ಜನಪ್ರಿಯ ‘ಆಪ್ ಕಿ ಅದಾಲತ್’ ಶೋನಲ್ಲಿ ʻರಾಕಿಂಗ್ ಸ್ಟಾರ್ʼ ಯಶ್; ಮೋದಿ, ವಾಜಪೇಯಿ ಕುಳಿತ ಕುರ್ಚಿಯಲ್ಲಿ ಈಗ ಕನ್ನಡಿಗ ರಾಕಿ ಭಾಯ್‌ಗೆ ಸ್ಥಾನ!
'ಕೆಜಿಎಫ್', 'ಟಾಕ್ಸಿಕ್' ನಟ ಯಶ್ ಅವರು ಪತ್ರಕರ್ತ ರಜತ್ ಶರ್ಮಾ ನಿರೂಪಣೆಯ ಪ್ರಸಿದ್ಧ 'ಆಪ್ ಕಿ ಅದಾಲತ್' ಶೋನಲ್ಲಿ ಭಾಗವಹಿಸಿದ ಮೊಟ್ಟಮೊದಲ ಅಪ್ಪಟ ಕನ್ನಡಿಗ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಾಲಿವುಡ್ ಸೂಪರ್‌ಸ್ಟಾರ್‌ಗಳು ಕುಳಿತಿದ್ದ ಕಟಕಟೆಯಲ್ಲಿ ಕುಳಿತ ಯಶ್ ಅವರ ಶ್ರಮವನ್ನು ರಜತ್ ಶರ್ಮಾ ಕೊಂಡಾಡಿದ್ದಾರೆ.
-
'ಕೆಜಿಎಫ್' ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿರುವ ನಟ ಯಶ್, ಈಗ ʻಟಾಕ್ಸಿಕ್ʼ ಸಿನಿಮಾದ ಮೂಲಕ ದಾಖಲೆ ಬರೆಯಲು ರೆಡಿಯಾಗಿದ್ದಾರೆ. ಈ ಮಧ್ಯೆ ಮತ್ತೊಂದು ಅಪರೂಪದ ಹಾಗೂ ಐತಿಹಾಸಿಕ ಮೈಲಿಗಲ್ಲನ್ನು ತಮ್ಮದಾಗಿಸಿಕೊಂಡಿದ್ದಾರೆ ಯಶ್. ದೇಶದ ಅತ್ಯಂತ ಪ್ರಸಿದ್ಧ ಟಿವಿ ಟಾಕ್ ಶೋ ಎನಿಸಿಕೊಂಡಿರುವ 'ಆಪ್ ಕಿ ಅದಾಲತ್' (Aap Ki Adalat) ಕಾರ್ಯಕ್ರಮದ ಹಾಟ್‌ಸೀಟ್‌ನಲ್ಲಿ ಕೂತ ಮೊಟ್ಟಮೊದಲ ಅಪ್ಪಟ ಕನ್ನಡಿಗ ಎಂಬ ಹೆಗ್ಗಳಿಕೆಗೆ ಯಶ್ ಪಾತ್ರರಾಗಿದ್ದಾರೆ.
ಖ್ಯಾತ ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿಕೊಡುವ, 'ಇಂಡಿಯಾ ಟಿವಿ'ಯಲ್ಲಿ ಪ್ರಸಾರವಾಗುವ ಈ ಜನಪ್ರಿಯ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಿ ಭಾಗವಹಿಸುವ ಮೂಲಕ ಯಶ್ ಹೊಸ ಇತಿಹಾಸ ಬರೆದಿದ್ದಾರೆ.
ಬಾಲಿವುಡ್ ಮಂದಿಯ ನಡುವೆ ಏಕೈಕ ಕನ್ನಡಿಗ
ಹಿಂದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುನೀಲ್ ಶೆಟ್ಟಿ, ಐಶ್ವರ್ಯ ರೈ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಶಿಲ್ಪಾ ಶೆಟ್ಟಿ ಅವರು ಮೂಲತಃ ಕನ್ನಡಿಗರಾಗಿದ್ದರೂ, ಹುಟ್ಟಿ ಬೆಳೆದಿದ್ದೆಲ್ಲಾ ಮುಂಬೈನಲ್ಲಿ ಹಾಗೂ ಅವರು ಗುರುತಿಸಿಕೊಂಡಿದ್ದು ಬಾಲಿವುಡ್‌ನಲ್ಲಿ. ಆದರೆ, ಸಂಪೂರ್ಣವಾಗಿ ಕನ್ನಡ ಚಿತ್ರರಂಗದಲ್ಲೇ ಬೆಳೆದು, ಇಡೀ ಭಾರತೀಯ ಚಿತ್ರರಂಗವೇ ಹೆಮ್ಮೆ ಪಡುವಂತೆ ಮಾಡಿರುವ ಅಪ್ಪಟ ಕನ್ನಡದ ಪ್ರತಿಭೆಯಾಗಿ 'ಆಪ್ ಕಿ ಅದಾಲತ್' ಮೆಟ್ಟಿಲೇರಿದ್ದಾರೆ ನಟ ಯಶ್.
