ್ರಹಣೆ, ಗುಣಮಟ್ಟ ಪರೀಕ್ಷೆ, ಶೀತಲೀಕರಣ, ಸಾಗಣೆ, ಸಂಸ್ಕರಣೆ, ಪೊಟ್ಟಣ ತಯಾರಿಕೆ ಮತ್ತು ವಿತರಣೆ- ಹಲವು ಹಂತಗಳನ್ನು ದಾಟಬೇಕು. ಪ್ರತಿಯೊಂದು ಹಂತಕ್ಕೂ ವೆಚ್ಚವಿದೆ. ಹೀಗಾಗಿ ಅಂಗಡಿಯಲ್ಲಿ ಅರವತ್ತು ರೂಪಾಯಿಗೆ ಸಿಗುವ ವಸ್ತುವನ್ನು ರೈತನಿಂದ ಮೂವತ್ತು ರೂಪಾಯಿಗೆ ಖರೀದಿಸಿದ್ದಾರೆ ಎಂದ ಮಾತ್ರಕ್ಕೆ ಮಧ್ಯದ ಮೂವತ್ತು ರೂಪಾಯಿ ಲಾಭ ಎಂದು ಹೇಳುವುದು ಸರಿಯಲ್ಲ. ಆ ಮಧ್ಯದ ವೆಚ್ಚ ಎಷ್ಟು ಸಕಾರಣ? ಈ ಕಥೆ ಹಾಲಿನದ್ದೊಂದೇ ಅಲ್ಲ.

Milk with coew

ಟೊಮೇಟೊ ಕಿಲೋ ನೂರು ರೂಪಾಯಿ ದಾಟಿದಾಗ ಎಡೆ ಅದರದ್ದೇ ಸುದ್ದಿ. ಮನೆಯವರು ಅಡುಗೆಯಲ್ಲಿ ಎರಡು ಟೊಮೇಟೊ ಬದಲು ಒಂದನ್ನು ಹಾಕುತ್ತಾರೆ. ಕೆಲವು ತಿಂಗಳ ನಂತರ ಉತ್ಪಾದನೆ ಹೆಚ್ಚಾಗಿ ಅದೇ ಟೊಮೇಟೊಗೆ ರೈತನಿಗೆ ಕೆಲವೇ ರೂಪಾಯಿ ಸಿಕ್ಕಾಗ ಪರಿಸ್ಥಿತಿ ತಲೆಕೆಳಗಾಗುತ್ತದೆ. ಕೆಲವೊಮ್ಮೆ ಕೊಯ್ಲು ಮತ್ತು ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ವಾಪಸ್ ಬರುವುದಿಲ್ಲ. ಬೆಲೆ ಇಲ್ಲದ ಸಮಯದಲ್ಲಿ ರಸ್ತೆಯ ಬದಿಯಲ್ಲಿ ರಾಶಿ ರಾಶಿಯಾಗಿ ಟೊಮೇಟೊ ಸುರಿದಿರುವುದನ್ನು ನೋಡಿದಾಗ- ತಿಂಗಳುಗಟ್ಟಲೆ ಬೆಳೆಸಿದ ಬೆಳೆ, ಅದಕ್ಕೆ ಹಾಕಿದ ನೀರು, ಗೊಬ್ಬರ, ಔಷಧಿ, ಕೂಲಿ, ರೈತನ ಸಮಯ- ಎಲ್ಲವೂ ಅ ಬಿದ್ದಂತೆ ಕಾಣುತ್ತದೆ.

