ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಧುರಂಧರ್' ಸಿನಿಮಾ ಎರಡು ಪಾರ್ಟ್‌ಗಳಾಗಿದ್ದೇಕೆ? ಇದಕ್ಕೆ ಖರ್ಚಾಗಿರುವ ಒಟ್ಟಾರೆ ಮೊತ್ತ ಎಷ್ಟು? ಮೇಕಿಂಗ್ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ಆದಿತ್ಯ ಧರ್

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಕೇವಲ ಒಂದು ಭಾಗವಾಗಿ ಬರಬೇಕಿತ್ತು. ಆದರೆ ಚಿತ್ರೀಕರಣದ ನಂತರ ಅದು 8 ಗಂಟೆಗಳ ಸುದೀರ್ಘ ಕಥೆಯಾದ ಕಾರಣ ನಿರ್ದೇಶಕ ಆದಿತ್ಯ ಧರ್ ಅನಿವಾರ್ಯವಾಗಿ ಎರಡು ಭಾಗಗಳಾಗಿ ಬಿಡುಗಡೆ ಮಾಡಿದರು. ಈ ಚಿತ್ರದ ಒಟ್ಟಾರೆ ಬಜೆಟ್‌ ಎಷ್ಟು?

'ಧುರಂಧರ್' ಎರಡು ಭಾಗವಾಗಿದ್ದೇಕೆ? ಮೇಕಿಂಗ್ ರಹಸ್ಯ ಬಿಚ್ಚಿಟ್ಟ ಆದಿತ್ಯ ಧರ್

-

Avinash GR
Avinash GR Mar 23, 2026 1:36 PM

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ 2ʼ ಸಿನಿಮಾ ಎಂತಹ ಅಬ್ಬರ ಮಾಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಜಮಾನದ ಅತ್ಯಂತ ದೀರ್ಘಾವಧಿ ಸಿನಿಮಾಗಳು ಎಂಬ ಖ್ಯಾತಿಯ ʻಧುರಂಧರ್‌ ಪಾರ್ಟ್‌ 1 & 2ʼ ಎಂದು ಹೆಸರಾಗಿವೆ. ಅಷ್ಟಕ್ಕೂ ಧುರಂಧರ್‌ ಸಿನಿಮಾವು ಎರಡು ಪಾರ್ಟ್‌ಗಳಾಗಿ ರಿಲೀಸ್‌ ಆಗಿದ್ದೇಕೆ? ಇದರ ಒಟ್ಟು ಬಜೆಟ್‌ ಎಷ್ಟು? ಇಲ್ಲಿದೆ ನೋಡಿ ಮಾಹಿತಿ.

ಅಸಲಿಗೆ, ಇದನ್ನು ಕೇವಲ ಒಂದೇ ಸಿನಿಮಾವಾಗಿ ಮಾಡಲು ನಿರ್ದೇಶಕರು ಆಲೋಚಿಸಿದ್ದರು. ಆದರೆ ಚಿತ್ರೀಕರಣದ ನಂತರ ಅದು 8 ಗಂಟೆಗಳ ಸುದೀರ್ಘ ಸಿನಿಮಾವಾಯಿತು. ಆದಕಾರಣ, ಅನಿವಾರ್ಯವಾಗಿ 'ಧುರಂಧರ್' ಚಿತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಚಿತ್ರೀಕರಣ ನಡೆಯುತ್ತಿದ್ದಂತೆಯೇ ಸಿನಿಮಾದ ಉದ್ದವೂ ಹೆಚ್ಚುತ್ತಾ ಹೋಯಿತು. ಇದಕ್ಕೆ ಕಾರಣವೇನೆಂದರೆ, ಆದಿತ್ಯ ಧರ್‌ ಅವರು ಕೇವಲ ಸಣ್ಣ ಮಾಂಟೇಜ್‌ಗಳಾಗಿ ಬರೆದುಕೊಂಡಿದ್ದ ದೃಶ್ಯಗಳು ಚಿತ್ರೀಕರಣದ ವೇಳೆ ಬೃಹತ್ ದೃಶ್ಯಗಳಾಗಿ ರೂಪಾಂತರಗೊಂಡವು.

