ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2026ರ ಬೆಂಗಳೂರು ಓಪನ್‌ ಗಾಲ್ಪ್‌ ಟೂರ್ನಿ ಗೆದ್ದ ಸ್ಥಳೀಯ ಖಲೀನ್‌ ಜೋಶಿ!

ಖಲೀನ್ ಜೋಶಿ ಅವರು ಕೆಜಿಎಯಲ್ಲಿ ನಡೆದಿದ್ದ ಒಂದು ಕೋಟಿ ರು ನಗದು ಬಹುಮಾನ ಮೊತ್ತದ 2026ರ ಬೆಂಗಳೂರು ಓಪನ್ ಗಾಲ್ಫ್‌ ಟೂರ್ನಿಯನ್ನು ಗೆದ್ದಿದ್ದಾರೆ. ಪವರ್ಡ್‌ ಬೈ ಇಂಡಿಯನ್ ಆಯಿಲ್ ಟೂರ್ನಿಯಲ್ಲಿ ಅವರು ತಂತಿ-ತಂತಿಯಾಗಿ (ವೈರ್-ಟು-ವೈರ್) ಮುನ್ನಡೆ ಕಾಯ್ದುಕೊಂಡು ಐದು ಶಾಟ್‌ಗಳ ಭರ್ಜರಿ ಗೆಲುವು ದಾಖಲಿಸಿದರು.

Golf: 2026ರ ಬೆಂಗಳೂರು ಓಪನ್ ಗೆದ್ದ ಖಲೀನ್ ಜೋಶಿ

ಬೆಂಗಳೂರು ಓಪನ್‌ ಗೆದ್ದ ಖಲೀನ್‌ ಜೋಶಿ 15 ಲಕ್ಷ ರು ಚೆಕ್‌ ಪಡೆಯುತ್ತಿರುವ ಕ್ಷಣ. -

Profile
Ramesh Kote Sep 25, 2026 7:58 PM

ಬೆಂಗಳೂರು: ತವರು ಅಂಗಳದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬೆಂಗಳೂರಿನ ಗಾಲ್ಫರ್ ಖಲೀನ್ ಜೋಶಿ (Khalin Joshi) ಅವರು 2026ರ ಬೆಂಗಳೂರು ಓಪನ್ ಚಾಂಪಿಯನ್ ಆಗಿದ್ದಾರೆ. ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ (KGA) ಮೈದಾನದಲ್ಲಿ ಶುಕ್ರವಾರ ನಡೆದಿದ್ದ ಅಂತಿಮ ಸುತ್ತಿನಲ್ಲಿ 2-ಅಂಡರ್ 70 ಸ್ಕೋರ್ ದಾಖಲಿಸಿದ ಜೋಶಿ, ಒಟ್ಟು 20-ಅಂಡರ್ 268 ಸ್ಕೋರ್‌ನೊಂದಿಗೆ ಐದು ಶಾಟ್‌ಗಳ ಅಂತರದಲ್ಲಿ ಪ್ರಶಸ್ತಿ ಗೆದ್ದರು. 34 ವರ್ಷದ ಜೋಶಿ ಆರಂಭದಿಂದಲೇ ಟೂರ್ನಿಯಲ್ಲಿ ಮುನ್ನಡೆ ಕಾಯ್ದುಕೊಂಡು ವೈರ್-ಟು-ವೈರ್ ಗೆಲುವು ಸಾಧಿಸಿದರು. ನಾಲ್ಕು ಸುತ್ತುಗಳಲ್ಲಿ ಅವರು 61, 68, 69 ಮತ್ತು 70 ಸ್ಕೋರ್ ದಾಖಲಿಸಿದರು.

34ರ ವಯಸ್ಸಿನ ಜೋಶಿ, 61-68-69-70 ಸ್ಕೋರ್‌ಳೊಂದಿಗೆ ಒಟ್ಟು 268 ಸ್ಟ್ರೋಕ್‌ಗಳನ್ನು ದಾಖಲಿಸಿದರು. ಐದು ಬರ್ಡಿಗಳು ಮತ್ತು ಮೂರು ಬೋಗಿಗಳೊಂದಿಗೆ ಅಂತಿಮ ಸುತ್ತು ಪೂರ್ಣಗೊಳಿಸಿದ ಅವರು, ತಮ್ಮ 10ನೇ ಡಿಪಿ ವರ್ಲ್ಡ್ ಪಿಜಿಟಿಐ ಪ್ರಶಸ್ತಿ ಹಾಗೂ ಈ ಋತುವಿನ ನಾಲ್ಕನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

2026ರ ಬೆಂಗಳೂರು ಓಪನ್ ಸೆಪ್ಟೆಂಬರ್ 22ರಂದು ಕೆಜಿಎನಲ್ಲಿ ಆರಂಭ, ಒಂದು ಕೋಟಿ ಬಹುಮಾನ!

