'ಲವ್ ಸೀಸನ್ಸ್' ಚಿತ್ರದ ರೋಚಕ ಟ್ರೇಲರ್ ರಿಲೀಸ್: ಹೀರೋ ಮುಕುಂದ ರಾಮಸ್ವಾಮಿ ಬರ್ತ್‌ಡೇಗೆ ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್!
ಸ್ಯಾಂಡಲ್‌ವುಡ್‌ನ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಲವ್ ಸೀಸನ್ಸ್’ ಅಧಿಕೃತ ಟ್ರೇಲರ್ ನಟ ಮುಕುಂದ ರಾಮಸ್ವಾಮಿ ಅವರ ಜನ್ಮದಿನದ ಅಂಗವಾಗಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕೃತ್ವಿಕ್ ನಿರ್ದೇಶನದ ಹಾಗೂ ಎನ್.ಆರ್ ಮಂಜುನಾಥ ನಿರ್ಮಾಣದ ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯ ಪ್ರತಿಭೆಗಳು ನಟಿಸಿದ್ದಾರೆ. ಈ ಚಿತ್ರವು ಜುಲೈ 3 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
-
ಎನ್.ಆರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ, ಕೃತ್ವಿಕ್ ನಿರ್ದೇಶನದ ಚೊಚ್ಚಲ ಕಾಣಿಕೆ ʻಲವ್ ಸೀಸನ್ಸ್ʼ ಚಿತ್ರದ ಅಧಿಕೃತ ಟ್ರೇಲರ್ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ. ವಿಶೇಷವೆಂದರೆ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪದಾರ್ಪಣೆ ಮಾಡುತ್ತಿರುವ ಮುಕುಂದ ರಾಮಸ್ವಾಮಿ ಅವರ ಹುಟ್ಟುಹಬ್ಬದಂದೇ ಚಿತ್ರತಂಡ ಈ ಟ್ರೈಲರ್ ಅನ್ನು ಬಿಡುಗಡೆ ಮಾಡಿ, ಬರ್ತ್‌ಡೇ ಗಿಫ್ಟ್ ನೀಡಿದೆ ಚಿತ್ರತಂಡ.
ಇತ್ತೀಚೆಗೆ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ಮಂಡ್ಯ ರಮೇಶ್, ನಿರ್ದೇಶಕ ಜಯತೀರ್ಥ, ನಿರ್ಮಾಪಕ ಎನ್.ಆರ್ ಮಂಜುನಾಥ (ನೀಲೇರಿ), ನಾಯಕ ಮುಕುಂದ ರಾಮಸ್ವಾಮಿ, ನಟಿ ಸಂಗೀತಾ ಅನಿಲ್, ದಿಯಾ ಕೀರ್ತಿ, ಶ್ವೇತಾ ಕೊಗ್ಲೂರು, ಚಂದನಾ ಗೌಡ ಹಾಗೂ ಚೇತನ್ ದುರ್ಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಂಗಭೂಮಿ ಪ್ರತಿಭೆಗಳ ಶಿಸ್ತು, ಬದ್ಧತೆ
ಹಿರಿಯ ರಂಗಕರ್ಮಿ ಮಂಡ್ಯ ರಮೇಶ್ ಹಾಗೂ ನಿರ್ದೇಶಕ ಜಯತೀರ್ಥ ಮಾತನಾಡಿ, "ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯಿಂದ ಬಂದವರೇ ಹೆಚ್ಚಾಗಿದ್ದಾರೆ. ರಂಗಭೂಮಿಯಿಂದ ಬಂದ ಕಲಾವಿದರಲ್ಲಿ ಪ್ರತಿಭೆ ಮಾತ್ರವಲ್ಲದೆ ಶಿಸ್ತು ಮತ್ತು ಬದ್ಧತೆಯೂ ಇರುತ್ತದೆ. ನಿರ್ದೇಶಕ ಕೃತ್ವಿಕ್ ತಮ್ಮ ಮೊದಲ ಪ್ರಯತ್ನದಲ್ಲಿಯೇ ಅತ್ಯಂತ ಸುಂದರವಾದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಈ ಟ್ರೈಲರ್‌ನಲ್ಲಿ ನಿರ್ಮಾಪಕರ ಸಿನಿಮಾ ಪ್ರೇಮ ಎದ್ದುಕಾಣುತ್ತಿದೆ. ಪ್ರೇಕ್ಷಕರು ಈ ಹೊಸಬರ ಪ್ರಾಮಾಣಿಕ ಪ್ರಯತ್ನಕ್ಕೆ ಬೆಂಬಲ ನೀಡಬೇಕು" ಎಂದು ಮನವಿ ಮಾಡಿದರು.
ಹಾಡುಗಳ ಯಶಸ್ಸಿನ ಬೆನ್ನಲ್ಲೇ ಟ್ರೇಲರ್ ಧಮಾಕಾ
ಈಗಾಗಲೇ ಬಿಡುಗಡೆಯಾಗಿರುವ 'ಲವ್ ಸೀಸನ್ಸ್' ಚಿತ್ರದ ಮೂರು ಹಾಡುಗಳು ಕೇಳುಗರ ಮನಗೆದ್ದು ಸೂಪರ್ ಹಿಟ್ ಆಗಿವೆ. ಹಾಡುಗಳಿಂದ ಕುತೂಹಲ ಹೆಚ್ಚಿಸಿದ್ದ ಈ ಸಿನಿಮಾವು ಈಗ ಬಿಡುಗಡೆಯಾಗಿರುವ ಟ್ರೇಲರ್ ಮೂಲಕ ಸಿನಿಪ್ರಿಯರ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಬಲಿಷ್ಠ ತಾರಾಗಣ, ತಾಂತ್ರಿಕ ತಂಡ
ಎನ್.ಆರ್ ಮಂಜುನಾಥ (ನೀಲೇರಿ) ನಿರ್ಮಿಸಿರುವ ಈ ಚಿತ್ರಕ್ಕೆ ಕೃತ್ವಿಕ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ವೀರ್ ಸಮರ್ಥ್ ರಾಗಸಂಯೋಜನೆ ಮಾಡಿದ್ದು, ಕೆ.ಕಲ್ಯಾಣ್ ಹಾಗೂ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಮುಕುಂದ ರಾಮಸ್ವಾಮಿ ಅವರಿಗೆ ನಾಯಕಿಯರಾಗಿ ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ಜೊತೆಯಾಗಿದ್ದಾರೆ.
ಉಳಿದಂತೆ ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸದಾನಂದ, ಹುಲಿ ಕಾರ್ತಿಕ್ ಹಾಗೂ ಬೇಬಿ ರಿತು ಸಿಂಗ್ ಮುಂತಾದ ಪ್ರಮುಖ ಕಲಾವಿದರು ತಾರಾಗಣದಲ್ಲಿದ್ದಾರೆ. ಅವಿನಾಶ ಶಾಸ್ತ್ರಿ ಅವರ ಛಾಯಾಗ್ರಹಣ, ಮಧು ತುಂಬಾಕೆರೆ ಅವರ ಸಂಕಲನ ಹಾಗೂ ಭಜರಂಗಿ ಮೋಹನ್ ಅವರ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ 'ಲವ್ ಸೀಸನ್ಸ್' ಚಿತ್ರವು ಇದೇ ಜುಲೈ 3ರ ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಗಾಣಲಿದೆ.