ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻರಾಮನ ವನವಾಸವೇ 14 ವರ್ಷಕ್ಕೆ ಮುಗಿದಿತ್ತು, ಆದ್ರೆ ನನಗಿನ್ನೂ ಮುಕ್ತಿ ಸಿಕ್ಕಿಲ್ಲ..ʼ; ಡಿಸಿಎಂ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಹೀಗೇಕೆ ಹೇಳಿದ್ರು?

ನಟ, ಡಿಸಿಎಂ ಪವನ್‌ ಕಲ್ಯಾಣ್‌ - ನಟಿ ರೇಣು ದೇಸಾಯಿ ಅವರು ದಾಂಪತ್ಯ ಬದುಕು ಅಂತ್ಯಗೊಂಡು 14 ವರ್ಷಗಳೇ ಆಗಿವೆ. ಆದರೂ ಸೋಷಿಯಲ್ ಮೀಡಿಯಾ ಟ್ರೋಲಿಂಗ್ ನಿಂತಿಲ್ಲವೆಂದು ರೇಣು ದೇಸಾಯಿ ಅಳಲು ತೋಡಿಕೊಂಡಿದ್ದಾರೆ. ಶ್ರೀರಾಮನ ವನವಾಸವೇ 14 ವರ್ಷಕ್ಕೆ ಮುಗಿದಿತ್ತು, ಆದರೆ ನನ್ನದು ಇನ್ನೂ ಮುಗಿದಿಲ್ಲವೆಂದು ಭಾವುಕರಾಗಿದ್ದಾರೆ.

ʻರಾಮನ ವನವಾಸ ಮುಗಿದರೂ ನನ್ನದು ಮುಗಿದಿಲ್ಲ..ʼ; ನಟಿ ರೇಣು ದೇಸಾಯಿ ಬೇಸರ!

-

Avinash GR
Avinash GR Nov 6, 2026 8:48 PM

ನಟಿ, ನಿರ್ಮಾಪಕಿ ರೇಣು ದೇಸಾಯಿ ತಮ್ಮ ವೈಯಕ್ತಿಕ ಬದುಕಿನ ಕುರಿತು ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ. ಸಾರ್ವಜನಿಕರ ನಿರಂತರ ಟ್ರೋಲಿಂಗ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಆಂಧ್ರಪ್ರದೇಶದ ಹಾಲಿ ಉಪಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರಿಂದ ವಿಚ್ಛೇದನ ಪಡೆದು ಬರೋಬ್ಬರಿ 14 ವರ್ಷಗಳು ಕಳೆದಿದ್ದರೂ, ಜನರು ಇಂದಿಗೂ ತಮ್ಮ ಸ್ವಂತ ಅಸ್ತಿತ್ವವನ್ನು ಗುರುತಿಸದೆ ಕೇವಲ ಪವನ್ ಅವರೊಂದಿಗೆ ತಳುಕು ಹಾಕಿ ನೋಡುತ್ತಿರುವುದಕ್ಕೆ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಪ್ರಸ್ತುತ ಸ್ಥಿತಿಯನ್ನು ಶ್ರೀರಾಮನ 14 ವರ್ಷಗಳ ವನವಾಸಕ್ಕೆ ಹೋಲಿಸಿರುವ ಅವರು, ತಮ್ಮ ಈ ಅಘೋಷಿತ ವನವಾಸ ಯಾವಾಗ ಅಂತ್ಯವಾಗುವುದೋ ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ನನಗೆ ಸ್ವಂತ ಬದುಕೇ ಇರಲಿಲ್ಲ?

ಈಚೆಗೆ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಭಾಗವಹಿಸಿ ಮಾತನಾಡಿದ ರೇಣು ದೇಸಾಯಿ, ತೆಲುಗು ಪ್ರೇಕ್ಷಕರು ತಮ್ಮನ್ನು ಕಾಣುವ ದೃಷ್ಟಿಕೋನದ ಬಗ್ಗೆ ಬೇಸರ ವ್ಯಕ್ತಪಡಿಸಿದರು. "1999ರಲ್ಲಿ 'ಬದ್ರಿ' ಚಿತ್ರದ ಚಿತ್ರೀಕರಣಕ್ಕಾಗಿ ನಾನು ಹೈದರಾಬಾದ್‌ಗೆ ಬಂದಾಗಲೇ ನನ್ನ ಜನನವಾಯಿತು, ಅದಕ್ಕೂ ಮುನ್ನ ನನಗೆ ಸ್ವಂತ ಬದುಕೇ ಇರಲಿಲ್ಲ ಎಂಬಂತೆ ಜನರು ವರ್ತಿಸುತ್ತಾರೆ. ನಾವು ಪರಸ್ಪರ ಒಪ್ಪಿಗೆಯಿಂದ 2012 ರಲ್ಲೇ ವಿಚ್ಛೇದನ ಪಡೆದುಕೊಂಡಿದ್ದೇವೆ. ಈಗಾಗಲೇ 14 ವರ್ಷಗಳೇ ಉರುಳಿವೆ. ಶ್ರೀರಾಮನ ವನವಾಸವೂ 14 ವರ್ಷಗಳ ಬಳಿಕ ಅಂತ್ಯ ಕಂಡಿತ್ತು. ಆದರೆ ನನ್ನ ಈ ವನವಾಸ ಯಾವಾಗ ಕೊನೆಗೊಳ್ಳುತ್ತದೆ" ಎಂದು ಅವರು ಪ್ರಶ್ನಿಸಿದ್ದಾರೆ.

