ʻಕನಸು ಕಾಣಲು ಎಲ್ಲರಿಗೂ ಹಕ್ಕಿದೆ...ʼ; ಸುದೀಪ್ ಎದುರಲ್ಲೇ ನೆಪೋಟಿಸಂ ಕುರಿತ ಚರ್ಚೆಗೆ ಶಿವರಾಜ್‌ಕುಮಾರ್ ಖಡಕ್ ರಿಯಾಕ್ಷನ್!
ನಟ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಪ್ರದರ್ಶನಕ್ಕೆ ಬಂದಿದ್ದ ಶಿವರಾಜ್‌ಕುಮಾರ್, ಇತ್ತೀಚೆಗೆ ಕೇಳಿಬಂದ ನೆಪೋಟಿಸಂ ಪ್ರಶ್ನೆಗೆ ಮಾಧ್ಯಮಗಳ ಎದುರು ತೀವ್ರ ಬೇಸರ ಹೊರಹಾಕಿದ್ದಾರೆ. ಚಿತ್ರರಂಗದಲ್ಲಿ ಪ್ರತಿಯೊಬ್ಬ ಮಗುವಿಗೂ ಕನಸು ಕಾಣುವ ಹಕ್ಕಿದೆ ಎಂದು ಶಿವಣ್ಣ ಹೇಳಿದ್ದಾರೆ.
-
‘ಕಿಚ್ಚ’ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರ ‘ಮ್ಯಾಂಗೋ ಪಚ್ಚ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ 'ನೆಪೋಟಿಸಂ' ಕುರಿತ ಚರ್ಚೆ ಈಚೆಗೆ ಶುರುವಾಗಿತ್ತು. ನೆಪೋಟಿಸಂ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ, "ದೊಡ್ಮನೆಯಿಂದಲೇ ಇದು ಆರಂಭವಾಯಿತಲ್ಲ? ಶಿವಣ್ಣ ಅವರಿಗೆ ಎಂದಾದರೂ ಈ ಪ್ರಶ್ನೆ ಕೇಳಿದ್ದೀರಾ?" ಎಂದು ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದರು. ಇದೀಗ ಆ ಬಗ್ಗೆ ನಟ ಶಿವರಾಜ್‌ಕುಮಾರ್ ಅವರೇ ಮಾತಾಡಿದ್ದಾರೆ.
ಸಿನಿಮಾ ನೋಡಲು ಬಂದಿದ್ದ ಶಿವಣ್ಣ
ಭಾನುವಾರ (ಜೂ. 7) ಮ್ಯಾಂಗೋ ಪಚ್ಚ ಸಿನಿಮಾವನ್ನು ನೋಡಲು ಶಿವರಾಜ್‌ಕುಮಾರ್ ಆಗಮಿಸಿದ್ದರು. ಸುದೀಪ್, ಸಂಚಿತ್ ಸೇರಿದಂತೆ ಚಿತ್ರತಂಡದ ಸದಸ್ಯರು ಸಾಥ್ ನೀಡಿದ್ದರು. ಈ ವೇಳೆ ಶಿವಣ್ಣನಿಗೂ ನೆಪೋಟಿಸಂ ಕುರಿತ ಪ್ರಶ್ನೆ ಕೇಳಲಾಯಿತು. ''ನೆಪೋಟಿಸಂ ಕುರಿತ ಪ್ರಶ್ನೆಯನ್ನು ಶಿವಣ್ಣನಿಗೆ ಯಾಕೆ ಕೇಳಿಲ್ಲ ಎಂದು ಸುದೀಪ್ ಹೇಳಿದ್ದಾರೆ..'' ಅಂತ ಮಾಧ್ಯಮದ ಪ್ರತಿನಿಧಿಯೊಬ್ಬರು ಕೇಳಿದರು. ತಕ್ಷಣವೇ ಪ್ರತಿಕ್ರಿಯಸಿದ ಶಿವಣ್ಣ, "ನೀವು ಆ ಪ್ರಶ್ನೆಯನ್ನು ಯಾಕೆ ಕೇಳಿದ್ರಿ? ನಾನು ಆ ವಿಡಿಯೋ ನೋಡಿದ್ದೇನೆ. ಆದರೆ ನೀವು ಆ ಪ್ರಶ್ನೆಯನ್ನು ಏಕೆ ಕೇಳುತ್ತಿದ್ದೀರಿ? ಅದು ಕೇಳಬೇಕಾದ ಪ್ರಶ್ನೆಯೇ ಅಲ್ಲ.." ಎಂದು ಸುದೀಪ್ ಎದುರಲ್ಲೇ ಬೇಸರ ಹೊರಹಾಕಿದರು.
