ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಸ್.‌ ಜಾನಕಿ ಅಂತ್ಯಸಂಸ್ಕಾರಕ್ಕೆ ಹೋಗಿಲ್ಲವೆಂದು ಟ್ರೋಲ್; ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ ಗಾಯಕಿ ಅನುರಾಧಾ ಭಟ್!

ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಂತ್ಯಸಂಸ್ಕಾರಕ್ಕೆ ಹಾಜರಾಗಲಿಲ್ಲವೆಂದು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿದ್ದ ಟ್ರೋಲರ್‌ಗಳಿಗೆ ಗಾಯಕಿ ಅನುರಾಧಾ ಭಟ್ ಖಡಕ್ ಸ್ಪಷ್ಟೀಕರಣ ನೀಡಿದ್ದಾರೆ. ಮೈಸೂರಿನಲ್ಲಿ ಉಚಿತವಾಗಿ ನೀಡಿದ ಸಂಗೀತ ನಮನದ ಭಕ್ತಿಯನ್ನು ಟಿಆರ್‌ಪಿ ಅಥವಾ ಹಣಕ್ಕಾಗಿ ಮಾಡಿದ ನಾಟಕ ಎಂದು ಬಿಂಬಿಸಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

‌ʻಜಾನಕಮ್ಮನ ಮೇಲಿನ ಪ್ರೀತಿಗೆ ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲʼ-ಅನುರಾಧಾ ಭಟ್‌

-

Avinash GR
Avinash GR Jul 25, 2026 1:07 PM

ಖ್ಯಾತ ಹಿನ್ನೆಲೆ ಗಾಯಕಿ ಅನುರಾಧಾ ಭಟ್ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ನಕಾರಾತ್ಮಕ ಪ್ರಚಾರ ಹಾಗೂ ಹರಿದಾಡುತ್ತಿರುವ ಅವಹೇಳನಕಾರಿ ಕಮೆಂಟ್‌ಗಳ ವಿರುದ್ಧ ಸುದೀರ್ಘ ಸ್ಪಷ್ಟೀಕರಣ ನೀಡುವ ಮೂಲಕ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಹಿರಿಯ ಗಾಯಕಿ ಎಸ್. ಜಾನಕಿ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ಪ್ರಶ್ನಿಸಿ ಟ್ರೋಲ್ ಮಾಡುತ್ತಿರುವವರಿಗೆ ಅವರು ಖಡಕ್ ಉತ್ತರ ನೀಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಜಾನಕಿ ಅಮ್ಮನವರ ಬಗ್ಗೆ ಮಾತನಾಡಿದ್ದನ್ನು ಹಾಗೂ ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅವರ 12ನೇ ದಿನದ 'ಪುಣ್ಯಸ್ಮರಣೆ' ಕಾರ್ಯಕ್ರಮದ ಸಂಗೀತ ನಮನದಲ್ಲಿ ಭಾಗವಹಿಸಿದ್ದನ್ನು ಇಟ್ಟುಕೊಂಡು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅನುರಾಧಾ ಭಟ್ ಅವರ ವಿರುದ್ಧ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದರು.

