ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Peter Movie Review: ಚಂಡೆ ವಾದ್ಯದ ಸದ್ದಿನ ನಡುವೆ ಅಡಗಿದ ರೋಚಕ ರಹಸ್ಯ!

ಧ್ರುವ ನಟನೆಯ ಪೀಟರ್‌ ಸಿನಿಮಾ ಕೊಡಗಿನ ಸೊಗಡಿನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಊರು ಬಿಟ್ಟಿದ್ದ ಪೀಟರ್ ಮತ್ತೆ ಮರಳಿದಾಗ ಅವನ ಜೀವನದ ಕರಾಳ ಸತ್ಯಗಳು ಬಿಚ್ಚಿಕೊಳ್ಳುತ್ತವೆ. ಚಂಡೆ ವಾದ್ಯದ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಪ್ರೀತಿ, ತಾಯಿ ಮಮತೆ ಮತ್ತು ಸೇಡಿನ ಎಳೆಗಳಿವೆ.

ರಾಜೇಶ್ ಧ್ರುವ ನಟನೆಯ 'ಪೀಟರ್' ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

-

Avinash GR
Avinash GR Apr 9, 2026 8:11 PM

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಪ್ರಯೋಗಳು, ಭಿನ್ನ ನಿರೂಪಣೆಯ ಸಿನಿಮಾಗಳು ಜಾಸ್ತಿ ಆಗುತ್ತಿವೆ. ಅದಕ್ಕೊಂದು ಹೊಸ ಸೇರ್ಪಡೆ ʻಪೀಟರ್‌ʼ. ಈ ಹಿಂದೆ ಕನ್ನಡದಲ್ಲಿ ದೂರದರ್ಶನ ಎಂಬ ಸಿನಿಮಾ ಮಾಡಿ ಗಮನಸೆಳೆದಿದ್ದ ಸುಕೇಶ್‌ ಶೆಟ್ಟಿ ಈ ಬಾರಿ ʻಪೀಟರ್‌ʼ ಸಿನಿಮಾದೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ರಾಜೇಶ್‌ ಧ್ರುವ ಈ ಚಿತ್ರದ ಹೀರೋ. ಹಾಡುಗಳು ಮತ್ತು ಟ್ರೇಲರ್‌ನಿಂದಲೇ ಗಮನಸೆಳೆದಿದ್ದ ʻಪೀಟರ್‌ʼ ಹೇಗಿದೆ? ಮುಂದೆ ಓದಿ.

ʻಪೀಟರ್‌ʼ ಚಿತ್ರದ ಕಥೆ ಏನು?

ಕೊಡಗು ಸುತ್ತಮುತ್ತಲ ಹಳ್ಳಿಯೊಂದರ ಪೀಟರ್‌ (ರಾಜೇಶ್‌ ಧ್ರುವ) ಕೆಲ ವರ್ಷಗಳ ಬಳಿಕ ಊರಿಗೆ ಮರಳಿರುತ್ತಾನೆ. ಆತ ಊರನಿಂದ ಆಚೆ ಹೋಗಿದ್ದಕ್ಕೂ ಕಾರಣವಿದೆ ಮತ್ತು ವಾಪಸ್‌ ಬಂದಿದ್ದಕ್ಕೂ ಕಾರಣವಿದೆ. ಆತ ತನ್ನೂರಿಗೆ ಮರಳುತ್ತಿದ್ದಂತೆಯೇ, ಕಥೆಯ ಒಂದೊಂದೆಯ ಎಳೆಗಳು ತೆರೆದುಕೊಳ್ಳುತ್ತವೆ. ಪೀಟರ್‌ನ ಅಚ್ಚುಮೆಚ್ಚಿನ ಚಂಡೆ ವಾದ್ಯ, ಪ್ರೀತಿಸಿದ ಹುಡುಗಿ, ಅಣ್ಣ, ಅಮ್ಮ, ಸ್ನೇಹಿತರು.. ಹೀಗೆ ಅವನೊಂದಿಗೆ ಇರುವವರ ಬಗೆಗಿನ ಒಂದೊಂದೇ ವಿಚಾರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅವು ನೋಡುಗರಿಗೆ ಟ್ವಿಸ್ಟ್‌ ಜೊತೆಗೆ ಥ್ರಿಲ್‌ ನೀಡುತ್ತವೆ. ಅಂತಿಮವಾಗಿ ತಾನು ಊರು ಬಿಡುವುದಕ್ಕೆ ಮುಖ್ಯ ಕಾರಣ ಎಂಬ ವಿಚಾರವನ್ನು ಪೀಟರ್‌ ಅರಿಯುವಲ್ಲಿಗೆ ಸಿನಿಮಾದ ಕ್ಲೈಮ್ಯಾಕ್ಸ್‌ ಬಂದಿರುತ್ತದೆ. ಮುಂದೇನು ಆಗುತ್ತದೆ ಎಂಬುದನ್ನು ತೆರೆಮೇಲೆ ನೋಡಬೇಕು.

