ವರ್ಲ್ಡ್ ವುಮನ್ ಕಾನ್ ಅಜೆಂಡಾ 2026ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ‘ಸೆಪ್ಟೆಂಬರ್ 21’ ಸಿನಿಮಾ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ
ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ 79ನೇ ಕಾನ್ ಚಿತ್ರೋತ್ಸವದ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಸಮ್ಮೇಳನಕ್ಕೆ ಆಹ್ವಾನ ಪಡೆಯುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಈ ವೇದಿಕೆಯಲ್ಲಿ ಅಧಿಕೃತವಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮೊದಲ ಮಹಿಳಾ ಸಿನಿಮಾ ನಿರ್ದೇಶಕಿ ಇವರಾಗಿದ್ದಾರೆ.
-
ಜಾಗತಿಕ ಸಿನಿಮಾ ರಂಗದ ಅತ್ಯಂತ ಪ್ರತಿಷ್ಠಿತ ವೇದಿಕೆ ಎಂದೇ ಪರಿಗಣಿಸಲ್ಪಡುವ ‘ಕಾನ್ ಚಿತ್ರೋತ್ಸವ’ದಲ್ಲಿ (Cannes Film Festival) ಈ ಬಾರಿ ಕನ್ನಡದ ಬಾವುಟ ಹಾರಾಡಲಿದೆ. ಸ್ಯಾಂಡಲ್‌ವುಡ್‌ನ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರು 79ನೇ ಕಾನ್ ಚಿತ್ರೋತ್ಸವದ ಅಂಗವಾಗಿ ಫ್ರಾನ್ಸ್‌ನಲ್ಲಿ ನಡೆಯಲಿರುವ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ (World Woman Cannes Agenda 2026) ಕಾರ್ಯಕ್ರಮಕ್ಕೆ ಆಹ್ವಾನ ಪಡೆದುಕೊಂಡಿದ್ದಾರೆ. ಆ ಮೂಲಕ ಕರ್ನಾಟಕಕ್ಕೆ ಅಂತರರಾಷ್ಟ್ರೀಯ ಗರಿ ತಂದಿದ್ದಾರೆ.
ರಾಜ್ಯದ ಮೊದಲ ಮಹಿಳಾ ನಿರ್ದೇಶಕಿ
ಮೇ 12ರಿಂದ 15ರವರೆಗೆ ನಡೆಯಲಿರುವ ಈ ಜಾಗತಿಕ ಸಮ್ಮೇಳನದಲ್ಲಿ ಭಾಷಣ ಮಾಡಲಿರುವ ಕರೆನ್, ಕಾನ್ ವೇದಿಕೆಯಲ್ಲಿ ಕರ್ನಾಟಕವನ್ನು ಅಧಿಕೃತವಾಗಿ ಪ್ರತಿನಿಧಿಸಲಿರುವ ರಾಜ್ಯದ ಮೊದಲ ಮಹಿಳಾ ನಿರ್ದೇಶಕಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವರ್ಲ್ಡ್ ವುಮನ್ ಫೌಂಡೇಶನ್ ಆಯೋಜಿಸಿರುವ ಈ ವೇದಿಕೆಯು ಈ ಬಾರಿ ʻಕೃತಕ ಬುದ್ಧಿಮತ್ತೆ, ಕಲಾತ್ಮಕತೆ ಮತ್ತು ಸಕ್ರಿಯತೆʼ (AI, Artistry & Activism) ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದು, ಜಗತ್ತಿನ ಪ್ರಭಾವಿ ಮಹಿಳಾ ಸಾಧಕರು ಇಲ್ಲಿ ಭಾಗವಹಿಸಲಿದ್ದಾರೆ.
ಸಿನಿಮಾದ ಮೇಲೆ ಎಐ ಪ್ರಭಾವ
ಪ್ರಿಯಾಂಕಾ ಉಪೇಂದ್ರ ಅಭಿನಯದ ‘ಸೆಪ್ಟೆಂಬರ್ 21’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಕರೆನ್, ಕಾನ್ ವೇದಿಕೆಯಲ್ಲಿ ಕೃತಕ ಬುದ್ಧಿಮತ್ತೆ (AI) ಸಿನಿಮಾದ ಮೇಲೆ ಬೀರುತ್ತಿರುವ ಪ್ರಭಾವ ಮತ್ತು ಕರ್ನಾಟಕದ ಸ್ವತಂತ್ರ ಸಿನಿಮಾ (Independent Cinema) ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಲಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ, ಬದಲಿಗೆ ಕನ್ನಡದ ಪ್ರತಿಭೆಯನ್ನು ವಿಶ್ವ ಭೂಪಟದಲ್ಲಿ ಪರಿಚಯಿಸುವ ಸುವರ್ಣಾವಕಾಶವಾಗಿದೆ ಎಂಬ ಮಾತುಗಳು ಕರೆನ್ ಬಗ್ಗೆ ಕೇಳಿಬಂದಿವೆ.
ಕರೆನ್ ಕ್ಷಿತಿ ಸುವರ್ಣ ಏನಂದ್ರು?
ತಮ್ಮ ಈ ಸಾಧನೆಯ ಬಗ್ಗೆ ಮಾತನಾಡಿದ ಕರೆನ್ ಕ್ಷಿತಿ ಸುವರ್ಣ, "ಕರ್ನಾಟಕದ ಮಣ್ಣಿನಿಂದ ಕಾನ್‌ನ ಕೆಂಪು ಕಾರ್ಪೆಟ್‌ವರೆಗೆ ಸಾಗಿರುವ ಈ ಪಯಣ ನನ್ನೊಬ್ಬಳದ್ದಲ್ಲ. ಇದು ಕನ್ನಡ ಸಿನಿಮಾ ಮತ್ತು ನಮ್ಮ ರಾಜ್ಯದ ಪ್ರತಿಯೊಬ್ಬ ಯುವ ಕಲಾವಿದೆಯ ಕನಸಿನ ಪ್ರತೀಕ. ಈ ಜಾಗತಿಕ ವೇದಿಕೆ ಕಲ್ಪಿಸಿದ ವರ್ಲ್ಡ್ ವುಮನ್ ಫೌಂಡೇಶನ್‌ಗೆ ನಾನು ಋಣಿಯಾಗಿದ್ದೇನೆ" ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
ʻಸೆಪ್ಟೆಂಬರ್ 21ʼ ಸಿನಿಮಾ ಬಗ್ಗೆ..
ಪ್ರಿಯಾಂಕಾ ಉಪೇಂದ್ರ ಪ್ರಧಾನ ಪಾತ್ರದಲ್ಲಿರುವ ʻಸೆಪ್ಟೆಂಬರ್ 21ʼ ಸಿನಿಮಾವು ಆಲ್ಝೈಮರ್ಸ್ ದಿನ' (Alzheimer) ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ. ಮರೆವಿನ ಕಾಯಿಲೆ ಅಥವಾ ಆಲ್ಝೈಮರ್ಸ್‌ನಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು ಅವರ ಕುಟುಂಬದವರು ಅನುಭವಿಸುವ ಮಾನಸಿಕ ಹಾಗೂ ಸಾಮಾಜಿಕ ಸಂಘರ್ಷಗಳನ್ನು ಈ ಚಿತ್ರದಲ್ಲಿ ಬಹಳ ಸೂಕ್ಷ್ಮವಾಗಿ ಚಿತ್ರಿಸಲಾಗಿದೆಯಂತೆ. ಅತೀ ಶೀಘ್ರದಲ್ಲಿ ಈ ಸಿನಿಮಾವು ತೆರೆಗೆ ಬರಲಿದೆ.