ಶಬರಿಮಲೆಯಲ್ಲಿ ಶೂಟಿಂಗ್ ಮಾಡಲು ಮೋಹನ್‌ಲಾಲ್ ನಟನೆಯ 'ಅತಿಮನೋಹರಂ' ಚಿತ್ರತಂಡಕ್ಕೆ ಅನುಮತಿ; ಕಟ್ಟುನಿಟ್ಟಿನ ಷರತ್ತು ವಿಧಿಸಿದ ದೇವಸ್ವಂ ಮಂಡಳಿ!
ಮಲಯಾಳಂ ʻಸೂಪರ್‌ಸ್ಟಾರ್ʼ ಮೋಹನ್‌ಲಾಲ್ ಅಭಿನಯದ 'ಅತಿಮನೋಹರಂ' ಚಿತ್ರೀಕರಣಕ್ಕೆ ಶಬರಿಮಲೆ ಸನ್ನಿಧಾನದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅನುಮತಿ ನೀಡಿದೆ. ತರುಣ್ ಮೂರ್ತಿ ನಿರ್ದೇಶನದ ಈ ಸಿನಿಮಾದಲ್ಲಿ ಮೋಹನ್‌ಲಾಲ್ ಸಬ್-ಇನ್ಸ್‌ಪೆಕ್ಟರ್ ಪಾತ್ರದಲ್ಲಿದ್ದು, ಡಿಸೆಂಬರ್ 24 ರಂದು ಚಿತ್ರ ಬಿಡುಗಡೆಯಾಗಲಿದೆ.
-
ಮಲಯಾಳಂ ʻಸೂಪರ್‌ಸ್ಟಾರ್ʼ ಮೋಹನ್‌ಲಾಲ್ ಅಭಿನಯದ, ತರುಣ್ ಮೂರ್ತಿ ನಿರ್ದೇಶನದ ಬಹುನಿರೀಕ್ಷಿತ ‘ಅತಿಮನೋಹರಂ’ ಚಿತ್ರದ ಶೂಟಿಂಗ್‌ಗೆ ತಿರುವಾಂಕೂರು ದೇವಸ್ವಂ ಮಂಡಳಿಯು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಶಬರಿಮಲೆ ಸನ್ನಿಧಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನುಮತಿ ನೀಡಿದೆ. ಚಿತ್ರದ ಎರಡನೇ ಹಂತದ ಚಿತ್ರೀಕರಣವನ್ನು ಈ ಪುಣ್ಯಕ್ಷೇತ್ರದಲ್ಲಿ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಇತ್ತೀಚೆಗೆ ನಿರ್ದೇಶಕ ತರುಣ್ ಮೂರ್ತಿ ಅವರು ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್ ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಅಧಿಕೃತವಾಗಿ ಮನವಿ ಸಲ್ಲಿಸಿದ್ದರು. ಹಿಂದೆ ಮಕರವಿಲಕ್ಕು ಉತ್ಸವದ ವೇಳೆ ಅನುಮತಿಯಿಲ್ಲದೆ ಸಿನಿಮಾವೊಂದರ ಶೂಟಿಂಗ್ ನಡೆದಿದ್ದ ವಿವಾದದ ಬೆನ್ನಲ್ಲೇ, ಈ ಬಾರಿ ಮಂಡಳಿಯು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ.
ಮೋಹನ್‌ಲಾಲ್ ಮನೆಯಲ್ಲಿ 10 ಆನೆ ದಂತ, 13 ಆನೆ ದಂತದ ವಿಗ್ರಹಗಳು; ಅರಣ್ಯಾಧಿಕಾರಿಗಳ ಮುಂದೆ ಶಾಕಿಂಗ್ ವಿಚಾರ ಬಯಲು
ದೇವಸ್ವಂ ಮಂಡಳಿಯ ಪ್ರಮುಖ ಷರತ್ತುಗಳು
ಚಿತ್ರತಂಡವು ಸಿನಿಮಾದ ಸಂಪೂರ್ಣ ಕಥೆ ಮತ್ತು ಸ್ಕ್ರಿಪ್ಟ್ ಅನ್ನು ಮಂಡಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಶಬರಿಮಲೆ, ದೇವಸ್ಥಾನ, ಅದರ ಸಂಪ್ರದಾಯ ಅಥವಾ ಭಕ್ತರ ನಂಬಿಕೆಯನ್ನು ಕೀಳಾಗಿ ಅಥವಾ ತಪ್ಪಾಗಿ ಬಿಂಬಿಸುವ ಯಾವುದೇ ದೃಶ್ಯ ಅಥವಾ ಸಂಭಾಷಣೆ ಇರಬಾರದು. ಶೂಟಿಂಗ್ ಆರಂಭಕ್ಕೂ ಮುನ್ನ ಚಿತ್ರತಂಡವು 50 ಸಾವಿರ ರೂ. ಠೇವಣಿ ಇಡಬೇಕು ಹಾಗೂ ಅರಣ್ಯ ಇಲಾಖೆಯಿಂದ ಪ್ರತ್ಯೇಕ ಅನುಮತಿಯನ್ನು ಪಡೆಯುವುದು ಕಡ್ಡಾಯ.
ಪೊಲೀಸ್ ಪಾತ್ರದಲ್ಲಿ ಮೋಹನ್‌ಲಾಲ್
ಇತ್ತೀಚೆಗೆ ಬಿಡುಗಡೆಯಾದ ಫಸ್ಟ್-ಲುಕ್ ಪೋಸ್ಟರ್‌ನಲ್ಲಿ ಮೋಹನ್‌ಲಾಲ್ ಅವರು 'ಲೌಲಜನ್' ಎಂಬ ಸಾಮಾನ್ಯ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಬರಿಮಲೆ ಅಯ್ಯಪ್ಪ ಭಕ್ತರ ನಡುವೆ ನಿಂತಿರುವುದು ಗಮನ ಸೆಳೆದಿದೆ. ನಾಯಕಿಯಾಗಿ ಮೀರಾ ಜಾಸ್ಮಿನ್ ಸಾಥ್ ನೀಡಿದ್ದಾರೆ. ‘ತುಡರುಮ್’ ಚಿತ್ರದ ಯಶಸ್ಸಿನ ನಂತರ ಮೋಹನ್‌ಲಾಲ್ ಹಾಗೂ ತರುಣ್ ಮೂರ್ತಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಇದಾಗಿದೆ. ರತೀಶ್ ರವಿ ಚಿತ್ರಕಥೆ ಬರೆದಿದ್ದು, 'ಆಶಿಕ್ ಉಸ್ಮಾನ್ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಶಾಜಿ ಕುಮಾರ್ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.
ಚಿತ್ರದ ಶೇ.80 ರಷ್ಟು ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, 'ಅತಿಮನೋಹರಂ' ಸಿನಿಮಾವು ಡಿಸೆಂಬರ್ 24 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.