ʻಮಿಲನʼ ಸಿನಿಮಾದ ಆಕಾಶ್ - ಹೇಮಂತ್ ಇಬ್ಬರೂ ನಮ್ಮೊಂದಿಗಿಲ್ಲ; ಅಯ್ಯೋ, ಅಪ್ಪು- ದಿಲೀಪ್ ರಾಜ್ ನಡುವೆ ಇದೆಂಥಾ ಸಾಮ್ಯತೆ?
'ಮಿಲನ' ಸಿನಿಮಾದ ನಾಯಕ ಪುನೀತ್ ರಾಜ್‌ಕುಮಾರ್ ಮತ್ತು ಖಳನಾಯಕ ದಿಲೀಪ್ ರಾಜ್ ಇಬ್ಬರೂ ಹೃದಯಾಘಾತದಿಂದಲೇ ಅಕಾಲಿಕ ಮರಣ ಹೊಂದಿದ್ದು ವಿಧಿಯ ಕರಾಳ ಆಟದಂತಿದೆ. ಸಂಭಾವಿತ ನಟರಾದ ಇವರಿಬ್ಬರೂ ಕೇವಲ ನಟರಾಗಿ ಮಾತ್ರವಲ್ಲದೆ, ತಮ್ಮದೇ ನಿರ್ಮಾಣ ಸಂಸ್ಥೆಗಳ ಮೂಲಕ ಹೊಸ ಪ್ರತಿಭೆಗಳಿಗೆ ಆಸರೆಯಾಗಿದ್ದರು.
-
ಅದು 2021, ಅಕ್ಟೋಬರ್ 29. ನಟ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅದು ಇಡೀ ಕರುನಾಡಿಗೆ ಆಘಾತ ತಂದ ದಿನ ಎಂದೇ ಹೇಳಬಹುದು. ನಿನ್ನೆ ಮೇ 13ರಂದು ನಟ ದಿಲೀಪ್ ರಾಜ್ ಅವರು ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಾಕತಾಳೀಯ ಎಂದರೆ, ಇವರಿಬ್ಬರು ʻಮಿಲನʼ ಸಿನಿಮಾದಲ್ಲಿ ನಟಿಸಿದ್ದರು. ಹೀರೋ ಆಕಾಶ್ ಪಾತ್ರದಲ್ಲಿ ಅಪ್ಪು ಕಾಣಿಸಿಕೊಂಡಿದ್ದರೆ, ವಿಲನ್ ಹೇಮಂತ್ ಆಗಿ ದಿಲೀಪ್ ರಾಜ್ ಮಿಂಚಿದ್ದರು.
ಈಗ ʻಮಿಲನʼ ಸಿನಿಮಾದ ಆಕಾಶ್ - ಹೇಮಂತ್ ಇಬ್ಬರೂ ನಮ್ಮೊಂದಿಗಿಲ್ಲ ಅನ್ನೋದು ವಿಪರ್ಯಾಸವೇ ಸರಿ! ಕಾಕತಾಳೀಯ ಎಂದರೆ, ಕನ್ನಡ ಚಿತ್ರರಂಗದ ಈ ಇಬ್ಬರು ಅತ್ಯಂತ ಸಂಭಾವಿತ ಮತ್ತು ಪ್ರತಿಭಾವಂತ ನಟರ ನಡುವೆ ಅನೇಕ ಆಕಸ್ಮಿಕ ಹಾಗೂ ಗಮನಾರ್ಹ ಸಾಮ್ಯತೆಗಳಿವೆ. ಇವರಿಬ್ಬರೂ ಕೇವಲ ಕಲಾವಿದರಾಗಿ ಮಾತ್ರವಲ್ಲದೆ, ವ್ಯಕ್ತಿತ್ವದ ಮೂಲಕವೂ ಜನಮನ ಗೆದ್ದವರು.
