ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊಡಗಿನಲ್ಲಿ ನಿಲ್ಲದ ಕಾಡಾನೆ-ಮಾನವ ಸಂಘರ್ಷ

ಕಾಫಿ ತೋಟಗಳಲ್ಲಿ ದೊರಕುವ ಹಲಸು, ಬಿದಿರು, ಕೆರೆಯಲ್ಲಿನ ನೀರು, ಸೊಪ್ಪು ತಿಂದು ಕುಡಿದು ಕಾಡಿಗಿಂತ ಸುಖವಾದ ಜೀವನವನ್ನು ಆನೆ ಪರಿವಾರ ಕಾಫಿ ತೋಟಗಳಲ್ಲಿ ಕಂಡಿವೆ. ಹೀಗಾಗಿಯೇ ತೋಟ ಬಿಟ್ಟು ಕಾಡಿನತ್ತ ಹೆಜ್ಜೆ ಹಾಕದ ಆನೆಗಳು, ಆಗಿಂದಾಗ್ಗೆ ತಮ್ಮತ್ತ ಬರುವ ಮನುಷ್ಯರ ಮೇಲೆ ಧಾಳಿ ನಡೆಸಿ ಪ್ರಾಣಹರಣಕ್ಕೆ ಕಾರಣವಾಗಿದೆ.

ಕೊಡಗಿನಲ್ಲಿ ನಿಲ್ಲದ ಕಾಡಾನೆ-ಮಾನವ ಸಂಘರ್ಷ

-

Profile
Ashok Nayak Jun 8, 2026 1:05 PM

ಅನಿಲ್ ಎಚ್.ಟಿ.

ಕಳೆದ 6 ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ 6 ಮಂದಿ ಸಾವು, 8 ವರ್ಷಗಳಲ್ಲಿ 91 ಮಂದಿ ಬಲಿ

ಮಡಿಕೇರಿ: ಕೊಡಗು ಜಿಲ್ಲೆ ಪ್ರಕೃತ್ತಿ ಸೌಂದರ್ಯಕ್ಕೆ ಹೆಸರಾದ ಜಿಲ್ಲೆ. ಪ್ರಕೃತಿ ಎಂದ ಮೇಲೆ ನಿಸರ್ಗದೊಳಗಿನ ವನ್ಯಜೀವಿಗಳು ಕೂಡ ಇಲ್ಲಿನ ಸದಸ್ಯರೇ. ಆಗಾಗ್ಗೆ ಮಾನವರ ಮೇಲೆ ಆನೆಗಳು ದಾಳಿ ನಡೆಸಿ ಪ್ರಾಣ ಹರಣ ಮಾಡುವು ಸಾಮಾನ್ಯ. ಜಿಲ್ಲೆಯಲ್ಲಿ ಕಾಡಾನೆ- ಮಾನವನ ನಡುವಿನ ಸಂಘರ್ಷಕ್ಕೆ ಅಂತ್ಯವೇ ಇಲ್ಲದಂತಾಗಿದೆ. ಕಾಡಾನೆಗಳು ಇಲ್ಲದ ಕಾಫಿ ತೋಟ, ಆನೆ ದಾಳಿಯಿಲ್ಲದ ಗ್ರಾಮಗಳೇಇಲ್ಲ ಎಂಬಂಥ ಪರಿಸ್ಥಿತಿ ಕೊಡಗಿನಲ್ಲಿದೆ.

ಅನೇಕ ತೋಟಗಳಲ್ಲಿ ವರ್ಷಾ ನುಗಟ್ಟಲೆಯಿಂದ ಬೀಡು ಬಿಟ್ಟ ಕಾಡಾನೆಗಳು ಇಲ್ಲಿಯೇ ಮರಿ ಹಾಕಿವೆ. ಈ ಆನೆ ಮರಿಗಳು ಕಾಡನ್ನೇ ನೋಡದೇ ತೋಟದಲ್ಲಿ ಬೆಳೆಯುತ್ತಿವೆ. ಹೆಸರಿಗೆ ಮಾತ್ರ ಇವು ಕಾಡಾನೆಗಳು.. ಆದರೆ ಇವುಗಳು ಕಾಡು ನೋಡಿಯೇ ಇಲ್ಲದಂಥ ಸ್ಥಿತಿಯಲ್ಲಿದೆ.

