ʻನಾಕು ತಂತಿʼ ಸಿನಿಮಾಕ್ಕಾಗಿ ಒಂದಾದ 'ಬಿಗ್ ಬಾಸ್' ಸಂಗೀತಾ ಭಟ್, ಖುಷಿ ರವಿ, ರೋಶಿನಿ ಪ್ರಕಾಶ್, ಸಿಂಧು ಶ್ರೀನಿವಾಸಮೂರ್ತಿ
Naaku Tanti Movie: ʻನಾಕು ತಂತಿʼ ಸಿನಿಮಾ ಶೂಟಿಂಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಾದ ಸಂಗೀತಾ ಭಟ್, ಖುಷಿ ರವಿ, ರೋಷಿಣಿ ಪ್ರಕಾಶ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಲ್ವರು ನಿರ್ದೇಶಕರು ಈ ಸಿನಿಮಾವನ್ನು ನಿರ್ದೇಶಿಸಿರುವುದು ವಿಶೇಷ.
-
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾವಸ್ತು ಹಾಗೂ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಖ್ಯಾತ ನಟಿಯರಾದ ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಮತ್ತು ಸಿಂಧು ಶ್ರೀನಿವಾಸ ಮೂರ್ತಿ ಇದೇ ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಒಟ್ಟಾಗಿ ನಟಿಸಿರುವ ‘ನಾಕು ತಂತಿ’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸ್ಟ್ರಾಂಗ್ ಆಗಿರುವ ಮಹಿಳಾ ಪಾತ್ರಗಳನ್ನು ಒಳಗೊಂಡಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ.
ಈ ಸಿನಿಮಾಕ್ಕೆ ನಾಲ್ವರು ನಿರ್ದೇಶಕರು
‘ನಾಕು ತಂತಿ’ ಸಿನಿಮಾದ ಬಹುದೊಡ್ಡ ವಿಶೇಷತೆಯೆಂದರೆ, ನಾಲ್ವರು ವಿಭಿನ್ನ ನಿರ್ದೇಶಕರು ಒಂದಾಗಿ ಈ ಸಿನಿಮಾವನ್ನು ಕಟ್ಟಿಕೊಡುತ್ತಿರುವುದು. ಗೌತಮ್ ಅನ್ವಿತ್, ಮಹೇಶ್ ರಾಜ್, ಶಶಿಕುಮಾರ್ ವಿ ಹಾಗೂ ಪ್ರೀತಮ್ ಶಿವಕುಮಾರ್ ತಮ್ಮದೇ ಆದ ವೈಯಕ್ತಿಕ ಸೃಜನಶೀಲ ದೃಷ್ಟಿಕೋನ ಮತ್ತು ನಿರೂಪಣಾ ಶೈಲಿಯನ್ನು ಒಂದೇ ಕಥಾ ಪ್ರಪಂಚದಲ್ಲಿ ಬೆಸೆದು ಈ ಸಿನಿಮಾವನ್ನು ರೂಪಿಸಿದ್ದಾರೆ. ನಾಲ್ಕು ಪ್ರತ್ಯೇಕ ಸೃಜನಶೀಲ ಧ್ವನಿಗಳು ಒಂದೇ ಚಿತ್ರಕ್ಕಾಗಿ ಒಂದಾಗಿರುವುದು ಸ್ಯಾಂಡಲ್‌ವುಡ್‌ನಲ್ಲಿ ಅಪರೂಪದ ಪ್ರಯೋಗವಾಗಿದ್ದು, ಕಥೆಯ ಬಗ್ಗೆ ತೀವ್ರ ಕುತೂಹಲ ಕೆರಳಿಸಿದೆ.
ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಶ್ರೀಮುರಳಿ ನಟನೆಯ 'ಉಗ್ರಾಯುಧಮ್' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
ಈ ಚಿತ್ರದ ನಿರ್ಮಾಪಕರು ಯಾರು?