* ಇಬ್ಬರದು ನಗುಮುಖದ ವ್ಯಕ್ತಿತ್ವ
ಪುನೀತ್ ರಾಜ್‌ಕುಮಾರ್ ಅವರನ್ನು ನೆನೆಸಿಕೊಂಡಾಗ ಮೊದಲು ನೆನಪಿಗೆ ಬರುವುದು ಅವರ ನಗು. ಅವರ ನಗುವಿಗಾಗಿಯೇ 'ನಗುಮುಖದ ಒಡೆಯ' ಎಂದು ಅಭಿಮಾನಿಗಳು ಕರೆಯುತ್ತಿದ್ದರು. ಅದೇ ರೀತಿ ದಿಲೀಪ್ ರಾಜ್ ಅವರ ಮುಖದಲ್ಲೂ ಸದಾ ಮಂದಹಾಸವಿರುತ್ತಿತ್ತು. ಎಷ್ಟೇ ಒತ್ತಡಗಳಿದ್ದರೂ ಅವರೆಂದು ಅದನ್ನು ತೋರಿಸಿಕೊಂಡವರಲ್ಲ. ಅಂತಿಮ ದರ್ಶನದ ಸಮಯದಲ್ಲೂ ದಿಲೀಪ್ ಮುಖದಲ್ಲಿ ಒಂದು ರೀತಿಯ ಪ್ರಶಾಂತವಾದ ನಗು ಇತ್ತು ಎಂದು ನೋಡಿದವರು ಹೇಳುತ್ತಾರೆ.
* ಸ್ಯಾಂಡಲ್‌ವುಡ್‌ನ ಸಂಭಾವಿತ ನಟರು
ಕನ್ನಡ ಚಿತ್ರರಂಗದಲ್ಲಿ ಪುನೀತ್ ಮತ್ತು ದಿಲೀಪ್ ವಿವಾದಗಳಿಂದ ದೂರವಿದ್ದವರು. ಪುನೀತ್ ಅವರು ಎಲ್ಲರನ್ನೂ ಗೌರವದಿಂದ ಕಾಣುವ ಗುಣಕ್ಕೆ ಹೆಸರಾಗಿದ್ದರು. ಯಾವುದೇ ವಿವಾದಗಳಿಗೆ ಆಸ್ಪದ ನೀಡುತ್ತಿರಲಿಲ್ಲ. ದಿಲೀಪ್ ರಾಜ್ ಅವರೂ ಕೂಡ ಕಿರುತೆರೆ ಮತ್ತು ಬೆಳ್ಳಿಪರದೆ ಎರಡರಲ್ಲೂ ಅತ್ಯಂತ ಶಿಸ್ತಿನ ಮತ್ತು ಸಭ್ಯ ನಟ ಎಂದು ಗುರುತಿಸಿಕೊಂಡಿದ್ದರು.
* ನಿರ್ಮಾಣ ಸಂಸ್ಥೆಯ ಆರಂಭಿಸಿದ್ದ ಕಲಾವಿದರು
ಈ ಇಬ್ಬರೂ ಕೇವಲ ನಟರಾಗಿ ಉಳಿಯದೆ, ತಮ್ಮದೇ ಆದ ನಿರ್ಮಾಣ ಸಂಸ್ಥೆಗಳ ಮೂಲಕ ನೂರಾರು ಮಂದಿಗೆ ಕೆಲಸ ನೀಡಿದ್ದರು, ಕಲಾವಿದರಿಗೆ ಅವಕಾಶ ನೀಡಿದ್ದರು. ಪುನೀತ್ ಅವರು ಪಿಆರ್ ಕೆ ಪ್ರೊಡಕ್ಷನ್ಸ್ (PRK Productions) ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದರು. ಹಾಗೆಯೇ ದಿಲೀಪ್ ರಾಜ್ 'ಧೃತಿ ಕ್ರಿಯೇಷನ್ಸ್' ಮೂಲಕ ಅನೇಕ ಯಶಸ್ವಿ ಧಾರಾವಾಹಿಗಳನ್ನು ನಿರ್ಮಿಸಿ ನೂರಾರು ಕುಟುಂಬಗಳಿಗೆ ಆಧಾರವಾಗಿದ್ದರು.
