ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Devanobba Jaadugaara: ʻಪ್ರೇಮ ಕಾವ್ಯʼ ಸೀರಿಯಲ್‌ ನಟಿ ಪ್ರಿಯಾ ಆಚಾರ್‌ - ಸಚಿನ್ ಹೊಸ ಸಿನಿಮಾ ಟೀಸರ್‌ ರಿಲೀಸ್;‌ ಹುಚ್ಚ ವೆಂಕಟ್, ಸಿಂಪಲ್‌ ಸುನಿ ಸಪೋರ್ಟ್‌

Devanobba Jaadugaara Teaser: ವರುಣ್ ನಿರ್ದೇಶನದ 'ದೇವನೊಬ್ಬ ಜಾದೂಗಾರ' ಸಿನಿಮಾವನ್ನು ಸೌದಿ ಅರೇಬಿಯಾದ ಉದ್ಯಮಿ ಬಾಲಕೃಷ್ಣ ಶೆಟ್ಟಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅವರ ಪುತ್ರ ಸಚಿನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕಿರುತೆರೆ ನಟಿ ಪ್ರಿಯಾ ಜೆ. ಆಚಾರ್ ನಾಯಕಿಯಾಗಿದ್ದು, ಶ್ವೇತಾ ಶ್ರೀವಾಸ್ತವ್‌, ಸಿಂಪಲ್ ಸುನಿ ಮತ್ತು ಹುಚ್ಚ ವೆಂಕಟ್ ಈ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ʻದೇವನೊಬ್ಬ ಜಾದೂಗಾರʼ ಟೀಸರ್; ಸಚಿನ್ - ಪ್ರಿಯಾ ಆಚಾರ್ ಸಿನಿಮಾಗೆ ಸುನಿ ಸಾಥ್

-

Avinash GR
Avinash GR Jan 4, 2026 7:45 PM

ಸಾಮಾನ್ಯವಾಗಿ ನಾವು ದೇವನೊಬ್ಬ ನಾಮ ಹಲವು ಎಂಬ ರೂಢಿ ಮಾತನ್ನು ಕೇಳಿರುತ್ತೇವೆ. ಆದರೆ ಇಲ್ಲೊಂದು ತಂಡ ದೇವನೊಬ್ಬ ಜಾದೂಗಾರ ಎಂದು ಟೈಟಲ್‌ ಇಟ್ಟು, ಅದನ್ನೇ ಸಿನಿಮಾ ಮಾಡಿದೆ. ಹೌದು, ಖಟ್ವಾಂಗ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ತಯಾರಾಗಿದ್ದು, ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿರುವ ಬಾಲಕೃಷ್ಣ ಶೆಟ್ಟಿ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಕ್ಕೆ ಸಚಿನ್ ಹೀರೋ ಆಗಿದ್ದು, ನಾಯಕಿಯಾಗಿ ಪ್ರೇಮ ಕಾವ್ಯ ಸೀರಿಯಲ್‌ ನಟಿ ಪ್ರಿಯಾ ಜೆ. ಆಚಾರ್‌ ಕೆಲಸ ಮಾಡಿದ್ದಾರೆ.

ಸ್ಯಾಂಡಲ್‌ವುಡ್‌ನಿಂದ ಸಿಕ್ತು ಸಪೋರ್ಟ್

ಈಚೆಗೆ ಈ ಚಿತ್ರದ ಟೀಸರ್‌ ರಿಲೀಸ್‌ ಆಗಿದ್ದು, ಸಿಂಪಲ್‌ ಸುನಿ, ಶ್ವೇತಾ ಶ್ರೀವಾಸ್ತವ್, ಹುಚ್ಚ ವೆಂಕಟ್‌ ಅವರು ಚಿತ್ರತಂಡಕ್ಕೆ ಸಪೋರ್ಟ್‌ ಮಾಡಿದ್ದಾರೆ. ಈ ಸಿನಿಮಾವನ್ನು ವರುಣ್‌ ನಿರ್ದೇಶನ ಮಾಡಿದ್ದು, "ಕಾಶಿಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆಯಲ್ಲಿ ದೇವ ಎನ್ನುವ ಲಾರಿ ಚಾಲಕ ಇರುತ್ತಾನೆ. ಅವನ ಜೀವನವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಇದು ಕ್ರೈಂ ಥ್ರಿಲ್ಲರ್ ಕಥೆ. ಅವನ ಜೀವನದಲ್ಲಿ ನಡೆಯುವ ಕಲ್ಪನಾತೀತ ಘಟನೆಗಳು ಜೊತೆಗೆ ಓರ್ವ ಮಂಗಳಮುಖಿ ಪಾತ್ರ ಸಹ ಚಿತ್ರದಲ್ಲಿದೆ" ಎನ್ನುತ್ತಾರೆ ಅವರು.