ಒಂದು ಸಮಯದಲ್ಲಿ ಗ್ರಾಹಕನಿಗೆ ಬೆಲೆ ಕಣ್ಣೀರು ತರಿಸಿದರೆ, ಮತ್ತೊಂದು ಸಮಯದಲ್ಲಿ ಬೆಲೆ ಇಲ್ಲದಿರುವುದೇ ರೈತನಿಗೆ ಕಣ್ಣೀರು ತರಿಸುತ್ತದೆ. ಈರುಳ್ಳಿಯ ಕಥೆ ಇನ್ನೂ ಕುತೂಹಲಕಾರಿ. ಬೆಲೆ ಅರವತ್ತು, ಎಂಬತ್ತು ರೂಪಾಯಿ ದಾಟಿದಾಗ ಅಡುಗೆಮನೆಯಿಂದ ರಾಜಕೀಯದವರೆಗೂ ಚರ್ಚೆಯಾಗುತ್ತದೆ. ಗ್ರಾಹಕನಿಗೆ ಹೊರೆ ಕಾಣುತ್ತದೆ; ಸರ್ಕಾರದ ಮೇಲೂ ಬೆಲೆ ನಿಯಂತ್ರಣದ ಒತ್ತಡ ಬರುತ್ತದೆ. ಆದರೆ ಉತ್ಪಾದನೆ ಹೆಚ್ಚಾಗಿ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಬಂದಾಗ ರೈತನಿಗೆ ಸಿಗುವ ದರ ತೀವ್ರವಾಗಿ ಕುಸಿಯಬಹುದು.

ಉತ್ತಮ ಬೆಳೆ ಬಂದ ಖುಷಿಯಲ್ಲಿದ್ದ ರೈತ, ಕೊಯ್ಲು, ವಿಂಗಡಣೆ, ಚೀಲ ಮತ್ತು ಸಾಗಣೆ ವೆಚ್ಚಕ್ಕೂ ಸಾಕಾಗದ ದರವನ್ನು ನೋಡಿದಾಗ ಬೆಳೆ ಚೆನ್ನಾಗಿ ಬಂದದ್ದೇ ತಪ್ಪಾಯಿತೇ? ಎಂದು ಕೇಳುವ ಪರಿಸ್ಥಿತಿ. ಈರುಳ್ಳಿಯನ್ನು ಸ್ವಲ್ಪ ಕಾಲ ಸಂಗ್ರಹಿಸಬಹುದು. ಆದರೆ ಅದಕ್ಕೂ ಸರಿಯಾದ ವ್ಯವಸ್ಥೆ ಮತ್ತು ಹಣ ಬೇಕು. ಸಾಲ ತೀರಿಸಬೇಕಿರುವ ರೈತನಿಗೆ ಮೂರು ತಿಂಗಳು ಕಾಯಿರಿ, ಮುಂದೆ ಬೆಲೆ ಹೆಚ್ಚಬಹುದು ಎನ್ನಲಾಗದು. ಅವನಿಗೆ ಮುಂದಿನ ಬೆಳೆಗೆ ಬೀಜ-ಗೊಬ್ಬರ ಖರೀದಿಸಬೇಕು, ಮಕ್ಕಳ ಶುಲ್ಕ, ಮನೆಯ ಖರ್ಚು ಎದುರಿಗಿರಬಹುದು.

ಹಾಲನ್ನು ಕಾಯಿಸಿಡಲಾಗುವುದಿಲ್ಲ; ಟೊಮೇಟೊ ಹೆಚ್ಚು ದಿನ ಕಾಯುವುದಿಲ್ಲ; ಈರುಳ್ಳಿಯನ್ನು ಕಾಯಿಸಬಹುದು, ಆದರೆ ಎಲ್ಲ ರೈತರಿಗೂ ಕಾಯಲು ಸಾಧ ವಿಲ್ಲ. ರೈತನ ಶಕ್ತಿ ಅವನ ಬಳಿ ಉತ್ಪನ್ನ ಇರುವುದರಲ್ಲಿ ಮಾತ್ರವಲ್ಲ, ಅದನ್ನು ಯಾವಾಗ ಮಾರಬೇಕು ಎಂದು ನಿರ್ಧರಿಸುವ ಸಾಮರ್ಥ್ಯ ದಲ್ಲಿಯೂ ಇದೆ. ಈ ಬೆಲೆಯ ಕಥೆಯಲ್ಲಿ ಮತ್ತೊಂದು ಪ್ರಮುಖ ಪಾತ್ರ, ರೈತನಿಂದ ಖರೀದಿಸಿ ಗ್ರಾಹಕನಿಗೆ ತಲುಪಿಸುವ ಸಂಸ್ಥೆಗಳು. ಹಾಲಿನ ವಿಷಯದಲ್ಲಿ ಸಹಕಾರಿ ಹಾಲು ಒಕ್ಕೂಟಗಳು, ಖಾಸಗಿ ಹಾಲು ಸಂಸ್ಕರಣಾ ಸಂಸ್ಥೆಗಳು ಮತ್ತು ಮಾರಾಟ ಸಂಸ್ಥೆಗಳು ಈ ಸರಪಳಿಯ ಮಧ್ಯದಲ್ಲಿವೆ.

