Kajal Aggarwal: ಕ್ರೇನ್ ದುರಂತದಲ್ಲಿ ಕಾಜಲ್ ಕೂದಲೆಳೆ ಅಂತರದಲ್ಲಿ ಪಾರು! ಏನಿದು ಘಟನೆ?
Kajal Aggarwal: ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು 2020ರಲ್ಲಿ ನಡೆದ ಭೀಕರ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ, ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ್ದ ಈ ದುರಂತದಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಅಂದು ತಾವು ಸಾವಿನ ದವಡೆಯಿಂದ ಪಾರಾಗಿದ್ದು ದೈವಿಕ ಶಕ್ತಿಯ ಕೃಪೆಯಿಂದಲೇ ಎಂದು ಕಾಜಲ್ ಅಗರ್ವಾಲ್ ನೆನಪಿಸಿಕೊಂಡಿದ್ದಾರೆ.
ನಟಿ ಕಾಜಲ್ ಅಗರ್ವಾಲ್ -
ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ (Kajal agarwal) ಅವರು 2020ರಲ್ಲಿ ನಡೆದ ಭೀಕರ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ, ಕಮಲ್ ಹಾಸನ್ (Kamal Hassan) ಅಭಿನಯದ ಇಂಡಿಯನ್ 2 ಚಿತ್ರದ ಚಿತ್ರೀಕರಣದ ವೇಳೆ ಸಂಭವಿಸಿದ್ದ ಈ ದುರಂತದಲ್ಲಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಅಂದು ತಾವು ಸಾವಿನ ದವಡೆಯಿಂದ ಪಾರಾಗಿದ್ದು ದೈವಿಕ ಶಕ್ತಿಯ ಕೃಪೆಯಿಂದಲೇ ಎಂದು ಕಾಜಲ್ ಅಗರ್ವಾಲ್ ನೆನಪಿಸಿಕೊಂಡಿದ್ದಾರೆ.
2020ರ ಫೆಬ್ರವರಿಯಲ್ಲಿ ಚೆನ್ನೈನ ಪೂನಮಲ್ಲಿಯಲ್ಲಿರುವ ಇವಿಪಿ ಫಿಲ್ಮ್ ಸಿಟಿಯಲ್ಲಿ ಇಂಡಿಯನ್ 2 ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಸುಮಾರು 100 ಅಡಿ ಎತ್ತರದ ಬೃಹತ್ ಕ್ರೇನ್ ಏಕಾಏಕಿ ಕುಸಿದು ಬಿದ್ದಿತ್ತು. ಈ ಭೀಕರ ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದರು.
ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆ (Humans of Bombay) ಜೊತೆಗಿನ ಸಂಭಾಷಣೆಯಲ್ಲಿ ಅಂದಿನ ಘಟನೆಯನ್ನು ನೆನಪಿಸಿಕೊಂಡ ಕಾಜಲ್ ಅಗರ್ವಾಲ್, ತಾವು ಹೇಗೆ ಸಾವಿನಿಂದ ಪಾರಾದರು ಎಂಬುದನ್ನು ವಿವರಿಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಮಂಜ -ಯಶಸ್ ನಡುವಿನ ವೈಮನಸ್ಸು; ಮತ್ತೆ ರದ್ದಾಯ್ತು ಟಾಸ್ಕ್!
ಅಂದು ಚಿತ್ರದ ಸಾಹಸ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಈ ದೃಶ್ಯಕ್ಕಾಗಿ ಕಾಜಲ್ ಅವರು ಸುಮಾರು 80 ವರ್ಷದ ವೃದ್ಧೆಯ ವೇಷ ಧರಿಸಬೇಕಿತ್ತು. ಸಾಮಾನ್ಯವಾಗಿ ಚಿತ್ರತಂಡದ ಸದಸ್ಯರು ಮಾನಿಟರ್ ಸುತ್ತ ಕುಳಿತು ಚಿತ್ರೀಕರಣವನ್ನು ವೀಕ್ಷಿಸುತ್ತಿರುತ್ತಾರೆ. ಅದರಂತೆ ಅಂದು ಕಾಜಲ್ ಸೇರಿದಂತೆ ಚಿತ್ರತಂಡದ ಹಲವರು ಮಾನಿಟರ್ ಬಳಿ ಕುಳಿತಿದ್ದರು.