Moda Kavida Vatavarana: ಸಿಂಪಲ್‌ ಸುನಿ ಹೊಸ ಸಿನಿಮಾ ಘೋಷಣೆ; ‘ಮೋಡ ಕವಿದ ವಾತಾವರಣಕ್ಕೆ ಹೀರೋ ಆದ ಶೀಲಮ್

"ಪ್ರತಿಯೊಬ್ಬರ ಜೀವನದಲ್ಲಿ ದೇವರ ಲೆಕ್ಕಾಚಾರ ಒಂದಾಗಿರುತ್ತದೆ. ಹಾಗಾಗಿ ದೇವನೊಬ್ಬ ಜಾದೂಗಾರ ಹೆಸರಿನಲ್ಲಿ ಚಿತ್ರ ಮಾಡಲಾಗಿದೆ. ಕಾಶಿಪುರದಲ್ಲಿರುವ ಇಬ್ಬರು ಪ್ರಮುಖ ವ್ಯಕ್ತಿಗಳು ದೇವನ ಮೇಲೆ ಬೀರಿದ ಪ್ರಭಾವ ಅದರಿಂದ ದೇವನ ಜೀವನ, ಬದಲಾಗುವ ರೀತಿ, ಅಂತಿಮವಾಗಿ ದೇವ ಏನಾಗುತ್ತಾನೆ ಎನ್ನುವುದು ಚಿತ್ರದಲ್ಲಿ ಹೇಳುತ್ತಿದ್ದೇನೆ. ಶೂಟಿಂಗ್ ನಾಲ್ಕು ವರ್ಷಗಳಿಂದ ನಡೆದಿದೆ. ಸಚಿನ್ ಹಾಗೂ ನಿರ್ಮಾಪಕರು ಭಾರತಕ್ಕೆ ಬಂದಾಗ ಮಾತ್ರ ಶೂಟಿಂಗ್ ಮಾಡಲಾಗಿದೆ. ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಸಹ ಅಂತಿಮ ಹಂತದಲ್ಲಿದೆ. ಬೆಂಗಳೂರು, ತುಮಕೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಸಿನಿಮಾ ಶೀಘ್ರದಲ್ಲೇ ತೆರೆಗೆ ತರಲು ಯೋಜಿಸಿದ್ದೇವೆ. ಇಲ್ಲಿ ಪ್ರತಿ ನಟರು ಇನ್ನೊಬ್ಬರಿಗೆ ಕಾಂಪೀಟ್ ಮಾಡುವ ರೀತಿಯಲ್ಲಿ ಅಭಿನಯಿಸಿದ್ದಾರೆ. ಇಲ್ಲಿ ಪ್ರತಿಯೊಬ್ಬ ನಟರ ಮೇಲೆ ಕಥೆ ಸಾಗುತ್ತದೆ" ಎಂದು ನಿರ್ದೇಶಕ ವರುಣ್ ಮಾಹಿತಿ ನೀಡಿದರು.

ʻಸಿಂಪಲ್‌ʼ ಸುನಿಯ 'ದೇವರು ರುಜು ಮಾಡಿದನು' ಚಿತ್ರಕ್ಕಾಗಿ ಭರ್ಜರಿ ಸ್ಟೆಪ್‌ ಹಾಕಿದ ʻಟಗರುʼ ಖ್ಯಾತಿಯ ಅಂಥೋನಿ ದಾಸನ್; ರಿಲೀಸ್‌ ಆಯ್ತು ಸಖತ್‌ ಸಾಂಗ್

‌ನಾಯಕ ನಟ ಸಚಿನ್ ಹೇಳಿದ್ದೇನು?

