ʻಡ್ರಾಮಾ ಜೂನಿಯರ್ಸ್ʼ ಮಹಾಲಕ್ಷ್ಮಿ ಈಗ 'ಕಿಲಾಡಿ ಮೇಘ'; ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ!
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ 'ಡಿಕೆಡಿ' ಮತ್ತು 'ಡ್ರಾಮಾ ಜೂನಿಯರ್ಸ್' ಮೂಲಕ ಮನೆಮಾತಾಗಿರುವ ಮಹಾಲಕ್ಷ್ಮಿ ಈಗ 'ಕಿಲಾಡಿ ಮೇಘ' ಚಿತ್ರದ ಮೂಲಕ ಪ್ರಧಾನ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಚಿತ್ರವು ಹಣದ ಲಾಲಸೆಯಿಂದ ಸಂಭವಿಸುವ ಅನಾಹುತಗಳ ಸುತ್ತ ಹೆಣೆಯಲಾದ ಹಾರರ್ ಕಥೆಯನ್ನು ಹೊಂದಿದೆ.
-
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ 'ಡಿಕೆಡಿ' ಹಾಗೂ 'ಡ್ರಾಮಾ ಜೂನಿಯರ್ಸ್' ಮೂಲಕ ಮನೆಮಾತಾಗಿರುವ ಬಾಲಪ್ರತಿಭೆ ಮಹಾಲಕ್ಷ್ಮಿ ಈಗ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಅವರು ನಟಿಸುತ್ತಿರುವ ಸಿನಿಮಾದ ಹೆಸರು ‘ಕಿಲಾಡಿ ಮೇಘ’! ಹೌದು, ಬಾಲ ನಟಿ ಮಹಾಲಕ್ಷ್ಮಿ ಪ್ರಧಾನ ಪಾತ್ರದಲ್ಲಿರುವ ಈ ಸಿನಿಮಾದ ಟೀಸರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭವು ಇತ್ತೀಚೆಗೆ ನೆರವೇರಿದೆ.
ಸ್ಯಾಂಡಲ್‌ವುಡ್‌ನಲ್ಲಿ ಹಾರರ್ ಮತ್ತು ಸಸ್ಪೆನ್ಸ್ ಚಿತ್ರಗಳಿಗೆ ಸದಾ ಬೇಡಿಕೆಯಿದೆ. ಅದೇ ಸಾಲಿನಲ್ಲಿ ಈಗ ‘ಕಿಲಾಡಿ ಮೇಘ’ ಸಿನಿಮಾ ಸೇರ್ಪಡೆಯಾಗುತ್ತಿದೆ. ಸುಲೋಚನಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುಲೋಚನಾ ಸುಕುಮಾರ್ ಅವರು ನಿರ್ಮಿಸಿರುವ ಈ ಚಿತ್ರವು ತೆರೆಗೆ ಬರಲು ಸಜ್ಜಾಗುತ್ತಿದೆ. ಹಲವು ವರ್ಷಗಳಿಂದ ಡಬ್ಬಿಂಗ್ ಕಲಾವಿದರಾಗಿ ಗುರುತಿಸಿಕೊಂಡಿರುವ ಬಿ. ಟಿ. ಮಂಜುನಾಥ್ ಅರಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 13 ವರ್ಷದ ಬಾಲಕಿಯ ಸುತ್ತ ಈ ಕಥೆ ಸಾಗುತ್ತದೆ.
Reels Ajji Lakshmi: ಡ್ರಾಮಾ ಜೂನಿಯರ್ಸ್ ಸೂರಜ್ ಅಜ್ಜಿ ನಿಧನ: 'ರೀಲ್ಸ್ ಅಜ್ಜಿ' ಲಕ್ಷ್ಮಿ ಇನ್ನು ನೆನಪು ಮಾತ್ರ
ಹಣದ ಲಾಲಸೆ ಕಥೆಗೆ ಹಾರರ್ ಸ್ಪರ್ಶ
"ಪ್ರಸ್ತುತ ಜಗತ್ತಿನಲ್ಲಿ ಹಣದ ಹಿಂದೆ ಮನುಷ್ಯ ಬಿದ್ದಾಗ ಏನೆಲ್ಲಾ ಅನಾಹುತಗಳು ಸಂಭವಿಸುತ್ತವೆ ಮತ್ತು ಅದರಿಂದ ಎದುರಾಗುವ ಸಂಕಷ್ಟಗಳೇನು ಎಂಬುದನ್ನು ಹಾರರ್ ಹಿನ್ನೆಲೆಯಲ್ಲಿ ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಆರಂಭದಲ್ಲಿ ರಾಜೇಶ್ ರಾಜ ಅವರು ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದರು. ಕಾರಣಾಂತರಗಳಿಂದ ಅವರಿಗೆ ಚಿತ್ರವನ್ನು ಕಂಪ್ಲೀಟ್ ಮಾಡಲು ಸಾಧ್ಯವಾಗಲಿಲ್ಲ. ನಂತರ ನಾನು ಚಿತ್ರವನ್ನು ಕೈಗೆತ್ತಿಕೊಂಡು ಸಾಂಗ್, ಫೈಟ್ ಸೇರಿದಂತೆ ಉಳಿದ ಭಾಗ ಮುಗಿಸಿ ರಿಲೀಸ್ ಹಂತಕ್ಕೆ ತಂದಿದ್ದೇನೆ" ಎನ್ನುತ್ತಾರೆ ಮಂಜುನಾಥ್ ಅರಗ.
