Gatha Vaibhava Review: ʻಸಿಂಪಲ್ʼ ಸುನಿ ಹೇಳಿದ ಜನ್ಮ ಜನ್ಮಾಂತರದ ಗತವೈಭವದ ಕಥೆ!
ʻಸಿಂಪಲ್ʼ ಸುನಿ ಮತ್ತು ನವ ನಟ ದುಷ್ಯಂತ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ʻಗತವೈಭವʼ ಸಿನಿಮಾವು ಇಂದು (ನ.14) ತೆರೆಕಂಡಿದೆ. ಟ್ರೇಲರ್‌ನಿಂದಲೇ ಗಮನಸೆಳೆದಿದ್ದ ಈ ಸಿನಿಮಾದಲ್ಲ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ವಿಮರ್ಶೆ ಹೇಗಿದೆ? ಇಲ್ಲಿದೆ ಓದಿ.
-
Film: ಗತವೈಭವ
Release Date - ನವೆಂಬರ್ 14, 2025
Language - ಕನ್ನಡ
Genre - ಡ್ರಾಮಾ, ಫ್ಯಾಂಟಸಿ, ರೊಮ್ಯಾಂಟಿಕ್,
Director - ʻಸಿಂಪಲ್ʼ ಸುನಿ
Cast - ದುಷ್ಯಂತ್, ಆಶಿಕಾ ರಂಗನಾಥ್, ಸುಧಾ ಬೆಳವಾಡಿ, ಕೃಷ್ಣ ಹೆಬ್ಬಾಳೆ, ಕಿಶನ್ ಬಿಳಗಲಿ, ಕಾರ್ತಿಕ್ ರಾವ್
Time - 142 Minutes
3/5
ʻಸಿಂಪಲ್ʼ ಸುನಿ ಸಿನಿಮಾಗಳೆಂದರೆ, ಅಲ್ಲೊಂದು ರೊಮ್ಯಾಂಟಿಕ್ ಲವ್ ಸ್ಟೋರಿ, ತರಲೆ, ತಮಾಷೆ, ತುಂಟತನ ಎಲ್ಲವೂ ಹದವಾಗಿ ಬೆರೆತಿರುತ್ತದೆ. ಅದು ʻಸಿಂಪಲ್ʼ ಸುನಿ ಶೈಲಿ. ಇದೀಗ ಅವರು ʻಗತವೈಭವʼ ಹೆಸರಿನ ಹೊಸ ಸಿನಿಮಾ ಮಾಡಿದ್ದಾರೆ. ಹೊಸ ಪ್ರತಿಭೆ ದುಷ್ಯಂತ್ ಈ ಚಿತ್ರದ ನಾಯಕ. ನಿರೀಕ್ಷೆ ಹುಟ್ಟಿಸಿದ್ದ ʻಗತವೈಭವʼ ಹೇಗಿದೆ? ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಈ ಸಿನಿಮಾ ಮೂಡಿಬಂದಿದೆಯಾ?
ʻಗತವೈಭವʼ ಸಿನಿಮಾದ ಕಥೆ ಏನು?
ವೈದ್ಯ ದಂಪತಿ ಮಗನಾದ ಪುರಾತನ್‌ಗೆ (ದುಷ್ಯಂತ್) ದಿಢೀರನೇ ಒಂದು ಹುಡುಗಿಯಿಂದ ಭೇಟಿಯಾಗುವ ಆಹ್ವಾನ ಸಿಗುತ್ತದೆ, ಆಕೆಯೇ ಆಧುನಿಕ (ಆಶಿಕಾ ರಂಗನಾಥ್). ಆಹ್ವಾನ ನೀಡಿದ ಹುಡುಗಿಯನ್ನು ಭೇಟಿಯಾಗಲೆಂದೇ ಪುರಾತನ್ ಹೊರಡುತ್ತಾನೆ. ಇಬ್ಬರ ಭೇಟಿಯೂ ಆಗುತ್ತದೆ. ಆನಂತರ ಕಥೆ ಜನ್ಮ ಜನ್ಮಾಂತರಕ್ಕೆ ಸಾಗುತ್ತದೆ. ಅದೇ ʻಗತವೈಭವʼ ಚಿತ್ರದ ಸ್ಪೆಷಾಲಿಟಿ. ಅಷ್ಟಕ್ಕೂ ಅದ್ಯಾಕೆ ಪುರಾತನ್‌ನನ್ನು ಭೇಟಿಯಾಗಲು ಆಧುನಿಕ ನಿರ್ಧರಿಸುತ್ತಾಳೆ. ಏನಿದು ಜನ್ಮ ಜನ್ಮಾಂತರದ ಕಥೆ ಎಂಬ ಕುತೂಹಲದೊಂದಿಗೆ ʻಗತವೈಭವʼ ನೋಡಿಸಿಕೊಂಡು ಹೋಗುತ್ತದೆ.