* ಪತ್ನಿಯರ ಬೆಂಬಲ
ಅಪ್ಪು ಪಿಆರ್‌ಕೆ ಬ್ಯಾನರ್ ಆರಂಭಿಸಿದಾಗ, ಅದರ ಜವಾಬ್ದಾರಿಯನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಹಿಸಿಕೊಂಡಿದ್ದರು. ಅಲ್ಲಿವರೆಗೂ ಅಶ್ವಿನಿ ಚಿತ್ರರಂಗದ ಜೊತೆಗೆ ನೇರವಾಗಿ ನಂಟು ಹೊಂದಿರಲಿಲ್ಲ. ಅದೇ ರೀತಿ ಸೀರಿಯಲ್ ನಿರ್ಮಾಣ ಮಾಡಲು ದಿಲೀಪ್ ರಾಜ್ 'ಧೃತಿ ಕ್ರಿಯೇಷನ್ಸ್' ಆರಂಭಿಸಿದಾಗ ಪತ್ನಿ ಶ್ರೀವಿದ್ಯಾ ಅವರು ಬೆಂಬಲವಾಗಿ ನಿಂತರು. ಐಟಿ ಕೆಲಸ ತೊರೆದು ಧಾರಾವಾಹಿ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಪತಿಗೆ ಜೊತೆಯಾಗಿ ನಿಂತಿದ್ದರು.
* ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತಿದ್ದ ತಾರೆಯರು
ಅಪ್ಪು ಮತ್ತು ದಿಲೀಪ್ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಇಬ್ಬರೂ ಕೂಡ ದೈಹಿಕವಾಗಿ ಫಿಟ್ ಆಗಿದ್ದವರು. ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಅತ್ಯಂತ ಸರಳವಾಗಿ ಸಾಮಾನ್ಯ ಜನರಂತೆ ಬೆರೆಯುವ ಗುಣ ಇವರಿಬ್ಬರಲ್ಲೂ ಸಮಾನವಾಗಿತ್ತು.
* ಅತ್ಯುತ್ತಮ ಕಲಾವಿದರು
ಪುನೀತ್ ರಾಜ್‌ಕುಮಾರ್ ಅವರು ಬಾಲ್ಯದಿಂದಲೇ ನಟರಾಗಿ ಗುರುತಿಸಿಕೊಂಡು, ಆನಂತರ ನ್ಯಾಷನಲ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು. ಹೀರೋ ಆದಮೇಲೂ ಹಲವು ಪ್ರಶಸ್ತಿಗಳನ್ನು ಅಪ್ಪು ತಮ್ಮದಾಗಿಸಿಕೊಂಡಿದ್ದರು. ಅದೇ ರೀತಿ ದಿಲೀಪ್ ಕೂಡ ಉತ್ತಮ ನಟರಾಗಿದ್ದರು. ಸಿಕ್ಕ ಅವಕಾಶಗಳಲ್ಲಿಯೇ ತಾವೆಂಥ ಅತ್ಯುತ್ತಮ ನಟ ಎಂಬುದನ್ನು ಸಾಬೀತು ಮಾಡಿದ್ದರು.
* ಅಕಾಲಿಕ ಮರಣ
ಇವರಿಬ್ಬರ ನಡುವಿನ ಅತ್ಯಂತ ದುರದೃಷ್ಟಕರ ಸಾಮ್ಯತೆಯೆಂದರೆ ಇಬ್ಬರೂ ಹೃದಯಾಘಾತಕ್ಕೇ ಬಲಿಯಾದದ್ದು. ಪುನೀತ್ ರಾಜ್‌ಕುಮಾರ್ ಅವರು ಅಕ್ಟೋಬರ್ 29, 2021ರಂದು (46ನೇ ವಯಸ್ಸಿನಲ್ಲಿ) ನಿಧನರಾದರು. ದಿಲೀಪ್ ರಾಜ್ ಅವರು 2026ರ ಮೇ 13ರಂದು (48ನೇ ವಯಸ್ಸಿನಲ್ಲಿ) ನಿಧನರಾದರು. ಇಬ್ಬರೂ ತಮ್ಮ ವೃತ್ತಿಬದುಕಿನಲ್ಲಿ ಉತ್ತುಂಗದಲ್ಲಿದ್ದಾಗಲೇ ವಿಧಿವಶರಾದದ್ದು ಚಿತ್ರರಂಗಕ್ಕೆ ದೊಡ್ಡ ಆಘಾತ!