‘ಶಬರಿ’ ಚಿತ್ರದ ‘ತಂದಾನಿ ತನನೋ’ ವೀಡಿಯೋ ಸಾಂಗ್ ರಿಲೀಸ್ ಮಾಡಿದ ಓಂ ಪ್ರಕಾಶ್ ರಾವ್ - ಬಾಲಾಜಿ!
ಒರಟ 'ಶ್ರೀ' ನಿರ್ದೇಶನದ ಬಹುನಿರೀಕ್ಷಿತ 'ಶಬರಿ' ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ "ತಂದಾನಿ ತನನೋ" ವೀಡಿಯೋ ಸಾಂಗ್ ಅನ್ನು ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಬಾಲಾಜಿ ವೀರಾಸ್ವಾಮಿ ಬಿಡುಗಡೆ ಮಾಡಿದ್ದಾರೆ. ಬಿ.ಆರ್. ಹೇಮಂತ್ ಕುಮಾರ್ ಸಂಗೀತ ಹಾಗೂ ಅಶ್ವಿನ್ ಶರ್ಮಾ ಗಾಯನದ ಈ ಹಾಡಿಗೆ ಸ್ವತಃ ನಿರ್ದೇಶಕರೇ ಸಾಹಿತ್ಯ ಬರೆದಿದ್ದಾರೆ.
-
ಒರಟ `ಶ್ರೀ' ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಶಬರಿ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಇದರ ಬೆನ್ನಲ್ಲೇ ಚಿತ್ರತಂಡ "ತಂದಾನಿ ತನನೋ" ಎಂಬ ಮುದ್ದಾದ ವಿಡಿಯೋ ಸಾಂಗ್ ಬಿಡುಗಡೆ ಮಾಡುವ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ. ನಿರ್ದೇಶಕ ಓಂ ಪ್ರಕಾಶ್ ರಾವ್, ನಟ-ನಿರ್ದೇಶಕ ರಘುರಾಮ್, ಬಾಲಾಜಿ ವೀರಾಸ್ವಾಮಿ ಹಾಗೂ ಉದ್ಯಮಿ ವಿ. ಬಾಬು ಈ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಓಂ ಪ್ರಕಾಶ್ ರಾವ್ ಶುಭ ಹಾರೈಕೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಬಾಲಾಜಿ ವೀರಾಸ್ವಾಮಿ, "ಹಾಡು ಅತ್ಯುತ್ತಮವಾಗಿ ಮೂಡಿಬಂದಿದೆ. ಬಿ. ಆರ್. ಹೇಮಂತ್ ಕುಮಾರ್ ಅವರ ಸಂಗೀತ ಸಂಯೋಜನೆ ಮನಸ್ಸಿಗೆ ಮುಟ್ಟುವಂತಿದ್ದು, ‘ಸರಿಗಮಪ’ ಖ್ಯಾತಿಯ ಅಶ್ವಿನ್ ಶರ್ಮಾ ಗಾಯನ ಹಾಡಿನ ಅಂದವನ್ನು ಹೆಚ್ಚಿಸಿದೆ. ನಟರಾದ ಸಮರ್ಥ್ ಮತ್ತು ಧನ್ವಿ ಹೊಸಬರಂತೆ ಕಾಣಿಸದೇ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ" ಎಂದು ಶ್ಲಾಘಿಸಿದರು. ರಘುರಾಮ್ ಅವರು ಸಹ ಹೊಸಬರ ಈ ಪ್ರಯತ್ನವನ್ನು ಕೊಂಡಾಡಿದರು.
ಕುತೂಹಲ ಮೂಡಿಸಿದ ʻಶಬರಿʼ ಚಿತ್ರದ ಟೀಸರ್; ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದೊಂದಿಗೆ ʻಒರಟʼ ಶ್ರೀ ಕಮ್‌ಬ್ಯಾಕ್!
ಈ ಸಿನಿಮಾದಲ್ಲಿ ಜೀಪ್ ಕೂಡ ಒಂದು ಪಾತ್ರ
ʻಶಬರಿʼ ಚಿತ್ರದ ನಿರ್ದೇಶಕ ಒರಟ ಶ್ರೀ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದು, ಸ್ಥಳದಲ್ಲೇ ಹಾಡು ಸೃಷ್ಟಿಯಾದ ಬಗೆಯನ್ನು ಹಂಚಿಕೊಂಡರು. "ಚಿತ್ರದಲ್ಲಿ ಸಮರ್ಥ್ ಮತ್ತು ಧನ್ವಿ ಅವರಷ್ಟೇ ಅಲ್ಲದೆ ಒಂದು 'ಜೀಪ್' ಕೂಡ ಪ್ರಮುಖ ಪಾತ್ರವಹಿಸಿದೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಹಲವು ವಿಶಿಷ್ಟ ಅಂಶಗಳು ಈ ಕಥೆಯಲ್ಲಿವೆ" ಎಂದು ಅವರು ಮಾಹಿತಿ ನೀಡಿದರು.
ಬರವಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿವಿಲ್ ಇಂಜಿನಿಯರ್ ರಮೇಶ್, ಸುಧಾಕರ್ ರೆಡ್ಡಿ ಯಾಕಸಿರಿ ಮತ್ತು ವಿಷ್ಣುಕಾಂತ್ ಎ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಸಮರ್ಥ್ ಹಾಗೂ ಕೃತಿಕಾ ಗೌಡ ನಾಯಕ-ನಾಯಕಿಯಾಗಿ ನಟಿಸಿದ್ದು, ಧನ್ವಿ, ಎಂ.ಕೆ. ಮಠ, ನೀನಾಸಂ ಅಶ್ವತ್, ಸೀತಾ ಹರ್ಷವರ್ಧನ್ ಮತ್ತು ಯೋಗೇಶ್ ವೀರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಬಿ.ಆರ್. ಹೇಮಂತ್ ಕುಮಾರ್ ಸಂಗೀತ, ಸಾಮ್ರಾಟ್ ನಾಗರಾಜ್ ಛಾಯಾಗ್ರಹಣ, ಕೆ. ಗಿರೀಶ್ ಕುಮಾರ್ ಸಂಕಲನ ಹಾಗೂ ಕೋರ ಚಿನ್ನಯ್ಯ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.