'ಕರಾವಳಿ' ಚಿತ್ರದ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್; ಪ್ರಜ್ವಲ್ - ರಾಜ್ ಬಿ ಶೆಟ್ಟಿ ಸಿನಿಮಾ ನೋಡಿ ಮಂಗಳೂರು, ಶಿವಮೊಗ್ಗ ಜನತೆ ಹೇಳಿದ್ದೇನು?
ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ 'ಕರಾವಳಿ' ಚಿತ್ರದ ಪ್ರೀಮಿಯರ್ ಶೋಗಳು ಮಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ನಗರಗಳಲ್ಲಿ ಯಶಸ್ವಿಯಾಗಿ ನೆರವೇರಿವೆ. ಜುಲೈ 24 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಭಾವುಕ ಕಥೆ, ಮೇಕಿಂಗ್ ಹಾಗೂ 'ಮಹಾಬಲ'-'ಮಾವೀರ' ಪಾತ್ರಗಳಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-
ʻಡೈನಾಮಿಕ್ ಪ್ರಿನ್ಸ್ʼ ಪ್ರಜ್ವಲ್ ದೇವರಾಜ್ ಹಾಗೂ ನಟ-ನಿರ್ದೇಶಕ ರಾಜ್ ಬಿ. ಶೆಟ್ಟಿ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿರುವ ಬಹುನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆಗೆ ಮುನ್ನವೇ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಜುಲೈ 24 ರಂದು ಈ ಚಿತ್ರ ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದು, ಇದಕ್ಕೂ ಮೊದಲೇ ಚಿತ್ರತಂಡ ಪ್ರಮುಖ ನಗರಗಳಲ್ಲಿ ವಿಶೇಷ ಪ್ರೀಮಿಯರ್ ಶೋಗಳನ್ನು ಆಯೋಜಿಸುವ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಭರ್ಜರಿ ರೆಸ್ಪಾನ್ಸ್
ಕರಾವಳಿ ಚಿತ್ರತಂಡವು ಮಂಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು ಹಾಗೂ ಬೆಂಗಳೂರು ನಗರಗಳಲ್ಲಿ ಪ್ರೀಮಿಯರ್ ಶೋಗಳನ್ನು ಹಮ್ಮಿಕೊಂಡಿತ್ತು. ಈ ಪೈಕಿ ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
Karavali movie controversy: 'ಕರಾವಳಿ' ಸಿನಿಮಾ ವಿವಾದದ ಬಗ್ಗೆ ರಕ್ಷಿತಾ ಪ್ರೇಮ್ ಹೇಳಿದ್ದೇನು?
ಮಂಗಳೂರಿನ ಜನತೆ ಸಿನಿಮಾದ ಭಾವುಕ ಕಥಾಹಂದರಕ್ಕೆ ಸಂಪೂರ್ಣವಾಗಿ ಕನೆಕ್ಟ್ ಆಗಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಶಿವಮೊಗ್ಗದ ಪ್ರೇಕ್ಷಕರು ಚಿತ್ರದ ಮೇಕಿಂಗ್ ಮತ್ತು ಮಾಸ್ ಅಂಶಗಳನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಮುಖ್ಯವಾಗಿ ಸಿನಿಮಾದಲ್ಲಿ ಬರುವ 'ಮಹಾಬಲ' ಹಾಗೂ 'ಮಾವೀರ' ಎಂಬ ಎರಡು ಪ್ರಮುಖ ಪಾತ್ರಗಳು ಪ್ರೇಕ್ಷಕರ ನೆಚ್ಚಿನ ಕ್ಯಾರೆಕ್ಟರ್‌ಗಳಾಗಿ ಹೊರಹೊಮ್ಮಿದ್ದು, ಪ್ರೇಕ್ಷಕರು ಈ ಪಾತ್ರಗಳನ್ನು ಕೊಂಡಾಡುತ್ತಿದ್ದಾರೆ.
ತಾಂತ್ರಿಕತೆ ಮತ್ತು ಅಭಿನಯಕ್ಕೆ ಜೈಕಾರ
ಗುರುದತ್ ಗಾಣಿಗ ಅವರ ನಿರ್ದೇಶನದ ಮತ್ತು ಕಲಾವಿದರ ನಟನೆಗೆ ಸಿನಿರಸಿಕರು ಫಿದಾ ಆಗಿದ್ದಾರೆ. 'ಕರಾವಳಿ' ಮಣ್ಣಿನ ಸಾರವನ್ನು ತೆರೆಯ ಮೇಲೆ ತಂದಿರುವ ರೀತಿ ಹಾಗೂ ಪಾತ್ರಗಳ ಆಯ್ಕೆ ಸಿನಿಮಾದ ಗತ್ತು ಹೆಚ್ಚಿಸಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಪ್ರಿಮಿಯರ್ ಶೋಗಳ ಮೂಲಕ ಸಿಗುತ್ತಿರುವ ಈ ಸಕಾರಾತ್ಮಕ ಟಾಕ್‌ನಿಂದಾಗಿ, ಜುಲೈ 24 ರಂದು ನಡೆಯಲಿರುವ ಗ್ರಾಂಡ್ ರಿಲೀಸ್‌ಗೆ ಭಾರಿ ನಿರೀಕ್ಷೆ ವ್ಯಕ್ತವಾಗಿದೆ.
ಈ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸಿದ್ದು, 'ವಿಕೆ ಫಿಲ್ಮ್ ಅಸೋಸಿಯೇಷನ್' ಜೊತೆಗೂಡಿ ತಮ್ಮದೇ 'ಗಾಣಿಗ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಾಯಕಿಯರಾಗಿ ಸಂಪದಾ ಹಾಗೂ ಸುಷ್ಮಿತಾ ಭಟ್ ನಟಿಸಿದ್ದು, ಪೋಷಕ ಪಾತ್ರಗಳಲ್ಲಿ ಮಿತ್ರ, ರಮೇಶ್ ಇಂದಿರಾ, ಶ್ರೀಧರ್ ಸೇರಿದಂತೆ ಹಲವು ಹಿರಿಯ ಹಾಗೂ ರಂಗಭೂಮಿ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.