ಮೌನವಾಗಿರಲು ನನ್ನಿಂದ ಸಾಧ್ಯವಾಗಲಿಲ್ಲ

"ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಬರುವ ನಕಾರಾತ್ಮಕ ಪ್ರತಿಕ್ರಿಯೆಗಳು, ಟೀಕೆಗಳು ಅಥವಾ ಅನಗತ್ಯ ಮಾತುಗಳಿಗೆ ನಾನು ಸಾಮಾನ್ಯವಾಗಿ ಎಂದಿಗೂ ಉತ್ತರಿಸುವುದಿಲ್ಲ. ಇಷ್ಟು ವರ್ಷಗಳ ನನ್ನ ವೃತ್ತಿಜೀವನದಲ್ಲೂ ಅಂತಹ ಟೀಕೆಗಳಿಗೆ ಪ್ರತಿಕ್ರಿಯಿಸದೆ ನನ್ನ ಕೆಲಸವೇ ನನ್ನ ಉತ್ತರವಾಗಿರಲಿ ಎಂದು ನಂಬಿಕೊಂಡು ಬಂದಿದ್ದೇನೆ. ಆದರೆ ಈ ಬಾರಿ ವಿಷಯ ನನ್ನೊಬ್ಬಳದ್ದಲ್ಲ. ನಾನು ಅಪಾರವಾಗಿ ಗೌರವಿಸುವ, ನನ್ನ ಗುರುಸ್ಥಾನದಲ್ಲಿರುವ ಜಾನಕಿ ಅಮ್ಮನವರ ವಿಷಯ. ಅವರ ಶಿಷ್ಯೆಯಾಗಿ, ಭಕ್ತೆಯಾಗಿ, ಅವರೊಂದಿಗಿನ ನನ್ನ ಬಾಂಧವ್ಯವನ್ನೂ, ಅವರ ಮೇಲಿನ ನನ್ನ ಪ್ರೀತಿ ಮತ್ತು ಗೌರವವನ್ನೂ ಪ್ರಶ್ನಿಸಿ ಅಪಾರ್ಥ ಕಲ್ಪಿಸುವುದನ್ನು ಕಂಡಾಗ ಮೌನವಾಗಿರಲು ನನ್ನಿಂದ ಸಾಧ್ಯವಾಗಲಿಲ್ಲ. ಅದಕ್ಕಾಗಿ ಈ ಸ್ಪಷ್ಟೀಕರಣ" ಎಂದು ಅನುರಾಧಾ ಭಟ್‌ ಬರೆದುಕೊಂಡಿದ್ದಾರೆ.

ಅತ್ಯಂತ ಬೇಜವಾಬ್ದಾರಿಯುತ ಹಾಗೂ ವಿಷಾದನೀಯ

ಕಳೆದ ಕೆಲವು ದಿನಗಳಿಂದ, ಜೀ ಕನ್ನಡ ವಾಹಿನಿಯಲ್ಲಿ ಜಾನಕಿ ಅಮ್ಮನವರ ಬಗ್ಗೆ ನಾನು ಮಾತನಾಡಿದ್ದನ್ನೂ ಹಾಗೂ ಮೈಸೂರಿನಲ್ಲಿ ನಡೆದ ಅವರ 12ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರಿಗೆ ಸಲ್ಲಿಸಿದ ಸಂಗೀತ ನಮನದಲ್ಲಿ ನಾನು ಭಾಗವಹಿಸಿದ್ದನ್ನೂ ಮುಂದಿಟ್ಟುಕೊಂಡು, ಕೆಲವರು ನನ್ನ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಟೀಕೆಗಳನ್ನು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದರಲ್ಲೂ ನನ್ನ ಭಾವಚಿತ್ರವನ್ನು ಬಳಸಿಕೊಂಡು, ಕೇವಲ ಊಹೆಗಳ ಆಧಾರದ ಮೇಲೆ ನನ್ನ ವ್ಯಕ್ತಿತ್ವವನ್ನೂ, ಜಾನಕಿ ಅಮ್ಮನವರ ಬಗ್ಗೆ ನನಗಿರುವ ಪ್ರೀತಿ ಮತ್ತು ಗೌರವವನ್ನೂ ಸಾರ್ವಜನಿಕವಾಗಿ ಪ್ರಶ್ನಿಸಿರುವುದು ಅತ್ಯಂತ ಬೇಜವಾಬ್ದಾರಿಯುತ ಹಾಗೂ ವಿಷಾದನೀಯ" ಎಂದಿದ್ದಾರೆ ಎಂದು ಅನುರಾಧಾ ಹೇಳಿದ್ದಾರೆ.