ರೈತನಿಗೆ ಉತ್ತಮ ಖರೀದಿ ದರ ಕೊಡಬೇಕು; ಅದೇ ಸಮಯದಲ್ಲಿ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರಕ್ಕೆ ಹಾಲನ್ನು ಮಾರಬೇಕು. ಈ ಎರಡರ ನಡುವೆ ಸಂಗ್ರಹ, ಶೀತಲೀಕರಣ, ಸಾಗಣೆ, ಸಂಸ್ಕರಣೆ, ಪ್ಯಾಕಿಂಗ್, ವಿತರಣೆ, ಗುಣಮಟ್ಟ ನಿಯಂತ್ರಣ ಮತ್ತು ಸಿಬ್ಬಂದಿಯ ವೆಚ್ಚಗಳನ್ನೂ ಭರಿಸಬೇಕು. ಇವೆಲ್ಲದರ ನಂತರ ಸಂಸ್ಥೆಯೂ ಆರ್ಥಿಕವಾಗಿ ಉಳಿಯಬೇಕು. ಮಾರುಕಟ್ಟೆಯ ಸ್ಪರ್ಧೆಯಿಂದ ರೈತನ ಹಾಲಿನ ಖರೀದಿ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಿಸಬೇಕಾಯಿತು ಎಂದುಕೊಳ್ಳಿ.

ಅದೇ ಎರಡು ರೂಪಾಯಿಯನ್ನು ತಕ್ಷಣ ಗ್ರಾಹಕನ ಮಾರಾಟ ದರಕ್ಕೆ ಸೇರಿಸುವುದು ಎಲ್ಲ ಸಂದರ್ಭದಲ್ಲೂ ಸಾಧ್ಯವಾಗುವುದಿಲ್ಲ. ಪಕ್ಕದ ಸಂಸ್ಥೆ ಬೆಲೆ ಹೆಚ್ಚಿಸದೇ ಇರಬಹುದು; ಗ್ರಾಹಕ ಮತ್ತೊಂದು ಸಂಸ್ಥೆಯ ಹಾಲನ್ನು ಆಯ್ಕೆ ಮಾಡಬಹುದು. ಮತ್ತೊಂದೆಡೆ ಮಾರಾಟದ ದರ ಬದಲಾಯಿಸದೆ ಖರೀದಿ ದರವನ್ನು ಹೆಚ್ಚಿಸಿದರೆ ಸಂಸ್ಥೆಗೆ ಉಳಿಯುವ ಹಣ ಕಡಿಮೆಯಾಗುತ್ತದೆ.

