ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಸರ್ಕಾರಿ ನ್ಯಾಯಬೆಲೆ ಅಂಗಡಿ' ಟ್ರೇಲರ್ ರಿಲೀಸ್: ಜುಲೈ 31ಕ್ಕೆ ತೆರೆಗೆ ಬರಲಿದೆ ಕುಮಾರ್ ಬಂಗಾರಪ್ಪ-ರಾಗಿಣಿ ಸಿನಿಮಾ!

ಸಾರ್ವಜನಿಕ ಪಡಿತರ ವ್ಯವಸ್ಥೆಯ ಲೋಪದೋಷಗಳು ಹಾಗೂ ಅವ್ಯವಹಾರಗಳ ಕುರಿತಾದ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಕುಮಾರ್ ಬಂಗಾರಪ್ಪ ಹಾಗೂ ರಾಗಿಣಿ ದ್ವಿವೇದಿ ಅಭಿನಯದ ಈ ಸಾಮಾಜಿಕ ಕಳಕಳಿಯ ಚಿತ್ರವನ್ನು ಮಂಡ್ಯ ಗ್ರಾಮೀಣ ಭಾಗದಲ್ಲಿ 52 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ಕುಮಾರ್‌ ಬಂಗಾರಪ್ಪ ನಟನೆಯ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಟ್ರೇಲರ್‌ ರಿಲೀಸ್‌

-

Avinash GR
Avinash GR Jul 21, 2026 6:59 PM

ಸದ್ದಿಲ್ಲದೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡಿರುವ ಕುಮಾರ್ ಬಂಗಾರಪ್ಪ ಮತ್ತು ರಾಗಿಣಿ ದ್ವಿವೇದಿ ಅಭಿನಯದ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ರಾಜಕೀಯ ಹಾಗೂ ಚಿತ್ರರಂಗದ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಈ ಚಿತ್ರದ ಟ್ರೇಲರ್ ಹಾಗೂ ಪೋಸ್ಟರ್ ಅನ್ನು ಅದ್ಧೂರಿಯಾಗಿ ಅನಾವರಣಗೊಳಿಸಲಾಯಿತು.

ಹಿರಿಯ ರಾಜಕಾರಣಿ ಎಲ್.ಆರ್. ಶಿವರಾಮೇಗೌಡ, ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್ ಹಾಗೂ ಗಾಯಕಿ ಶಮಿತಾ ಮಲ್ನಾಡ್ ಸೇರಿದಂತೆ ಹಲವು ಪ್ರಮುಖರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪಡಿತರ ವ್ಯವಸ್ಥೆಯ ಲೋಪದೋಷಗಳ ಮೇಲೆ ಬೆಳಕು

ಹೆಸರೇ ಸೂಚಿಸುವಂತೆ, ಈ ಚಿತ್ರವು ಸಾರ್ವಜನಿಕ ಪಡಿತರ ವ್ಯವಸ್ಥೆ ಮತ್ತು ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ನಡೆಯುವ ವ್ಯವಹಾರ ಹಾಗೂ ಅವ್ಯವಹಾರಗಳ ಸುತ್ತ ಸಾಗುತ್ತದೆ. ಈ ವೇಳೆ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ, "ಬಡವರ ಹಸಿವು ನೀಗಿಸಲು ಸರ್ಕಾರಗಳು ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ತಲುಪಿಸುತ್ತಿದ್ದರೂ, ವ್ಯವಸ್ಥೆಯಲ್ಲಿನ ಕೆಲವು ಲೋಪಗಳಿಂದ ಉದ್ದೇಶ ಸಂಪೂರ್ಣ ಈಡೇರುತ್ತಿಲ್ಲ. ಈ ಗಂಭೀರ ವಿಷಯವನ್ನು ಸಮಾಜಕ್ಕೆ ತೋರಿಸಲು ಹೊರಟಿರುವ ಚಿತ್ರತಂಡದ ಪ್ರಯತ್ನ ಶ್ಲಾಘನೀಯ," ಎಂದು ಹಾರೈಸಿದರು.

ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ

"ಇಡೀ ದೇಶದಲ್ಲಿಯೇ ಸರ್ಕಾರಿ ನ್ಯಾಯಬೆಲೆ ಅಂಗಡಿ ಮತ್ತು ಪಡಿತರ ವ್ಯವಸ್ಥೆಯ ಮೇಲೆ ಮೂಡಿ ಬರುತ್ತಿರುವ ಮೊಟ್ಟ ಮೊದಲ ಸಿನಿಮಾ ಇದಾಗಿದೆ. ಇಡೀ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗುತ್ತದೆ. ಮನರಂಜನೆ ಜೊತೆಗೆ ಒಂದು ಒಳ್ಳೆಯ ಸಂದೇಶ ಕೂಡ ಈ ಸಿನಿಮಾದಲ್ಲಿದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಏನೇನು ವ್ಯವಹಾರಗಳು, ಅವ್ಯವಹಾರಗಳು ನಡೆಯುತ್ತದೆ ಎಂಬುದನ್ನು ಸಮಾಜಕ್ಕೆ ತೋರಿಸುವಂಥ ಕಥೆ ಈ ಸಿನಿಮಾದಲ್ಲಿದೆ. ಇದು ಎಲ್ಲಾ ಥರದ ಆಡಿಯನ್ಸ್‌ಗೂ ಕನೆಕ್ಟ್‌ ಆಗುವಂಥ ಸಿನಿಮಾ. ಇಡೀ ಸಿನಿಮಾವನನ್ನು ಮಂಡ್ಯ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಚಿತ್ರೀಕರಿಸಿದ್ದು, ಒಂದು ಅದ್ಭುತ ಅನುಭವ. ನಿರ್ಮಾಪಕರು, ನಿರ್ದೇಶಕರು ಮತ್ತು ತಂತ್ರಜ್ಞರ ಸಹಕಾರದಿಂದ 'ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರ ತುಂಬ ಚೆನ್ನಾಗಿ ಮೂಡಿಬರುತ್ತಿದೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದೇ ಗೊತ್ತಾಗಲಿಲ್ಲ. ಬಹುಕಾಲದ ಬಳಿಕ ಇಂಥದ್ದೊಂದು ಸಾಮಾಜಿಕ ಕಳಕಳಿಯ ಚಿತ್ರದಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಿದೆ' ಎಂದರು ನಟ ಕುಮಾರ್ ಬಂಗಾರಪ್ಪ.

'ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಪಾರ್ವತಿ ಎಂಬ ಗ್ರಾಮೀಣ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ಈ ಸಿನಿಮಾದಲ್ಲಿ ಮೊದಲ ಬಾರಿಗೆ ಪಾರ್ವತಿ ಎಂಬ ಅಪ್ಪಟ ಹಳ್ಳಿ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಂಡ್ಯದ ಗ್ರಾಮೀಣ ಭಾಗದಲ್ಲಿ ಸುದೀರ್ಘ ಚಿತ್ರೀಕರಣ ನಡೆಸಿದ್ದು ಹೊಸ ಅನುಭವ ನೀಡಿದೆ" ಎಂದು ರಾಗಿಣಿ ಹೇಳಿದರು.

Kannada New Movie: 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್; ಮುಖ್ಯಮಂತ್ರಿ ಸಾಥ್‌

ಜಯಶಂಕರ ಟಾಕೀಸ್‌ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ 'ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರವನ್ನು ತೇಜು ಮೂರ್ತಿ ಮತ್ತು ಪದ್ಮಾವತಿ ಚಂದ್ರಶೇಖರ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅನಂತ್‌ ಆರ್ಯನ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಬಿ. ರಾಮಮೂರ್ತಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಇರುವ 'ಸರ್ಕಾರಿ ನ್ಯಾಯಬೆಲೆ ಅಂಗಡಿʼ ಚಿತ್ರಕ್ಕೆ ಸಾತ್ವಿಕ್‌ ಪವನ್‌ ಕುಮಾರ್‌ ಛಾಯಾಗ್ರಹಣ ಮತ್ತು ನಿರ್ದೇಶನ ಮಾಡಿದ್ದಾರೆ.

ಸದ್ಯ, ಸುಮಾರು 52 ದಿನಗಳ ಕಾಲ ಮಂಡ್ಯ ಸುತ್ತಮುತ್ತಲಿನ ಸ್ಥಳಗಳಲ್ಲಿ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಿತ್ರದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ಜುಲೈ 31 ರಂದು ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಸಿದ್ದತೆ ಮಾಡಿಕೊಂಡಿದೆ.