ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Darshan: ರೇಣುಕಾಸ್ವಾಮಿ ಕೇಸ್, ಉಲ್ಟಾ ಹೊಡೆದ ಐ-ವಿಟ್ನೆಸ್‌! ಕೋರ್ಟ್‌ನಲ್ಲಿ ಪ್ರತ್ಯಕ್ಷ ಸಾಕ್ಷಿ ಪುನೀತ್‌ ಹೇಳಿದ್ದೇನು?

Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಸ್ಫೋಟಕ ಬೆಳವಣಿಗೆ ನಡೆದಿದೆ. ಪಟ್ಟಣಗೆರೆ ಶೆಡ್‌ನಲ್ಲಿ ನಡೆದ ಹಲ್ಲೆಯ ಪ್ರತ್ಯಕ್ಷ ಸಾಕ್ಷಿ, ‘ಡಿ ಕಂಪನಿ’ ಅಡ್ಮಿನ್ ಪುನೀತ್ ನ್ಯಾಯಾಲಯದಲ್ಲಿ ತನ್ನ ಹೇಳಿಕೆಯಿಂದ ಸಂಪೂರ್ಣ ಹಿಂದೆ ಸರಿದು ಶಾಕ್ ನೀಡಿದ್ದಾನೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಉಲ್ಟಾ ಹೊಡೆದ ಸಾಕ್ಷಿ! ನಟ ದರ್ಶನ್‌ಗೆ ರಿಲೀಫ್?

-

Avinash GR
Avinash GR Oct 28, 2026 5:22 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಪುನೀತ್ ನ್ಯಾಯಾಲಯದಲ್ಲಿ ತನ್ನ ಹಿಂದಿನ ಹೇಳಿಕೆಯಿಂದ ಸಂಪೂರ್ಣವಾಗಿ ಹಿಂದೆ ಸರಿದು ಪ್ರತಿಕೂಲ ಸಾಕ್ಷಿಯಾಗಿ ಅಚ್ಚರಿ ಮೂಡಿಸಿದ್ದಾನೆ. ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಬುಧವಾರ (ಅ.28) ನಡೆದ ಸಾಕ್ಷ್ಯ ವಿಚಾರಣೆ ವೇಳೆ ಈ ಬೆಳವಣಿಗೆ ನಡೆದಿದೆ.

ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲಾಗಿತ್ತು

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಪುನೀತ್ ಹಾಗೂ ಕಿರಣ್ ಎಂಬಿಬ್ಬರು ಸ್ಥಳದಲ್ಲೇ ಇದ್ದು, ಕೃತ್ಯವನ್ನು ಕಣ್ಣಾರೆ ಕಂಡಿದ್ದರು ಎನ್ನಲಾಗಿತ್ತು. ರೇಣುಕಾಸ್ವಾಮಿಯನ್ನು ಅಪಹರಿಸಿ ಶೆಡ್‌ಗೆ ಕರೆತಂದಿದ್ದನ್ನು ಹಾಗೂ ಆತನ ಮೇಲೆ ನಡೆಸಲಾದ ಮಾರಣಾಂತಿಕ ಹಲ್ಲೆಯನ್ನು ಇವರು ನೋಡಿದ್ದಾರೆ ಎಂದು ತನಿಖಾಧಿಕಾರಿಗಳು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದರು. ಅಲ್ಲದೆ, ಪುನೀತ್ ಈ ಹಿಂದೆ ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆಯನ್ನೂ ದಾಖಲಿಸಿದ್ದನು. ‘ಡಿ ಕಂಪನಿ’ ಫ್ಯಾನ್ ಪೇಜ್ ಅಡ್ಮಿನ್ ಆಗಿದ್ದ ಪುನೀತ್, ನಟ ದರ್ಶನ್ ಜೊತೆ ನಿಕಟ ಒಡನಾಟ ಹೊಂದಿದ್ದ ವ್ಯಕ್ತಿಯಾಗಿದ್ದ ಕಾರಣ ಆತನ ಹೇಳಿಕೆ ಈ ಕೇಸ್‌ನಲ್ಲಿ ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿತ್ತು.