ರೈತನನ್ನು ಉಳಿಸಿಕೊಳ್ಳಬೇಕೆಂಬ ಒತ್ತಡ ಒಂದು ಕಡೆ, ಗ್ರಾಹಕನನ್ನು ಕಳೆದುಕೊಳ್ಳಬಾರದೆಂಬ ಒತ್ತಡ ಇನ್ನೊಂದು ಕಡೆ, ತನ್ನ ವ್ಯವಹಾರವನ್ನೂ ಉಳಿಸಿಕೊಳ್ಳಬೇಕೆಂಬ ಅನಿವಾರ್ಯತೆ ಮಧ್ಯದಲ್ಲಿ- ಇದೇ ಸಂಸ್ಥೆಗಳ ನಿಜವಾದ ಬೆಲೆಯ ಲೆಕ್ಕ. ಇಲ್ಲಿ ಇನ್ನೊಂದು ಆಸಕ್ತಿದಾಯಕ ಲೆಕ್ಕವಿದೆ. ರೈತನಿಗೆ ನಿರಂತರವಾಗಿ ಕಡಿಮೆ ಖರೀದಿ ದರ ನೀಡಿದರೆ ಆರಂಭದಲ್ಲಿ ಸಂಸ್ಥೆಗೆ ಹಣ ಉಳಿದಂತೆ ಕಾಣಬಹುದು. ಆದರೆ ಪಕ್ಕದ ಖರೀದಿದಾರ ಉತ್ತಮ ದರ ನೀಡಿದರೆ ರೈತ ತನ್ನ ಹಾಲನ್ನು ಅಲ್ಲಿಗೆ ನೀಡಬಹುದು.

ಹಾಲಿನ ಸಂಗ್ರಹ ಪ್ರಮಾಣ ಕಡಿಮೆಯಾದರೂ ಸಂಗ್ರಹ ಕೇಂದ್ರ, ಶೀತಲೀಕರಣ ವ್ಯವಸ್ಥೆ, ಸಿಬ್ಬಂದಿ ಮತ್ತು ವಾಹನದ ಮೂಲ ವೆಚ್ಚ ಹಾಗೆಯೇ ಉಳಿಯುತ್ತದೆ. ವಾಹನ ಅರ್ಧ ಸಾಮರ್ಥ್ಯದಲ್ಲಿ ಓಡಿದರೆ ಒಂದು ಲೀಟರ್ ಹಾಲಿನ ಸಾಗಣೆ ವೆಚ್ಚ ಹೆಚ್ಚುತ್ತದೆ. ಅಂದರೆ ಇಂದು ರೈತನಿಂದ ಉಳಿಸಿದ ಒಂದು ರೂಪಾಯಿ, ನಾಳೆ ಸಂಸ್ಥೆಗೆ ಹೆಚ್ಚುವರಿ ವೆಚ್ಚವಾಗಿ ಬೇರೆ ರೂಪದಲ್ಲಿ ಮರಳಿ ಬರಬಹುದು. ಅದೇ ರೀತಿ ಸಂಸ್ಥೆಯೇ ಆರ್ಥಿಕವಾಗಿ ಉಳಿಯದಿದ್ದರೆ ಅದರ ಪರಿಣಾಮ ಕೊನೆಗೆ ರೈತನ ಮೇಲೂ ಬೀಳಬಹುದು.

ಪಾವತಿಯ ಅವಧಿ ಉದ್ದವಾಗಬಹುದು, ಸಂಗ್ರಹಣಾ ಕೇಂದ್ರಗಳು ಕಡಿಮೆಯಾಗಬಹುದು, ರೈತರಿಗೆ ನೀಡುವ ಸೇವೆಗಳು ಕುಗ್ಗಬಹುದು, ಗುಣಮಟ್ಟ ಮತ್ತು ಮೂಲಸೌಕರ್ಯದ ಮೇಲಿನ ಹೂಡಿಕೆ ಕಡಿಮೆಯಾಗಬಹುದು. ಹೀಗಾಗಿ ರೈತನಿಗೆ ನ್ಯಾಯಯುತ ಖರೀದಿ ದರ, ಸಂಸ್ಥೆಗೆ ಸಮಂಜಸ ಆದಾಯ ಮತ್ತು ಗ್ರಾಹಕನಿಗೆ ಕೈಗೆಟುಕುವ ಮಾರಾಟ ದರ- ಈ ಮೂರನ್ನೂ ಒಂದೇ ಲೆಕ್ಕದಲ್ಲಿ ನೋಡಬೇಕಾಗುತ್ತದೆ.