ಕಂಟೆಂಟ್ ಆಧಾರಿತ ಹೊಸ ಆಲೋಚನೆಗಳಿಗೆ ಸದಾ ಬೆಂಬಲ ನೀಡುವ ಜಯರಾಮ್ ದೇವಸಮುದ್ರ ಅವರ ಸಾರಥ್ಯದ ಪ್ರತಿಷ್ಠಿತ ‘ಸುರಂ ಮೂವೀಸ್’ ಬ್ಯಾನರ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದೆ. ಈ ಚಿತ್ರದ ಮೂಲಕ ಯೋಗೇಶ್ ಬಸವೇಗೌಡ ಅವರ ‘ಡಿಕೆಎಸ್ ಪ್ರೊಡಕ್ಷನ್ಸ್’ ಹಾಗೂ ನಂಬೂರು ಸಾಯಿ ಅವರ ‘ಸಾಯಿ ಬಿಂದು ಪ್ರೊಡಕ್ಷನ್’ ಸಂಸ್ಥೆಗಳು ಸಹ ನಿರ್ಮಾಣಕ್ಕೆ ಮೊದಲ ಬಾರಿಗೆ ಕೈಜೋಡಿಸಿವೆ.
ಈಗಾಗಲೇ ಸುರಂ ಮೂವೀಸ್ ಸಂಸ್ಥೆಯು ‘ನಿದ್ರಾದೇವಿ ನೆಕ್ಸ್ಟ್ ಡೋರ್’, ಚೈತ್ರಾ ಆಚಾರ್ ಅಭಿನಯದ ‘ಎಲ್‌ಎಸ್‌ಡಿ’, ‘ನೀ ನಂಗೆ ಅಲ್ಲವಾ’ ಹಾಗೂ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಿಗ್ ಬಜೆಟ್ ‘ಉಗ್ರಾಯುಧಂ’ ಚಿತ್ರಗಳನ್ನು ನಿರ್ಮಿಸುತ್ತಿದ್ದು, ‘ನಾಕು ತಂತಿ’ ಈ ಸಾಲಿಗೆ ಹೊಸ ಸೇರ್ಪಡೆಯಾಗಿದೆ.
ಸುಮೇಧ್ ಕೆ ಸಂಗೀತ ಸಂಯೋಜನೆ
ಈ ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ನಾಲ್ವರು ನಾಯಕಿಯರ ಪಾತ್ರ ವೈಶಿಷ್ಟ್ಯ. ಭಾವನಾತ್ಮಕ ಆಳ ಮತ್ತು ನೈಜ ಅಭಿನಯದ ಮೂಲಕ ಗಮನಸೆಳೆದಿರುವ ಖುಷಿ ರವಿ, ರೋಷಿಣಿ ಪ್ರಕಾಶ್, ಸಂಗೀತಾ ಭಟ್ ಹಾಗೂ ಸಿಂಧು ಶ್ರೀನಿವಾಸ ಮೂರ್ತಿ ಅವರಿಗೆ ತಮ್ಮ ನಟನೆಯ ಹೊಸ ಆಯಾಮವನ್ನು ಅನಾವರಣಗೊಳಿಸಲು ಈ ಕಥೆಯಲ್ಲಿ ಭರ್ಜರಿ ಅವಕಾಶ ಸಿಕ್ಕಿದೆಯಂತೆ.
ಈ ಚಿತ್ರಕ್ಕೆ ‘ಸು ಫ್ರಮ್ ಸೋ’ ಖ್ಯಾತಿಯ ಉದಯೋನ್ಮುಖ ಸಂಗೀತ ನಿರ್ದೇಶಕ ಸುಮೇಧ್ ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಸೊಗಡನ್ನು ಆಧುನಿಕ ಸೌಂಡಿಂಗ್‌ನೊಂದಿಗೆ ಬೆರೆಸಿರುವ ಸುಮೇಧ್, ಕಥೆಯ ಭಾವನಾತ್ಮಕ ಪಯಣಕ್ಕೆ ತಕ್ಕಂತೆ ಸಂಗೀತ ನೀಡಿದ್ದಾರೆ. ಶೀಘ್ರದಲ್ಲೇ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ರೆಡಿಯಾಗಿದ್ದೇವೆ ಎಂಬುದು ಚಿತ್ರತಂಡದ ಮಾತು.