ಕಾಫಿ ತೋಟಗಳಲ್ಲಿ ದೊರಕುವ ಹಲಸು, ಬಿದಿರು, ಕೆರೆಯಲ್ಲಿನ ನೀರು, ಸೊಪ್ಪು ತಿಂದು ಕುಡಿದು ಕಾಡಿಗಿಂತ ಸುಖವಾದ ಜೀವನವನ್ನು ಆನೆ ಪರಿವಾರ ಕಾಫಿ ತೋಟಗಳಲ್ಲಿ ಕಂಡಿವೆ. ಹೀಗಾಗಿಯೇ ತೋಟ ಬಿಟ್ಟು ಕಾಡಿನತ್ತ ಹೆಜ್ಜೆ ಹಾಕದ ಆನೆಗಳು, ಆಗಿಂದಾಗ್ಗೆ ತಮ್ಮತ್ತ ಬರುವ ಮನುಷ್ಯರ ಮೇಲೆ ಧಾಳಿ ನಡೆಸಿ ಪ್ರಾಣಹರಣಕ್ಕೆ ಕಾರಣವಾಗಿದೆ.

ಕಳೆದ 8 ವರ್ಷಗಳಲ್ಲಿ ಕೊಡಗಿನಲ್ಲಿ ಕಾಡಾನೆ ದಾಳಿಯಿಂದ 91 ಮಂದಿ ಸಾವನ್ನಪ್ಪಿದ್ದಾರೆ. ಶುಕ್ರವಾರ ಕೋಣನಕಟ್ಟೆ ಗ್ರಾಮದಲ್ಲಿ ದೆಹಲಿಯ ಡಿಜಿಪಿ ಪತ್ನಿ ಸಂಧ್ಯಾ ಅಚ್ಚಯ್ಯ ಅವರ ಸಾವಿನ ಪ್ರಕರಣ ಸೇರಿದಂತೆ 2026ರಲ್ಲಿ 6 ತಿಂಗಳಿನಲ್ಲಿ 6 ಮಂದಿ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Anil H T Column: ಕಾಫಿತೋಟದಲ್ಲಿ ನೆಮ್ಮದಿಯ ತಂಗಾಳಿ !

ತೋಟದ ಮಾಲೀಕರು ತೋಟಕ್ಕೆ ತೆರಳಲು ಭಯ ಪಡುವಂಥ ಪರಿಸ್ಥಿತಿಯಿದ್ದರೆ ಕಾರ್ಮಿಕರು ಕಾಡಾನೆ ಇರುವ ತೋಟಗಳಲ್ಲಿ ಕೂಲಿಕೆಲಸಕ್ಕೆ ತೆರಳುವುದಿಲ್ಲ ಎಂದು ನಿರ್ಧರಿಸಿದ್ದಾರೆ. ಆನೆ ದಾಳಿ ಯ ಆತಂಕದಿಂದ ತೋಟ ಕಾರ್ಮಿಕ ಮಕ್ಕಳು ಶಾಲೆಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣದಿಂದಾಗಿ ಅನೇಕ ಕಾರ್ಮಿಕರು ತಮ್ಮ ಮಕ್ಕಳನ್ನು ಪೇಟೆ-ಪಟ್ಟಣಗಳ ಹಾಸ್ಟೆಲ್‌ಗಳಲ್ಲಿ ಇರಿಸಿ ಶಿಕ್ಷಣ ಕೊಡಿಸುತ್ತಿದ್ದಾರೆ.

ಕಳೆದ 23 ವರ್ಷಗಳಿಂದ ಕೊಡಗಿನಲ್ಲಿ ನಿರಂತರವಾಗಿರುವ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಫಲವಾಗಿದೆ. ಕಂದಕ ನಿರ್ಮಾಣ, ಸೋಲಾರ್ ಬೇಲಿ ನಿರ್ಮಾಣ, ರೈಲ್ವೆ ಬ್ಯಾರಿಕೇಟ್ ಅಳವಡಿಕೆ ಮುಂತಾದ ಯೋಜನೆಗಳು ಸರಕಾರಿ ಕಾಗದದಲ್ಲಿಯೇ ಉಳಿದಿವಿಯೇ ವಿನಾ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.