2018ರಲ್ಲಿ ಏಷ್ಯನ್ ಟೂರ್ ಪ್ರಶಸ್ತಿ ಗೆದ್ದಿದ್ದ ಜೋಶಿ, ಕಳೆದ ವಾರ ನಡೆದ ಎಸ್ಇಸಿಎಲ್ ಪ್ರೆಸೆಂಟ್ಸ್ ನವಾ ರಾಯ್ಪುರ ಓಪನ್ ಬಳಿಕ ಸತತ ಎರಡನೇ ಪ್ರಶಸ್ತಿ ಗೆದ್ದಿದ್ದಾರೆ. ಈ ಗೆಲುವಿನಿಂದ ಅವರು 15 ಲಕ್ಷ ರು ಬಹುಮಾನ ಪಡೆದಿದ್ದು, 2026ರ ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್ನಲ್ಲಿ ಏಳನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಅವರ ಒಟ್ಟು ಋತುಮಾನದ ಆದಾಯ 67,34,225ಕ್ಕೆ ಏರಿಕೆಯಾಗಿದೆ.

ಗುರುಗ್ರಾಮದ ಮನು ಗಾಂಡಸ್ 15 ಅಂಡರ್ 273 ಸ್ಕೋರ್‌ನೊಂದಿಗೆ ರನ್ನರ್-ಅಪ್ ಸ್ಥಾನ ಪಡೆದರು. ಅವರು 10 ಲಕ್ಷ ಬಹುಮಾನ ಪಡೆದರು. ಗುರುಗ್ರಾಮದ ವೀರ್ ಅಹ್ಲಾವತ್ ಮತ್ತು ಗ್ರೇಟರ್ ನೋಯ್ಡಾದ ಸಪ್ತಕ್ ತಲ್ವಾರ್ ತಲಾ 12 ಅಂಡರ್ 276 ಸ್ಕೋರ್‌ನೊಂದಿಗೆ ಜಂಟಿ ಮೂರನೇ ಸ್ಥಾನ ಪಡೆದರು.

ಗೆಲುವಿನ ಬಳಿಕ ಮಾತನಾಡಿದ ಜೋಶಿ, ಇತ್ತೀಚಿನ ಯಶಸ್ಸಿಗೆ ತಮ್ಮ ಮಾನಸಿಕ ದೃಢತೆ ಮತ್ತು ಒತ್ತಡದ ಸಂದರ್ಭಗಳಲ್ಲಿ ಶಾಂತವಾಗಿ ಆಡುವ ಸಾಮರ್ಥ್ಯ ಪ್ರಮುಖ ಕಾರಣ ಎಂದು ಹೇಳಿದರು.‌

ಏಷ್ಯನ್‌ ಗೇಮ್ಸ್‌; ಸಾತ್ವಿಕ್-ಚಿರಾಗ್ ಜೋಡಿಗೆ ಆಘಾತಕಾರಿ ಸೋಲು; ಮಿಶ್ರ ಟಿಟಿಯಲ್ಲಿ ಕಂಚು

ಕೆಜಿಎಯಲ್ಲಿ ಬಾಲ್ಯದಿಂದಲೇ ಗಾಲ್ಫ್ ಆಡಲು ಆರಂಭಿಸಿದ್ದ ಜೋಶಿಗೆ ತವರು ನೆಲದಲ್ಲಿ ಪ್ರಶಸ್ತಿ ಗೆದ್ದಿರುವುದು ವಿಶೇಷವಾಗಿದೆ. “ಕೆಜಿಎಯಲ್ಲಿ ಗೆಲ್ಲುವುದು ನನ್ನ ಬಹುಕಾಲದ ಕನಸಾಗಿತ್ತು. ತವರಿನಲ್ಲಿ ಕೊನೆಗೂ ಪ್ರಶಸ್ತಿ ಗೆದ್ದಿರುವುದು ನನಗೆ ಅಪಾರ ಸಂತಸ ತಂದಿದೆ,” ಎಂದು ಅವರು ಹೇಳಿದರು.

ಬೆಂಗಳೂರು ಓಪನ್‌ನೊಂದಿಗೆ 2026ರ ಡಿಪಿ ವರ್ಲ್ಡ್ ಪಿಜಿಟಿಐ ಆರ್ಡರ್ ಆಫ್ ಮೆರಿಟ್ನ ಅಗ್ರ 60 ಆಟಗಾರರ ರೇಸ್ ಕೂಡ ಅಂತ್ಯಗೊಂಡಿದ್ದು, ಅಗ್ರ 60ರಲ್ಲಿ ಸ್ಥಾನ ಪಡೆದ ಆಟಗಾರರು 2026–27ರ ಋತುವಿನ ಆಟದ ಹಕ್ಕುಗಳನ್ನು ಉಳಿಸಿಕೊಂಡಿದ್ದಾರೆ.