ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭೂಗತ ಲೋಕದ ಕಥೆ ಹೇಳುತ್ತಾ ಗಮನಸೆಳೆದ ʻರಕ್ಕಿʼ; ರೌಡಿಸಂ ಸಿನಿಮಾಗೆ ವೆಂಕಟ್ ಭಾರದ್ವಾಜ್ ಡೈರೆಕ್ಷನ್‌!

ವಿಭಿನ್ನ ಚಿತ್ರಗಳ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೌಟುಂಬಿಕ ಎಳೆಯುಳ್ಳ ಭೂಗತ ಲೋಕದ ಕಥಾಹಂದರ ಹೊಂದಿರುವ ‘ರಕ್ಕಿ’ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಅಪ್ಪು ಅಭಿಮಾನಿ ರಕ್ಕಿ ಸುರೇಶ್ ನಾಯಕನಾಗಿ ನಟಿಸಿದ್ದು, ಬಿ. ಸುರೇಶ್, ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Rakky Movie: ಭೂಗತ ಲೋಕದ ಕಥೆಗೆ ವೆಂಕಟ್ ಭಾರದ್ವಾಜ್ ಡೈರೆಕ್ಷನ್

-

Avinash GR
Avinash GR Jul 12, 2026 8:41 PM

ʻಎ ಡೇ ಇನ್ ದಿ ಸಿಟಿʼ, ʻದಿ ಪೇಂಟರ್ʼ, ʻಕೆಂಪಿರುವೆʼ, ʻನಗುವಿನ ಹೂಗಳ ಮೇಲೆʼ ಮುಂತಾದ ವಿಭಿನ್ನ ಹಾಗೂ ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ ಸಿನಿರಸಿಕರ ಗಮನ ಸೆಳೆದಿದ್ದ ನಿರ್ದೇಶಕ ವೆಂಕಟ್ ಭಾರದ್ವಾಜ್, ಈ ಬಾರಿ ರೌಡಿಸಂ ಹಿನ್ನೆಲೆಯ ಕಥಾಹಂದರ ಹೊಂದಿರುವ ‘ರಕ್ಕಿ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸಾಮಾನ್ಯವಾಗಿ ಭೂಗತ ಲೋಕದ ಹಿನ್ನೆಲೆಯಲ್ಲಿ ಕೇವಲ ಆಕ್ಷನ್ ಅಥವಾ ಲವ್ ಸ್ಟೋರಿಗಳು ಹೆಚ್ಚಾಗಿ ಬರುತ್ತವೆ. ಆದರೆ, ವೆಂಕಟ್ ಭಾರದ್ವಾಜ್ ಈ ಬಾರಿ ಅಂಡರ್‌ವರ್ಲ್ಡ್ ಕಥೆಗೆ ಕೌಟುಂಬಿಕ ಎಳೆಯನ್ನು ಬೆರೆಸಿ ‘ರಕ್ಕಿ’ ಚಿತ್ರವನ್ನು ರೂಪಿಸಿದ್ದಾರೆ.

ರಕ್ತಪಾತವಿಲ್ಲದ ವಿಭಿನ್ನ ಕ್ರೈಂ ಸ್ಟೋರಿ

ಇದೊಂದು ಅಪರಾಧದ ಹಿನ್ನೆಲೆ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಎಲ್ಲಿಯೂ ಅತಿಯಾದ ರಕ್ತಪಾತಕ್ಕೆ ಆಸ್ಪದ ನೀಡದೆ ಕಥೆಯನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಚಿತ್ರದ ಕೇಂದ್ರ ಬಿಂದುವಾಗಿರುವ ‘ರಕ್ಕಿ’ ಪಾತ್ರದಲ್ಲಿ ಯುವ ನಟ ರಕ್ಕಿ ಸುರೇಶ್ ಕಾಣಿಸಿಕೊಂಡಿದ್ದು, ತಮ್ಮ ಚೊಚ್ಚಲ ಚಿತ್ರದಲ್ಲೇ ನಟನೆ ಹಾಗೂ ಆ್ಯಕ್ಷನ್ ದೃಶ್ಯಗಳಲ್ಲಿ ಅದ್ಭುತವಾಗಿ ಗಮನ ಸೆಳೆಯುತ್ತಾರೆ. ಇವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಚಿತ್ರದ ಫೈಟ್ಸ್ ಮತ್ತು ಡ್ಯಾನ್ಸ್ ಸನ್ನಿವೇಶಗಳಲ್ಲಿ ತಮ್ಮ ಶ್ರಮವನ್ನು ಹಾಕಿದ್ದಾರೆ.

