ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಈ ವಾರ ಒಟಿಟಿಗೆ ಲಗ್ಗೆ ಇಡಲಿವೆ ಬಹುನಿರೀಕ್ಷಿತ ಸಿನಿಮಾಗಳು, ಇಂಟರೆಸ್ಟಿಂಗ್‌ ವೆಬ್‌ ಸರಣಿಗಳು! ಇಲ್ಲಿದೆ ವೀಕೆಂಡ್ ಮನರಂಜನೆಯ ಕಂಪ್ಲೀಟ್‌ ಮಾಹಿತಿ

This Week OTT Releases: ವಾರಾಂತ್ಯದ ರಜೆಯನ್ನು ಮನೆಯಲ್ಲಿಯೇ ಸಂತೋಷದಿಂದ ಕಳೆಯಲು ಬಯಸುವ ಸಿನಿಪ್ರಿಯರಿಗೆ ಡಿಜಿಟಲ್ ವೇದಿಕೆಗಳು ಭರ್ಜರಿ ಉಡುಗೊರೆ ನೀಡಿವೆ. ವಿಕ್ಟರಿ ವೆಂಕಟೇಶ್ ಅಭಿನಯದ 'ಆದರ್ಶ ಕುಟುಂಬಂ', ಕನ್ನಡದ ಥ್ರಿಲ್ಲರ್ 'ಸ್ಪಾರ್ಕ್', ಭಕ್ತಿ ಪ್ರಧಾನ 'ಹನುಮಾನ್ ಅಂಶ್ʼ ಮುಂತಾದ ಸಿನಿಮಾಗಳು ರಿಲೀಸ್‌ ಆಗಲಿವೆ.

ಈ ವಾರ ಒಟಿಟಿಗೆ ಲಗ್ಗೆ ಇಡಲಿವೆ ಬಹುನಿರೀಕ್ಷಿತ ಸಿನಿಮಾ, ವೆಬ್ ಸರಣಿಗಳು!

-

Avinash GR
Avinash GR Nov 27, 2026 8:33 PM

ವಾರಾಂತ್ಯದ ರಜೆಯನ್ನು ಮನೆಯಲ್ಲಿಯೇ ಕುಳಿತು ಮಜಾ ಮಾಡಲು ಸಜ್ಜಾಗಿರುವ ಸಿನಿಪ್ರಿಯರಿಗೆ ಈ ವಾರ ಒಟಿಟಿ ವೇದಿಕೆಗಳಲ್ಲಿ ಭರ್ಜರಿ ಮನರಂಜನೆ ಕಾದಿದೆ. ಥ್ರಿಲ್ಲರ್, ಫ್ಯಾಮಿಲಿಯ ಕಥೆಗಳು, ಕೋರ್ಟ್‌ರೂಮ್ ಡ್ರಾಮಾ, ಬಯೋಪಿಕ್‌ ಹಾಗೂ ತನಿಖಾ ಆಧಾರಿತ ಕಥೆಗಳನ್ನು ಒಳಗೊಂಡ ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಯ ಬಹುನಿರೀಕ್ಷಿತ ಸಿನಿಮಾಗಳು ಮತ್ತು ವೆಬ್ ಸರಣಿಗಳು ಈ ವಾರ ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಲಗ್ಗೆ ಇಟ್ಟಿವೆ. ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಆದರ್ಶ ಕುಟುಂಬಂ ಹೌಸ್ ನಂ: 47 (ನೆಟ್‌ಫ್ಲಿಕ್ಸ್)

ನಟ ʻವಿಕ್ಟರಿʼ ವೆಂಕಟೇಶ್ ಅಭಿನಯದ 'ಆದರ್ಶ ಕುಟುಂಬಂ ಹೌಸ್ ನಂ: 47 - AK47' ಚಿತ್ರಮಂದಿರಗಳ ಪ್ರದರ್ಶನದ ಬಳಿಕ ಇದೀಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಥೆ ಬರೆದು ನಿರ್ದೇಶಿಸಿರುವ ಈ ಆಕ್ಷನ್-ಫ್ಯಾಮಿಲಿ ಡ್ರಾಮಾದಲ್ಲಿ ವೆಂಕಟೇಶ್ ಅವರಿಗೆ ಜೋಡಿಯಾಗಿ ಕನ್ನಡತಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ನಾರಾ ರೋಹಿತ್, ನಿವೇತಾ ಪೇತುರಾಜ್ ಮತ್ತು ಯುವಿನಾ ಪಾರ್ಥವಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಇಂದಿನಿಂದ (ನ.27) ನೆಟ್‌ಫ್ಲಿಕ್ಸ್‌ನಲ್ಲಿ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಸ್ಪಾರ್ಕ್ (ಅಮೆಜಾನ್ ಪ್ರೈಮ್ ವಿಡಿಯೋ)

ಸ್ಯಾಂಡಲ್‌ವುಡ್‌ನ ಥ್ರಿಲ್ಲರ್ ಚಿತ್ರ 'ಸ್ಪಾರ್ಕ್' ಈಗ ಒಟಿಟಿಯಲ್ಲಿ ಲಭ್ಯವಿದೆ. ಹೈ-ಪ್ರೊಫೈಲ್ ಬ್ಯಾಂಕಿಂಗ್ ಹಗರಣವನ್ನು ಬಯಲಿಗೆಳೆಯಲು ಹೊರಡುವ ತನಿಖಾ ಪತ್ರಕರ್ತನ ಸುತ್ತ ಈ ಕಥೆ ಸಾಗುತ್ತದೆ. ಆರ್ಥಿಕ ಅಕ್ರಮಗಳ ಬೆನ್ನತ್ತುವ ಪತ್ರಕರ್ತನಿಗೆ ಪ್ರಭಾವಿ ಪೊಲೀಸ್ ಅಧಿಕಾರಿಯೊಂದಿಗೆ ಸಂಘರ್ಷ ಎದುರಾಗುತ್ತದೆ. ತನಿಖೆ ಮುಂದುವರಿದಂತೆ ದೊಡ್ಡ ಕ್ರಿಮಿನಲ್ ಪಿತೂರಿ ಮತ್ತು ಹಗರಣದ ಸೂತ್ರಧಾರಿಯ ಸುಳಿವು ಸಿಗುತ್ತಾ ಹೋಗುತ್ತದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿದ್ದು, ಭಾವನಾ ಮೆನನ್, ಪ್ರೇಮ್ ಕುಮಾರ್, ರಚನಾ ಇಂದರ್ ಮತ್ತು ರಮೇಶ್ ಇಂದಿರಾ ತಾರಾಗಣದಲ್ಲಿದ್ದಾರೆ. ಡಿ. ಮಹಾಂತೇಶ್ ಹಂದ್ರಾಳ್ ನಿರ್ದೇಶನದ ಈ ಸಸ್ಪೆನ್ಸ್ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಕಾರ್ಪೊರೇಟ್ ಲವ್ ಸ್ಟೋರಿ (ಜೀ5)

ಬೆಂಗಳೂರಿನ ಐಟಿ ಮತ್ತು ಸ್ಟಾರ್ಟ್‌ಅಪ್ ಜಗತ್ತಿನ ಹಿನ್ನೆಲೆಯಲ್ಲಿ ಮೂಡಿಬಂದಿರುವ ರೋಮ್ಯಾಂಟಿಕ್ ಡ್ರಾಮಾ ವೆಬ್‌ ಸರಣಿ 'ಕಾರ್ಪೊರೇಟ್ ಲವ್ ಸ್ಟೋರಿ' ZEE5 ವೇದಿಕೆಯಲ್ಲಿ ಬಿಡುಗಡೆಯಾಗುತ್ತಿದೆ. ಸಂಕಷ್ಟದಲ್ಲಿರುವ ಡೇಟಿಂಗ್ ಆ್ಯಪ್ ಸ್ಟಾರ್ಟ್‌ಅಪ್ ಒಂದರಲ್ಲಿ ತಡರಾತ್ರಿಯವರೆಗೂ ಒಟ್ಟಿಗೆ ಕೆಲಸ ಮಾಡುವ ಇಬ್ಬರು ಸಹೋದ್ಯೋಗಿಗಳ ನಡುವೆ ಪ್ರೀತಿ ಚಿಗುರುತ್ತದೆ. ಆದರೆ, ವೃತ್ತಿಪರ ಪೈಪೋಟಿ ಮತ್ತು ಕುಟುಂಬದ ಒತ್ತಡಗಳು ಅವರ ಪ್ರೇಮಕಥೆಗೆ ಹೇಗೆ ಅಡ್ಡಿಯಾಗುತ್ತವೆ ಎಂಬುದೇ ಇದರ ಹೂರಣ. ಪನ್ನಗ ಭರಣ ನಿರ್ದೇಶನದ ಈ ವೆಬ್‌ ಸರಣಿಯಲ್ಲಿ ಪ್ರಿಯಾಂಕಾ ಉಪೇಂದ್ರ, ಸಿತಾರಾ ದಾಸ್‌ ಮತ್ತು ಪ್ರಣವ್ ಶ್ರೀಧರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಗರಿವಿಡಿ ಲಕ್ಷ್ಮಿ (ಅಮೆಜಾನ್ ಪ್ರೈಮ್ ವಿಡಿಯೋ)