ಮಹಾಲಕ್ಷ್ಮಿ ಅವರು ಈ ಚಿತ್ರದಲ್ಲಿ ಶೀರ್ಷಿಕೆ ಪಾತ್ರವಾದ 'ಮೇಘ'ಳಾಗಿ ಕಾಣಿಸಿಕೊಂಡಿದ್ದರೆ, ಹಿರಿಯ ನಟ ಶಂಕರ್ ಅಶ್ವಥ್ ಅವರು 'ದೈವಾರಾಧಕ'ನ ಪಾತ್ರವನ್ನು ನಿರ್ವಹಿಸಿದ್ದಾರೆ. ಸಂಕಷ್ಟದಲ್ಲಿರುವ ಜೀವವೊಂದನ್ನು ರಕ್ಷಿಸುವ ಪ್ರಮುಖ ಪಾತ್ರ ಇವರದ್ದಾಗಿದೆ. "ನಾನು ನಿಜವಾಗಿಯೂ ಅನುಭವಿಸಿ ಮಾಡಿದಂಥ ಪಾತ್ರವಿದು. ಯಾವುದೋ ಒಂದು ಜೀವ ತುಡಿತಕ್ಕೆ ಒಳಗಾಗಿರುತ್ತೆ. ಅದನ್ನು ರಕ್ಷಣೆ ಮಾಡಲು ನಾನು ಬರುತ್ತೇನೆ" ಎಂದು ಹೇಳುತ್ತಾರೆ ನಟ ಶಂಕರ್ ಅಶ್ವಥ್.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನೃತ್ಯ ಕಲಾವಿದರಾಗಿರುವ ಸುಕುಮಾರ್ ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ಮಾಣಕ್ಕೆ ಇಳಿದಿದ್ದಾರೆ. "ಕಲಾವಿದನಾಗಿ ನಟಿಸಲು ಹೋಗಿ, ವಿಧಿ ಇಲ್ಲದೆ ನಿರ್ಮಾಪಕನಾಗಬೇಕಾಯಿತು" ಅಂತ ಹೇಳುತ್ತಾರೆ ಸುಕುಮಾರ್. ಕೆ.ಎಂ. ಇಂದ್ರ ಅವರು ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ಹಾರರ್ ಚಿತ್ರಕ್ಕೆ ಬೇಕಾದ ಪೂರಕ ಹಿನ್ನೆಲೆ ಸಂಗೀತವನ್ನೂ ನೀಡಿದ್ದಾರಂತೆ.
ಸಿನಿಮಾದಲ್ಲಿ ಸಾಹಸ ಮತ್ತು ನೃತ್ಯಕ್ಕೆ ಸಮಾನ ಆದ್ಯತೆ ನೀಡಲಾಗಿದ್ದು, ವೀಕ್ಷಕರಿಗೆ ಮೈನವಿರೇಳಿಸುವ ಅನುಭವ ನೀಡುವುದು ಚಿತ್ರತಂಡದ ಭರವಸೆಯಾಗಿದೆ. ಸದ್ಯ ಟೀಸರ್ ಮೂಲಕ ಕುತೂಹಲ ಮೂಡಿಸಿರುವ 'ಕಿಲಾಡಿ ಮೇಘ' ಶೀಘ್ರದಲ್ಲೇ ಬೆಳ್ಳಿಪರದೆಯ ಮೇಲೆ ಬರಲು ಸಜ್ಜಾಗುತ್ತಿದೆ.