ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

100 ಕೋಟಿ ದಾಟಿದ ʻಪ್ರೇಮದ ಊರಲಿʼ ಸಿನಿಮಾ ಕಲೆಕ್ಷನ್;‌ ಎದುರಲ್ಲಿ ʻಜೈಲರ್‌ 2ʼ ಇದ್ದರೂ ಡೋಂಟ್‌ ಕೇರ್‌!

Premada Oorali Movie: ರಂಗಾಯಣ ರಘು, ಶ್ರೀರಾಮ್‌, ರಮಿಕಾ ಶಿವು ನಟನೆಯ ʻಪ್ರೇಮದ ಊರಲಿʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿ ಬರೋಬ್ಬರಿ 110 ಕೋಟಿ ಗಳಿಸಿದೆ. ರಜನಿಕಾಂತ್ ಅವರ ʻಜೈಲರ್‌ 2ʼ ಚಿತ್ರದ ಎದುರಲ್ಲೂ ಎದೆಗುಂದದೆ ಮುನ್ನುಗ್ಗುತ್ತಿದೆ.

ʻಜೈಲರ್ 2ʼ ಬಿರುಗಾಳಿಗೂ ಜಗ್ಗದ ʻಪ್ರೇಮದ ಊರಲಿʼ; ಬಾಕ್ಸ್ ಆಫೀಸ್‌ ಉಡೀಸ್!‌

-

Avinash GR
Avinash GR Oct 22, 2026 1:43 PM

ರಂಗಾಯಣ ರಘು, ಶ್ರೀರಾಮ್‌, ರಮಿಕಾ ಶಿವು ನಟನೆಯ ʻಪ್ರೇಮದ ಊರಲಿʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ರೋಚಕ ಗೆಲುವು ಕಂಡಿದೆ. ಯಶಸ್ವಿಯಾಗಿ 25 ದಿನ ಪೂರೈಸಿರುವ ಈ ಚಿತ್ರದ ಗಳಿಕೆಯು ಈಗಾಗಲೇ 110 ಕೋಟಿ ರೂ. ದಾಟಿದೆ. ಕೇವಲ 2 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾವು ನಿರ್ಮಾಪಕರಿಗೆ ಅಭೂತಪೂರ್ವ ಗೆಲುವನ್ನೇ ತಂದುಕೊಟ್ಟಿದೆ.

ಪರಭಾಷೆಯ ಸಿನಿಮಾಗಳಿದ್ದರೂ ಜಗ್ಗಲಿಲ್ಲ

ಸಾಮಾನ್ಯವಾಗಿ ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು ತೆರೆಕಾಣುವಾಗ ಕನ್ನಡದ ಸಿನಿಮಾಗಳು ಹಿಂದೆ ಸರಿಯುವುದನ್ನು ನಾವು ನೋಡಿದ್ದೇವೆ. ಪರಭಾಷೆಯ ಚಿತ್ರಗಳಿಗಾಗಿ ತಮ್ಮ ಸಿನಿಮಾಗಳ ಬಿಡುಗಡೆಯನ್ನು ಪೋಸ್ಟ್‌ಪೋನ್ ಮಾಡುವ ನಿರ್ಮಾಪಕರೂ ಇದ್ದಾರೆ. ಏಕೆಂದರೆ, ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳಿಗೆ ಅಂಥದ್ದೊಂದು ದೊಡ್ಡ ಮಾರುಕಟ್ಟೆಯನ್ನು ಇಲ್ಲಿನ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಹಾಗಾಗಿ, ಕರ್ನಾಟಕದಲ್ಲೇ ಕನ್ನಡ ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೂ ಮೀನಾಮೇಷ ಎಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕನ್ನಡದ 'ಪ್ರೇಮದ ಊರಲಿ' ಸಿನಿಮಾವು ಎಲ್ಲಾ ಅಡೆತಡೆಗಳನ್ನು ಮೆಟ್ಟಿ ಮುನ್ನುಗ್ಗುತ್ತಿದೆ.

ಜೈಲರ್‌ 2 ಬಂದರೂ ಡೋಂಟ್‌ ಕೇರ್‌

ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ ಅವರ ʻಜೈಲರ್‌ 2ʼ ಸಿನಿಮಾವು ಅ. 15ರಂದು ತೆರೆಕಂಡಿದೆ. ಮೊದಲ ದಿನದಿಂದಲೇ ಕರ್ನಾಟಕದಲ್ಲಿ ಅಬ್ಬರದ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಈ ಚಿತ್ರದ ಗಳಿಕೆ ವಿಶ್ವಾದ್ಯಂತ 575 ಕೋಟಿ ರೂ. ಸಮೀಪದಲ್ಲಿದೆ. ಕರ್ನಾಟಕದಲ್ಲೂ 60+ ಕೋಟಿ ರೂ. ಗಳಿಕೆಯಾಗಿದೆ. ಹೀಗಿದ್ದರೂ, 'ಪ್ರೇಮದ ಊರಲಿ' ಸಿನಿಮಾ ಮಾತ್ರ ಯಾವುದೇ ಅಡ್ಡಿಯಿಲ್ಲದೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದಲ್ಲದೆ, ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ ನಟನೆಯ ʻರಣಬಾಲಿʼ ಸಿನಿಮಾ ತೆರೆಕಂಡಿದ್ದರೂ, ಅದರಿಂದ 'ಪ್ರೇಮದ ಊರಲಿ' ಚಿತ್ರದ ಗಳಿಕೆಗೆ ಯಾವುದೇ ಧಕ್ಕೆಯಾಗಿಲ್ಲ.

Premada Oorali movie: ಗಂಟೆಗೆ 15 ಸಾವಿರ ಟಿಕೆಟ್ ಮಾರಾಟ; ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಗಳಿಕೆ

ಈಗಲೂ ಬುಕ್‌ ಮೈ ಶೋನಲ್ಲಿ ಪ್ರತಿ ಗಂಟೆಗೆ 'ಪ್ರೇಮದ ಊರಲಿ' ಚಿತ್ರದ 5 ರಿಂದ 6 ಸಾವಿರ ಟಿಕೆಟ್‌ಗಳು ಮಾರಾಟವಾಗುತ್ತಿವೆ. ಈಗಾಗಲೇ 110+ ಕೋಟಿ ರೂ. ಗಳಿಸಿರುವ ಈ ಸಿನಿಮಾ ಇದೇ ವೇಗದಲ್ಲಿ ಮುಂದುವರಿದರೆ, ಅಕ್ಟೋಬರ್‌ ತಿಂಗಳು ಮುಗಿಯುವ ಹೊತ್ತಿಗೆ 150 ಕೋಟಿ ರೂ. ಕ್ಲಬ್‌ ಸೇರುವುದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ. ಮನೋಜ್‌ ಕುಮಾರ್‌ ನಿರ್ದೇಶನದ ಈ ಚಿತ್ರವನ್ನು ಮಮತಾ ದೇವೇಂದ್ರ ನಿರ್ಮಾಣ ಮಾಡಿದ್ದಾರೆ. ಸುನಾದ್‌ ಗೌತಮ್‌ ಸಂಗೀತ ನೀಡಿದ್ದು, ರಾಜ್‌ಕಾಂತ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ.