Mudalgi News: ಸಕ್ಕರೆ ಕೆ.ಜಿ.ಗೆ ₹50ಕ್ಕಿಂತ ಕಡಿಮೆ ದರಕ್ಕೆ ಮಾರಾಟವಾಗದಂತೆ ಭರವಸೆ ನೀಡುವವರೆಗೆ ಗೋಡೌನ್ಗಳ ಬಾಗಿಲು ತೆರೆಯುವುದಿಲ್ಲ: ರೈತ ಮುಖಂಡರ ಎಚ್ಚರಿಕೆ
ಸಕ್ಕರೆಯ ಮಾರಾಟ ದರ ಕೆ.ಜಿ.ಗೆ ₹50ಕ್ಕಿಂತ ಕಡಿಮೆಯಾಗದಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಶೀಘ್ರವಾಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ ಸೂಕ್ತ ಭರವಸೆ ನೀಡಬೇಕು. ಅಂದಾಗ ಮಾತ್ರ ಗೋಡೌನ್ಗಳ ಬೀಗ ತೆರೆಯಲಾಗುವುದು ಎಂದು ಚೂನಪ್ಪ ಪೂಜಾರಿ ತಿಳಿಸಿದ್ದಾರೆ.
-
ಮೂಡಲಗಿ: ಕಬ್ಬು ಬೆಳೆಗಾರ(Sugarcane Grower)ರ ಹೋರಾಟದ ನಡುವೆಯೇ ರಾಜ್ಯದ ಸಕ್ಕರೆ ಕಾರ್ಖಾನೆಗಳ ಗೋಡೌನ್ಗಳಿಗೆ ಬೀಗ ಹಾಕುವಂತೆ ರೈತ ಮುಖಂಡ ಚೂನಪ್ಪ ಪೂಜಾರಿ ಅವರು ಕರ್ನಾಟಕದಾದ್ಯಂತ ರೈತ ಸಂಘದ ಮುಖಂಡರು ಹಾಗೂ ರೈತರಿಗೆ ಕರೆ ನೀಡಿದ್ದಾರೆ.
ಬುಧವಾರ ಬೆಳಿಗ್ಗೆ ಫೇಸ್ಬುಕ್ ಲೈವ್(Facebook Live) ಮೂಲಕ ಮಾತನಾಡಿದ ಅವರು, ಇಂದಿನಿಂದ ಯಾವುದೇ ಕಾರಣಕ್ಕೂ ಸಕ್ಕರೆ ಗೋಡೌನ್ಗಳಿಂದ ಸಕ್ಕರೆ ಹೊರಗೆ ಸಾಗಿಸಬಾರದು. ರಾಜ್ಯದ ಸಕ್ಕರೆ ಕಾರ್ಖಾನೆ(Sugar Factory) ಗಳ ಗೋಡೌನ್ಗಳಿಗೆ ಬೀಗ ಹಾಕುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ರೈತರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: SAP for Sugarcane: ಕಬ್ಬಿಗೆ ರಾಜ್ಯ ಸಲಹಾ ಬೆಲೆ ಜಾರಿಗೊಳಿಸಿ; ಸಿಎಂ ಡಿಕೆಶಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪತ್ರ
ಸಕ್ಕರೆಯ ಮಾರಾಟ ದರ ಕೆ.ಜಿ.ಗೆ ₹50ಕ್ಕಿಂತ ಕಡಿಮೆಯಾಗದಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ಅವರು ಶೀಘ್ರವಾಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ ಸೂಕ್ತ ಭರವಸೆ ನೀಡಬೇಕು. ಅಂದಾಗ ಮಾತ್ರ ಗೋಡೌನ್ಗಳ ಬೀಗ ತೆರೆಯಲಾಗುವುದು ಎಂದು ಚೂನಪ್ಪ ಪೂಜಾರಿ ತಿಳಿಸಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ಗೋಡೌನ್ಗಳಿಗೆ ಬೀಗ ಹಾಕುವಂತೆ ರೈತರಿಗೆ ಕರೆ ನೀಡಲಾಗಿದ್ದು, ಚೂನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆ 10 ಗಂಟೆಗೆ ಸಚಿವ ಸತೀಶ್ ಜಾರಕಿಹೊಳಿ ಅವರ ಒಡೆತನದ ಸತೀಶ್ ಶುಗರ್ಸ್ ಕಾರ್ಖಾನೆಯ ಸಕ್ಕರೆ ಗೋಡೌನ್ಗಳಿಗೆ ಬೀಗ ಹಾಕಲಾಗುವುದು ಎಂದು ಕರೆ ನೀಡಿದ್ದಾರೆ.
ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ನಡೆಯುತ್ತಿರುವ ರೈತರ ಹೋರಾಟದ ನಡುವೆ ಸಕ್ಕರೆ ಗೋಡೌನ್ಗಳಿಗೆ ಬೀಗ ಹಾಕುವ ಈ ಕರೆ ರಾಜ್ಯದ ಕಬ್ಬು ಬೆಳೆಗಾರರ ಹೋರಾಟಕ್ಕೆ ಮತ್ತಷ್ಟು ಮಹತ್ವ ತಂದಿದೆ. ಈ ಬೆಳವಣಿಗೆಯಿಂದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಹಾಗೂ ಸರ್ಕಾರದ ಮುಂದಿನ ನಡೆ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.