ಯಾರು ಹೆಚ್ಚು ಪಡೆಯುತ್ತಿದ್ದಾರೆ? ಎನ್ನುವುದಕ್ಕಿಂತ ಈ ಸರಪಳಿಯಲ್ಲಿರುವ ಪ್ರತಿಯೊಬ್ಬರೂ ಉಳಿಯುವಷ್ಟು ಮೌಲ್ಯ ಸೃಷ್ಟಿಯಾಗುತ್ತಿದೆಯೇ? ಎನ್ನುವ ಪ್ರಶ್ನೆ ಹೆಚ್ಚು ಮುಖ್ಯ. ಇಂತಹ ಸಮಸ್ಯೆಗೆ ಜಗತ್ತಿನ ಕೆಲವು ದೇಶಗಳು ಬೇರೆ ರೀತಿಯ ಉತ್ತರ ಹುಡುಕಲು ಪ್ರಯತ್ನಿಸಿವೆ. ಸ್ಪೇನ್‌ನ ಆಹಾರ ಸರಪಳಿ ಕಾನೂನು ಗಮನಾರ್ಹ ಉದಾಹರಣೆ.

ಅಲ್ಲಿನ ನಿಯಮದ ಪ್ರಕಾರ ಪ್ರಾಥಮಿಕ ಉತ್ಪಾದಕನಿಗೆ ನೀಡುವ ಒಪ್ಪಂದದ ಬೆಲೆ ಅವನು ಭರಿಸಿದ ಒಟ್ಟು ಪರಿಣಾಮಕಾರಿ ಉತ್ಪಾದನಾ ವೆಚ್ಚಕ್ಕಿಂತ ಹೆಚ್ಚಿರಬೇಕು. ಬೀಜ, ಗೊಬ್ಬರ, ಇಂಧನ, ನೀರಾವರಿ, ಯಂತ್ರೋಪಕರಣ, ಪಶು ಆಹಾರ, ಪಶುವೈದ್ಯಕೀಯ ವೆಚ್ಚ, ಕೂಲಿ ಮತ್ತು ಕುಟುಂಬದ ಶ್ರಮದಂತಹ ಅಂಶಗಳನ್ನೂ ಈ ವೆಚ್ಚದ ಲೆಕ್ಕದಲ್ಲಿ ಪರಿಗಣಿಸಲಾಗಿದೆ. ಅಂದರೆ ಇಂದು ಮಾರುಕಟ್ಟೆ ದರ ಎಷ್ಟು? ಎಂಬ ಒಂದೇ ಪ್ರಶ್ನೆಯ ಜೊತೆಗೆ ಇದನ್ನು ಉತ್ಪಾದಿಸಲು ರೈತನಿಗೆ ನಿಜವಾಗಿ ಎಷ್ಟು ಖರ್ಚಾಯಿತು? ಎಂಬ ಪ್ರಶ್ನೆಯನ್ನೂ ಬೆಲೆ ನಿರ್ಧಾರದೊಳಗೆ ತರಲು ಪ್ರಯತ್ನಿಸ ಲಾಗಿದೆ.

ಯುರೋಪಿಯನ್ ಒಕ್ಕೂಟ ಇನ್ನೊಂದು ಹೆಜ್ಜೆ ಮುಂದೆ ಹೋಗಿ ರೈತರು ಮತ್ತು ಸಣ್ಣ ಪೂರೈಕೆದಾರರ ಮೇಲೆ ಬಲಿಷ್ಠ ಖರೀದಿದಾರರು ಹೇರಬಹುದಾದ ಕೆಲವು ಅನ್ಯಾಯದ ವ್ಯಾಪಾರ ಪದ್ಧತಿಗಳಿಗೂ ನಿಯಂತ್ರಣ ತಂದಿದೆ. ಬೇಗ ಹಾಳಾಗುವ ಕೃಷಿ ಮತ್ತು ಆಹಾರ ಉತ್ಪನ್ನಗಳಿಗೆ ಮೂವತ್ತು ದಿನಕ್ಕಿಂತ ತಡವಾಗಿ ಹಣ ಪಾವತಿಸುವುದು, ಕೊನೆಯ ಕ್ಷಣದಲ್ಲಿ ಖರೀದಿ ಆದೇಶವನ್ನು ರದ್ದುಪಡಿಸುವುದು, ಖರೀದಿದಾರ ಏಕಪಕ್ಷೀಯವಾಗಿ ಒಪ್ಪಂದದ ಷರತ್ತು ಬದಲಿಸುವುದು ಮುಂತಾದ ಪದ್ಧತಿಗಳನ್ನು ನಿಯಮಗಳು ನಿಷೇಧಿಸುತ್ತವೆ.

