ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಧಾನಸೌಧದಲ್ಲಿ ಪಾಲು ಕೇಳುವ ‘ಕಾಮನ್‌ಮ್ಯಾನ್‌’: ಗೌರಿಶಂಕರ್ ನಟನೆಯ, ಓಂ ಸಾಯಿ ಪ್ರಕಾಶ್ 106ನೇ ಸಿನಿಮಾದ ಟ್ರೇಲರ್‌ ರಿಲೀಸ್

‘ಕಾಮನ್‌ಮ್ಯಾನ್‌’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಸಾಮಾನ್ಯ ಪ್ರಜೆಯೊಬ್ಬ ಮುಖ್ಯಮಂತ್ರಿಯಾದರೆ ಆಡಳಿತ ವ್ಯವಸ್ಥೆ ಹೇಗೆ ಬದಲಾಗಬಹುದು, ವಿಧಾನಸೌಧದಲ್ಲಿ ಪಾಲು ಕೇಳುವ ಆತನ ಹಕ್ಕೊತ್ತಾಯವೇನು ಎಂಬುದು ಈ ಚಿತ್ರದ ಕೇಂದ್ರಬಿಂದು. ಇದು ಓಂ ಸಾಯಿ ಪ್ರಕಾಶ್ ನಿರ್ದೇಶನದ 106ನೇ ಚಿತ್ರವಾಗಿದ್ದು, ಈ ಸಿನಿಮಾ ಸೆಪ್ಟೆಂಬರ್ 25ರಂದು ತೆರೆಕಾಣಲಿದೆ.

ಗೌರಿಶಂಕರ್ ನಟನೆಯ ʻಕಾಮನ್‌ಮ್ಯಾನ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌!

-

Avinash GR
Avinash GR Sep 21, 2026 5:34 PM

ಸಾಮಾನ್ಯ ಪ್ರಜೆಯೊಬ್ಬ ರಾಜ್ಯದ ಮುಖ್ಯಮಂತ್ರಿಯಾದರೆ ಆಡಳಿತ ವ್ಯವಸ್ಥೆಯನ್ನು ಹೇಗೆ ನಿಭಾಯಿಸಬಹುದು, ಸಮಾಜದಲ್ಲಿ ಏನೆಲ್ಲಾ ಸಕಾರಾತ್ಮಕ ಬದಲಾವಣೆ ತರಬಹುದು ಹಾಗೂ ಆ ಹಾದಿಯಲ್ಲಿ ಎದುರಾಗುವ ಸವಾಲುಗಳೇನು ಎಂಬ ವಿಶಿಷ್ಟ ಕಥಾಹಂದರ ಹೊಂದಿರುವ ‘ಕಾಮನ್‌ಮ್ಯಾನ್‌’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

‘ವಿಧಾನಸೌಧದ ಮೇಲೆ ನನಗೂ ಹಕ್ಕಿದೆ, ಅದನ್ನು ನನಗೆ ಬರೆದುಕೊಡಿ’ ಎಂದು ಕಾಮನ್ ಮ್ಯಾನ್ ಪಟ್ಟುಹಿಡಿಯುವ ದೃಶ್ಯಗಳನ್ನೊಳಗೊಂಡ ಈ ಟ್ರೇಲರ್ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದು, ಚಿತ್ರವು ಇದೇ ಸೆಪ್ಟೆಂಬರ್ 25ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ.

ಓಂ ಸಾಯಿ ಪ್ರಕಾಶ್‌ ಅವರ 106ನೇ ಸಿನಿಮಾ

ಸೆಂಟಿಮೆಂಟ್ ಸಿನಿಮಾಗಳ ಸರದಾರ ಎಂದೇ ಖ್ಯಾತರಾಗಿರುವ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ 106ನೇ ಚಿತ್ರ ಇದು. ‘ಕೆರೆಬೇಟೆ’ ಖ್ಯಾತಿಯ ನಟ ಗೌರಿಶಂಕರ್ ನಾಯಕನಾಗಿ ನಟಿಸಿದ್ದು, ಸೋನಾ ಲದ್ವಾ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಕಥೆ ಬರೆದಿರುವ ಡಾ. ಎನ್. ನರಸಿಂಹಮೂರ್ತಿ ಅವರೇ ‘ಸುರಭಿ ಫಿಲಂಸ್’ ಬ್ಯಾನರ್‌ನಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ರಮೇಶ್ ಭಟ್, ಬಲ ರಾಜ್ ವಾಡಿ, ಗಣೇಶರಾವ್ ಕೇಸರಕರ್, ಎಸ್ಕಾರ್ಟ್ ಶ್ರೀನಿವಾಸ್, ಪ್ರಕಾಶ್ ತುಮ್ಮಿನಾಡು ಹಾಗೂ ಕಿರಣ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

