ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಮೂಲಭೂತ ಸೌಕರ್ಯ ಸಿಗುತ್ತಿದೆಯೇ?ʼ; ವಿಸ್ತೃತ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ನಿರ್ದೇಶನ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಜೈಲಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಸಾಕ್ಷಿಗಳ ವಿಚಾರಣೆ ವಿಳಂಬದ ಬಗ್ಗೆ ದರ್ಶನ್ ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು. ಇದನ್ನು ಆಲಿಸಿದ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ! ಏನಾಯ್ತು?

-

Avinash GR
Avinash GR May 4, 2026 3:35 PM

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್‌ ಅವರು ಸುಪ್ರೀಂ ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. "ಸಹ ಕೈದಿಗಳು ನನ್ನನ್ನು ನಿಂದಿಸುತ್ತಿರುವುದಲ್ಲದೆ, ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಮೂಲಭೂತ ಸೌಕರ್ಯಗಳಾದ ಸರಿಯಾದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆಯಲು ತಾರತಮ್ಯ ಮಾಡಲಾಗುತ್ತಿದೆ" ಎಂದು ಜಾಮೀನು ಅರ್ಜಿಯಲ್ಲಿ ಹೇಳಿಕೊಂಡಿದ್ದರು. ಇಂದು ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದೆ.

ದರ್ಶನ್‌ ಪರ ವಕೀಲರು ಹೇಳಿದ್ದೇನು?

ಮಧ್ಯಂತರ ಜಾಮೀನು ಕೋರಿ ನಟ ದರ್ಶನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ವಿಜಯ್‌ ಬಿಷ್ಣೋಯ್‌ ಅವರ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ವಾದ ಮಂಡನೆ ಮಾಡಿದ್ದಾರೆ. "ದರ್ಶನ್​ ಅವರಿಗೆ ಫೈವ್ ಸ್ಟಾರ್ ಟ್ರೀಟ್‌ಮೆಂಟ್‌ ಕೊಡಬೇಡಿ ಎಂದಿದ್ದೀರಿ. ಆದರೆ ಜೈಲು ಅಧಿಕಾರಿಗಳು ಕೊನೇಪಕ್ಷ ಮೂಲಭೂತ ಸವಲತ್ತನ್ನೂ ಕೂಡ ನೀಡುತ್ತಿಲ್ಲ" ಎಂದು ನ್ಯಾಯಾಧೀಶರ ಎದುರು ಹೇಳಿದ್ದಾರೆ.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