ಒಂದೇ ಮಾನದಂಡದಿಂದ ಅಳೆಯಲಾಗುವುದಿಲ್ಲ

"ಮೆಟ್ಟಲ್ಲಿ ಹೊಡಿಬೇಕು, ವೇದಿಕೆ ಹತ್ತೋಕೆ ಬಿಡಬಾರದು ಎನ್ನುವುದರಿಂದ ಹಿಡಿದು, ಇಲ್ಲಿ ಉಲ್ಲೇಖಿಸಲೂ ಮನಸ್ಸಾಗದಂತಹ ಅನೇಕ ಅವಹೇಳನಕಾರಿ ಮಾತುಗಳನ್ನು ಓದಿದ್ದೇನೆ. ಟೀಕೆಗಳನ್ನು ಸ್ವೀಕರಿಸುವ ಮನಸ್ಸು ನನಗಿದೆ. ಆದರೆ ನನ್ನ ಬಗ್ಗೆ ಇಂತಹ ಮಾತುಗಳನ್ನು ಆಡಬೇಕಾದಷ್ಟು ತಪ್ಪು ನಾನು ಮಾಡಿದ್ದೇನೆ ಎಂದು ನನಗೆ ಖಂಡಿತ ಅನಿಸುವುದಿಲ್ಲ. ಕೆಲವು ಅನಿವಾರ್ಯ ಕಾರಣಗಳಿಂದಾಗಿ ಅವರ ಅಂತ್ಯಸಂಸ್ಕಾರದಲ್ಲಿ ನಾನು ಭಾಗವಹಿಸಲು ಸಾಧ್ಯವಾಗಲಿಲ್ಲ. ಆ ಕಾರಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಯಾರ ಮುಂದೆಯೂ ವಿವರಿಸುವ ಅಥವಾ ಸಮರ್ಥಿಸಿಕೊಳ್ಳುವ ಅಗತ್ಯ ನನಗಿಲ್ಲ. ದುಃಖ, ಪ್ರೀತಿ ಮತ್ತು ಗೌರವವನ್ನು ಅಂತ್ಯಸಂಸ್ಕಾರದಲ್ಲಿ ಹಾಜರಿದ್ದೆವೋ ಇಲ್ಲವೋ ಎಂಬ ಒಂದೇ ಮಾನದಂಡದಿಂದ ಅಳೆಯಲಾಗುವುದಿಲ್ಲ" ಎಂದು ಅನುರಾಧಾ ಹೇಳಿದ್ದಾರೆ.

S Janaki: ʻನನ್ನ ಅಜ್ಜಿ ಈ ಜಗತ್ತಿಗೆ ಸೇರಿದವರು, ಅವರು ನಮ್ಮೆಲ್ಲರ ಹೃದಯಗಳಲ್ಲೂ ಇರುತ್ತಾರೆʼ; ಅಗಲಿದ ಜಾನಕಮ್ಮರನ್ನು ನೆನೆದ ಮೊಮ್ಮಗಳು, ಮಾಜಿ ಸೊಸೆ ಹೇಳಿದ್ದೇನು?