Kiccha Sudeepa: ಸಮಾಜಸೇವೆಗೆ ಟೊಂಕ ಕಟ್ಟಿ ನಿಂತ ಕಿಚ್ಚ ಸುದೀಪ್ ಕೇರ್ ಫೌಂಡೇಶನ್; ಲೋಗೋ ಲಾಂಚ್ ಮಾಡಿದ ಜೂ.ಕಿಚ್ಚ
ಕನಸು ಕಾಣಲು ಎಲ್ಲರಿಗೂ ಹಕ್ಕಿದೆ
"ಚಿತ್ರರಂಗದಲ್ಲಿ ಕೇವಲ ಇವರ ಮಕ್ಕಳು ಅಥವಾ ಅವರ ಮಕ್ಕಳೇ ಬಂದು ಕನಸು ಕಾಣಬೇಕು ಎಂದೇನೂ ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ, ಪ್ರತಿಯೊಬ್ಬ ಮಗುವಿಗೂ ಕನಸು ಕಾಣುವ ಹಕ್ಕಿದೆ. ಚಿತ್ರರಂಗಕ್ಕೆ ಯಾರ ಮಕ್ಕಳು ಬೇಕಾದರೂ ಬರಬಹುದು, ನೀವು ಕೂಡ ಬರಬಹುದು. ಎಲ್ಲರಿಗೂ ಇಲ್ಲಿ ಅವಕಾಶವಿದೆ" ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.
ನೆಪೋಟಿಸಂ ಕುರಿತ ಚರ್ಚೆಗೆ ಶಿವಣ್ಣ ಪ್ರತಿಕ್ರಿಯೆ
@NimmaShivanna nepotism controversy 🏌️💥#Shivanna #Shivarajkumar #KingShivanna #DrShivarajkumar #DrShivarajkumarUpdates pic.twitter.com/mv3tmFdYjY
— Dr Shivarajkumar updates ™ (@shivannaupdates) June 7, 2026
ಸ್ಪಷ್ಟನೆ ನೀಡಿದ್ದ ಸುದೀಪ್
ಇದಕ್ಕೂ ಮುನ್ನ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಟೀಕೆ ಮಾಡಲಾಗುತ್ತಿದೆ ಎಂಬುದನ್ನು ಅರಿತ ನಟ ಸುದೀಪ್ ಅವರು ಆ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದರು. "ಶಿವಣ್ಣ ಮತ್ತು ಅಪ್ಪು ನಾಡಿನ ಅತ್ಯುತ್ತಮ ಪ್ರತಿಭೆಗಳು. ಎಷ್ಟೋ ಜನ ಅವರನ್ನು ನೋಡಿ ಸ್ಪೂರ್ತಿ ಪಡೆದಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಜನ ಸುಮ್ಮನೆ ಅಭಿಮಾನಿಗಳಾಗಿಬಿಡುತ್ತಾರಾ? ನೆಪೋಟಿಸಂ ಮಾತ್ರವೇ ಸತ್ಯ ಆಗಿದ್ದಲ್ಲಿ, ಎಲ್ಲ ಸ್ಟಾರ್ ನಟರ ಮಕ್ಕಳೂ ಸ್ಟಾರ್ಗಳಾಗಿಬಿಡಬೇಕಿತ್ತು ಅಲ್ಲವೇ? ರಾಜ್ಕುಮಾರ್ ಅವರ ಕಾಲದಿಂದಲೂ ನಮ್ಮ ಕರ್ನಾಟಕದ ಜನ ನೋಡುವುದು ಕಲೆಯನ್ನು ಮಾತ್ರ. ನಿಮ್ಮಲ್ಲಿ ಕಲೆ ಇದ್ದರೆ ನೀವು ಬೆಳೆಯುವುದು ಗ್ಯಾರೆಂಟಿ, ಯಾವ ಕುಟುಂಬದವರು ಎಂದೆಲ್ಲ ಜನ ನೋಡುವುದಿಲ್ಲ. ನೆಪೋಟಿಸಂ ಅಲ್ಲ, ಪ್ರತಿಭೆಯೇ ಮುಖ್ಯ ಎಂದು ಹೇಳಲು ಶಿವಣ್ಣ ಮತ್ತು ಅಪ್ಪು ಅವರಿಗಿಂತಲೂ ಸೂಕ್ತವಾದ ವ್ಯಕ್ತಿಗಳು ಯಾರೂ ಇಲ್ಲ" ಎಂದು ಸುದೀಪ್ ಹೇಳಿದ್ದರು.