Dhurandhar 2 Review: ಆದಿತ್ಯ ಧರ್‌ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!

ಅಲ್ಲದೆ, ಆ ಪ್ರತಿಯೊಂದು ದೃಶ್ಯವೂ ಸಿನಿಮಾದ ಹೈಲೈಟ್ ಆಗಿ ಮೂಡಿಬಂದವು. ಹೀಗಿರುವಾಗ ಯಾವುದನ್ನು ಕತ್ತರಿಸಬೇಕು? ಯಾವುದನ್ನು ಇಡಬೇಕು ಎಂಬ ಗೊಂದಲ ಶುರುವಾಯಿತು. "ಕೇವಲ 10 ಸೆಕೆಂಡ್‌ ಇರಬೇಕೆಂದು ಅಂದುಕೊಂಡಿದ್ದ ದೃಶ್ಯವೊಂದು, ಪರಿಣಾಮಕಾರಿಯಾಗಿ ಮೂಡಿಬರಲು 2 ನಿಮಿಷಗಳನ್ನು ತೆಗೆದುಕೊಂಡಿತು" ಎಂದು ಆದಿತ್ಯ ಧರ್‌ ಹೇಳಿಕೊಂಡಿದ್ದಾರೆ.

ಉದಾಹರಣೆಗೆ, ಅರ್ಜುನ್ ರಾಂಪಾಲ್ ಅವರ ಮೇಜರ್ ಇಕ್ಬಾಲ್ ಪಾತ್ರದ ಎಂಟ್ರಿ ಸೀನ್. "ನನಗೆ ಗನ್ ಖರೀದಿಸಬೇಕು" ಎಂದು ಮೇಜರ್ ಇಕ್ಬಾಲ್ ಪಾತ್ರ ಹೇಳುವ ದೃಶ್ಯವನ್ನು ಮೊದಲು ಕೇವಲ ಎರಡೂವರೆ ನಿಮಿಷಗಳಲ್ಲಿ ಮುಗಿಸಬೇಕು ಎಂದುಕೊಂಡಿದ್ದೆವು. ಆದರೆ ಅದು ಅಂತಿಮವಾಗಿ 8-9 ನಿಮಿಷಗಳಷ್ಟು ಸುದೀರ್ಘವಾಗಿ ಮೂಡಿಬಂತು. ಆದಿತ್ಯ ಬಳಿ ಪಕ್ಕಾ ಸ್ಕ್ರಿಪ್ಟ್ ಇತ್ತಾದರೂ, ಸಂಭಾಷಣೆಗಳನ್ನು ಸೆಟ್‌ನಲ್ಲಿಯೇ ಇನ್ನಷ್ಟು ಇಂಪ್ರೂವ್‌ ಮಾಡಲಾಯಿತಂತೆ. ಸಿನಿಮಾದಲ್ಲಿ ಬರುವ ಎಷ್ಟೋ ತಮಾಷೆಯ ಸಂಭಾಷಣೆಗಳು, ಚಿತ್ರೀಕರಣದ ದಿನದಂದೇ ಹುಟ್ಟಿಕೊಂಡವು ಎಂಬುದು ಆದಿತ್ಯ ಮಾತು.

Dhurandhar 2 Twitter Review: ಮಾಸ್ಟರ್ ಪೀಸ್​​ ಪಕ್ಕಾ! ಯಶಸ್ಸು ಖಚಿತ; ಧುರಂಧರ್‌ 2 ಸಿನಿಮಾ ನೋಡಿದವರು ಏನಂದ್ರು?