ಈ ವೇಳೆ ಏಕಾಏಕಿ ಗೊಂದಲ ಉಂಟಾಗಿ ಎಲ್ಲರೂ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು. ಕಾಜಲ್ ಕೂಡ ಜೀವ ಉಳಿಸಿಕೊಳ್ಳಲು ಓಡುತ್ತಿದ್ದಾಗ ಆಕಸ್ಮಿಕವಾಗಿ ಮೇಜಿಗೆ ಬಡಿದು ಕೆಳಗೆ ಬಿದ್ದರು.
ಆ ಕ್ಷಣದಲ್ಲಿ ಓಡುತ್ತಿರುವುದಕ್ಕೆ ಕಾರಣವೇನು ಎಂದು ಯೋಚಿಸಿದ ಅವರು, ಒಮ್ಮೆ ಹಿಂದಿರುಗಿ ನೋಡಲು ನಿರ್ಧರಿಸಿದರು. ಆದರೆ ಹಿಂದಿರುಗಿ ನೋಡಿದಾಗ ಕಂಡ ದೃಶ್ಯ ಅವರನ್ನೇ ಬೆಚ್ಚಿಬೀಳಿಸಿತ್ತು.
“ನಾನು ಯಾವುದರಿಂದ ಓಡುತ್ತಿದ್ದೇನೆ? ಒಮ್ಮೆ ಹಿಂದಿರುಗಿ ನೋಡೋಣ ಎಂದುಕೊಂಡೆ. ತಿರುಗಿ ನೋಡಿದಾಗ 100 ಅಡಿ ಎತ್ತರದ ಕ್ರೇನ್ ನನ್ನ ಕಡೆಗೆ ಕುಸಿದು ಬೀಳುತ್ತಿರುವುದನ್ನು ಕಂಡೆ. ಇದೆಲ್ಲವೂ ಕ್ಷಣಮಾತ್ರದಲ್ಲಿ ನಡೆದುಹೋಯಿತು. ಕ್ರೇನ್ ಬೀಳುವುದನ್ನು ನೋಡಿದ ನಾನು ಅಲ್ಲೇ ನಿಶ್ಚಲವಾಗಿ ನಿಂತುಬಿಟ್ಟೆ. ಏನಾಗುತ್ತಿದೆ ಎಂಬುದೇ ನನಗೆ ಅರ್ಥವಾಗಲಿಲ್ಲ,” ಎಂದು ಕಾಜಲ್ ಅಂದಿನ ಭಯಾನಕ ಕ್ಷಣವನ್ನು ವಿವರಿಸಿದ್ದಾರೆ.
ಕ್ರೇನ್ ತಮ್ಮ ಪಕ್ಕದಲ್ಲೇ ಬಿದ್ದಿತ್ತು ಎಂದು ಹೇಳಿರುವ ಅವರು, “ಕ್ರೇನ್ ನನ್ನ ಪಕ್ಕದಲ್ಲೇ ಬಿತ್ತು. ಅದನ್ನು ನೋಡುತ್ತಾ ನಾನು ಭಯದಿಂದ ನಡುಗುತ್ತಿದ್ದೆ. ಆ ಕ್ಷಣದಲ್ಲಿ ನಾನೇ ಮೊದಲು ಬಲಿಯಾಗುತ್ತಿದ್ದೆ,” ಎಂದು ಹೇಳಿದ್ದಾರೆ.