"ಜಾನಕಿ ಅಮ್ಮನವರೊಂದಿಗೆ ನಾನು ಸಂಪರ್ಕದಲ್ಲಿದ್ದೆ, ಅವರೊಂದಿಗೆ ಮಾತನಾಡಿದ್ದೆ. ಅವರ ಬಗ್ಗೆ ನನಗಿದ್ದ ಪ್ರೀತಿ, ಗೌರವ ಮತ್ತು ಬಾಂಧವ್ಯ ನನಗೆ ತಿಳಿದಿದೆ. ಪ್ರತಿಯೊಂದು ಸಂಬಂಧವನ್ನೂ, ಪ್ರತಿಯೊಂದು ಸಂಭಾಷಣೆಯನ್ನೂ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸಬೇಕೆಂಬ ನಿಯಮವಿಲ್ಲ. ಒಬ್ಬ ವ್ಯಕ್ತಿಯೊಂದಿಗಿನ ಸಂಬಂಧದ ಆಳವನ್ನು ಫೇಸ್‌ಬುಕ್‌ ಪೋಸ್ಟ್‌ಗಳು, ಫೋಟೋಗಳು ಅಥವಾ ಅಂತ್ಯಸಂಸ್ಕಾರದಲ್ಲಿ ಹಾಜರಾತಿಯಿಂದ ನಿರ್ಧರಿಸಲಾಗುವುದಿಲ್ಲ. ಜಾನಕಿ ಅಮ್ಮನವರ ಅಗಲಿಕೆಯ 12ನೇ ದಿನ ಆಯೋಜಿಸಲಾಗಿದ್ದ ಸಂಗೀತ ನಮನದ ಉದ್ದೇಶವೂ ಅದೇ. ಅವರ ಸಂಗೀತಕ್ಕೆ, ಅವರ ಅಪಾರ ಸಾಧನೆಗೆ ಮತ್ತು ಅವರು ಬಿಟ್ಟುಹೋದ ಅಮೂಲ್ಯ ಕಲಾ ಪರಂಪರೆಗೆ ಪ್ರೀತಿಪೂರ್ವಕವಾಗಿ ಗೌರವ ಸಲ್ಲಿಸುವುದು. ಅಂದು ಬೆಳಗ್ಗಿನಿಂದ ಸಂಜೆಯವರೆಗೆ ಭಾಗವಹಿಸಿದ ಸಂಗೀತಗಾರರು ಮತ್ತು ಗಾಯಕರು ಯಾರೂ ಒಂದು ರೂಪಾಯಿಯನ್ನೂ ಸಂಭಾವನೆಯಾಗಿ ಸ್ವೀಕರಿಸದೆ, ಕೇವಲ ಜಾನಕಿ ಅಮ್ಮನವರ ಮೇಲಿನ ಪ್ರೀತಿ ಮತ್ತು ಗೌರವದಿಂದ ಸಂಗೀತ ಸೇವೆ ಸಲ್ಲಿಸಿದ್ದೇವೆ. ನಾನೂ ಅದೇ ಭಾವನೆಯಿಂದ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ" ಎಂದು ಅವರು ಹೇಳಿದ್ದಾರೆ.

ನನ್ನನ್ನು ನಾಚಿಕೆಗೇಡು ಎಂದು ಕರೆಯುವ ಹಕ್ಕು ನಿಮಗಿಲ್ಲ

"ಇಂತಹ ನಮನವನ್ನೂ ಹಣಕ್ಕಾಗಿ ಮಾಡಿದ ಕಾರ್ಯಕ್ರಮ, TRP ಅಥವಾ ನಾಟಕ ಎಂದು ಬಿಂಬಿಸುವ ಮೊದಲು ಸತ್ಯಾಂಶಗಳನ್ನು ತಿಳಿದುಕೊಳ್ಳುವುದು ಕನಿಷ್ಠ ಜವಾಬ್ದಾರಿ. ಹೌದು, ಜಾನಕಿ ಅಮ್ಮನವರ ಅಮರ ಗೀತೆಗಳನ್ನು ನಾನು ಮುಂದೆಯೂ ಅತ್ಯಂತ ಹೆಮ್ಮೆ, ಪ್ರೀತಿ ಮತ್ತು ಗೌರವದಿಂದ ಹಾಡುತ್ತಲೇ ಇರುತ್ತೇನೆ. ಒಬ್ಬ ಮಹಾನ್ ಕಲಾವಿದೆಯ ಹಾಡುಗಳನ್ನು ಹಾಡಿ, ಅವರ ಸಂಗೀತವನ್ನು ಮುಂದಿನ ಪೀಳಿಗೆಗೂ ತಲುಪಿಸುವುದು ಅವರ ಕಲಾ ಪರಂಪರೆಯನ್ನು ಜೀವಂತವಾಗಿಡುವ ಒಂದು ಮಾರ್ಗ. ಅದಕ್ಕಾಗಿ ನಾನು ಯಾರ ಮುಂದೆಯೂ ಕ್ಷಮೆ ಕೇಳಬೇಕಾದ ಅಗತ್ಯವಿಲ್ಲ. ನಿಮಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ಆದರೆ ಸತ್ಯಾಂಶಗಳನ್ನು ತಿಳಿಯದೆ, ನಿಮ್ಮದೇ ಆದ ಕಥೆಯನ್ನು ಸೃಷ್ಟಿಸಿ, ನನ್ನ ಉದ್ದೇಶಗಳ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ, ಸಾರ್ವಜನಿಕವಾಗಿ ನನ್ನನ್ನು ನಾಚಿಕೆಗೇಡು ಎಂದು ಕರೆಯುವ ಹಕ್ಕು ನಿಮಗಿಲ್ಲ" ಎಂದು ಅನುರಾಧಾ ಭಟ್‌ ಹೇಳಿದ್ದಾರೆ.

