ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಒಂದೇ ಪರದೆಯ ಮೇಲೆ ದಕ್ಷಿಣ ಭಾರತದ ನಾಲ್ವರು ʻಸೂಪರ್‌ ಸ್ಟಾರ್ಸ್ʼ; ಸೆಪ್ಟೆಂಬರ್ 6ರಿಂದ ʻಬಿಗ್ ಬಾಸ್ʼ ಮಹಾಸಂಗಮ!

ದಕ್ಷಿಣ ಭಾರತದ ʻಬಿಗ್‌ ಬಾಸ್‌ʼ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸೆಪ್ಟೆಂಬರ್ 6ರಿಂದ ಏಕಕಾಲಕ್ಕೆ ಆರಂಭವಾಗುತ್ತಿದೆ. ʻಕಿಚ್ಚʼ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಹಾಗೂ ಮೋಹನ್‌ಲಾಲ್ ಒಂದೇ ಪ್ರೊಮೋದಲ್ಲಿ ಕಾಣಿಸಿಕೊಂಡು ಸೌತ್ ಇಂಡಿಯನ್ ಸಂಸ್ಕೃತಿ ಮತ್ತು ಆಹಾರ ಪದ್ಧತಿಯ ಸೊಗಸನ್ನು ಅನಾವರಣಗೊಳಿಸಿದ್ದಾರೆ.

ದಕ್ಷಿಣ ಭಾರತದ ʻಬಿಗ್ ಬಾಸ್ʼ ಮಹಾಸಂಗಮ! ಸೆಪ್ಟೆಂಬರ್ 6ರಿಂದ ಧಮಾಕಾ!

-

Avinash GR
Avinash GR Aug 31, 2026 3:23 PM

ಕಿರುತೆರೆಯ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಪರೂಪದ ವಿದ್ಯಮಾನವೊಂದಕ್ಕೆ ದಕ್ಷಿಣ ಭಾರತದ ಮನರಂಜನಾ ಲೋಕ ಸಾಕ್ಷಿಯಾಗಿದೆ. ದಕ್ಷಿಣದ ನಾಲ್ಕೂ ಪ್ರಮುಖ ಭಾಷೆಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ‘ಬಿಗ್ ಬಾಸ್’ ಆವೃತ್ತಿಗಳು ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಪ್ರಸಾರಕ್ಕೆ ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಜಿಯೋಸ್ಟಾರ್ (JioStar) ಬಿಡುಗಡೆ ಮಾಡಿರುವ ವಿಶೇಷ ಪ್ರೊಮೋ ಭಾರಿ ಸಂಚಲನ ಸೃಷ್ಟಿಸಿದೆ.

ಕನ್ನಡದ ಅಭಿನಯ ಚಕ್ರವರ್ತಿ ‘ಕಿಚ್ಚ’ ಸುದೀಪ್, ತಮಿಳಿನ ‘ಮಕ್ಕಳ್ ಸೆಲ್ವನ್’ ವಿಜಯ್ ಸೇತುಪತಿ, ತೆಲುಗಿನ ‘ಕಿಂಗ್’ ಅಕ್ಕಿನೇನಿ ನಾಗಾರ್ಜುನ ಹಾಗೂ ಮಲಯಾಳಂನ ‘ಕಂಪ್ಲೀಟ್ ಆಕ್ಟರ್’ ಮೋಹನ್‌ಲಾಲ್‌ ಅವರು ಒಂದೇ ಪರದೆಯನ್ನು ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಪ್ರೊಮೋದಲ್ಲಿ ಕೇವಲ ತಾರಾ ಮೆರುಗು ಮಾತ್ರವಲ್ಲದೆ, ದಕ್ಷಿಣ ಭಾರತದ ಭಾಷಾ ವೈವಿಧ್ಯತೆ ಮತ್ತು ಸಂಸ್ಕೃತಿಯ ಸಮ್ಮಿಲನವನ್ನು ಸೊಗಸಾಗಿ ಕಟ್ಟಿಕೊಡಲಾಗಿದೆ. ಮುಂಬರುವ ಹೊಸ ಸೀಸನ್‌ನ ಕುತೂಹಲದ ನಡುವೆ, ನಾಲ್ವರು ನಿರೂಪಕರು ಪರಸ್ಪರರ ರಾಜ್ಯಗಳ ವೈವಿಧ್ಯಮಯ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ನಡೆಸುವ ಲಘು ಹಾಸ್ಯ ಸಂಭಾಷಣೆಯು ಪ್ರೊಮೋದ ಪ್ರಮುಖ ಹೈಲೈಟ್ ಆಗಿದೆ. ತಮ್ಮದೇ ಆದ ವಿಶಿಷ್ಟ ಶೈಲಿಯಿಂದ ಗುರುತಿಸಿಕೊಂಡಿರುವ ಈ ನಾಲ್ವರು ದಿಗ್ಗಜರು ಒಟ್ಟಾಗಿ ಕಾಣಿಸಿಕೊಂಡಿರುವುದರಿಂದ ಬಿಗ್ ಬಾಸ್ ಮೇಲಿನ ನಿರೀಕ್ಷೆ ಮುಗಿಲುಮುಟ್ಟಿದೆ.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

ಒಂದೇ ಕೌಂಟ್‌ಡೌನ್, ನಾಲ್ಕು ಮನೆಗಳು!