ಪೀಟರ್‌ ಸಿನಿಮಾದ ಟೀಸರ್‌ ಔಟ್‌- ಹೊಸ ಅವತಾರದಲ್ಲಿ ರಾಜೇಶ್‌ ಧ್ರುವ!

ಕಲಾವಿದರ ಅಚ್ಚುಕಟ್ಟಾದ ಅಭಿನಯ

ʻಪೀಟರ್‌ʼ ಸಿನಿಮಾದ ಕಥಾನಾಯಕನಾಗಿ ಕಾಣಿಸಿಕೊಂಡಿರುವ ರಾಜೇಶ್‌ ಧ್ರುವ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರಿದ್ದಿಲ್ಲಿ ಎರಡು ಶೇಡ್‌ನ ಪಾತ್ರ. ಒಂದರಲ್ಲಿ ಲವರ್‌ ಬಾಯ್‌ ಆಗಿ ಜೊತೆಗೆ ಚಂಡೆ ಕಲಾವಿದನಾಗಿ ಮಿಂಚಿದರೆ, ಮತ್ತೊಂದರಲ್ಲಿ ಬದುಕಿನ ನಾನಾ ಕಠಿಣ ಪರಿಸ್ಥಿತಿಗಳಿಗೆ ಸಾಕ್ಷಿಯಾಗಿ ಪೆಟ್ಟು ತಿಂದ ಪಾತ್ರ. ಇವೆರಡನ್ನೂ ಬಹಳ ಸೊಗಸಾಗಿ ನಿಭಾಯಿಸಿದ್ದಾರೆ ರಾಜೇಶ್‌ ಧ್ರುವ. ಸಿನಿಮಾಕ್ಕೆ ಹೆಚ್ಚು ತಿರುವುಗಳನ್ನು ತಂದುಕೊಡುವ ತಾಯಿ ಪಾತ್ರ ಮಾಡಿರುವ ಪ್ರತಿಮಾ ನಾಯಕ್‌, ರಾಧಾ ಟೀಚರ್‌ ಪಾತ್ರಧಾರಿ ಜಾನ್ವಿ ರಾಯಲ, ರಾಮ್‌ ನಾಡಗೌಡ, ರವೀಕ್ಷಾ ಶೆಟ್ಟಿ ಮುಂತಾದವರ ಪರಿಣಾಮಕಾರಿ ನಟನೆ ಪೀಟರ್‌ ಚಿತ್ರದ ತೂಕವನ್ನು ಹೆಚ್ಚಿಸಿದೆ.