Yash Meets Shivanna: ರಾಕಿಭಾಯ್ ಮೀಟ್ಸ್ ಶಿವಣ್ಣ; ಶಿವ ರಾಜ್‌ಕುಮಾರ್ ಆರೋಗ್ಯ ವಿಚಾರಿಸಿದ ಯಶ್-ರಾಧಿಕಾ ಪಂಡಿತ್
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ರಾಹುಲ್ ಗಾಂಧಿ ಸೇರಿದಂತೆ ದೇಶದ ದಿಗ್ಗಜ ರಾಜಕಾರಣಿಗಳು ಹಾಗೂ ಬಾಲಿವುಡ್‌ನ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮಿರ್ ಖಾನ್, ಕಂಗನಾ ರಾಣಾವತ್, ಪ್ರಿಯಾಂಕಾ ಚೋಪ್ರಾ ಮುಂತಾದ ಘಟಾನುಘಟಿಗಳು ಈ ಶೋನಲ್ಲಿ ವಿಚಾರಣೆ ಎದುರಿಸಿದ್ದಾರೆ.
'ಆಪ್ ಕಿ ಅದಾಲತ್' ಶೋನ ವಿಶೇಷತೆ ಏನು?
ನ್ಯಾಯಾಲಯದ ಮಾದರಿಯಲ್ಲೇ ಸೆಟ್ ಹಾಕಿ ನಡೆಸಲಾಗುವ ಈ ಸಂದರ್ಶನದಲ್ಲಿ, ಕಟಕಟೆಯಲ್ಲಿ ಕೇವಲ ಖ್ಯಾತನಾಮರನ್ನು ಮಾತ್ರ ಕೂರಿಸಲಾಗುತ್ತದೆ. ಓರ್ವ ನ್ಯಾಯಾಧೀಶರು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ಪತ್ರಕರ್ತ ರಜತ್ ಶರ್ಮಾ ಅವರು ವಕೀಲರಂತೆ ಪ್ರಶ್ನೆಗಳನ್ನು ಕೇಳುತ್ತಾ, ಸೆಲೆಬ್ರಿಟಿಗಳ ಜೀವನದ ಹೆಜ್ಜೆಗುರುತುಗಳನ್ನು ಅತ್ಯಂತ ಗೌರವಾನ್ವಿತವಾಗಿ ವಿಚಾರಣೆ ನಡೆಸುತ್ತಾರೆ.
ಯಶ್ ಅವರನ್ನು ಶ್ಲಾಘಿಸಿದ ರಜತ್ ಶರ್ಮಾ
ಯಶ್ ಅವರನ್ನು ಶೋಗೆ ಆತ್ಮೀಯವಾಗಿ ಬರಮಾಡಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಜತ್ ಶರ್ಮಾ, "ಈ ವ್ಯಕ್ತಿ ಯಾರು? ದಿನಕ್ಕೆ ಎರಡು ಹೊತ್ತು ಊಟಕ್ಕೂ ಕಷ್ಟ ಪಡುತ್ತಿದ್ದ ಇವರು, ಈಗ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಇಲ್ಲಿ ಆರೋಪಿಯ ಸ್ಥಾನದಲ್ಲಿ ಕುಳಿತಿರುವವರು ಯಾರು? ಇವರು ಪರದೆಯ ಮೇಲೆ ಬರುವುದಿಲ್ಲ, ಬದಲಿಗೆ ಪರದೆಯನ್ನೇ ಹರಿದು ಹಾಕುತ್ತಾರೆ. ಯಾರೆಂದು ಗುರುತಿಸಿ? ಹೇಳಿ, ಯಾರಿದು?" ಎಂದು ಯಶ್ ಅವರ ಸಾಧನೆ ಮತ್ತು ಶ್ರಮವನ್ನು ಕೊಂಡಾಡಿದ್ದಾರೆ. ಶೀಘ್ರದಲ್ಲೇ ಈ ಸಂಚಿಕೆಗಳು ಪ್ರಸಾರವಾಗಲಿವೆ.
Actor Yash: ಯಶ್‌ಗಾಗಿ ರೂಲ್ ಬ್ರೇಕ್ ಮಾಡಿದ ನಯನತಾರಾ! ರಾಕಿ ಬಾಯ್ ಬಗ್ಗೆ ಹೇಳಿದ್ದೇನು?
ಅಂದಹಾಗೆ, ಯಶ್ ನಟಿಸಿರುವ ʻಟಾಕ್ಸಿಕ್ʼ ಸಿನಿಮಾವು ಆ.26ರಂದು ತೆರೆಗೆ ಬರಲಿದೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಯಶ್ ಕೂಡ ನಿರ್ಮಾಣ ಮಾಡಿದ್ದಾರೆ. ಗೀತು ಮೋಹನ್‌ದಾಸ್ ಇದರ ನಿರ್ದೇಶಕರು. ಯಶ್ ಜೊತೆಗೆ ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ, ಕಿಯರಾ ಅಡ್ವಾಣಿ, ತಾರಾ ಸುತಾರಿಯಾ ಮುಂತಾದವರು ನಟಿಸಿದ್ದಾರೆ.