ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀಟ್ ಪರೀಕ್ಷೆ ಸೋರಿಕೆ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಜೂನ್ 30 ರಿಂದ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ

NEET Paper Leak: ಜೂನ್ 30 ರಿಂದ ಕಾಂಗ್ರೆಸ್, ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿದೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಮತ್ತು ದೇಶದ ಪರೀಕ್ಷಾ ವ್ಯವಸ್ಥೆಯ ಸಮಗ್ರ ಕೂಲಂಕಷ ತನಿಖೆಗೆ ಪಕ್ಷ ಒತ್ತಾಯಿಸಿದೆ.

ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ

ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ -

Priyanka P
Priyanka P Jun 25, 2026 5:52 PM

ನವದೆಹಲಿ, ಜೂ.25: ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ (NEET Paper Leak) ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಒತ್ತಾಯಿಸಿ ಮತ್ತು ದೇಶದ ಪರೀಕ್ಷಾ ವ್ಯವಸ್ಥೆಯ ಸಮಗ್ರ ಕೂಲಂಕುಷ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷ ಕಾಂಗ್ರೆಸ್, ಜೂನ್ 30 ರಿಂದ ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿದೆ.

ಛಾತ್ರೋನ್ ಕಿ ಗೂಂಜ್ (ವಿದ್ಯಾರ್ಥಿಗಳ ಧ್ವನಿ) ಎಂಬ ಹೆಸರಿನ ಈ 40 ದಿನಗಳ ಅಭಿಯಾನದ ಮೊದಲ ಹಂತವು ಆಗಸ್ಟ್ 9ರಂದು ನಡೆಯಲಿರುವ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಸತೇಜ್ ಪಾಟೀಲ್, ಪದೇ ಪದೇ ಪರೀಕ್ಷಾ ಅಕ್ರಮಗಳು ವಿದ್ಯಾರ್ಥಿಗಳಲ್ಲಿ ವಿಶ್ವಾಸದ ಕೊರತೆಯನ್ನು ಸೃಷ್ಟಿಸಿವೆ. ಲಕ್ಷಾಂತರ ಆಕಾಂಕ್ಷಿಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು.

ಹಲವು ವರ್ಷಗಳ ಸಿದ್ಧತೆಯ ಬಳಿಕ ಸುಮಾರು 23 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಹೇಳಿದರು. ಆದರೆ, ಅವರಲ್ಲಿ ಕೇವಲ ಸುಮಾರು 2 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಹಾಗೂ ಸಂಬಂಧಿತ ಕೋರ್ಸ್‌ಗಳಲ್ಲಿ ಪ್ರವೇಶ ದೊರೆಯಲಿದೆ ಎಂದು ಮಹಾರಾಷ್ಟ್ರದ ಶಾಸಕರಾದ ಪಾಟೀಲ್ ತಿಳಿಸಿದರು.

ನೀಟ್ ಪರೀಕ್ಷೆ ಫಲಿತಾಂಶದ ಆತಂಕ: ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

130 ಕೋಟಿ ಜನರ ದೇಶವನ್ನು ನಡೆಸುವ ಬಗ್ಗೆ ಅವರು ಮಾತನಾಡುತ್ತಾರೆ. ಆದರೆ 23 ಲಕ್ಷ ವಿದ್ಯಾರ್ಥಿಗಳಿಗಾಗಿ ಒಂದು ಪರೀಕ್ಷೆಯನ್ನು ಕೂಡ ಸರಿಯಾಗಿ ನಡೆಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದು ಅತ್ಯಂತ ಕಠಿಣ ಮತ್ತು ಮಹತ್ವದ ಪರೀಕ್ಷೆಯಾಗಿದ್ದರೂ, ಅದನ್ನು ಸಮರ್ಪಕವಾಗಿ ನಡೆಸುವಲ್ಲಿ ಅವರು ವಿಫಲರಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಈ ವಿಷಯವು ಕೇವಲ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಮರು ಪರೀಕ್ಷೆಗೆ ಸೀಮಿತವಾಗಿಲ್ಲ. ಇದು ವಿದ್ಯಾರ್ಥಿಗಳ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ತೀವ್ರವಾಗಿ ಕುಗ್ಗಿಸಿದೆ ಎಂದು ಅವರು ಹೇಳಿದರು. ತಾವು ಓದಿದರೆ ಉತ್ತಮ ಅಂಕ ಪಡೆಯಬಹುದು ಎಂಬ ವಿಶ್ವಾಸವನ್ನು ವಿದ್ಯಾರ್ಥಿಗಳು ಕಳೆದುಕೊಂಡಿದ್ದಾರೆ. ಆ ನಂಬಿಕೆಯೇ ಮುರಿದುಹೋಗಿದೆ ಎಂದು ಅವರು ಹೇಳಿದರು.

ಈ ಕಾರ್ಯಕ್ರಮದಡಿಯಲ್ಲಿ, ಕಾಂಗ್ರೆಸ್ ನಾಯಕರು ಜೂನ್ 30 ರಿಂದ ಕರಪತ್ರ ವಿತರಣಾ ಅಭಿಯಾನಗಳು, ಬೀದಿ ಸಭೆಗಳು ಇತ್ಯಾದಿ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಪದೇ ಪದೇ ಸಂಭವಿಸುತ್ತಿರುವ ವಿದ್ಯಮಾನವಾಗಿದೆ ಎಂದು ಪಾಟೀಲ್ ಆರೋಪಿಸಿದರು. ಸರ್ಕಾರವು ಪ್ರಕರಣದ ಮಾಸ್ಟರ್ ಮೈಂಡ್‌ಗಳನ್ನು ಹೊಣೆಗಾರರನ್ನಾಗಿ ಮಾಡುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಅವರು ಅಂತಹ ನಿರ್ಧಾರ ತೆಗೆದುಕೊಳ್ಳದಂತೆ ನೋಡಿಕೊಳ್ಳಲು ಕೌನ್ಸಿಲಿಂಗ್ ಮಾಡಲಾಗುವುದು. ವ್ಯವಸ್ಥೆಯ ನ್ಯೂನತೆಗಳನ್ನು ಸರಿಪಡಿಸಲು ಸರ್ಕಾರವನ್ನು ಒತ್ತಾಯಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಅವರು ಹೇಳಿದರು.