ಕುತೂಹಲ ಮೂಡಿಸುವ ಕಥಾಹಂದರ

ಚಿತ್ರದ ಕಥಾನಾಯಕ ರಕ್ಕಿ (ರಕ್ಕಿ ಸುರೇಶ್) ರೌಡಿಯಾಗಿದ್ದು, ಭೂಗತ ಲೋಕದ ಡಾನ್ ಡ್ಯಾನಿ (ಬಿ. ಸುರೇಶ) ಕೈಕೆಳಗೆ ನಂಬಿಕಸ್ಥನಾಗಿ ಕೆಲಸ ಮಾಡುತ್ತಿರುತ್ತಾನೆ. ಬಾಸ್ ಹೇಳಿದ ಪ್ರತಿಯೊಂದು ಕೆಲಸವನ್ನು ಚಾಚೂ ತಪ್ಪದೆ ಮಾಡುವ ರಕ್ಕಿಯನ್ನು, ಡ್ಯಾನಿ ಮಗಳು ಸಿರಿ (ಪಲ್ಲವಿ) ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಆರಂಭದಲ್ಲಿ ಈ ಪ್ರೀತಿಯನ್ನು ತಿರಸ್ಕರಿಸುವ ರಕ್ಕಿ, ನಂತರ ಒಪ್ಪಿಕೊಳ್ಳುತ್ತಾನೆ. ತನ್ನ ಪ್ರಿಯಕರ ಕೆಟ್ಟ ಕೆಲಸಗಳನ್ನು ಬಿಟ್ಟು ಉತ್ತಮ ಜೀವನ ನಡೆಸಬೇಕೆಂದು ಸಿರಿ ಬಯಸುತ್ತಾಳೆ. ಆದರೆ, ರಾಜಕಾರಣಿಯೊಬ್ಬನನ್ನು ಮುಗಿಸಲು ಡಾನ್ ಡ್ಯಾನಿ ಒಪ್ಪಿಕೊಳ್ಳುವ ಒಂದು ಬಿಗ್ ಡೀಲ್, ಇಡೀ ಕಥೆಗೆ ಅನಿರೀಕ್ಷಿತ ತಿರುವು ನೀಡುತ್ತದೆ. ಈ ಕೆಲಸವನ್ನು ಮುಗಿಸಲು ರಕ್ಕಿ ಮತ್ತು ಗಣೇಶ್ (ಸಂಪತ್ ಮೈತ್ರೇಯ) ಬರೋಬ್ಬರಿ 130 ಕಿಲೋಮೀಟರ್ ಪ್ರಯಾಣ ಮಾಡಬೇಕಾಗುತ್ತದೆ.

ಈ ಜರ್ನಿಯ ಹಂತದಲ್ಲಿ ಬಿಚ್ಚಿಕೊಳ್ಳುವ ಕೆಲವು ಅಚ್ಚರಿಯ ಸತ್ಯಗಳು ಹಾಗೂ ನಾಯಕಿ ಚಾಂದಿನಿ (ಆಶಿಕಾ) ಮತ್ತು ಒಬ್ಬ ರಾಜಕಾರಣಿಯ ಪ್ರವೇಶ ಕ್ಲೈಮ್ಯಾಕ್ಸ್‌ಗೆ ಹೊಸ ರೋಚಕತೆ ತರುತ್ತದೆ. ರಕ್ಕಿ ಮತ್ತು ಚಾಂದಿನಿಯ ಹಿಂದಿನ ಕಥೆಯನ್ನು ಹೇಳುವ ಫ್ಲ್ಯಾಶ್‌ಬ್ಯಾಕ್ ಕೂಡ ಚಿತ್ರದಲ್ಲಿದೆ. ಹತ್ತಾರು ಕುತೂಹಲಕಾರಿ ಪ್ರಶ್ನೆಗಳೊಂದಿಗೆ ಸಿನಿಮಾ ಸಾಗುತ್ತದೆ ಎನ್ನುವುದು ಚಿತ್ರತಂಡದ ಮಾತು.

ಈ ಚಿತ್ರದ ಇಬ್ಬರು ನಾಯಕಿಯರಾದ ಪಲ್ಲವಿ ಮತ್ತು ಆಶಿಕಾ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಇನ್ನುಳಿದಂತೆ ಚಿತ್ರದಲ್ಲಿ ಹಿರಿಯ ನಟರಾದ ಬಿ. ಸುರೇಶ್, ಸಂಪತ್ ಮೈತ್ರೇಯ ಹಾಗೂ ಬಾಲ ರಾಜ್‌ವಾಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ತಾಯಿಯ ಪಾತ್ರದಲ್ಲಿ ಹರಿಣಿ ಶ್ರೀಕಾಂತ್ ಕಾಣಿಸಿಕೊಂಡಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಲೋಕಿ ತವಸ್ಯ ಸಂಗೀತ ಸಂಯೋಜನೆ ಹಾಗೂ ಐಸಾಕ್ ಪ್ರಭಾಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಟೈಗರ್ ಶಿವು ಅವರು ಕಂಪೋಸ್ ಮಾಡಿರುವ ಆಕ್ಷನ್ ಸನ್ನಿವೇಶಗಳು ಚಿತ್ರದ ತೂಕವನ್ನು ಹೆಚ್ಚಿಸಿವೆಯಂತೆ.