Pawan Kalyan Birthday Celebration: ಅನಾಥಾಶ್ರಮದ ಮಕ್ಕಳೊಂದಿಗೆ ಪವನ್ ಕಲ್ಯಾಣ್ ಜನ್ಮದಿನ ಆಚರಣೆ: ಬಲಿಜ ಸಂಘದಿಂದ ಕೇಕ್ ಕತ್ತರಿಸಿ ಸಂಭ್ರಮ; ಮಕ್ಕಳಿಗೆ ಊಟದ ವ್ಯವಸ್ಥೆ

ಪವನ್‌ ಇಲ್ಲದೇ ರೇಣುಗೆ ಸ್ವಂತ ಗುರುತು ಇಲ್ಲವೇ?

ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್‌ಗಳ ಕುರಿತು ಮಾತನಾಡಿದ ರೇಣು ದೇಸಾಯಿ, "ಬೀದಿ ನಾಯಿಯೊಂದನ್ನು ರಕ್ಷಿಸಿದರೂ 'ವೇಸ್ಟ್' ಎಂದು ಕಾಮೆಂಟ್ ಮಾಡುತ್ತಾರೆ. ವಿಚ್ಛೇದನ ಪಡೆದ ನಂತರ ನಾನು ಸೂಪರ್ ಹಿಟ್ ಮರಾಠಿ ಸಿನಿಮಾವನ್ನು ನಿರ್ಮಿಸಿದೆ. ಆ ಬಳಿಕ ಮತ್ತೊಂದು ಚಿತ್ರಕ್ಕೆ ಕಥೆ ಬರೆದು, ನಿರ್ಮಿಸಿ, ನಿರ್ದೇಶಿಸಿದೆ. ಡ್ಯಾನ್ಸ್ ಶೋ ಮಾಡಿದೆ, ಕವನಗಳನ್ನು ಬರೆದೆ, ಈಗ ಸಿನಿಮಾಗಳಲ್ಲೂ ಅಭಿನಯಿಸುತ್ತಿದ್ದೇನೆ. ಆದರೂ ಸೋಷಿಯಲ್ ಮೀಡಿಯಾದಲ್ಲಿ ನನ್ನನ್ನು ನಿರಂತರವಾಗಿ ಟ್ರೋಲ್ ಮಾಡಲಾಗುತ್ತಿದೆ. ಅವರಿಲ್ಲದೆ (ಪವನ್ ಕಲ್ಯಾಣ್) ನನ್ನ ಜೀವನವೇ ಶೂನ್ಯ ಎಂಬಂತೆ ಬಿಂಬಿಸಲಾಗುತ್ತಿದೆ. ಆತನಿಲ್ಲದೆ ನನಗೆ ಬದುಕಲು ಬೇರೆ ಯಾವುದೇ ಉದ್ದೇಶವೇ ಇರಬಾರದು ಎಂಬಂತೆ ಕೆಲವರು ವರ್ತಿಸುತ್ತಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೇಣುಗೆ ಇಬ್ಬರು ಮಕ್ಕಳು

ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ದಂಪತಿಗೆ ಅಕಿರಾ ನಂದನ್ ಎಂಬ ಮಗ ಮತ್ತು ಆದ್ಯಾ ಎಂಬ ಮಗಳಿದ್ದಾಳೆ. 2012ರಲ್ಲಿ ರೇಣು ಅವರಿಂದ ಬೇರ್ಪಟ್ಟ ಪವನ್ ಕಲ್ಯಾಣ್, 2013 ರಲ್ಲಿ ರಷ್ಯನ್ ಮೂಲದ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾಗಿದ್ದಾರೆ. ಪವನ್ ಕಲ್ಯಾಣ್ ಪ್ರಸ್ತುತ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.