ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೆಗೆಟಿವ್‌ ಟಾಕ್‌ ನಡುವೆಯೂ ಮೊದಲ ದಿನ 88 ಕೋಟಿ ಬಾಚಿದ ʻಪ್ಯಾರಡೈಸ್‌ʼ ಸಿನಿಮಾ; ನಟ ನಾನಿ ಹೇಳಿದ ಆ ಮಾತಿಗೆ ಭೇಷ್‌ ಎಂದ್ರು ಫ್ಯಾನ್ಸ್‌!

The Paradise Movie Box Office Collection: ನಾನಿ ನಟನೆಯ ʻದಿ ಪ್ಯಾರಡೈಸ್‌ʼ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನವೇ ಬರೋಬ್ಬರಿ 88 ಕೋಟಿ ಗಳಿಸಿ ಮೈಲಿಗಲ್ಲು ಸ್ಥಾಪಿಸಿದೆ. ಸಾಮಾಜಿಕ ಜಾಲತಾಣದ ತೀವ್ರ ಟ್ರೋಲಿಂಗ್ ನಡುವೆಯೂ ನಾನಿ ಮತ್ತು ಶ್ರೀಕಾಂತ್ ಒಡೆಲಾ ಕಾಂಬಿನೇಷನ್‌ಗೆ ಮೊದಲ ದಿನ ಪ್ರೇಕ್ಷಕರು ಜೈ ಎಂದಿದ್ದಾರೆ. ವಿಮರ್ಶಕರ ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸಿ, ತಪ್ಪುಗಳಿಂದ ಪಾಠ ಕಲಿಯುವುದಾಗಿ ನಾನಿ ಹೇಳಿಕೆ ನೀಡಿರುವುದು ವಿಶೇಷ.

Actor Nani: ಮೊದಲ ದಿನವೇ ‘ದಿ ಪ್ಯಾರಡೈಸ್’ ಚಿತ್ರಕ್ಕೆ ದಾಖಲೆಯ ಕಲೆಕ್ಷನ್!

-

Avinash GR
Avinash GR Sep 25, 2026 7:16 PM

ನ್ಯಾಚುರಲ್ ಸ್ಟಾರ್ ನಾನಿ - ನಿರ್ದೇಶಕ ಶ್ರೀಕಾಂತ್ ಒಡೆಲಾ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ 'ದಿ ಪ್ಯಾರಡೈಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. 'ದಿ ಪ್ಯಾರಡೈಸ್' ಸಿನಿಮಾದ ಬಿಡುಗಡೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲಿಂಗ್ ಹಾಗೂ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೂ, ಅವೆಲ್ಲವನ್ನೂ ಮೆಟ್ಟಿ ನಿಂತಿರುವ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸುನಾಮಿ ಎಬ್ಬಿಸಿದೆ.

ಮೊದಲ ದಿನವೇ 88 ಕೋಟಿ ರೂ. ಗಳಿಕೆ

ಮೊದಲ ದಿನದ ಪ್ರೀಮಿಯರ್‌ಗಳು ಸೇರಿದಂತೆ ವಿಶ್ವಾದ್ಯಂತ ಚಿತ್ರವು ಬರೋಬ್ಬರಿ 88 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿದೆ. ಇದು ನಟ ನಾನಿ ಅವರ ಸಿನಿ ಬದುಕಿನಲ್ಲೇ ದಾಖಲೆಯ ಓಪನಿಂಗ್ ಆಗಿದೆ. ಸುಧಾಕರ್ ಚೆರುಕೂರಿ ನಿರ್ಮಾಣದಲ್ಲಿ, ಕಯಾದು ಲೋಹರ್ ನಾಯಕಿಯಾಗಿ, ಮೋಹನ್ ಬಾಬು, ಸಂಪೂರ್ಣೇಶ್ ಬಾಬು, ಈಶ್ವರಿ ರಾವ್, ರಾಘವ್, ಸೋನಾಲಿ ಕುಲಕರ್ಣಿ ಸೇರಿದಂತೆ ಬಹುದೊಡ್ಡ ತಾರಾಗಣದಲ್ಲಿ ಸಿದ್ಧಗೊಂಡಿರುವ ಈ ಚಿತ್ರಕ್ಕೆ ಮುಂಗಡ ಬುಕಿಂಗ್‌ನಲ್ಲೇ ಅಭೂತಪೂರ್ವ ಕ್ರೇಜ್ ಕಂಡುಬಂದಿತ್ತು.

