29 ವರ್ಷಗಳ ನಂತರ ʻಅಮೃತವರ್ಷಿಣಿʼ ಚಿತ್ರಕ್ಕೆ ಸೀಕ್ವೆಲ್; ಮತ್ತೆ ಜೊತೆಯಾಗಲಿದ್ದಾರೆ ರಮೇಶ್ ಅರವಿಂದ್-ಸುಹಾಸಿನಿ
Amruthavarshini 2 Movie: 1997ರ ಕ್ಲಾಸಿಕ್ ಹಿಟ್ ಸಿನಿಮಾ ʻಅಮೃತವರ್ಷಿಣಿʼಗೆʼ 29 ವರ್ಷಗಳ ಬಳಿಕ ಸೀಕ್ವೆಲ್ ಸಿನಿಮಾ ಸೆಟ್ಟೇರಲಿದೆ. ದಿನೇಶ್ ಬಾಬು ನಿರ್ದೇಶನದಲ್ಲಿ ರಮೇಶ್ ಅರವಿಂದ್ ಮತ್ತು ಸುಹಾಸಿನಿ ಜೋಡಿ ಮತ್ತೊಮ್ಮೆ ಒಂದಾಗುತ್ತಿದ್ದು, ಜನವರಿ 14ರ ಸಂಕ್ರಾಂತಿಗೆ ಚಿತ್ರೀಕರಣ ಆರಂಭವಾಗಲಿದೆ.
-
ಕನ್ನಡ ಚಿತ್ರರಂಗದ ಸಾರ್ವಕಾಲಿಕ ಸಿನಿಮಾಗಳಲ್ಲಿ ಒಂದಾದ ‘ಅಮೃತವರ್ಷಿಣಿ’ ಬಿಡುಗಡೆಯಾಗಿ ಸುಮಾರು ಮೂರು ದಶಕಗಳ ಬಳಿಕ, ಇದೀಗ ಅದರ ಮುಂದುವರಿದ ಭಾಗ ‘ಅಮೃತವರ್ಷಿಣಿ 2’ ಸೆಟ್ಟೇರಲು ಸಜ್ಜಾಗಿದೆ. 1997ರಲ್ಲಿ ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿಬಂದು ಇತಿಹಾಸ ಸೃಷ್ಟಿಸಿದ್ದ ಈ ಚಿತ್ರದ ಸೀಕ್ವೆಲ್ನಲ್ಲೂ ಮೂಲ ಚಿತ್ರದ ಜನಪ್ರಿಯ ಜೋಡಿಯಾದ ರಮೇಶ್ ಅರವಿಂದ್ ಮತ್ತು ಸುಹಾಸಿನಿ ಮತ್ತೆ ಒಂದಾಗಿ ಅಭಿನಯಿಸುತ್ತಿರುವುದು ಕುತೂಹಲ ಮೂಡಿಸಿದೆ.
ಸಂಕ್ರಾಂತಿ ಹಬ್ಬದಂದು ಶೂಟಿಂಗ್ಗೆ ಚಾಲನೆ
ಆರ್. ನವೀನ್ ಮತ್ತು ಬಿ.ಎಸ್. ಸುಧೀಂದ್ರ ಅವರ ನಿರ್ಮಾಣದಲ್ಲಿ, ದಿನೇಶ್ ಬಾಬು ಅವರೇ ಈ ಎರಡನೇ ಭಾಗಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದು, ಜನವರಿ 14ರ ಸಂಕ್ರಾಂತಿಯ ಶುಭ ದಿನದಂದು ಚಿತ್ರದ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಮೂಲ ಚಿತ್ರವು ತನ್ನ ಕಥಾಹಂದರ, ಕಲಾವಿದರ ಅಭಿನಯ ಹಾಗೂ ಸಂಗೀತ ನಿರ್ದೇಶಕ ದೇವಾ ಅವರ ಮಧುರ ಗೀತೆಗಳಿಂದಾಗಿ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿತ್ತು. ವಿಶೇಷವೆಂದರೆ, ಮೊದಲ ಭಾಗದ ಕ್ಲೈಮ್ಯಾಕ್ಸ್ ದೃಶ್ಯ ಎಲ್ಲಿಗೆ ಕೊನೆಗೊಂಡಿತ್ತೋ, ಅಲ್ಲಿಂದಲೇ ಈ ಸೀಕ್ವೆಲ್ನ ಕಥೆ ಮುಂದುವರಿಯಲಿದೆ ಎಂಬುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಯಾರೆಲ್ಲಾ ನಟಿಸಲಿದ್ದಾರೆ?
ಈ ಚಿತ್ರದಲ್ಲಿ ರಮೇಶ್ ಅರವಿಂದ್ ಮತ್ತು ಸುಹಾಸಿನಿ ಅವರೊಂದಿಗೆ ಹಿರಿಯ ಕಲಾವಿದರಾದ ರಾಮಕೃಷ್ಣ ಮತ್ತು ತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ಸಿನಿಮಾದಲ್ಲಿ ಹೊಸ ನಟರೊಬ್ಬರ ಪ್ರವೇಶವೂ ಆಗಲಿದ್ದು, ಉಳಿದಂತೆ ಅನುಭವಿ ಕಲಾವಿದರ ದಂಡೇ ಚಿತ್ರದಲ್ಲಿರಲಿದೆಯಂತೆ. ಮೊದಲ ಚಿತ್ರದ ಭಾವನಾತ್ಮಕ ಸೊಗಡನ್ನು ಹಾಗೆಯೇ ಉಳಿಸಿಕೊಂಡು, ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಹೊಸತನದೊಂದಿಗೆ ಕಥೆಯನ್ನು ಹೆಣೆಯಲಾಗಿದ್ದು, ಚಿತ್ರದ ಚಿತ್ರೀಕರಣವು ಬೆಂಗಳೂರು ಹಾಗೂ ಕೊಡೈಕೆನಾಲ್ನ ಸುಂದರ ತಾಣಗಳಲ್ಲಿ ನಡೆಯಲಿದೆಯಂತೆ.
Star Saree Fashion Review 2025: ಮಹಿಳೆಯರನ್ನು ಸೆಳೆದ ಸುಹಾಸಿನಿಯವರ ಹ್ಯಾಂಡ್ಲೂಮ್ ಸೀರೆ
ಸಂಗೀತ ನಿರ್ದೇಶಕರು ಯಾರು?
ಸದ್ಯಕ್ಕೆ ಕಥೆಯ ಹೆಚ್ಚಿನ ವಿವರಗಳನ್ನು ಚಿತ್ರತಂಡ ಗೌಪ್ಯವಾಗಿ ಇರಿಸಿದ್ದು, ತಾಂತ್ರಿಕ ವರ್ಗದ ಆಯ್ಕೆಯಲ್ಲಿ ಅತ್ಯಂತ ಎಚ್ಚರಿಕೆ ವಹಿಸುತ್ತಿದೆ. ಮೂಲ ಚಿತ್ರದಲ್ಲಿ ದೇವಾ ಅವರು ನೀಡಿದ್ದ ಮರೆಯಲಾಗದ ಮಧುರ ಸಂಗೀತದ ಜಾದೂವನ್ನು ಈ ಭಾಗದಲ್ಲೂ ಮರುಸೃಷ್ಟಿಸುವ ಉದ್ದೇಶದಿಂದ, ಛಾಯಾಗ್ರಹಣ ಮತ್ತು ಸಂಗೀತ ನಿರ್ದೇಶನಕ್ಕೆ ಚಿತ್ರರಂಗದ ಅತ್ಯುತ್ತಮ ತಂತ್ರಜ್ಞರನ್ನು ಕರೆತರಲಾಗುತ್ತಿದೆ. ಉಳಿದ ತಾರಾಬಳಗ ಮತ್ತು ತಾಂತ್ರಿಕ ತಂಡದ ಸಂಪೂರ್ಣ ಮಾಹಿತಿಯನ್ನು ಚಿತ್ರತಂಡ ಸದ್ಯದಲ್ಲೇ ಅಧಿಕೃತವಾಗಿ ಬಹಿರಂಗಪಡಿಸಲಿದೆ.