ಈ ಘಟನೆಯಿಂದ ಕಾಜಲ್ ಮಾನಸಿಕವಾಗಿ ತೀವ್ರ ಆಘಾತಕ್ಕೊಳಗಾಗಿದ್ದರು. ಹಲವು ದಿನಗಳವರೆಗೆ ಆ ಭಯಾನಕ ದೃಶ್ಯ ಅವರ ಮನಸ್ಸಿನಿಂದ ದೂರವಾಗಿರಲಿಲ್ಲ. ಈ ಘಟನೆಯ ನಂತರ ಭಗವಾನ್ ಶ್ರೀಕೃಷ್ಣನ ಮೇಲೆ ತಮ್ಮ ನಂಬಿಕೆ ಮತ್ತಷ್ಟು ಹೆಚ್ಚಾಯಿತು ಎಂದು ಅವರು ತಿಳಿಸಿದ್ದಾರೆ. ತಾವು ಬದುಕುಳಿದಿದ್ದಕ್ಕೆ ದೇವರ ಕೃಪೆಯೇ ಕಾರಣ ಎಂದು ಭಾವಿಸಿರುವ ಕಾಜಲ್, ಹಲವು ದಿನಗಳವರೆಗೆ ಭಯದ ಜೊತೆಗೆ ಕೃತಜ್ಞತೆಯ ಭಾವನೆಯಲ್ಲಿದ್ದರು.
ಮೂವರನ್ನು ಬಲಿ ಪಡೆದಿದ್ದ ಭೀಕರ ದುರಂತ
2020ರ ಫೆಬ್ರವರಿ 19ರಂದು ನಡೆದ ಈ ಕ್ರೇನ್ ದುರಂತದಲ್ಲಿ ಮೂವರು ಮೃತಪಟ್ಟಿದ್ದರು. ಮೃತರನ್ನು ಚಿತ್ರದ ಸಹಾಯಕ ನಿರ್ದೇಶಕ ಕೃಷ್ಣ, ಕಲಾ ವಿಭಾಗದ ಸಹಾಯಕ ಚಂದ್ರನ್ ಹಾಗೂ ನಿರ್ಮಾಣ ವಿಭಾಗದ ಸಹಾಯಕ ಮಧು ಎಂದು ಗುರುತಿಸಲಾಗಿತ್ತು. ಈ ಬಗ್ಗೆ ಚಿತ್ರದ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.
ಘಟನೆಯಲ್ಲಿ ಇತರ ಒಂಬತ್ತು ಮಂದಿ ಗಾಯಗೊಂಡಿದ್ದರು. ಈ ದುರಂತ ಚಿತ್ರರಂಗದಲ್ಲಿ ತೀವ್ರ ಆಘಾತ ಮೂಡಿಸಿತ್ತು.
ಇಂಡಿಯನ್ 2 ಚಿತ್ರದ ಬಗ್ಗೆ
ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಇಂಡಿಯನ್ 2 ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಜಂಟಿಯಾಗಿ ನಿರ್ಮಿಸಿವೆ. 1996ರಲ್ಲಿ ಬಿಡುಗಡೆಯಾಗಿ ಭಾರಿ ಯಶಸ್ಸು ಕಂಡಿದ್ದ ಇಂಡಿಯನ್ ಚಿತ್ರದ ಮುಂದುವರಿದ ಭಾಗ ಇದಾಗಿದೆ.
ಚಿತ್ರದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾಜಲ್ ಅಗರ್ವಾಲ್, ಸಿದ್ಧಾರ್ಥ್, ಎಸ್.ಜೆ. ಸೂರ್ಯ, ಗುಲ್ಶನ್ ಗ್ರೋವರ್, ಬಾಬಿ ಸಿಂಹ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ದಿವಂಗತ ನಟ ನೆಡುಮುಡಿ ವೇಣು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ: Bigg Boss Kannada 13: ಯಶಸ್ ವಿರುದ್ಧ ಆಸಿಯಾ ಗರಂ; ಸ್ನೇಹ ಅಂತ್ಯ!
ಸಾವಿನ ದವಡೆಯಿಂದ ಪಾರಾದ ಆ ಕರಾಳ ಕ್ಷಣವನ್ನು ನೆನಪಿಸಿಕೊಂಡಿರುವ ಕಾಜಲ್ ಅಗರ್ವಾಲ್ ಅವರ ಮಾತುಗಳು, ಬದುಕು ಎಷ್ಟು ಅನಿರೀಕ್ಷಿತ ಎಂಬುದನ್ನು ಮತ್ತೊಮ್ಮೆ ನೆನಪಿಸುವಂತಿವೆ.