PM Narendra Modi: ನ.13ರಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಪ್ರವಾಸದ ವೇಳಾಪಟ್ಟಿ ಇಲ್ಲಿದೆ
PM Narendra Modi's Karnataka Tour: ಬೆಂಗಳೂರು ಹಾಗೂ ಮೈಸೂರಿನಲ್ಲಿ ನ.13ರಂದು ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ನಮ್ಮ ಮೆಟ್ರೋ‘ಗುಲಾಬಿ ಮಾರ್ಗ ’ ಉದ್ಘಾಟನೆ ಸೇರಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಲಿದ್ದಾರೆ.
-
Prabhakara R
Nov 6, 2026 9:18 PM
ಬೆಂಗಳೂರು: ನಮ್ಮ ಮೆಟ್ರೋದ ಬಹುನಿರೀಕ್ಷಿತ ‘ಗುಲಾಬಿ ಮಾರ್ಗ ’ ಉದ್ಘಾಟನೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರಿನ ಕಾರ್ಯಕ್ರಮಗಳ ಬಳಿಕ, ಮೈಸೂರಿನ ಕಾರ್ಯಕ್ರಮವೊಂದರಲ್ಲೂ ಪ್ರಧಾನಿ ಭಾಗಿಯಾಗಲಿದ್ದಾರೆ.
ಪ್ರಧಾನಿ ಮೋದಿ ಪ್ರವಾಸದ ವೇಳಾಪಟ್ಟಿ
- ನವೆಂಬರ್ 13ರಂದು ಬೆಳಗ್ಗೆ ನವದೆಹಲಿಯಿಂದ ಹೊರಟು ಬೆಳಗ್ಗೆ 10.5ಕ್ಕೆ ಬೆಂಗಳೂರಿನ ಎಚ್ಎಎಲ್ ಏರ್‌ಪೋರ್ಟ್ ಆಗಮನ.
- ಬೆಳಗ್ಗೆ 10.45ಕ್ಕೆ ಬೆಂಗಳೂರಿನ ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವದಲ್ಲಿ ಭಾಗಿ.
- ಮಧ್ಯಾಹ್ನ 12.40ಕ್ಕೆ ತಾವರೆಕರೆ ಮೆಟ್ರೋ ರೈಲು ನಿಲ್ದಾಣಕ್ಕೆ ಆಗಮನ. ಮಧ್ಯಾಹ್ನ 12.45ಕ್ಕೆ ಮೆಟ್ರೋ ಪಿಂಕ್ ಲೈನ್ ಗೆ ಹಸಿರು ನಿಶಾನೆ. ಬಳಿಕ ಮೆಟ್ರೋನಲ್ಲಿ ಐಐಎಂಬಿ ನಿಲ್ದಾಣದವರೆಗೆ ಪ್ರಯಾಣ.
- ಮಧ್ಯಾಹ್ನ 1.15ಕ್ಕೆ ಐಐಎಂಬಿ ಆಡಿಟೋರಿಯಂನಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ, ರಾಷ್ಟ್ರಕ್ಕೆ ಸಮರ್ಪಣೆ ಮತ್ತು ಯೋಜನೆಗಳಿಗೆ ಹಸಿರು ನಿಶಾನೆ ಕಾರ್ಯಕ್ರಮದಲ್ಲಿ ಭಾಗಿ.
- ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಿಂದ ಹೆಲಿಕಾಫ್ಟರ್ ಮೂಲಕ ಮೈಸೂರಿಗೆ ಪ್ರಯಾಣ.
- ಮಧ್ಯಾಹ್ನ 3.30ಕ್ಕೆ ಮೈಸೂರಿನ ಕೆ.ಸಿ. ಲೇಔಟ್ ಪಾರ್ಕ್ ನಲ್ಲಿ ಭಾರತ್ ವ್ಯಾನ್ ಕಾರ್ಯಕ್ರಮದಲ್ಲಿ ಭಾಗಿ.
- ಸಂಜೆ 4 ಗಂಟೆಗೆ ಮೈಸೂರು ಕಾಸ್ಮೋಸ್ ಉದ್ಘಾಟಿಸಲಿರುವ ಮೋದಿ.
- ಸಂಜೆ 6.05ಕ್ಕೆ ಮೈಸೂರಿನಿಂದ ನವದೆಹಲಿಗೆ ಪ್ರಧಾನಿ ಮೋದಿ ನಿರ್ಗಮನ.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ LED ಡೋಮ್ ಪ್ಲಾನೆಟೋರಿಯಂ
ಪ್ರಧಾನಿ ನರೇಂದ್ರ ಮೋದಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗಿರುವ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ಡೋಮ್ ಪ್ಲಾನೆಟೋರಿಯಂ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಶ್ರೀ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ಅತ್ಯಾಧುನಿಕ ತಾರಾಲಯ ನಿರ್ಮಾಣವಾಗಿದೆ. ಇದಕ್ಕಾಗಿ ವಿಶ್ವವಿದ್ಯಾನಿಲಯ ಮೂರು ಎಕರೆ ಜಾಗ ನೀಡಿದ್ದು, ಬರೋಬ್ಬರಿ 91 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಾಕಾರಗೊಂಡಿದೆ.