ಅನುರಾಧಾ ಭಟ್‌ ಅವರ ಪೋಸ್ಟ್‌



"ಜಾನಕಿ ಅಮ್ಮನವರು ನನಗೆ ಏನು ಎಂಬುದು ನನಗೆ ಗೊತ್ತು. ಅವರ ಬಗ್ಗೆ ನನ್ನ ಮನಸ್ಸಿನಲ್ಲಿರುವ ಪ್ರೀತಿ, ಅಭಿಮಾನ ಮತ್ತು ಗೌರವಕ್ಕೆ ಸಾಮಾಜಿಕ ಜಾಲತಾಣದಲ್ಲಿರುವ ಯಾರ ಪ್ರಮಾಣಪತ್ರವೂ ನನಗೆ ಬೇಕಿಲ್ಲ. ಬೇರೆಯವರ ಸೌಜನ್ಯ ಮತ್ತು ಸಂಸ್ಕಾರವನ್ನು ಪ್ರಶ್ನಿಸುವ ಮೊದಲು, ವೈಯಕ್ತಿಕವಾಗಿ ಪರಿಚಯವೇ ಇಲ್ಲದ ವ್ಯಕ್ತಿಯ ಬಗ್ಗೆ ಸತ್ಯಾಸತ್ಯತೆ ತಿಳಿಯದೆ ಸಾರ್ವಜನಿಕವಾಗಿ ಅವಹೇಳನಕಾರಿ ಮಾತುಗಳನ್ನಾಡುವುದು ಎಷ್ಟರ ಮಟ್ಟಿಗೆ ಸೌಜನ್ಯ ಮತ್ತು ಸಂಸ್ಕಾರ ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು" ಎಂದಿದ್ದಾರೆ.

S Janaki: ʼʼನಮ್ಮ ನಡುವೆ ಜಗಳ ಸೃಷ್ಟಿಸಿದರು!ʼʼ ಎಸ್‌. ಜಾನಕಿ ನೆನೆದು ಗಾಯಕಿ ಪಿ. ಸುಶೀಲಾ ಭಾವುಕ

"ಎಲ್ಲಕ್ಕಿಂತ ಮುಖ್ಯವಾಗಿ, ತಮ್ಮನ್ನು ತಾವು ಜಾನಕಿ ಅಮ್ಮನವರ “ಅಭಿಮಾನಿಗಳು” ಎಂದು ಕರೆದುಕೊಳ್ಳುವವರು, ಅವರ ಹೆಸರಿನಲ್ಲಿ ಮತ್ತೊಬ್ಬರನ್ನು ಅವಮಾನಿಸುವ ಮೊದಲು ಜಾನಕಿ ಅಮ್ಮನವರ ಸರಳತೆ, ವಿನಯ ಮತ್ತು ಮಾನವೀಯತೆಯನ್ನು ಅನುಸರಿಸಲು ಪ್ರಯತ್ನಿಸಿದ್ದರೆ ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತಿತ್ತು.‌ ಅವರ ಅಭಿಮಾನಿ ಎಂದು ಹೇಳಿಕೊಳ್ಳುವುದು ಸುಲಭ. ಅವರ ವಿನಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಕೆಲವು ಬಾಂಧವ್ಯಗಳು ಪ್ರದರ್ಶನಕ್ಕಲ್ಲ, ಅವು ಹೃದಯದಲ್ಲಿ ಉಳಿಯುವಂಥವು" ಎಂದು ಬರೆಯುವ ಮೂಲಕ ಅನುರಾಧಾ ಭಟ್ ತಮ್ಮ ಮನಸ್ಸಿನ ನೋವನ್ನು ಹೊರಹಾಕಿದ್ದಾರೆ.