ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಸ್ಪೆನ್ಸ್ ರೊಮ್ಯಾಂಟಿಕ್ ಥ್ರಿಲ್ಲರ್ ‘ಲಾರ್ಡ್ ಗಾಗ’ ಸಿನಿಮಾ ಟೀಸರ್ ರಿಲೀಸ್; ಏಳು ಭಾಷೆಗಳಲ್ಲಿ ತೆರೆಗೆ ಬರಲು ಸಜ್ಜು!

Lord Gaga Teaser: ಉದ್ಯಮಿ ಮುಕಿ ರೆಘುನಾಥನ್ ನಿರ್ಮಾಣದ ‘ಲಾರ್ಡ್ ಗಾಗ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದೊಂದು ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಎಂದು ಚಿತ್ರತಂಡ ಹೇಳಿಕೊಂಡಿದೆ. ಯುವ ನಿರ್ದೇಶಕ ವೈಕೆ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು 7 ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆಕಾಣಲು ಸಜ್ಜಾಗಿದೆ.

7 ಭಾಷೆಗಳಲ್ಲಿ ತೆರೆಗೆ ಬರಲಿದೆ ‘ಲಾರ್ಡ್ ಗಾಗ’ ಸಿನಿಮಾ; ಟೀಸರ್‌ ಹೇಗಿದೆ?

-

Avinash GR
Avinash GR Nov 6, 2026 9:43 PM

ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟರು ಹಾಗೂ ಬಿಗ್ ಬಜೆಟ್‌ಗಳ ಹಂಗಿಲ್ಲದೆ, ಕೇವಲ ವಿಭಿನ್ನ ಟೈಟಲ್ ಮತ್ತು ಗಟ್ಟಿ ಕಂಟೆಂಟ್ ಮೂಲಕವೇ ಪ್ರೇಕ್ಷಕರ ಗಮನ ಸೆಳೆಯುವ ಹೊಸ ಪ್ರಯೋಗಗಳ ಸಂಖ್ಯೆ ಹೆಚ್ಚುತ್ತಿದೆ. ಆ ಸಾಲಿಗೆ ಇದೀಗ ಹೊಸ ಸೇರ್ಪಡೆ ‘ಲಾರ್ಡ್ ಗಾಗ’.

ವಿಶಿಷ್ಟ ಶೀರ್ಷಿಕೆ ಮತ್ತು ಕುತೂಹಲ ಕೆರಳಿಸುವ ಕಥಾಹಂದರ ಹೊತ್ತು ಬಂದಿರುವ ಈ ಚಿತ್ರವು, ಸದ್ದಿಲ್ಲದೆ ಬಹುತೇಕ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕೆಲ ದಿನಗಳ ಹಿಂದೆ ಟೈಟಲ್ ಮತ್ತು ಮೋಷನ್ ಪೋಸ್ಟರ್ ಮೂಲಕ ನಿರೀಕ್ಷೆ ಮೂಡಿಸಿದ್ದ ಚಿತ್ರತಂಡ, ಇದೀಗ ತನ್ನ ಆಕರ್ಷಕ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿ ಸಿನಿರಸಿಕರ ಗಮನ ಸೆಳೆದಿದೆ.

ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್

‘ಝೀರೋ ಗ್ರ್ಯಾವಿಟಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಉದ್ಯಮಿ ಮುಕಿ ರೆಘುನಾಥನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಯುವ ಪ್ರತಿಭೆ ವೈಕೆ ಕಥೆ ಮತ್ತು ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಮನುಷ್ಯನ ಮನಸ್ಸಿನ ಆಳದಲ್ಲಿ ಹುಟ್ಟುವ ಪ್ರೀತಿ, ಪ್ರಣಯ, ಭಾವನೆಗಳು, ವ್ಯಸನ ಹಾಗೂ ಆತ ತೆಗೆದುಕೊಳ್ಳುವ ನಿರ್ಣಾಯಕ ಆಯ್ಕೆಗಳ ಸುತ್ತ ಈ ಕಥೆ ಸಾಗಲಿದ್ದು, ಇದನ್ನು ಸಂಪೂರ್ಣ ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ತೆರೆಗೆ ತರಲಾಗಿದೆ. ಇದೊಂದು ಔಟ್ ಅಂಡ್ ಔಟ್ ಕಲ್ಟ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದ್ದು, ಇತ್ತೀಚೆಗೆ ಹೊರಬಂದಿರುವ ಟೀಸರ್ ಕೂಡ ಕಲ್ಟ್ ಶೈಲಿಯಲ್ಲೇ ಮೂಡಿಬಂದು ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಏಳು ಭಾಷೆಗಳಲ್ಲಿ ತೆರೆಗೆ

ಈ ಚಿತ್ರದಲ್ಲಿ ಶೂನ್ಯ ನಾಯಕನಾಗಿ ಬಣ್ಣಹಚ್ಚಿದ್ದು, ಸ್ವರೂಪಿಣಿ ಹಾಗೂ ದಿಶಾ ನಾಯಕಿಯರಾಗಿ ಸಾಥ್ ನೀಡಿದ್ದಾರೆ. ವಿಶೇಷವೆಂದರೆ ಚಿತ್ರದ ನಿರ್ಮಾಪಕ ಮುಕಿ ರೆಘುನಾಥನ್ ಅವರೇ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ ಮತ್ತು ಭೋಜಪುರಿ ಭಾಷೆಗಳಲ್ಲಿ ಏಕಕಾಲಕ್ಕೆ ಬರೋಬ್ಬರಿ 7ಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಚಿತ್ರವನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆರೆಗೆ ತರಲು ಸಿದ್ಧತೆ ನಡೆಸಲಾಗಿದೆ. ಸದ್ಯ ಟೀಸರ್ ಮೂಲಕ ಕಥೆಯ ಸಣ್ಣದೊಂದು ಎಳೆಯನ್ನು ಬಿಟ್ಟುಕೊಟ್ಟಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಅನ್ನು ಅದ್ಧೂರಿಯಾಗಿ ಅನಾವರಣಗೊಳಿಸುವುದಾಗಿ ತಿಳಿಸಿದೆ.