ಪ್ಯಾರಡೈಸ್‌ ಕಲೆಕ್ಷನ್‌ ಬಗ್ಗೆ ಚಿತ್ರತಂಡದ ಮಾಹಿತಿ



ಸಖತ್‌ ಟ್ರೋಲ್‌ ಆಗಿದ್ದ ನಾನಿ ಸಿನಿಮಾ

ಬಿಡುಗಡೆಗೆ ಮುನ್ನವೇ ಈ ಚಿತ್ರದ ಬಗ್ಗೆ ನೆಗೆಟಿವಿಟಿ ಸೃಷ್ಟಿಯಾಗಿದ್ದು ಸುಳ್ಳಲ್ಲ. ಕನಿಷ್ಠ ಟ್ರೈಲರ್ ಕೂಡ ಬಿಡುಗಡೆ ಮಾಡದಿದ್ದಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಸಮಯದ ಅಭಾವದಿಂದಾಗಿ ಟ್ರೈಲರ್ ತರಲು ಸಾಧ್ಯವಾಗಲಿಲ್ಲ ಎಂದು ನಾನಿ ಸ್ಪಷ್ಟನೆ ನೀಡಿದರೂ, ಪ್ರಚಾರದ ವೈಫಲ್ಯದ ಬಗ್ಗೆ ಟೀಕಿಸಿದ್ದರು. ಸಿನಿಮಾ ನೋಡಿದವರು ದ್ವಿತೀಯಾರ್ಧದಲ್ಲಿ ಚಿತ್ರಕಥೆ ಎಳೆದಂತಿದೆ ಮತ್ತು ಎಮೋಷನ್ಸ್‌ ಪೂರ್ಣಪ್ರಮಾಣದಲ್ಲಿ ಕನೆಕ್ಟ್ ಆಗಿಲ್ಲ ಎಂಬ ವಿಮರ್ಶೆಗಳು ವ್ಯಕ್ತವಾದವು. ಜೊತೆಗೆ ನಾನಿ ಅವರ 'ಜಡಲ್' ಗೆಟಪ್ ಹಾಗೂ ಸೂಪರ್ ಹಿಟ್ ಆದ 'ಏಷನಾಗುಲ' ಹಾಡಿನ ಮೇಲೂ ಮೀಮ್ ಟ್ರೋಲ್ ಮಾಡಲಾಯಿತು.

The Paradise Review: ಸ್ವರ್ಗದ ಹೆಸರಲ್ಲಿ ನರಕ ತೋರಿಸಿದ ನಾನಿ! ಪ್ರತಿ ದೃಶ್ಯದಲ್ಲೂ ರಾಚುವ ರಕ್ತದ ಹನಿ!