ಸಿನಿಮಾದ ಅವಧಿ ಇಷ್ಟೆಲ್ಲಾ ದೀರ್ಘವಾದರೂ, ಮೂಲ ಸ್ಕ್ರಿಪ್ಟ್‌ಗೆ ಶೇ. 95 ರಿಂದ 96ರಷ್ಟು ಹತ್ತಿರವಾಗಿದೆಯಂತೆ. "ನಾನು ನನ್ನ ಸ್ಕ್ರಿಪ್ಟ್ ಮತ್ತು ಸಂಶೋಧನೆಯ ವಿಚಾರದಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಇರುತ್ತೇನೆ" ಅಂತಾರೆ ಆದಿತ್ಯ ಧರ್. ಅಂದಹಾಗೆ, ಇಡೀ ಸಿನಿಮಾವನ್ನು ಆದಿತ್ಯ ಅವರೇ ಸ್ವತಃ ಚಿತ್ರೀಕರಿಸಿದ್ದಾರೆ. ಕೆಲವೆಡೆ ಸೆಕೆಂಡ್ ಯೂನಿಟ್‌ನ ಸಹಾಯ ಪಡೆದಿದ್ದರೂ, ಸಿನಿಮಾದ ಎಲ್ಲಾ ಪ್ರಮುಖ ಮತ್ತು ನಿರ್ಣಾಯಕ ದೃಶ್ಯಗಳನ್ನು ಆದಿತ್ಯ ಅವರೇ ಖುದ್ದಾಗಿ ನಿಂತು ನಿರ್ದೇಶನ ಮಾಡಿದ್ದಾರೆ.

ಇದರ ಬಜೆಟ್‌ ಎಷ್ಟು?

ಇಷ್ಟೊಂದು ದೊಡ್ಡ ಕ್ಯಾನ್ವಾಸ್‌ನ ಸಿನಿಮಾ ಮಾಡಲು ಎಷ್ಟು ಖರ್ಚಾಗಿರಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಉತ್ತರ ಮಾತ್ರ ಅಚ್ಚರಿ ನೀಡುತ್ತದೆ. ಹೌದು, ಎರಡೂ ಪಾರ್ಟ್‌ಗಳ ಚಿತ್ರೀಕರಣಕ್ಕೆ ತಗುಲಿದ ಒಟ್ಟಾರೆ ವೆಚ್ಚ 255 ಕೋಟಿ ರೂಪಾಯಿಗಳು! ಪ್ರಚಾರ, ಬಿಡುಗಡೆ ಇನ್ನಿತರ ಖರ್ಚುಗಳ ಸೇರಿ ಒಟ್ಟು 350 ಕೋಟಿ ರೂ. ಆಗಿರಬಹುದು. ಅಷ್ಟು ಬೃಹತ್ ಕ್ಯಾನ್ವಾಸ್‌ನ ಎರಡು ಸಿನಿಮಾಗಳಿಗೆ ಇದು ಅತ್ಯಂತ ಕಡಿಮೆ ಮೊತ್ತ ಎಂದೇ ಹೇಳಬಹುದು. ಇನ್ನು, ಈ ಚಿತ್ರಕ್ಕಾಗಿ ಖರ್ಚು ಮಾಡಿರುವ ಅಷ್ಟು ಹಣ ಧುರಂಧರ್‌ ಪಾರ್ಟ್‌ 1ರಿಂದಲೇ ವಾಪಸಾಗಿದೆ. ಜೊತೆಗೆ 300+ ಕೋಟಿ ರೂ. ಲಾಭ ಕೂಡ ಸಿಕ್ಕಿದೆ. ಈಗ ಧುರಂಧರ್‌ ಪಾರ್ಟ್‌ 2ರಿಂದ ಹರಿದುಬರುತ್ತಿರುವ ಹಣವೆಲ್ಲಾ ಬರೀ ಲಾಭ ಎನ್ನಲಾಗಿದೆ.