ಉತ್ತರ ಆಂಧ್ರದ ಖ್ಯಾತ ಜಾನಪದ ಕಲಾವಿದೆ ರೆಡ್ಡಿ ವಿಜಯಲಕ್ಷ್ಮಿ ಅವರ ಬದುಕಿನಿಂದ ಸ್ಫೂರ್ತಿ ಪಡೆದ ಸಿನಿಮಾ 'ಗರಿವಿಡಿ ಲಕ್ಷ್ಮಿ'. ತಮ್ಮ ವಿಶಿಷ್ಟ ಕಂಠದಿಂದ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಗಾಯಕಿ, ಇದ್ದಕ್ಕಿದ್ದಂತೆ ನಿಗೂಢವಾಗಿ ಕಣ್ಮರೆಯಾಗುತ್ತಾರೆ. ವರ್ಷಗಳ ನಂತರ ಆಕೆಯ ನಾಪತ್ತೆಯ ರಹಸ್ಯವನ್ನು ಭೇದಿಸಲು ವ್ಯಕ್ತಿಯೊಬ್ಬ ಮುಂದಾಗುವುದೇ ಚಿತ್ರದ ತಿರುಳು. ಗೌರಿ ನಾಯ್ಡು ಜಮ್ಮು ನಿರ್ದೇಶನದ ಈ ಚಿತ್ರದಲ್ಲಿ ಆನಂದಿ, ರಾಗ್ ಮಯೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿದೆ.

Aadarsha Kutumbam OTT: ವೆಂಕಟೇಶ್-ತ್ರಿವಿಕ್ರಮ್ ಕಾಂಬಿನೇಷನ್‌ನ ‘ಆದರ್ಶ ಕುಟುಂಬಂ’ ಒಟಿಟಿಗೆ ಎಂಟ್ರಿ

ಸತ್ಯಮೇವ (ಜೀ5 ಮಲಯಾಳಂ)

ಸಸ್ಪೆನ್ಸ್ ಹಾಗೂ ಕೋರ್ಟ್‌ರೂಮ್ ಡ್ರಾಮಾ ಇಷ್ಟಪಡುವವರಿಗಾಗಿ ಮಲಯಾಳಂ ವೆಬ್ ಸರಣಿ 'ಸತ್ಯಮೇವ' ಸಿದ್ಧವಾಗಿದೆ. ಅಮಾಯಕ ಕಕ್ಷಿದಾರನನ್ನು ಉಳಿಸಲು ವಿಫಲನಾದ ಅಪರಾಧ ಪ್ರಜ್ಞೆಯಿಂದ ವಕೀಲ ವೃತ್ತಿಯಿಂದ ದೂರ ಸರಿದಿರುವ ರಾಜಾರಾಮ್ ಎಂಬ ವಕೀಲನ ಕಥೆ ಇದಾಗಿದೆ. ಮಾನಸಿಕ ಅಸ್ವಸ್ಥನೆಂದು ಭಾವಿಸಲಾದ ವ್ಯಕ್ತಿಯೊಬ್ಬ ಅಸಾಮಾನ್ಯ ಕೊನೆಯ ಆಸೆಯೊಂದಿಗೆ ರಾಜಾರಾಮ್ ಬಳಿ ಬಂದಾಗ, ಆತ ಮತ್ತೆ ಕಪ್ಪು ಕೋಟು ಧರಿಸಿ ಕಾಣೆಯಾದ ಹುಡುಗಿಯ ನಿಗೂಢ ಪ್ರಕರಣದ ತನಿಖೆಗೆ ಇಳಿಯುತ್ತಾನೆ. ರೋನಿ ಡೇವಿಡ್ ರಾಜ್ ಮುಖ್ಯಭೂಮಿಕೆಯಲ್ಲಿರುವ ಈ ಸರಣಿಯಲ್ಲಿ ದೀಪು ಕರುಣಾಕರನ್, ಮೀನಾಕ್ಷಿ ಉನ್ನಿಕೃಷ್ಣನ್ ನಟಿಸಿದ್ದು, ನವೆಂಬರ್ 27ರಿಂದ ಜೀ5 ಮಲಯಾಳಂನಲ್ಲಿ ಪ್ರೀಮಿಯರ್ ಆಗುತ್ತಿದೆ.

ಹನುಮಾನ್ ಅಂಶ

'ಬಾಬಾ ನೀಮ್ ಕರೋಲಿ' ಎಂದೇ ವಿಶ್ವವಿಖ್ಯಾತರಾದ ಲಕ್ಷ್ಮೀ ನಾರಾಯಣ ಅವರ ಜೀವನಗಾಥೆಯನ್ನು ಒಳಗೊಂಡ ಭಕ್ತಿ ಪ್ರಧಾನ ಸಿನಿಮಾ 'ಹನುಮಾನ್ ಅಂಶ' ಸೋನಿ ಲೈವ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲು ಸಜ್ಜಾಗಿದೆ. ನವೆಂಬರ್‌ 27ರಿಂದ ಹಿಂದಿ ವರ್ಷನ್‌ ಸ್ಟ್ರೀಮಿಂಗ್‌ ಆಗುತ್ತಿದೆ. ನವೆಂಬರ್ 29ರಿಂದ 2026ರಿಂದ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಗುಜರಾತಿ ವರ್ಷನ್‌ಗಳು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.