ʼಪೀಟರ್‌ʼ ಚಿತ್ರತಂಡದ ಸಂದರ್ಶನ



ಮೇಕಿಂಗ್‌ನಿಂದ ಗಮನಸೆಳೆಯುವ ಪೀಟರ್‌

ನಿರ್ದೇಶಕ ಸುಕೇಶ್‌ ಶೆಟ್ಟಿ ಮೇಕಿಂಗ್‌ ವಿಚಾರದಲ್ಲಿ ಮೊದಲ ಚಿತ್ರಕ್ಕಿಂತಲೂ ಜಾಸ್ತಿ ಪರಿಪಕ್ವರಾಗಿದ್ದಾರೆ. ಜೊತೆಗೆ ಈ ಬಾರಿ ವಿಭಿನ್ನ ಮಾದರಿಯ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯನ್ನು ಆಯ್ದುಕೊಂಡಿರುವುದು ಸರ್ಪ್ರೈಸ್‌ ಎನಿಸುತ್ತದೆ. ಚಂಡೆ ಮೇಳವನ್ನು ಕಥೆಯೊಳಗೆ ಬಳಸಿಕೊಂಡಿರುವ ರೀತಿ ಇಷ್ಟವಾಗುತ್ತದೆ. ಟ್ವಿಸ್ಟ್‌ಗಳನ್ನು ಹೊಂದಿರುವ ಚಿತ್ರಕಥೆ ಇದ್ದರೂ, ಅದಕ್ಕೆ ಇನ್ನೊಂದಿಷ್ಟು ಸಾಣೆ ಹಿಡಿಯುವ ಅಗತ್ಯವಿತ್ತು. ಗುರುಪ್ರಸಾದ್‌ ನರ್ನಾಡ್‌ ಅವರ ಛಾಯಾಗ್ರಹಣ ʻಪೀಟರ್‌ʼ ಚಿತ್ರದ ಸೊಗಸನ್ನು ಹೆಚ್ಚಿಸಿದೆ.

ಈ ಚಿತ್ತದ ದೊಡ್ಡ ಪ್ಲಸ್‌ ಪಾಯಿಂಟ್‌ ಎಂದರೆ, ಮ್ಯೂಸಿಕ್.‌ ರಿತ್ವಿಕ್‌ ಮುರಳೀಧರ್‌ ಸಂಗೀತ ನೀಡಿರುವ ಹಾಡುಗಳು ಸೊಗಸಾಗಿವೆ. ಅದರಲ್ಲೂ ಸುಂದರಿ ಸುಂದರಿ ಹಾಡಂತೂ ಪದೇಪದೇ ಗುನುಗುವಂತಿದೆ. ಜೊತೆಗೆ ಸಸ್ಪೆನ್ಸ್ ಕ್ರೈಮ್ ಮತ್ತು ಎಮೋಷನಲ್ ಥ್ರಿಲ್ಲರ್ ಆಗಿರುವ ಈ ಕಥೆಗೆ ಬೇಕಾಗಿರುವಂತಹ ಹಿನ್ನೆಲೆ ಸಂಗೀತವು ಇಲ್ಲಿದೆ. ಒಟ್ಟಾರೆ ಚಂಡೆ ವಾದ್ಯದ ಕುರಿತು ಆಸಕ್ತಿ ಇರುವವರಿಗೆ ಮತ್ತು ಮಲಯಾಳಂ ಶೈಲಿಯ ಕೈಮ್‌ ಥ್ರಿಲ್ಲರ್‌ ಸಿನಿಮಾಗಳನ್ನು ಇಷ್ಟಪಡುವವರಿಗೆ ʻಪೀಟರ್‌ʼ ಇಷ್ಟವಾಗಬಹುದು.

Movie: ಪೀಟರ್

Release Date: ಏ.10, 2026

Language: ಕನ್ನಡ

Genre: ಥ್ರಿಲ್ಲರ್‌, ಡ್ರಾಮಾ, ಸಸ್ಪೆನ್ಸ್

Director: ಸುಕೇಶ್‌ ಶೆಟ್ಟಿ

Cast: ರಾಜೇಶ್‌ ಧ್ರುವ, ಜಾಹ್ನವಿ ರಾಯಲ, ರವೀಕ್ಷಾ ಶೆಟ್ಟಿ, ರಾಮ್‌ ನಾಡಗೌಡ, ಪ್ರತಿಮಾ ನಾಯಕ್‌, ರಘು ಪಾಂಡೇಶ್ವರ್‌

Duration: 141 ನಿಮಿಷ

Rating: 3/5