Bhagya Lakshmi Serial: ಪತಿಯ ಆಫೀಸ್ನಲ್ಲಿ ಭಾಗ್ಯಾಳ ಹವಾ: ತಾಂಡವ್-ಶ್ರೇಷ್ಠಾಳನ್ನು ಕೆಲಸದಿಂದ ಕಿತ್ತೆಸೆದ ಬಾಸ್
ಭಾಗ್ಯಲಕ್ಷ್ಮೀ ಧಾರಾವಾಹಿಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ತಾಂಡವ್-ಶ್ರೇಷ್ಠಾ ಇನ್ನಾದರೂ ಬದಲಾಗಿ ಬಾಸ್ ಹಾಗೂ ಭಾಗ್ಯ ಬಳಿ ಕ್ಷಮೆ ಕೇಳಿ ಮತ್ತೆ ಆಫೀಸ್ಗೆ ಸೇರುತ್ತಾರ ಅಥವಾ ಈ ಆಫೀಸ್ ಬೇಡ ಎಂದು ಮತ್ತೆ ಭಾಗ್ಯಾಳನ್ನು ಸೋಲಿಸಲು ಪ್ಲ್ಯಾನ್ ಮಾಡುತ್ತಾರ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿ ಕಳೆದ ಒಂದು ವಾರದಿಂದ ರೋಚಕತೆ ಸೃಷ್ಟಿಸಿದೆ. ಭಾಗ್ಯಾ ತನ್ನ ವಿರುದ್ಧ ನಿಂತವರ ವಿರುದ್ಧ ಸೇಡಿ ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಇದಕ್ಕೆ ಭಾಗ್ಯಾಳ ಅತ್ತೆ ಕುಸುಮಾ ಕೂಡ ಕೈಜೋಡಿಸಿದ್ದಾರೆ. ತನಗೆ ಕೆಡುಕು ಬಯಸಲು ಬಂದವರಿಗೆ ಸರಿಯಾಗಿ ತಿರುಗೇಟು ಕೊಡಲು ಮುಂದಾಗಿದ್ದಾಳೆ ಭಾಗ್ಯ. ತಾಂಡವ್ ಹಾಗೂ ಶ್ರೇಷ್ಠಾ, ಕನ್ನಿಕಾ ಜೊತೆ ಸೇರಿ ಭಾಗ್ಯಾಳನ್ನು ಸೋಲಿಸಲು ನಾನಾ ಪ್ರಯುತ್ನ ಮಾಡಿದರೂ ಯಾವುದೂ ಯಶಸ್ಸು ಕಂಡಿಲ್ಲ.
ತನಗೆ ಬಂದ ಕಷ್ಟಗಳನ್ನೆಲ್ಲ ಭಾಗ್ಯ ಧೈರ್ಯದಿಂದ ಎದುರಿಸಿ ಗೆಲುವು ಕಂಡಿದ್ದಾಳೆ. ಇದೀಗ ತಾಂಡವ್ ಆಫೀಸ್ಗೆ ಹೋಗಿ ಕ್ಯಾಂಟೀನ್ ಶುರು ಮಾಡಿರುವುದಲ್ಲದೆ, ತಾಂಡವ್-ಶ್ರೇಷ್ಠಾ ಇಬ್ಬರನ್ನೂ ಕೆಲಸದಿಂದ ತೆಗೆಯುವಂತೆ ಮಾಡಿದ್ದಾಳೆ. ಹೌದು, ಭಾಗ್ಯ ತನ್ನ ಮಾಜಿ ಪತಿ ಆಫೀಸ್ನಲ್ಲೇ ಅದ್ಧೂರಿಯಾಗಿ ಕ್ಯಾಂಟೀನ್ ಶುರು ಮಾಡಿದ್ದಾಳೆ. ತಾಂಡವ್ ಆಫೀಸ್ನಲ್ಲೇ ಕೈ ತುತ್ತು ಬ್ಯುಸಿನೆಸ್ ದೊಡ್ಡದಾಗಿ ಶುರುಮಾಡಿದ್ದಾಳೆ.
ತಾಂಡವ್ನ ಬಾಸ್ ಬಂದು ಭಾಗ್ಯಾಳನ್ನು ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿ ಇವತ್ತಿಂದ ನಮ್ಮ ಕ್ಯಾಂಟೀನ್ನ ಎಲ್ಲ ಜವಾಬ್ದಾರಿ ಭಾಗ್ಯ ಮತ್ತು ತಂಡ ವಹಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಕಂಪನಿಯ ಬಾಸ್ ಮತ್ತು ಅವರ ಹೆಂಡತಿ ಮನಸಾರೆ ಭಾಗ್ಯಳನ್ನು ಹೊಗಳಿದ್ದಾರೆ. ಅಲ್ಲದೆ, ಉದ್ಯೋಗಿಗಳು ಕೂಡ ಭಾಗ್ಯ ಕ್ಯಾಂಟೀನ್ ತೆರೆದಿರುವುದನ್ನು ಕಂಡು ಸಂಭ್ರಮಿಸಿದ್ದಾರೆ. ಇದನ್ನ ಕೇಳಿ ತಾಂಡವ್-ಶ್ರೇಷ್ಠಾಗೆ ಶಾಕ್ ಆಗುತ್ತದೆ. ಇದರ ಜೊತೆಗೆ ಮತ್ತೊಂದು ಶಾಕ್ ಕೂಡ ಇವರಿಬ್ಬರಿಗೆ ಬಂದೊದಗಿದೆ.
ಹೊಸ ಕ್ಯಾಂಟೀನ್ ಓಪನ್ ಮಾಡಿರುವ ಖುಷಿಯಲ್ಲಿ ಭಾಗ್ಯ ಎಲ್ಲರಿಗೂ ಸ್ವೀಟ್ ಕೊಡಲು ಹೋಗಿದ್ದಾಳೆ. ಆದರೆ ತಾಂಡವ್ ಅವಳು ಕೊಟ್ಟ ಸ್ವೀಟ್ ಅನ್ನು ದೂರಕ್ಕೆ ಎಸೆದಿದ್ದಾನೆ. ನಂತರ ಅವಳಿಗೆ ಎಲ್ಲರ ಮುಂದೆಯೇ ಬೈದು ಅವಮಾನ ಮಾಡಿದ್ದಾನೆ. ಇದಕ್ಕೆ ಶ್ರೇಷ್ಠಾ ಕೂಡ ಕೈಜೋಡಿಸಿದ್ದಾಳೆ. ನಾನು ಈ ಕಂಪನಿಯ ಮ್ಯಾನೇಜರ್, ನಿನ್ನನ್ನು ಏನು ಮಾಡಬೇಕು ಎಂದು ನನಗೆ ತಿಳಿದಿದೆ ಎಂದು ಧಮ್ಕಿ ಹಾಕುತ್ತಾನೆ. ಇದಾಗಿ ಕೆಲವೇ ಸಮಯದಲ್ಲಿ ತಾಂಡವ್-ಶ್ರೇಷ್ಠಾಗೆ ಆಫೀಸ್ನಿಂದ ಗೇಟ್ ಪಾಸ್ ಕೊಡಲಾಗಿದೆ.
ತಾಂಡವ್ ಮತ್ತು ಶ್ರೇಷ್ಠಾಳನ್ನು ಬಾಸ್ ಮತ್ತೆ ಕ್ಯಾಂಟೀನ್‌ಗೆ ಬರುವಂತೆ ಹೇಳಿದ್ದಾರೆ. ಅಲ್ಲಿ ಭಾಗ್ಯ ಟೀಮ್ ಕೂಡ ಹಾಗೂ ಎಲ್ಲ ಆಫೀಸ್ ಸಿಬ್ಬಂದಿಗಳು ಕೂಡ ಇರುತ್ತಾರೆ. ಬಾಸ್ ಹೆಂಡತಿ ತಾಂಡವ್ ಮತ್ತು ಶ್ರೇಷ್ಠಾಳ ಕೈಗೆ ಕವರ್ ಒಂದನ್ನು ನೀಡುತ್ತಾರೆ. ಭಾಗ್ಯಳಿಗೆ ಕಿರುಕುಳ ಕೊಟ್ಟಿರುವುದಕ್ಕೆ ಇದು ನಿಮಗೆ ಉಡುಗೊರೆ ಎಂದು ಹೇಳುತ್ತಾರೆ. ಇಬ್ಬರೂ ಕವರ್ ತೆಗೆದು ನೋಡಿದಾಗ ಅದರಲ್ಲಿ ಕೆಲಸದಿಂದ ತೆಗೆದುಹಾಕಿರುವ ಟರ್ಮಿನೇಶನ್ ಲೆಟರ್ ಇರುತ್ತದೆ. ಇದನ್ನು ನೋಡಿ ಇಬ್ಬರೂ ಬೆಚ್ಚಿಬೀಳುತ್ತಾರೆ.
ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಸಿಕ್ಕಿದೆ. ತಾಂಡವ್-ಶ್ರೇಷ್ಠಾ ಇನ್ನಾದರೂ ಬದಲಾಗಿ ಬಾಸ್ ಹಾಗೂ ಭಾಗ್ಯ ಬಳಿ ಕ್ಷಮೆ ಕೇಳಿ ಮತ್ತೆ ಆಫೀಸ್ಗೆ ಸೇರುತ್ತಾರ ಅಥವಾ ಈ ಆಫೀಸ್ ಬೇಡ ಎಂದು ಮತ್ತೆ ಭಾಗ್ಯಾಳನ್ನು ಸೋಲಿಸಲು ಪ್ಲ್ಯಾನ್ ಮಾಡುತ್ತಾರ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.