"ವರುಣ್ ನನಗೆ ಫೇಸ್ ಬುಕ್‌ನಲ್ಲಿ ಸ್ನೇಹಿತರಾದವರು. ನನಗೆ ನಟನೆ ಮಾಡುವ ಆಸೆ ಇದ್ದರೂ ಸರಿಯಾದ ಅವಕಾಶ ಸಿಕ್ಕಲಿಲ್ಲ. ಆಗ ಪ್ರತಿಭಾವಂತ ಆಗಿದ್ದ ವರುಣ್ ಬೆಳೆಯಲಿ ಎಂದು ಅವನಿಗೆ ನೆರವಾದೆ. ಊರಿಗೆ ಬಂದಾಗ ನಾನು ಅವನೊಂದಿಗೆ ಸೇರಿ ಕಿರುಚಿತ್ರ ಮಾಡಿದೆ. ಆಗ ನನ್ನ ರಾ ಲುಕ್ ನೋಡಿ ಈ ಕಥೆ ಹೇಳಿದ್ದ . ಈಗ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ" ಎಂದು ಸಚಿನ್‌ ಹೇಳಿದರೆ, "ನನ್ನದು ಇದರಲ್ಲಿ ವಿಶೇಷ ಪಾತ್ರ. ಆದರೆ ಈಗಲೇ ಪಾತ್ರದ ಬಗ್ಗೆ ಏನು ಹೇಳಲಾಗದು" ಎನ್ನುತ್ತಾರೆ ಪ್ರಿಯಾ ಜೆ. ಆಚಾರ್.

ಮುಖ್ಯಮಂತ್ರಿಯಾದ ಸುಧಾ ಬೆಳವಾಡಿ

ಈ ಸಿನಿಮಾದಲ್ಲಿ ಮುಖ್ಯಮಂತ್ರಿ ಪಾತ್ರ ಮಾಡಿರುವ ನಟಿ ಸುಧಾ ಬೆಳವಾಡಿ, "ಟೈಟಲ್ ನೋಡಿದರೆ ಸಿನಿಮಾ ನೋಡಬೇಕು ಎಂದು ಅನಿಸುವ ಚಿತ್ರ ಇದು. ನಿರ್ದೇಶಕ ಹಾಗೂ ನಿರ್ಮಾಪಕರು ಬಹಳಷ್ಟು ಕಷ್ಟಪಟ್ಟು ಈ ಚಿತ್ರ ಮಾಡಿದ್ದಾರೆ. ಸೌದಿ ಅರೇಬಿಯಾದಿಂದ ಬಂದು ಕನ್ನಡ ಸಿನಿಮಾ ಮಾಡುತ್ತಿದ್ದಾರೆ" ಎಂದರು.

"ಹಲವಾರು ವರ್ಷಗಳಿಂದ ವಿದೇಶದಲ್ಲಿದ್ದು, ಅಲ್ಲಿ ನಾನು ಕನ್ನಡ ಸಂಘ ಮಾಡಿದೆ. ಅನಿವಾಸಿ ಭಾರತೀಯರಿಗೆ ಮೊದಲ ಎನ್.ಆರ್.ಐ. ಸಂಘ ಕಟ್ಟಿದ್ದು ನಾನು. ಹಾಗೆ ನನಗೆ ಕನ್ನಡ ಎಂದರೆ ಬಹಳ ಅಭಿಮಾನ. ಅಂತಹ ಸಮಯದಲ್ಲಿ ವರುಣ್ ನನ್ನ ಬಳಿ ಬಂದು ಕಥೆ ಹೇಳಿದರು. ನನ್ನ ಮಗನಿಗೆ ಚಿತ್ರನಟನಾಗಬೇಕು ಎಂದು ಬಾಲ್ಯದಿಂದಲೇ ಆಸೆ ಇತ್ತು. ಆ ಸಮಯದಲ್ಲಿ ನನ್ನ ಮಗನನ್ನು ನಾಯಕನೆಂದು ಮನಸ್ಸಿನಲ್ಲಿಟ್ಟುಕೊಂಡು ನಿರ್ದೇಶಕ ವರುಣ್ ಕಥೆ ಹೇಳಿದ್ದರು" ಎನ್ನುತ್ತಾರೆ ನಿರ್ಮಾಪಕ ಬಾಲಕೃಷ್ಣ ಶೆಟ್ಟಿ.

"ದೇವನೊಬ್ಬ ಜಾದೂಗಾರ" ಚಿತ್ರಕ್ಕೆ ವಿಜೇತ್ ಚಂದ್ರ ಸಂಕಲನವಿದ್ದರೆ, ಋತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಶ್ಯಾಮ್ ರಾವ್ ನಗರಗದ್ದೆ ಅವರು ಈ ಚಿತ್ರದ ಛಾಯಾಗ್ರಹಣ ಜವಾಬ್ದಾರಿ ನಿರ್ವಹಿಸಿದ್ದಾರೆ.