"ಸಾಮಾನ್ಯ ಆರೋಪಿಗೆ ದೊರಕುವ ಸೌಲಭ್ಯವೂ ದರ್ಶನ್‌ಗೆ ಸಿಗುತ್ತಿಲ್ಲ. ದರ್ಶನ್‌ರನ್ನು ಕ್ವಾರಂಟೈನ್‌ ಸೆಲ್‌ನಲ್ಲಿ ಇರಿಸಲಾಗಿದೆ. ಅಲ್ಲಿ ಬೆಳಕೂ ಇಲ್ಲ, ಊಟವನ್ನೂ ತರಿಸಿಕೊಳ್ಳಲಾಗುತ್ತಿಲ್ಲ. ಈ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿತ್ತು. ಆ ನ್ಯಾಯಾಲಯವು ಸುಪ್ರೀಂ ಕೋರ್ಟ್‌ ಆದೇಶದಿಂದ ನಿಮಗೆ ಸೌಲಭ್ಯ ಕೊಡಲಾಗುತ್ತಿಲ್ಲ ಎನ್ನುತ್ತಿದೆ" ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ದರ್ಶನ್‌ ಪರ ವಕೀಲರ ವಾದವನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ನೀಡಿದ್ದು, 57ನೇ ಸಿಸಿಎಚ್ ಕೋರ್ಟ್​ನಿಂದ ವರದಿ ಕೇಳಿದೆ. "ದರ್ಶನ್ ಕೇಸ್‌ನಲ್ಲಿ ಇಲ್ಲಿಯವರೆಗೂ ಎಷ್ಟು ಸಾಕ್ಷಿಗಳ ವಿಚಾರಣೆ ನಡೆದಿದೆ? ಎಷ್ಟು ಸಾಕ್ಷಿಗಳ ವಿಚಾರಣೆ ಬಾಕಿ ಇದೆ? ಸಾಕ್ಷ್ಯ ವಿಚಾರಣೆ ಮುಗಿಯಲು ಇನ್ನೂ ಎಷ್ಟು ಸಮಯ ಬೇಕು? ಜೈಲಿನಲ್ಲಿ ದರ್ಶನ್​ಗೆ ಮೂಲ ಸೌಕರ್ಯ ಒದಗಿಸಲಾಗಿದೆಯೇ. ಇಲ್ಲವೇ" ಎಂದು ನೋಟಿಸ್‌ನಲ್ಲಿ ಪ್ರಶ್ನೆ ಮಾಡಿರುವ ಸುಪ್ರೀಂ ಕೋರ್ಟ್‌, "ವಿಚಾರಣಾ ಕೈದಿ ಅರ್ಹವಾಗಿ ಪಡೆಯಬಹುದಾದ ಮೂಲ ಸೌಲಭ್ಯವನ್ನು ದರ್ಶನ್‌ಗೆ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು" ಎಂದು ಆದೇಶಿಸಿದೆ. ಒಂದು ವಾರದಲ್ಲಿ ಈ ವರದಿಯನ್ನು ಸಲ್ಲಿಸಲು ಸೂಚನೆ ನೀಡಿದೆ.‌

ʻಚೀಟರ್ ಮಲ್ಲು ಎಂಬ ಫ್ರಾಡ್..ʼ; ದರ್ಶನ್‌ ಮಾಜಿ ಮ್ಯಾನೇಜರ್‌ ಮೇಲೆ ದಿನಕರ್‌ ತೂಗುದೀಪ ಆಕ್ರೋಶ

ʻಸಾಕ್ಷಿಗಳ ವಿಚಾರಣೆ ಮಾಡುತ್ತಿಲ್ಲʼ ಎಂಬ ಅರ್ಜಿಯಲ್ಲಿ ಮಾಹಿತಿ

ಸುಪ್ರೀಂಗೆ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದರ್ಶನ್‌, "ಪ್ರಕರಣದಲ್ಲಿ ಒಟ್ಟು 262 ಸಾಕ್ಷಿಗಳಿದ್ದು, ಕಳೆದ ಎಂಟು ತಿಂಗಳಿನಿಂದ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ಪೂರ್ಣಗೊಂಡಿದೆ. ಇನ್ನುಳಿದ 250ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ಮುಗಿಯಲು ವರ್ಷಗಳೇ ಬೇಕಾಗಬಹುದು. ನನ್ನನ್ನು ನಿಯಮ ಮೀರಿ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ. ಸಹ ಕೈದಿಗಳು ನನ್ನನ್ನು ನಿಂದಿಸುತ್ತಿರುವುದಲ್ಲದೆ, ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಮೂಲಭೂತ ಸೌಕರ್ಯಗಳಾದ ಸರಿಯಾದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆಯಲು ತಾರತಮ್ಯ ಮಾಡಲಾಗುತ್ತಿದೆ. ಬೆನ್ನುನೋವಿನಿಂದ ಬಳಲುತ್ತಿದ್ದರೂ ಸರಿಯಾದ ಫಿಸಿಯೋಥೆರಪಿ ನೀಡಲಾಗುತ್ತಿಲ್ಲ" ಎಂಬ ಅರ್ಜಿಯಲ್ಲಿ ನಟ ದರ್ಶನ್ ನೋವು ತೋಡಿಕೊಂಡಿದ್ದರು.