ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

11 ವರ್ಷದ ಬಳಿಕ ತಮಿಳು ಚಿತ್ರ ಒಪ್ಪಿಕೊಂಡ ʻಕಿಚ್ಚʼ ಸುದೀಪ್; ಇದು ವೆಟ್ರಿಮಾರನ್‌ ಶಿಷ್ಯನ ಸಿನಿಮಾ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 11 ವರ್ಷಗಳ ನಂತರ ಕಾಲಿವುಡ್‌ಗೆ ಹೋಗಿದ್ಧಾರೆ. ವೆಟ್ರಿಮಾರನ್ ಅವರ ಶಿಷ್ಯ ಕಾರ್ತಿಕ್ ಪೆರುಮಾಳ್‌ಸಾಮಿ ನಿರ್ದೇಶನದ, ಐಶ್ವರ್ಯಾ ರಾಜೇಶ್ ಮತ್ತು ವಿಕ್ರಾಂತ್ ನಟನೆಯ 'ಅಂಡರ್ 18' ಚಿತ್ರಕ್ಕೆ ಸುದೀಪ್ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ತಮಿಳು ನಿರ್ದೇಶಕ ವೆಟ್ರಿಮಾರನ್ ಶಿಷ್ಯನ ಹೊಸ ಸಿನಿಮಾದಲ್ಲಿ ʻಕಿಚ್ಚʼ ಸುದೀಪ್

-

Avinash GR
Avinash GR May 28, 2026 7:42 PM

ಕಿಚ್ಚ ಸುದೀಪ್‌ ಅವರು ಪರಭಾಷೆಯಲ್ಲೂ ಆಗಾಗ ನಟಿಸುವುದು ಗೊತ್ತೇ ಇದೆ. ಹಿಂದಿ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. 2015ರಲ್ಲಿ ತೆರೆಕಂಡ ತಮಿಳಿನ ಪುಲಿ ಸಿನಿಮಾದಲ್ಲಿ ಸುದೀಪ್‌ ಖಳ ಪಾತ್ರವನ್ನು ಮಾಡಿದ್ದರು.‌ ಅದಾದ ಮೇಲೆ ನೇರವಾಗಿ ಯಾವ ತಮಿಳು ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. ಇದೀಗ 11 ವರ್ಷಗಳ ನಂತರ ಪುನಃ ತಮಿಳು ಸಿನಿಮಾಕ್ಕಾಗಿ ಕಾಲಿವುಡ್‌ಗೆ ಎಂಟ್ರಿ ಕೊಟಿದ್ದಾರೆ ಸುದೀಪ್.

ಚಿತ್ರತಂಡದಿಂದ ಸುದೀಪ್‌ಗೆ ಪ್ರೀತಿಯ ಸ್ವಾಗತ

ಹೌದು, ಐಶ್ವರ್ಯಾ ರಾಜೇಶ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ, ಕಾರ್ತಿಕ್ ಪೆರುಮಾಳ್‌ಸಾಮಿ ನಿರ್ದೇಶನದ ‘ಅಂಡರ್ 18’ (Under 18) ಸಿನಿಮಾದಲ್ಲಿ ನಟ ʻಕಿಚ್ಚʼ ಸುದೀಪ್ ನಟಿಸುವುದು ಎಂಟ್ರಿ ನೀಡಿದ್ದಾರೆ. ಈ ಕುರಿತು ಚಿತ್ರವನ್ನು ನಿರ್ಮಿಸುತ್ತಿರುವ ‘ಎಸ್‌ಆರ್ ಪ್ರೊಡಕ್ಷನ್ಸ್’ ಸಂಸ್ಥೆಯು ತನ್ನ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ, "ಬಾದ್‌ಷಾ ಬಂದಿದ್ದಾರೆ! ಪವರ್‌ಹೌಸ್ ಪರ್ಫಾರ್ಮರ್ ಕಿಚ್ಚ ಸುದೀಪ್ ಅವರನ್ನು ‘ಅಂಡರ್ 18’ ಚಿತ್ರತಂಡಕ್ಕೆ ಪ್ರೀತಿಯಿಂದ ಸ್ವಾಗತಿಸುತ್ತಿದ್ದೇವೆ. ನಮ್ಮ ಸಿನಿಮಾದ ಪ್ರಯಾಣಕ್ಕೆ ಇದೊಂದು ಅತ್ಯಂತ ಬಲಿಷ್ಠ ಸೇರ್ಪಡೆಯಾಗಿದೆ" ಎಂದು ಬರೆದುಕೊಂಡಿದೆ.

Kiccha Sudeep: 'ಬಿಗ್ ಬಾಸ್ ಕನ್ನಡ' ಶೋಗೆ ಗುಡ್‌ಬೈ ಹೇಳಿದ Kiccha Sudeep; ಅಭಿಮಾನಿಗಳಿಗೆ ತೀವ್ರ ಬೇಸರ!

ಇದು ವೆಟ್ರಿಮಾರನ್‌ ಶಿಷ್ಯನ ಸಿನಿಮಾ

ಇದಕ್ಕೂ ಮುನ್ನ, ಖ್ಯಾತ ತಮಿಳು ನಿರ್ದೇಶಕ ವೆಟ್ರಿಮಾರನ್ ಅವರು ‘ಅಂಡರ್ 18’ ಚಿತ್ರದ ಟೈಟಲ್ ಲುಕ್ ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದರು. ಅಂದಹಾಗೆ, ಚಿತ್ರದ ನಿರ್ದೇಶಕ ಕಾರ್ತಿಕ್ ಪೆರುಮಾಳ್‌ಸಾಮಿ ಅವರು ಸ್ವತಂತ್ರ ನಿರ್ದೇಶಕರಾಗುವ ಮುನ್ನ ವೆಟ್ರಿಮಾರನ್ ಅವರ ಬಳಿ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು. ತಮ್ಮ ಹಿಂದಿನ ‘ಮದ್ರಾಸ್‌ಕಾರನ್‌’ ಚಿತ್ರದ ಯಶಸ್ಸಿನ ನಂತರ ಎಸ್‌ಆರ್ ಪ್ರೊಡಕ್ಷನ್ಸ್‌ನ ಬಿ. ಜಗದೀಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರತಂಡದ ಮೂಲಗಳ ಪ್ರಕಾರ, ‘ಅಂಡರ್ 18’ ಸಿನಿಮಾವು ಸಮಾಜದ ವಾಸ್ತವಿಕ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಮತ್ತೊಂದು ವಿಭಿನ್ನ ಪ್ರಯತ್ನವಾಗಿದೆ. ಹೊಸ ತಲೆಮಾರಿನ ದೃಷ್ಟಿಕೋನದೊಂದಿಗೆ ನೈಜ ಕಥಾಹಂದರವನ್ನು ಆರಿಸಿಕೊಂಡಿರುವ ನಿರ್ಮಾಪಕ ಜಗದೀಶ್, ಗುಣಮಟ್ಟದ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ನೀಡುವ ಉದ್ದೇಶದಿಂದ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ ಎನ್ನಲಾಗಿದೆ.

ತಮಿಳು ಸಿನಿಮಾದಲ್ಲಿ ಕಿಚ್ಚ ಸುದೀಪ್



ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ

"ಇದು ಅಪರಾಧ ಲೋಕದ ಕ್ರೂರ ಮುಖ ಮತ್ತು ಅದರಿಂದ ತೊಂದರೆಗೆ ಒಳಗಾಗುವ ಒಂದು ಕುಟುಂಬದ ಭಾವನೆಗಳನ್ನು ಪ್ರದರ್ಶಿಸುವ ಎಮೋಷನಲ್ ಡ್ರಾಮಾ ಆಗಿದೆ" ಎಂದು ಮೂಲಗಳು ತಿಳಿಸಿವೆ. ನಿರ್ದೇಶಕ ಕಾರ್ತಿಕ್ ಅವರು ತಮಿಳುನಾಡಿನಲ್ಲಿ ನಡೆದಿರುವ ನೈಜ ಘಟನೆಗಳನ್ನು ಆಧರಿಸಿ, ಇದುವರೆಗೆ ಯಾರಿಗೂ ತಿಳಿಯದ ಅಪರಾಧದ ಹಿನ್ನೆಲೆಗಳನ್ನು ಸಂಶೋಧಿಸಿ ಈ ಕಥೆಯನ್ನು ಸಿದ್ಧಪಡಿಸಿದ್ದಾರಂತೆ. ಈ ಚಿತ್ರವು ಸಮಾಜದ ರಿಯಾಲಿಟಿ ಮತ್ತು ಕೌಟುಂಬಿಕ ಭಾವನೆಗಳ ಮಿಶ್ರಣವಾಗಿದ್ದು, ಪ್ರೇಕ್ಷಕರ ಮೇಲೆ ಆಳವಾದ ಪ್ರಭಾವ ಬೀರಲಿದೆ ಎಂಬುದು ಚಿತ್ರತಂಡ ನಂಬಿಕೆ.

ನಾಳೆಯಿಂದ ಶೂಟಿಂಗ್‌ ಆರಂಭ

ಚಿತ್ರದಲ್ಲಿ ಐಶ್ವರ್ಯಾ ರಾಜೇಶ್, ವಿಕ್ರಾಂತ್ ಮತ್ತು ಕಿಶೋರ್ ಪ್ರಮುಖ ಪಾತ್ರಗಳಲ್ಲಿದ್ದು, ಅವರ ಜೊತೆಗೆ ಇನ್ನೂ ಅನೇಕ ದೊಡ್ಡ ತಾರೆಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್‌ ಯಾವ ಪಾತ್ರ ಮಾಡುತ್ತಿದ್ದಾರೆ ಎಂಬುದು ಇನ್ನೂ ಕೂಡ ಗೊತ್ತಾಗಿಲ್ಲ. ಶುಕ್ರವಾರ (ಮೇ 29) ಪೂಜೆಯೊಂದಿಗೆ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಲಿದ್ದು, ಹೊಸೂರು, ಚೆಂಗಲ್ಪಟ್ಟು ಮತ್ತು ಚೆನ್ನೈ ಸುತ್ತಮುತ್ತ ಶೂಟಿಂಗ್ ನಡೆಸಲು ಚಿತ್ರತಂಡ ಯೋಜಿಸಿದೆ. ಈ ಚಿತ್ರಕ್ಕೆ ಪ್ರಸಿದ್ಧ ವೇಲ್‌ರಾಜ್ ಸಿನಿಮಾಟೋಗ್ರಫಿ ಇರಲಿದ್ದು, ಸ್ಯಾಮ್ ಸಿ.ಎಸ್. ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.