ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕನ್ನಡ ಚಿತ್ರಗಳ ಪ್ರೋತ್ಸಾಹಕ್ಕೆ ರಾಜ್ಯ ಸರ್ಕಾರದಿಂದಲೇ ಒಟಿಟಿ

ಕನ್ನಡ ಚಿತ್ರರಂಗದ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ ಸರ್ಕಾರವೇ ಸ್ವತಃ ಒಟಿಟಿ ವೇದಿಕೆಯನ್ನು ಪ್ರಾರಂಭಿಸಲು ಮುಂದಾಗಿದೆ. ಈ ಬಗ್ಗೆ ಹಿಂದಿನ ಬಜೆಟ್‌ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ತಾಪಿಸಿದ್ದರು. ಇದೀಗ ಈ ಯೋಜನೆಯ ಅಧ್ಯಯನಕ್ಕೆ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

ಕನ್ನಡ ಚಿತ್ರಗಳ ಪ್ರೋತ್ಸಾಹಕ್ಕಾಗಿ ಸರ್ಕಾರದಿಂದಲೇ ಒಟಿಟಿ

ಸಾಂದರ್ಭಿಕ ಚಿತ್ರ -

Ramesh B Ramesh B Sep 25, 2025 11:08 PM

ಬೆಂಗಳೂರು: ಕನ್ನಡ ಸಿನಿಪ್ರೇಮಿಗಳ, ತಂತ್ರಜ್ಞರ ಬಹುದಿನಗಳ ಕನಸು ಕೊನೆಗೂ ನನಸಾಗುವ ಹಂತಕ್ಕೆ ಬಂದಿದೆ. ಕನ್ನಡ ಚಿತ್ರರಂಗದ ಉಳಿವಿಗಾಗಿ ಮತ್ತು ಬೆಳವಣಿಗೆಗಾಗಿ ಸರ್ಕಾರವೇ ಸ್ವತಃ ಒಟಿಟಿ (OTT) ವೇದಿಕೆಯನ್ನು ಪ್ರಾರಂಭಿಸಲು ಮುಂದಾಗಿದೆ. ಈ ಬಗ್ಗೆ ಹಿಂದಿನ ಬಜೆಟ್‌ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಸ್ತಾಪಿಸಿದ್ದರು. ಇದೀಗ ಈ ಯೋಜನೆಯ ಅಧ್ಯಯನಕ್ಕೆ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ.

ಈ ಸಮಿತಿಯು ಒಟಿಟಿ ವೇದಿಕೆಯ ನಿರ್ಮಾಣ, ತಾಂತ್ರಿಕ ಕಾರ್ಯ ವೈಖರಿ, ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳು ಮತ್ತು ಅನುದಾನದ ಕುರಿತು ವಿವರವಾದ ನೀಲನಕ್ಷೆಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ನಿಯೋಗದ ಅಧ್ಯಕ್ಷರಾಗಲಿದ್ದಾರೆ. ಇನ್ನು ಶ್ರೀ ಕಂಠೀರವ ಸ್ಟುಡಿಯೋ ಅಧ್ಯಕ್ಷ ಮೆಹಬೂಬ್‌ ಪಾಷಾ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್‌, ರಾಕ್‌ಲೈನ್‌ ವೆಂಕಟೇಶ್‌, ನಟ ದುನಿಯಾ ವಿಜಯ್‌, ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯ ಐವಾನ್‌ ಡಿಸಿಲ್ವ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ದೇಶಾದ್ರಿ ಎಚ್‌. ಸದಸ್ಯರಾಗಲಿದ್ದಾರೆ. ಛಾಯಾಚಿತ್ರ ಮತ್ತು ಚಲನಚಿತ್ರ ಶಾಖೆಯ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ಸಂಯೋಜಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Darshan: ಜೈಲು ಅಧಿಕಾರಿಗಳು ಕೋರ್ಟ್ ಆದೇಶ ಪಾಲಿಸುತ್ತಿಲ್ಲ; ನಟ ದರ್ಶನ್‌ ಆರೋಪ

ಕೈಗಾರಿಕಾ ನೀತಿಯಡಿ ನೀಡಲಾಗುತ್ತಿರುವ ಸೌಲಭ್ಯಕ್ಕೆ ಕರಡು ನೀತಿ

ಕಳೆದ ಬಾರಿಯ ಬಜೆಟ್‌ನಲ್ಲಿ ಘೋಷಿಸಿರುವ ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ ಕೈಗಾರಿಕಾ ನೀತಿಯಡಿ ನೀಡಲಾಗುತ್ತಿರುವ ಸೌಲಭ್ಯವನ್ನು ವಿಸ್ತರಿಸಲು ಸೂಕ್ತ ಕರಡು ನೀತಿಯನ್ನು ರೂಪಿಸಲು ಅ‍ಧ್ಯಯನ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಮಿತಿ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯಗಳಲ್ಲಿ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಪಾಲಿಸುತ್ತಿರುವ ನೀತಿಗಳನ್ನು ಅಭ್ಯಾಸ ನಡೆಸಿ, ಕನ್ನಡ ಚಿತ್ರೋದ್ಯಮಕ್ಕೆ ಸಂಬಂಧಿಸಿದ ಪರಿಣಿತರೊಂದಿಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕಿದೆ. ಸಮಿತಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಅಧ್ಯಕ್ಷರಾಗಿರಲಿದ್ದು, ಮೆಹಬೂಬ್‌ ಪಾಷಾ, ಸಾಧುಕೋಕಿಲ, ಸಾ.ರಾ. ಗೋವಿಂದು, ಕೆ.ವಿ. ಚಂದ್ರಶೇಖರ್‌, ಆರ್‌. ಚಂದ್ರು, ರಮೇಶ್‌ ರೆಡ್ಡಿ, ರಾಜಾರಾಮ್‌, ವಿಷ್ಣು ಕುಮಾರ್‌ ಎಸ್‌., ಡಿ.ಜಿ. ವೆಂಕಟೇಶ್‌ ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶನಾಲಯ ನಿರ್ದೇಶಕರು ಸದಸ್ಯರಾಗಲಿದ್ದಾರೆ. ಇನ್ನು ಛಾಯಾಚಿತ್ರ ಮತ್ತು ಚಲನಚಿತ್ರ ಶಾಖೆಯ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಲಿದ್ದಾರೆ.

ಚಲನಚಿತ್ರ ಭಂಡಾರ ಸ್ಥಾಪನೆ

ಸಾಮಾಜಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಕನ್ನಡ ಚಲನಚಿತ್ರಗಳನ್ನು ಡಿಜಿಟಲ್‌ ಮತ್ತು ನಾನ್‌ ಡಿಜಿಟಲ್‌ ಮಾದರಿಯಲ್ಲಿ ಸಂರಕ್ಷಿಸಲು ಚಲನಚಿತ್ರ ಭಂಡಾರದ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು ಈ ಕುರಿತು ಅಧ್ಯಯನ ನಡೆಸಲು ತಜ್ಞರ ಸಮಿತಿ ರೂಪಿಸಲಾಗಿದೆ. ಅಧ್ಯಕ್ಷರಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಕಾರ್ಯ ನಿರ್ವಹಿಸಲಿದ್ದಾರೆ. ಸದಸ್ಯರಾಗಿ ಮೆಹಬೂಬ್‌ ಪಾಷಾ, ಸಾಧುಕೋಕಿಲ, ಜಯಣ್ಣ, ರಾಮಮೂರ್ತಿ, ಸಾವಿತ್ರಿ ಮಜುಂದಾರ್‌, ಚಿದಾನಂದ ಪಟೇಲ್‌, ನಿಖಿತಾ ಸ್ವಾಮಿ ಎಸ್. ಸದಸ್ಯರಾಗಲಿದ್ದಾರೆ. ಛಾಯಾಚಿತ್ರ ಮತ್ತು ಚಲನಚಿತ್ರ ಶಾಖೆಯ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಲಿದ್ದಾರೆ. ಇನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ಸಂಯೋಜಕರಾಗಲಿದ್ದಾರೆ.