ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

3 ಗಂಟೆಗಳ ಕಾಲ 'ಮಾಫಿ ಸಾಕ್ಷಿ' ಪ್ರದೋಷ್ ಹೇಳಿಕೆ ದಾಖಲು, ವಿಚಾರಣೆ ಸೆ.29ಕ್ಕೆ ಮುಂದೂಡಿಕೆ! ಸುಪ್ರೀಂನತ್ತ ಮುಖ ಮಾಡಿದ ʻದಾಸʼ ದರ್ಶನ್‌

Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ ಎ-14 ಆರೋಪಿ ಪ್ರದೋಷ್ ನ್ಯಾಯಾಧೀಶರ ಮುಂದೆ ಮೂರು ಗಂಟೆ ಸುದೀರ್ಘ ಹೇಳಿಕೆ ದಾಖಲಿಸಿದ್ದಾರೆ. ಈ ಬೆಳವಣಿಗೆಯಿಂದ ಕೊಲೆ ಆರೋಪಿಗಳಲ್ಲಿ ಆತಂಕ ಮನೆ ಮಾಡಿದೆ. ಈ ವೇಳೆ ಪವಿತ್ರಾ ಗೌಡ ಕಣ್ಣೀರಿಟ್ಟರೆ, ನಟ ದರ್ಶನ್ ಮೌನಕ್ಕೆ ಶರಣಾಗಿದ್ದರು.

3 ಗಂಟೆ ʻಮಾಫಿ ಸಾಕ್ಷಿʼ ಪ್ರದೋಷ್ ಹೇಳಿಕೆ;‌ ಆತಂಕದಲ್ಲಿ ದರ್ಶನ್ ಗ್ಯಾಂಗ್

-

Avinash GR
Avinash GR Sep 28, 2026 8:22 PM

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಎ-14 ಆರೋಪಿ ಪ್ರದೋಷ್ ರಾವ್ ಸಾಕ್ಷ್ಯ ವಿಚಾರಣೆಯನ್ನು ಬೆಂಗಳೂರಿನ 59ನೇ ಸಿಸಿಹೆಚ್‌ ನ್ಯಾಯಾಲಯವು ಸೆಪ್ಟೆಂಬರ್ 29ಕ್ಕೆ ಮುಂದೂಡಿದೆ. ಇಂದು (ಸೆ.28) ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿದ್ದ ಪ್ರದೋಷ್, ನ್ಯಾಯಾಧೀಶರ ಎದುರು ಸತತ 3 ಗಂಟೆಗಳ ಕಾಲ ಸುದೀರ್ಘ ಹಾಗೂ ಸ್ಫೋಟಕ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಗೆ ಪುನಃ ಹೇಳಿಕೆ ದಾಖಲು

ಇಂದು ನಡೆದ ಕಲಾಪದಲ್ಲಿ ಪ್ರದೋಷ್ ನೀಡಿದ ಸುದೀರ್ಘ ಹೇಳಿಕೆಯ ಪ್ರಿಂಟ್ ಔಟ್ ತೆಗೆದು ಅವರ ಸಹಿ ಪಡೆಯುವ ಪ್ರಕ್ರಿಯೆ ಬಾಕಿ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಹಾಗೂ ಎಸ್‌ಪಿಪಿ ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಪ್ರದೋಷ್ ಅವರ ಪೂರ್ಣ ಹೇಳಿಕೆ ದಾಖಲಾತಿ ಮುಗಿಯದ ಕಾರಣ, ಸೆಪ್ಟೆಂಬರ್ 29ರ ಬೆಳಗ್ಗೆ 11 ಗಂಟೆಗೆ ಅವರನ್ನು ಮತ್ತೆ ಕೋರ್ಟ್‌ಗೆ ಹಾಜರುಪಡಿಸುವಂತೆ ಸೂಚಿಸಲಾಗಿದ್ದು, ವಿಚಾರಣೆ ಮುಗಿದ ಬೆನ್ನಲ್ಲೇ ಪೊಲೀಸರು ಪ್ರದೋಷ್‌ನನ್ನು ಬಿಗಿಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.

ನಟ ದರ್ಶನ್‌ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲ; ಕೋರ್ಟ್‌ನಲ್ಲಿ ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ದಾಖಲು ಪ್ರಕ್ರಿಯೆ ಆರಂಭ!

ಸುಪ್ರೀಂಗೆ ಅರ್ಜಿ ಹಾಕಿದ ದರ್ಶನ್‌ ಪರ ವಕೀಲರು

ಇನ್ನೊಂದೆಡೆ, ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ಎ-2 ಆರೋಪಿ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಸಿದ್ದಾರೆ. ವಿಚಾರಣಾ ನ್ಯಾಯಾಲಯದಲ್ಲಿ ತಮ್ಮ ಅರ್ಜಿ ಪುರಸ್ಕೃತವಾಗದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿರುವುದಾಗಿ ತಿಳಿಸಿದ ವಕೀಲರು, "ಸುಪ್ರೀಂ ಕೋರ್ಟ್‌ನಿಂದ ಆದೇಶ ಹೊರಬಿದ್ದರೆ ಅದು ಪ್ರಸ್ತುತ ವಿಚಾರಣಾ ಪ್ರಕ್ರಿಯೆಗಳ ಮೇಲೆ ನೇರ ಪ್ರಭಾವ ಬೀರಲಿದೆ. ದರ್ಶನ್ ಕೋರ್ಟ್‌ಗೆ ಹಾಜರಿದ್ದು ಪ್ರಶ್ನಿಸಲು ಹೈಕೋರ್ಟ್ ಅವಕಾಶ ಕಲ್ಪಿಸಿದೆ. ನಾಳೆ ಉಳಿದ ವಿಚಾರಣೆ ನಡೆಯಲಿದ್ದು, ಸುಪ್ರೀಂ ಕೋರ್ಟ್ ತೀರ್ಪು ನಮ್ಮ ಪರವಾಗಿ ಬಂದರೆ ಈ ಸಾಕ್ಷಿ ವಿಚಾರಣೆಯ ಮೌಲ್ಯವೇ ಬದಲಾಗಲಿದೆ" ಎಂದು ವಿವರಿಸಿದರು.

ಕಣ್ಣೀರಿಟ್ಟ ಪವಿತ್ರಾ ಗೌಡ

ಇನ್ನು, ಪ್ರದೋಷ್ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸುತ್ತಿದ್ದ ಸಂದರ್ಭದಲ್ಲಿ ಆರೋಪಿಗಳ ಮುಖದಲ್ಲಿ ಆತಂಕ ಮನೆಮಾಡಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ, ಪ್ರದೋಷ್ ಆಡುತ್ತಿದ್ದ ಮಾತುಗಳನ್ನು ಕೇಳಿ ನಿರಂತರವಾಗಿ ಕಣ್ಣೀರು ಸುರಿಸಿದರು ಎನ್ನಲಾಗಿದೆ.

ಮತ್ತೊಂದೆಡೆ, ಸಾಕ್ಷ್ಯ ನುಡಿಯುವ ಇಡೀ ಪ್ರಕ್ರಿಯೆಯನ್ನು ಗಂಭೀರವಾಗಿ ಆಲಿಸಿದ ನಟ ದರ್ಶನ್, ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದರು ಎಂದು ತಿಳಿದುಬಂದಿದೆ. ನಾಳೆ (ಸೆ.29) ನಡೆಯಲಿರುವ ಮುಂದಿನ ವಿಚಾರಣೆ ಹಾಗೂ ಸುಪ್ರೀಂ ಕೋರ್ಟ್‌ನ ನಡೆ ಇಡೀ ಪ್ರಕರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.