ಕೋರ್ಟ್‌ಗೆ ಹಾಜರಾದ ಪುನೀತ್‌

ಆದರೆ, ಅಕ್ಟೋಬರ್ 27ರಂದು ನಡೆದ ವಿಚಾರಣೆಗೆ ಪುನೀತ್ ಹಾಜರಾಗದೆ ಗೈರಾಗಿದ್ದನು. ಸಮನ್ಸ್ ಜಾರಿಯಾಗಿದ್ದರೂ ಸಾಕ್ಷಿ ಹಾಜರಾಗದ ಹಿನ್ನೆಲೆಯಲ್ಲಿ, ಎಸ್‌ಪಿಪಿ ಮನವಿ ಮೇರೆಗೆ ನ್ಯಾಯಾಲಯವು ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತ್ತು. ವಾರೆಂಟ್ ಜಾರಿಯಾದ ಬೆನ್ನಲ್ಲೇ ಬುಧವಾರ ಕೋರ್ಟ್‌ಗೆ ಹಾಜರಾದ ಪುನೀತ್, ನ್ಯಾಯಾಧೀಶರ ಮುಂದೆ ಸಾಕ್ಷ್ಯ ನುಡಿಯುವಾಗ ಉಲ್ಟಾ ಹೊಡೆದಿದ್ದಾನೆ.

ದರ್ಶನ್‌ ಕೇಸ್‌ ಅಪ್ಡೇಟ್ಸ್:‌ ಮಾಫಿ ಸಾಕ್ಷಿಯಾಗಲು ಬಂದ ಪ್ರದೋಷ್‌ಗೆ ಜಡ್ಜ್‌ ಕೇಳಿದ್ದೇನು? ದಿಢೀರ್‌ ಅಂತ ವಿಜಯಲಕ್ಷ್ಮೀ - ಧನ್ವೀರ್‌ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದೇಕೆ?

ದರ್ಶನ್, ಪವಿತ್ರಾ ಬಂದೇ ಇರಲಿಲ್ಲ

"ಘಟನೆ ನಡೆದ ದಿನ ಶೆಡ್ ಬಳಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಯಾವುದೇ ಆರೋಪಿಗಳು ಬಂದಿರಲೇ ಇಲ್ಲ. ಪ್ರಸ್ತುತ ಕೋರ್ಟ್ ಹಾಲ್‌ನಲ್ಲಿರುವ ಹಾಗೂ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿರುವ ಯಾವುದೇ ಆರೋಪಿಗಳು ಅಲ್ಲಿ ಇರಲಿಲ್ಲ" ಎಂದು ಹೇಳಿಕೆ ನೀಡುವ ಮೂಲಕ ಪೊಲೀಸರ ತನಿಖಾ ವರದಿಯನ್ನೇ ತಲೆಕೆಳಗಾಗಿಸಿದ್ದಾನೆ.

ತನ್ನ ಹಿಂದಿನ 164 ಹೇಳಿಕೆಗೆ ತದ್ವಿರುದ್ಧವಾಗಿ ಸಾಕ್ಷಿ ನುಡಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನನ್ನು ‘ಪ್ರತಿಕೂಲ ಸಾಕ್ಷಿ’ ಎಂದು ಘೋಷಿಸಿತು. ಸದ್ಯ ಪುನೀತ್‌ನ ಭಾಗಶಃ ಹೇಳಿಕೆಯನ್ನು ಮಾತ್ರ ದಾಖಲಿಸಿಕೊಂಡಿರುವ ನ್ಯಾಯಾಲಯ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಪ್ರಮುಖ ಪ್ರತ್ಯಕ್ಷ ಸಾಕ್ಷಿಯೇ ಕೋರ್ಟ್‌ನಲ್ಲಿ ತಿರುಗಿಬಿದ್ದಿರುವುದು ಪ್ರಾಸಿಕ್ಯೂಷನ್‌ಗೆ ಹಿನ್ನಡೆಯಾಗಿ ಪರಿಣಮಿಸಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.