‌ʻಬಿಗ್‌ ಬಾಸ್‌ʼ ಕನ್ನಡ 13ರ ಮನೆಯೊಳಗೆ ಕಾಲಿಡುವ ಸ್ಪರ್ಧಿಗಳ ಪಟ್ಟಿ ಇಲ್ಲಿದೆ; ಕಾಮನ್‌ ಮ್ಯಾನ್‌ ಕೆಟಗರಿಗೆ ಬಂಪರ್ ಚಾನ್ಸ್!

ಗೌರಿಶಂಕರ್‌ಗೆ ಗೌರಿಶಂಕರ ಪರ್ವತದಷ್ಟು ಹೆಸರು ಬರಲಿ

ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್, "ಸಾಮಾನ್ಯ ಪ್ರಜೆಯೊಬ್ಬ ವಿಧಾನಸೌಧದಲ್ಲಿ ಪಾಲು ಕೇಳುವ ಕಲ್ಪನೆಯೇ ಹೊಸದಾಗಿದೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಗಟ್ಟಿತನ ಈ ಕಥಾವಸ್ತು ಹಾಗೂ ಟ್ರೇಲರ್‌ನಲ್ಲಿದೆ. ಈ ಚಿತ್ರದ ಮೂಲಕ ನಾಯಕ ಗೌರಿಶಂಕರ್ ಅವರ ಹೆಸರು ಗೌರಿಶಂಕರ ಪರ್ವತದಷ್ಟು ಎತ್ತರಕ್ಕೆ ಬೆಳೆಯಲಿ" ಎಂದು ಶುಭ ಹಾರೈಸಿದರು. ನಾಯಕ ಗೌರಿಶಂಕರ್ ಮಾತನಾಡಿ, "ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಮಾಜ ಬದಲಿಸುವ ಆಸೆ ಇರುತ್ತದೆ. ಸಾಮಾನ್ಯನೊಬ್ಬ ಸಿಎಂ ಆಗಿ ಜನರಿಗಾಗಿ ಏನು ಮಾಡಬಹುದು ಎಂಬುದನ್ನು ಕಮರ್ಷಿಯಲ್ ಅಂಶಗಳೊಂದಿಗೆ ಈ ಸಿನಿಮಾದಲ್ಲಿ ತೋರಿಸಿದ್ದೇವೆ" ಎಂದು ತಿಳಿಸಿದರು.

ಪರಭಾಷೆಗೂ ʻಕಾಮನ್‌ಮ್ಯಾನ್‌ʼ ಡಬ್‌

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕ ಡಾ. ಎನ್. ನರಸಿಂಹಮೂರ್ತಿ, "ಸಾಮಾನ್ಯನೊಬ್ಬ ವಿಧಾನಸೌಧವನ್ನೇ ಕೇಳುವುದರ ಹಿಂದೆ ಒಂದು ಬಲವಾದ ಕಾರಣವಿದೆ. ಸಿನಿಮಾ ಈಗಾಗಲೇ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಿಗೆ ಡಬ್ ಆಗಿದ್ದು, ಕನ್ನಡದ ಫಲಿತಾಂಶ ನೋಡಿಕೊಂಡು ಇತರ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತೇವೆ. ಒಂದು ಸಿನಿಮಾ ಗೆದ್ದರೆ ಅದರ ಹಿಂದೆ ನೂರಾರು ತಂತ್ರಜ್ಞರು, ಕಲಾವಿದರ ಕುಟುಂಬಗಳು ಬದುಕುತ್ತವೆ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಪ್ರೋತ್ಸಾಹಿಸಬೇಕು" ಎಂದು ಮನವಿ ಮಾಡಿದರು.

ವಿನಯ್ ಚಂದ್ರ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳಿಗೆ ಕೈಲಾಶ್ ಖೇರ್, ಚೈತ್ರಾ ಆಚಾರ್ ಹಾಗೂ ಬಾಬಾ ಸೈಗಲ್ ಅವರಂತಹ ಖ್ಯಾತ ಗಾಯಕರು ಧ್ವನಿಯಾಗಿದ್ದಾರೆ. ಜೆ.ಜಿ. ಕೃಷ್ಣ ಹಾಗೂ ದೀಪಕ್ ಕುಮಾರ್ ಅವರ ಛಾಯಾಗ್ರಹಣ ಮತ್ತು ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.