ಇಲ್ಲಿ ರೈತನಿಗೆ ಎಷ್ಟು ದರ ಸಿಗುತ್ತದೆ ಎಂಬುದಷ್ಟೇ ಮುಖ್ಯವಲ್ಲ; ಯಾವ ಷರತ್ತಿನಲ್ಲಿ ವ್ಯಾಪಾರ ನಡೆಯುತ್ತದೆ ಮತ್ತು ಹಣ ಎಷ್ಟು ಬೇಗ ಅವನ ಕೈ ಸೇರುತ್ತದೆ ಎಂಬುದೂ ಅವನ ಆರ್ಥಿಕ ಸ್ಥಿರತೆಯ ಭಾಗವೇ ಆಗಿದೆ. ಇಲ್ಲಿಯೇ ಬೆಲೆಯ ಲೆಕ್ಕಕ್ಕೆ ರಾಜಕೀಯ ಮತ್ತು ಸರ್ಕಾರದ ನೀತಿಯೂ ಸೇರುತ್ತದೆ. ಹಾಲು, ಈರುಳ್ಳಿ, ಟೊಮೇಟೊದಂತಹ ದಿನನಿತ್ಯದ ಆಹಾರ ವಸ್ತುಗಳ ಬೆಲೆ ಕೇವಲ ರೈತ ಮತ್ತು ಮಾರುಕಟ್ಟೆಯ ನಡುವಿನ ವಿಷಯವಾಗಿ ಉಳಿಯುವುದಿಲ್ಲ.

ಬೆಲೆ ಹೆಚ್ಚಾದರೆ ಗ್ರಾಹಕನ ಅಸಮಾಧಾನ ಸರ್ಕಾರದವರೆಗೆ ತಲುಪುತ್ತದೆ; ಬೆಲೆ ಕುಸಿದರೆ ರೈತನ ಅಸಮಾಧಾನವೂ ಸರ್ಕಾರದ ಬಾಗಿಲಿಗೇ ಬರುತ್ತದೆ. ರೈತನಿಗೆ ಹೆಚ್ಚು ಬೆಲೆ ಸಿಗಬೇಕು ಎನ್ನುವ ಒತ್ತಡ ಒಂದು ಕಡೆ, ಗ್ರಾಹಕನಿಗೆ ಹೆಚ್ಚು ಹೊರೆಯಾಗಬಾರದು ಎನ್ನುವ ಒತ್ತಡ ಇನ್ನೊಂದು ಕಡೆ; ಮಧ್ಯದಲ್ಲಿರುವ ಸಂಸ್ಥೆಗಳೂ ಆರ್ಥಿಕವಾಗಿ ಉಳಿಯಬೇಕು.

