ಅನಂತ್ ಅಂಬಾನಿ ಜೊತೆಗಿನ ವೈರಲ್ ವಿಡಿಯೋ ವಿವಾದ; ಇನ್‌ಫ್ಲುಯೆನ್ಸರ್‌ಗೆ ಮಾನನಷ್ಟ ನೋಟಿಸ್ ಕಳುಹಿಸಿದ ಶಾರುಖ್ ಖಾನ್
ಅನಂತ್ ಅಂಬಾನಿ ಮತ್ತು ಸದ್ಗುರು ಭೇಟಿಯ ಸಂದರ್ಭದ ತಿರುಚಿದ ವಿಡಿಯೋ ಹಂಚಿಕೊಂಡ ಇನ್‌ಫ್ಲುಯೆನ್ಸರ್ ಸುವಿಗ್ಯಾ ಶರ್ಮಾ ವಿರುದ್ಧ ಶಾರುಖ್ ಖಾನ್ ಮಾನನಷ್ಟ ನೋಟಿಸ್ ಜಾರಿಗೊಳಿಸಿದ್ದಾರೆ. ಸಂವಾದದಲ್ಲಿ ಶಾರುಖ್‌ಗೆ ಸುಮ್ಮನಿರುವಂತೆ ಅನಂತ್ ಸೂಚಿಸಿದ್ದರು ಎಂಬ ಸುಳ್ಳು ಮಾಹಿತಿ ಹರಡಿದ್ದಕ್ಕಾಗಿ ಈ ನೋಟಿಸ್ ನೀಡಲಾಗಿದೆ.
-
ಆಧ್ಯಾತ್ಮಿಕ ಗುರು ಸದ್ಗುರು ಅವರೊಂದಿಗಿನ ಭೇಟಿಯ ವೇಳೆ ನಟ ಶಾರುಖ್ ಖಾನ್ ಮತ್ತು ಉದ್ಯಮಿ ಅನಂತ್ ಅಂಬಾನಿ ನಡುವೆ ನಡೆದ ಮಾತುಕತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿವಾದಾತ್ಮಕ ವಿಡಿಯೋಗೆ ಸಂಬಂಧಿಸಿದಂತೆ, ಶಾರುಖ್ ಖಾನ್ ಅವರು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ.
ಸಂವಾದದ ಸಂದರ್ಭದಲ್ಲಿ ಶಾರುಖ್ ಖಾನ್ ಅವರಿಗೆ "ಸುಮ್ಮನಿರುವಂತೆ" ಅನಂತ್ ಸೂಚಿಸಿದ್ದರು ಎಂದು ಸುಳ್ಳು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹರಡಿದ್ದಕ್ಕಾಗಿ ಸುವಿಗ್ಯಾ ಶರ್ಮಾ ಎಂಬ ಕಂಟೆಂಟ್ ಕ್ರಿಯೇಟರ್ ವಿರುದ್ಧ ಶಾರುಖ್ ಕಾನೂನು ತಂಡ ಈ ಕ್ರಮ ಕೈಗೊಂಡಿದೆ.
ಶಾರುಖ್ ಲೀಗಲ್ ಟೀಮ್ ಹೇಳಿದ್ದೇನು?
ವಿವಾದಕ್ಕೆ ಕಾರಣವಾಗಿರುವ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಅನಂತ್ ಅಂಬಾನಿ ಅವರು ಸದ್ಗುರು ಅವರೊಂದಿಗೆ ಮಾತನಾಡುತ್ತಿರುವ ದೃಶ್ಯ ಹಾಗೂ ಶಾರುಖ್ ಖಾನ್ ಮತ್ತು ಅನಂತ್ ಅಂಬಾನಿ ಸಂವಾದ ನಡೆಸುತ್ತಿರುವ ಪ್ರತ್ಯೇಕ ತುಣುಕುಗಳನ್ನು ಬಳಸಿಕೊಳ್ಳಲಾಗಿತ್ತು. ಸುವಿಗ್ಯಾ ಶರ್ಮಾ ಪೋಸ್ಟ್ ಮಾಡಿದ್ದ ಈ ವಿಡಿಯೋದಲ್ಲಿ, ಮಾತುಕತೆಯ ವೇಳೆ ಶಾರುಖ್ ಅವರಿಗೆ ಸುಮ್ಮನಿರುವಂತೆ ಸೂಚಿಸಲಾಗಿತ್ತು ಎಂದು ಹೇಳಲಾಗಿತ್ತು. ಈ ಆರೋಪಗಳನ್ನು ಸಂಪೂರ್ಣ ಆಧಾರರಹಿತ, ಸುಳ್ಳು ಮತ್ತು ಮಾನಹಾನಿಕರ ಎಂದು ಶಾರುಖ್ ಖಾನ್ ಅವರ ಕಾನೂನು ತಂಡ ತಳ್ಳಿಹಾಕಿದೆ.
ಯಾವ್ಯಾವ ಸೆಕ್ಷನ್‌ಗಳಡಿ ನೋಟಿಸ್ ನೀಡಲಾಗಿದೆ?