ಸಿಬ್ಬಂದಿ, ಅಧಿಕಾರಿಗಳು, ವಾಹನಗಳ ಕೊರತೆಯನ್ನು ತೀವ್ರವಾಗಿ ಎದುರಿಸುತ್ತಿರುವ ಅರಣ್ಯ ಇಲಾಖೆಯಿಂದ ಕಾಡಾನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಭರವಸೆಯೇ ಉಳಿದಿಲ್ಲ. ಕಾಡು ಕಾಯುವ ಅಧಿಕಾರಿ ಕಾಡಾನೆಗಳನ್ನೂ ತೋಟಗಳಿಗೆ ಬಾರದಂತೆ ಕಾಯಬೇಕಾದ ಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವುದು ಕಷ್ಟವಾಗಿದೆ.

ಕೊಡಗಿನ ಸುಮಾರು 899 ಕಿ.ಮೀ. ವಿಸ್ತಾರ ಪ್ರದೇಶ ದಲ್ಲಿ ಕಾಡಾನೆ ಹಾವಳಿ ಕಂಡುಬಂದಿದೆ. ಮಡಿಕೇರಿ, ವಿರಾಜಪೇಟೆ, ನಾಗರ ಹೊಳೆ ವ್ಯಾಪ್ತಿಯಲ್ಲಿ 421 ಕಿ.ಮೀ. ಕಂದಕ, 544 ಕಿ.ಮೀ. ಸೋಲಾರ್ ಬೇಲಿ, 139 ಕಿ.ಮೀ. ರೈಲ್ವೆ ಬ್ಯಾರಿಕೆಡ್ ನಿರ್ಮಾಣ ಪೂರ್ಣಗೊಂಡಿದೆ.

2025-26 ನೇ ಸಾಲಿನಲ್ಲಿ 114 ಲಕ್ಷ ರು. ವೆಚ್ಚದಲ್ಲಿ 69 ಕಿ.ಮೀ. ಕಂಕದ ನಿರ್ವಹಣೆ, ವಿರಾಜಪೇಟೆ ಮತ್ತು ನಾಗರಹೊಳೆ ವ್ಯಾಪ್ತಿಯಲ್ಲಿ 114 ಲಕ್ಷ ರು. ವೆಚ್ಚದಲ್ಲಿ 125 ಕಿ.ಮೀ. ನೂತನ ಕಂದಕ ನಿರ್ಮಾಣ, 76 ಲಕ್ಷ ರು. ವೆಚ್ಚದಲ್ಲಿ ಸೋಲಾರ್ ಬೇಲಿ ನಿರ್ವಹಣೆ, 367 ಲಕ್ಷ ರು. ವೆಚ್ಚದಲ್ಲಿ 49 ಕಿ.ಮೀ. ಸೋಲಾರ್ ಬೇಲಿ ನಿರ್ಮಿಸಲಾಗಿದೆ.

342 ಲಕ್ಷ ರು. ವೆಚ್ಚದಲ್ಲಿ 193 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ವಹಣೆ, 2561 ಲಕ್ಷ ರು. ವೆಚ್ಚದಲ್ಲಿ 13.95 ಕಿ.ಮೀ. ನೂತನ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. 316 ಲಕ್ಷ ರು. ವೆಚ್ಚದಲ್ಲಿ ಕಾಡಾನೆ ಹಾವಳಿ ತಡೆಗೆ ವಿಶೇಷ ಮಾದರಿ ಕಾಮಗಾರಿ ಮಾಡಲಾಗಿದೆ. ಇಷ್ಟೆಲ್ಲಾ ಪ್ರಯತ್ನ, ವೆಚ್ಚ ಮಾಡಿದ್ದರೂ ಕಾಡಾನೆಗಳು ಮಾತ್ರ ತೋಟಗಳಲ್ಲಿ, ನಾಡಿನಂಚಿನಲ್ಲಿ ಬಿಂದಾಸ್ ಆಗಿ ತಿರುಗಾ ಡುತ್ತಾ, ಮಾನವ ಪ್ರಾಣಹಾನಿ, ಕಾಫಿ ಫಸಲು ಹಾನಿ ಮುಂ ದುವರಿಸುತ್ತಲೇ ಇವೆ.

ಹೊಸ ಹುಮ್ಮಸ್ಸಿನೊಂದಿಗೆ ಆಡಳಿತಕ್ಕೆ ಮುಂದಾಗಿರುವ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರ, ಕೊಡಗು ಮಾತ್ರವಲ್ಲದೇ ಮಲೆನಾಡು ಜಿಲ್ಲೆಗಳಲ್ಲಿ ಕಾಡಾನೆ ದಾಂಧಲೆ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ವಿಶೇಷ ಪ್ರಯತ್ನದಿಂದ ಕಾಡಾನೆಗಳನ್ನು ಕೃಷಿ ವಲಯದಿಂದ ಕಾಡಿಗೆ ಅಟ್ಟುವಲ್ಲಿ ಸಫಲವಾದರೆ ಕಾಡಾನೆ ಪೀಡಿತ ನಾಡಿನ ಜನತೆ ಖಂಡಿತವಾಗಿಯೂ ಈ ಸರಕಾರವನ್ನು ಸದಾ ಹೆಮ್ಮೆಯಿಂದ ಸ್ಮರಿಸುತ್ತಾರೆ.

ಮಾನವ ಆನೆ ಸಂಘರ್ಷ ತಡೆಗೆ ಸಲಹೆಗಳು

ಕೊಡಗು ಜಿಲ್ಲೆಯ ಎಲ್ಲಾ ಅರಣ್ಯ ಮತ್ತು ಖಾಸಗಿ ಜಾಗದ ಮದ್ಯೆ ಶಾಶ್ವತ ಅತ್ಯಾಧುನಿಕ ಕಂದಕ /ಬೇಲಿ ನಿರ್ಮಾಣ

ಅರಣ್ಯದಲ್ಲಿ ಪ್ರಾಣಿಗಳಿಗೆ ಬೇಕಾಗುವ ಮರ, ಹಣ್ಣುಗಳ ಗಿಡ ನೆಡುವುದು

ಪ್ರಾಣಿಗಳಿಗೆ ಕಾಡಿನಲ್ಲಿ ಕುಡಿಯುವ ನೀರಿನ ಶಾಶ್ವತ ವ್ಯವಸ್ಥೆ

ಅರಣ್ಯ ಗಡಿಯಲ್ಲಿ ಬಿಎಸ್‌ಎಫ್ʼನಂತೆ 24 ಗಂಟೆ ಟಾಸ್ಕ್ ಫೋರ್ಸ್ ನೇಮಕ

ಅರಣ್ಯ, ಪೊಲೀಸ್ ಇಲಾಖೆ ಜತೆಗೂಡಿ ಟಾಸ್ಕ್ ಫೋರ್ಸ್ ರಚನೆ

112 ನಂತೆ ಪ್ರತ್ಯೇಕವಾಗಿ ಗ್ರಾಮ ಸಂಪರ್ಕಕ್ಕೆ ಅರಣ್ಯ ಸಿಬ್ಬಂದಿಗೆ ವಾಹನ

ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಿ, ನಿಗಾ ವಹಿಸುವುದು.

ಆನೆಗಳ ಸಂತತಿ ಹೆಚ್ಚಾಗದಂತೆ ಕ್ರಮ ಕೈಗೊಳ್ಳುವುದು

ಆನೆ ಕಾವಲು ವಿಶೇಷ ತಂಡ ರಚನೆ, ಕಾಡು ಪ್ರಾಣಿ ಮೇಲೆ ಬಂದೂಕು ಬಳಸಲು

ಅನುಮತಿ.

ಅರಣ್ಯದಲ್ಲಿ ವಾಸಿಸುವ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿ, ಅರಣ್ಯವನ್ನು ಕಾಡು ಪ್ರಾಣಿಗಳ ಓಡಾಟಕ್ಕೆ ಅನುಕೂಲ ಮಾಡಿಕೊಡುವುದು