ಹೀಗಾಗಿಯೇ ಕೃಷಿ ಬೆಲೆ ಕೇವಲ ಬೇಡಿಕೆ ಮತ್ತು ಪೂರೈಕೆಯ ಲೆಕ್ಕವಲ್ಲ - ಅದು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಪ್ರಶ್ನೆಯೂ ಆಗುತ್ತದೆ. ಆದರೆ ಗ್ರಾಹಕನ ಜೇಬನ್ನೂ ಮರೆಯು ವಂತಿಲ್ಲ. ಒಂದು ಕುಟುಂಬಕ್ಕೆ ಹಾಲು ಮಾತ್ರ ಖರ್ಚಲ್ಲ. ಅಕ್ಕಿ, ಬೇಳೆ, ಎಣ್ಣೆ, ತರಕಾರಿ, ಶಿಕ್ಷಣ, ಆರೋಗ್ಯ, ಮನೆ ಬಾಡಿಗೆ, ವಿದ್ಯುತ್, ಪ್ರಯಾಣ- ಎಲ್ಲವೂ ಇದೆ. ಒಂದೊಂದೇ ವಸ್ತುವಿಗೆ ಎರಡು, ಐದು, ಹತ್ತು ರೂಪಾಯಿ ಹೆಚ್ಚಾಗುತ್ತಾ ಹೋದರೆ ತಿಂಗಳ ಕೊನೆಯಲ್ಲಿ ಅದರ ಒಟ್ಟು ಪರಿಣಾಮ ದೊಡ್ಡದಾಗುತ್ತದೆ.

ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಆಹಾರದ ಬೆಲೆ ಏರಿಕೆ ನೇರವಾಗಿ ಜೀವನಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ರೈತನಿಗೆ ಹೆಚ್ಚು ಕೊಡಿ, ಗ್ರಾಹಕ ಕೊಡಲಿ ಎನ್ನುವುದು ಸಂಪೂರ್ಣ ಉತ್ತರವಾಗುವುದಿಲ್ಲ. ಹಾಗೆಯೇ ಗ್ರಾಹಕನಿಗೆ ಅಗ್ಗವಾಗಿ ಕೊಡಿ, ರೈತ ಹೊಂದಿಕೊಳ್ಳಲಿ ಎನ್ನುವುದೂ ಉತ್ತರವಲ್ಲ. ನಾವು ಆಗಾಗ ಇಂದಿನ ಯುವಕರು ಕೃಷಿಗೆ ಬರುತ್ತಿಲ್ಲ ಎಂದು ಹೇಳುತ್ತೇವೆ. ಆದರೆ ಒಮ್ಮೆ ರೈತನ ಮಗನ ಮುಂದೆ ಎರಡು ಆಯ್ಕೆ ಇಟ್ಟು ನೋಡೋಣ.

ಒಂದರಲ್ಲಿ ತಿಂಗಳ ಕೊನೆಯಲ್ಲಿ ಎಷ್ಟು ಸಂಬಳ ಬರುತ್ತದೆ ಎಂಬುದು ಬಹುತೇಕ ಗೊತ್ತಿರುವ ಉದ್ಯೋಗ. ಇನ್ನೊಂದರಲ್ಲಿ ಮಳೆ ಬರುತ್ತದೆಯೇ ಗೊತ್ತಿಲ್ಲ, ಬೆಳೆ ಎಷ್ಟು ಬರುತ್ತದೆ ಗೊತ್ತಿಲ್ಲ, ಬಂದ ಬೆಳೆಗೆ ಯಾವ ಬೆಲೆ ಸಿಗುತ್ತದೆ ಗೊತ್ತಿಲ್ಲ. ಅವನಿಗೆ ಕೃಷಿಯ ಮೇಲೆ ಪ್ರೀತಿ ಇಲ್ಲ ಎಂದು ಹೇಳುವುದು ಸುಲಭ. ಆದರೆ ಅವನು ಇದರಲ್ಲಿ ನನ್ನ ಬದುಕು ಕಟ್ಟಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿದರೆ? ವಿಶ್ವಾಸದಿಂದ ಹೌದು ಎನ್ನುವ ಪರಿಸ್ಥಿತಿ ನಿರ್ಮಾಣವಾಗದಿದ್ದರೆ ಕೃಷಿಯಲ್ಲಿ ಮುಂದಿನ ತಲೆಮಾರನ್ನು ಉಳಿಸಿಕೊಳ್ಳುವುದು ಕಷ್ಟ. ಕೃಷಿ ಕೇವಲ ಪರಂಪರೆಯಿಂದ ಮುಂದುವರಿಯುವು ದಿಲ್ಲ; ಅದು ಆರ್ಥಿಕವಾಗಿಯೂ ಉಳಿಯಬೇಕು.