ನವೆಂಬರ್ 23ರಂದು ಕಳುಹಿಸಲಾದ ಈ ಕಾನೂನು ನೋಟಿಸ್‌ನಲ್ಲಿ, ವಿವಾದಿತ ಕಂಟೆಂಟ್ ಅನ್ನು "ದುರುದ್ದೇಶಪೂರಿತ, ದಾರಿತಪ್ಪಿಸುವ ಮತ್ತು ಮಾನಹಾನಿಕರ" ಎಂದು ಉಲ್ಲೇಖಿಸಲಾಗಿದೆ. ಸಂವಾದದ ನೈಜ ಸಂದರ್ಭವನ್ನು ತಿರುಚಲು ಹಾಗೂ ನಟನ ಸಾರ್ವಜನಿಕ ವರ್ಚಸ್ಸು ಮತ್ತು ಗೌರವಕ್ಕೆ ಉದ್ದೇಶಪೂರ್ವಕವಾಗಿ ಧಕ್ಕೆ ತರಲು ಈ ರೀತಿಯ ಕ್ಯಾಪ್ಶನ್ ನೀಡಿ ವಿಡಿಯೋ ವೈರಲ್ ಮಾಡಲಾಗಿದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 356 ಅನ್ನು ಉಲ್ಲೇಖಿಸಿರುವ ವಕೀಲರ ತಂಡ, ಯಾವುದೇ ದೃಢೀಕೃತ ಸಾಕ್ಷ್ಯಾಧಾರಗಳಿಲ್ಲದೆ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಮತ್ತು ಹಾನಿಕಾರಕ ಹೇಳಿಕೆಗಳನ್ನು ಪ್ರಸಾರ ಮಾಡುವುದು ಕಾನೂನುಬಾಹಿರ ಎಂದು ಎಚ್ಚರಿಸಿದೆ.
ಇನ್‌ಫ್ಲುಯೆನ್ಸರ್‌ಗೆ 5 ಕಂಡೀಷನ್
ನೋಟಿಸ್ ತಲುಪಿದ 48 ಗಂಟೆಗಳ ಒಳಗಾಗಿ 5 ಪ್ರಮುಖ ಷರತ್ತುಗಳನ್ನು ಫಾಲೋ ಮಾಡುವಂತೆ ಶರ್ಮಾ ಅವರಿಗೆ ಸೂಚಿಸಲಾಗಿದೆ. ವಿವಾದಿತ ಇನ್‌ಸ್ಟಾಗ್ರಾಮ್ ರೀಲ್ ಅನ್ನು ತಕ್ಷಣವೇ ಡಿಲೀಟ್ ಮಾಡುವುದು, ಈ ಸುಳ್ಳು ಮಾಹಿತಿಯನ್ನು ಮತ್ತೆ ಪ್ರಸಾರ ಮಾಡುವುದನ್ನು ನಿಲ್ಲಿಸುವುದು ಮತ್ತು ವಿಡಿಯೋಗೆ ಸಂಬಂಧಿಸಿದ ಕ್ಯಾಪ್ಶನ್ ಹಾಗೂ ಹೇಳಿಕೆಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಲಾಗಿದೆ.
ಇದರೊಂದಿಗೆ, ಮೂಲ ವಿಡಿಯೋ ತುಣುಕು ಮತ್ತು ಆ ಕಂಟೆಂಟ್ ಪ್ರಕಟಣೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿಡುವಂತೆಯೂ ಹಾಗೂ ಕೈಗೊಂಡ ಕ್ರಮಗಳ ಕುರಿತು 48 ಗಂಟೆಗಳ ಒಳಗೆ ಲಿಖಿತ ದೃಢೀಕರಣ ನೀಡುವಂತೆಯೂ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ತಿರುಗಿಬಿದ್ದ ಇನ್‌ಫ್ಲುಯೆನ್ಸರ್
ಮತ್ತೊಂದೆಡೆ, ಕಾನೂನು ನೋಟಿಸ್ ಸ್ವೀಕರಿಸಿದ ಬೆನ್ನಲ್ಲೇ ಕಂಟೆಂಟ್ ಕ್ರಿಯೇಟರ್ ಸುವಿಗ್ಯಾ ಶರ್ಮಾ ಶಾರುಖ್ ಖಾನ್ ವಿರುದ್ಧವೇ ತಿರುಗಿಬಿದ್ದಿದ್ದು, ವೈರಲ್ ವಿಡಿಯೋಗೆ ಶಾರುಖ್ ಆಕ್ಷೇಪ ವ್ಯಕ್ತಪಡಿಸಿರುವುದನ್ನು ಪ್ರಶ್ನಿಸಿದ್ದಾರೆ. ತಮ್ಮ ಹೇಳಿಕೆಗಳು ವಾಕ್ ಸ್ವಾತಂತ್ರ್ಯದ ಅಡಿಯಲ್ಲಿ ಬರುವ ಟೀಕೆಗಳಾಗಿವೆ ಎಂದು ವಾದಿಸಿರುವ ಅವರು ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. "ಹಾಗಾದರೆ, ಶಾರುಖ್ ಖಾನ್ ಅವರಿಗೆ ಬಾಯಿ ಮುಚ್ಚುವಂತೆ ಹೇಳಿದ ವ್ಯಕ್ತಿ ಅವರಿಗೆ ಅವಮಾನ ಮಾಡಿಲ್ಲವೇ? ಅಥವಾ ತನಗೆ ಅವಮಾನವಾಗಿದೆ ಎಂದು ಹೇಳುವ ಧೈರ್ಯ ಶಾರುಖ್ ಖಾನ್ ಅವರಿಗೆ ಇಲ್ಲವೇ? ಆದರೆ ಮೇಲ್ನೋಟಕ್ಕೆ ನಾವೇ ಅವರಿಗೆ ಅವಮಾನ ಮಾಡಿದ್ದೇವೆ ಎನ್ನಲಾಗುತ್ತಿದೆ" ಎಂದು ಅವರು ತಮ್ಮ ಎರಡನೇ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.