ವರ್ಷಗಳಿಂದ ʻಬಿಗ್ ಬಾಸ್ʼ ಕಾರ್ಯಕ್ರಮವನ್ನು ಮುನ್ನಡೆಸುತ್ತಿರುವ ಈ ಸ್ಟಾರ್ ನಿರೂಪಕರು ತಮ್ಮ ವಿಶ್ಲೇಷಣೆ, ಸಮಯಪ್ರಜ್ಞೆ ಮತ್ತು ವೀಕೆಂಡ್ ಪಂಚಿಂಗ್ ಮಾತುಗಳ ಮೂಲಕ ಆಯಾ ಭಾಷೆಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಾರೆ. ಇದೀಗ ಎಲ್ಲರೂ ಒಂದೇ ವೇದಿಕೆಯಲ್ಲಿ ಕೈಜೋಡಿಸಿರುವುದು ʻಬಿಗ್ ಬಾಸ್ʼ ಇತಿಹಾಸದಲ್ಲೇ ಒಂದು ಐತಿಹಾಸಿಕ ಕ್ಷಣವಾಗಿ ದಾಖಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಜಿಯೋಸ್ಟಾರ್‌ನ ದಕ್ಷಿಣ ಭಾರತ ಮನರಂಜನಾ ವಿಭಾಗದ ಮುಖ್ಯಸ್ಥ ಕೃಷ್ಣನ್ ಕುಟ್ಟಿ, "ನಮ್ಮ ನಾಲ್ವರು ನಿರೂಪಕರು ಆಯಾ ಭಾಷೆಯ ಪ್ರೇಕ್ಷಕರ ಜತೆ ಅವಿನಾಭಾವ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಅವರ ವೈಯಕ್ತಿಕ ವರ್ಚಸ್ಸಿಗೆ ತಕ್ಕಂತೆ ಮತ್ತು ದಕ್ಷಿಣ ಭಾರತದ ಸಂಸ್ಕೃತಿಯನ್ನು ಬಿಂಬಿಸುವಂತೆ ಈ ಪ್ರೊಮೋ ಸಿದ್ಧಪಡಿಸಲಾಗಿದೆ. ನಾಲ್ಕೂ ಭಾಷೆಗಳ ಬಿಗ್ ಬಾಸ್ ಏಕಕಾಲಕ್ಕೆ ಆರಂಭವಾಗುತ್ತಿರುವ ಹೊತ್ತಿನಲ್ಲಿ, ಈ ಸೂಪರ್‌ಸ್ಟಾರ್‌ಗಳು ಒಟ್ಟಾಗಿ ಕಾಣಿಸಿಕೊಂಡಿರುವುದು ಪ್ರೇಕ್ಷಕರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ," ಎಂದಿದ್ದಾರೆ.

Bigg Boss Kannada 12: ಬಿಗ್‌ ಬಾಸ್‌ ಶೋಗೆ ಬಿಗ್‌ ಸಂಕಷ್ಟ, ಪ್ರತಿಭಟನೆ, ಪೊಲೀಸ್‌ ಅನುಮತಿಯೂ ಇಲ್ಲ

ಸೆಪ್ಟೆಂಬರ್ 6ರಿಂದ ಬಿಗ್ ಬಾಸ್ ಧಮಾಕಾ

ಎಂಡೆಮೋಲ್ ಶೈನ್ / ಬನಿಜಯ್ ಎಂಟರ್‌ಟೈನ್‌ಮೆಂಟ್ (Endemol Shine / Banijay Entertainment) ಒಡೆತನದ ಈ ರಿಯಾಲಿಟಿ ಶೋ, ಸೆಪ್ಟೆಂಬರ್ 6ರಿಂದ ಪ್ರೇಕ್ಷಕರ ಮನೆ-ಮನ ತಲುಪಲಿದೆ. ಪ್ರತಿಯೊಂದು ಆವೃತ್ತಿಯೂ ತನ್ನದೇ ಆದ ಸ್ಥಳೀಯ ಸೊಗಡಿನೊಂದಿಗೆ ಜಿಯೋಸ್ಟಾರ್ ನೆಟ್‌ವರ್ಕ್‌ನ ಆಯಾ ಟಿವಿ ವಾಹಿನಿಗಳು ಮತ್ತು ‘ಜಿಯೋಹಾಟ್‌ಸ್ಟಾರ್’ (JioHotstar) ಒಟಿಟಿ ವೇದಿಕೆಯಲ್ಲಿ ದಿನದ 24 ಗಂಟೆಯೂ ಮನರಂಜನೆ ನೀಡಲು ಸಜ್ಜಾಗಿದೆ. ಒಂದೇ ದಿನ ನಾಲ್ಕು ಭಾಷೆಗಳ ಪ್ರೀಮಿಯರ್ ಆರಂಭವಾಗುತ್ತಿರುವುದು ದಕ್ಷಿಣ ಭಾರತದ ಕಿರುತೆರೆ ವಲಯದಲ್ಲಿ ಹೊಸ ದಾಖಲೆ ಬರೆಯುವುದರಲ್ಲಿ ಅನುಮಾನವಿಲ್ಲ.