ನಂತರ ದಿನಗಳ ಕಲೆಕ್ಷನ್‌ ಮೇಲೆ ಕಣ್ಣು

ಆದರೆ ಯಾವುದೇ ಟೀಕೆ-ವಿವಾದಗಳಿಗೂ ಮಣಿಯದ ಪ್ರೇಕ್ಷಕರು ಚಿತ್ರಮಂದಿರಗಳತ್ತ ಲಗ್ಗೆಯಿಟ್ಟಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ್ದರೆ, ನಾನಿ ಅವರ ನಟನೆ ಮಾಸ್ ಪ್ರೇಕ್ಷಕರನ್ನು ಕಟ್ಟಿಹಾಕಿದೆ. 'ಜಡಲ್ ಜಮಾನಾ' ಹೆಸರಿನಲ್ಲಿ ಚಿತ್ರತಂಡ ಸೃಷ್ಟಿಸಿದ್ದ ನಿರೀಕ್ಷೆಗೆ ತಕ್ಕಂತೆ ಮೊದಲ ದಿನವೇ 88 ಕೋಟಿ ರೂಪಾಯಿಗಳ ಗಡಿ ದಾಟಿರುವ ಚಿತ್ರವು ನಾನಿ ಅವರ ಬಾಕ್ಸಾಫೀಸ್ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆದರೆ ಎರಡು ಮತ್ತು ಮೂರನೇ ದಿನ ಈ ಸಿನಿಮಾದ ಕಲೆಕ್ಷನ್‌ ಹೇಗಿರಲಿದೆ ಎಂಬುದರ ಮೇಲೆ ಸದ್ಯ ಎಲ್ಲರ ಕಣ್ಣಿದೆ.

ನಟ ನಾನಿಯ ಟ್ವೀಟ್



ಟ್ರೋಲ್‌ಗೆ ಪ್ರತಿಕ್ರಿಯಿಸಿದ ನಟ ನಾನಿ

ಇನ್ನೊಂದೆಡೆ, ಚಿತ್ರಕ್ಕೆ ಸಿಗುತ್ತಿರುವ ಮಿಶ್ರ ಪ್ರತಿಕ್ರಿಯೆಗಳು ಹಾಗೂ ಟ್ರೋಲ್‌ಗಳ ಬಗ್ಗೆ ನಟ ನಾನಿ ಅತ್ಯಂತ ಪ್ರಬುದ್ಧವಾಗಿ ಪ್ರತಿಕ್ರಿಯಿಸಿದ್ದಾರೆ. "ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ನಾನು ಗಮನಿಸಿದ್ದೇನೆ. ನಿಮ್ಮ ಅಪಾರ ಪ್ರೀತಿಯನ್ನು ಸ್ವಾಗತಿಸುತ್ತೇನೆ, ಜೊತೆಗೆ ನಿಮ್ಮ ತಮಾಷೆಯ ಟ್ರೋಲ್‌ಗಳನ್ನೂ ಅಷ್ಟೇ ಆನಂದಿಸಿದ್ದೇನೆ. ಪ್ರೇಕ್ಷಕರು ಈ ಚಿತ್ರವನ್ನು ತಮ್ಮದೆಂದು ಭಾವಿಸಿ ಅಪ್ಪಿಕೊಂಡಿರುವುದು ಮನಸ್ಸಿಗೆ ಹತ್ತಿರವಾಗಿದೆ. ಹಾಗೆಯೇ, ವಿಮರ್ಶಕರು ಎತ್ತಿ ತೋರಿಸಿದ ಲೋಪದೋಷಗಳಿಂದಲೂ ನಾನು ಪಾಠ ಕಲಿತಿದ್ದೇನೆ. ನಿಮಗೆ ವಿಶಿಷ್ಟ ಅನುಭವವನ್ನು ನೀಡುವ ಸಲುವಾಗಿ ನಾವೆಲ್ಲರೂ ಅಪಾರ ಶ್ರಮವಹಿಸಿದ್ದೇವೆ. ಈಗ ಚಿತ್ರವನ್ನು ಸಂಭ್ರಮಿಸುವುದು ಅಥವಾ ಅಭಿಪ್ರಾಯ ರೂಪಿಸುವುದು ಸಂಪೂರ್ಣವಾಗಿ ನಿಮ್ಮ ಕೈಯಲ್ಲಿದೆ. ನಿಮ್ಮ ಪ್ರೀತಿಗೆ ಸದಾ ಕೃತಜ್ಞ" ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ. ಗೆಲುವು ಮತ್ತು ಟೀಕೆ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿರುವ ನಾನಿ ಅವರ ನಡೆಗೆ ಚಿತ್ರರಂಗ ಹಾಗೂ ಅಭಿಮಾನಿ ವಲಯದಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.