ಇದು ಸುನಿ ಶೈಲಿಯ ವಿಭಿನ್ನ ಸಿನಿಮಾ
ನಿರ್ದೇಶಕ ʻಸಿಂಪಲ್ʼ ಸುನಿ ಅವರು ತಮ್ಮ ಎಂದಿನ ಲವಲವಿಕೆಯ ನಿರೂಪಣೆಯನ್ನು ʻಗತವೈಭವʼದಲ್ಲಿ ಅಳವಡಿಸಿದ್ದಾರೆ. ಜನ್ಮ ಜನ್ಮಾಂತರದ ಕಥೆಗೆ ಹೊಸ ರೀತಿಯ ಚಿತ್ರಕಥೆಯನ್ನು ಬರೆದುಕೊಂಡಿದ್ದಾರೆ. ಮೊದಲರ್ಧಕ್ಕಿಂತ ದ್ವಿತಿಯಾರ್ಧವೇ ಹೆಚ್ಚು ಆಸಕ್ತಿಕರವಾಗಿದೆ. ಇಲ್ಲಿ ನಾಲ್ಕು ಕಥೆಗಳು ಬಂದರೂ, ದ್ವಿತಿಯಾರ್ಧದಲ್ಲಿ ಬರುವ ಕಥೆಗಳ ಗುಚ್ಛ ರೋಚಕ ಮತ್ತು ರೋಮಾಂಚಕ. ಪೋರ್ಚುಗೀಸರ ಕಥೆಯಲ್ಲಿ ಬರುವ ಹ್ಯೂಮರ್ ಇಷ್ಟವಾಗುತ್ತದೆಯಾದರೂ, ಅಷ್ಟೇನೂ ಪರಿಣಾಮಕಾರಿಯಾಗಿ ಮೂಡಿಬಂದಿಲ್ಲ. ಆರಂಭದಲ್ಲಿ ಬರುವ ದೇವಲೋಕದ ಕಥೆಯನ್ನು ಹೆಚ್ಚು ಲಂಬಿಸಿದ್ದಾರೆ. ಸೆಕೆಂಡ್ ಪಾರ್ಟ್‌ನಲ್ಲಿ ಬರುವ ಕಂಬಳ ಹಿನ್ನೆಲೆಯ ಕಥೆಯಲ್ಲಿನ ತಿರುವುಗಳನ್ನು ಸುನಿ ಚೆನ್ನಾಗಿ ಬರೆದಿದ್ದಾರೆ. ಕಂಬಳದ ದೃಶ್ಯಗಳು ಕೂಡ ಚೆನ್ನಾಗಿ ಮೂಡಿಬಂದಿವೆ.
ಸುನಿ ಬರೆದ ಕಥೆಗೆ ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ ಅವರ ಕೆಲಸ ಪೂರಕವಾಗಿ ಮೂಡಿಬಂದಿದೆ. ಹಿನ್ನೆಲೆ ಸಂಗೀತಕ್ಕೆ ಸೆಳೆಯುವ ಶಕ್ತಿ ಇದೆ. ʻನೀನೊಂತರ ಹ್ರಸ್ವಸ್ವರ...ʼ ಹಾಡು ಗುನುಗುವಂತಿದೆ. ವೀಲಿಯಂ ಡೇವಿಡ್ ಅವರ ಛಾಯಾಗ್ರಹಣ ಸಿನಿಮಾದ ಅಂದವನ್ನು ಹೆಚ್ಚಿಸಿದೆ. ಕಲಾ ನಿರ್ದೇಶನಕ್ಕೆ ಹೆಚ್ಚುವರಿ ಅಂಕ ನೀಡಲೇಬೇಕು.
ಸಿಕ್ಸರ್ ಬಾರಿಸಿದ ದುಷ್ಯಂತ್
ನಟ ದುಷ್ಯಂತ್ ಅವರಿಗೆ ಇದು ಮೊದಲ ಸಿನಿಮಾವಾದರೂ, ಎಲ್ಲಿಯೂ ಇದು ಅವರ ಮೊದಲ ಸಿನಿಮಾ ಅಂತ ಅನ್ನಿಸುವುದೇ ಇಲ್ಲ. ಅಷ್ಟೊಂದು ನೀಟ್ ಆದ ಅಭಿನಯವನ್ನು ದುಷ್ಯಂತ್ ನೀಡಿದ್ದಾರೆ. ಅವರಲ್ಲಿ ಹೆಚ್ಚು ಪ್ಲಸ್ ಪಾಯಿಂಟ್ ಎನಿಸುವುದು ಅವರ ಧ್ವನಿ. ಸ್ವಷ್ಟವಾದ ಭಾಷಾ ಉಚ್ಚಾರಣೆ ಗಮನಸೆಳೆಯುತ್ತದೆ. ಮೊದಲ ಪ್ರಯತ್ನದಲ್ಲೇ ವಿವಿಧ ಶೇಡ್‌ನ ಪಾತ್ರ ಸಿಕ್ಕಿದ್ದು, ಅದನ್ನವರು ತುಂಬಾ ಉತ್ತಮವಾಗಿ ನಿಭಾಯಿಸುವಲ್ಲಿ ಸಫಲವಾಗಿದ್ದಾರೆ. ನಾಯಕಿ ಆಶಿಕಾ ರಂಗನಾಥ್ ಅವರಿಗೂ ಚಾಲೆಂಜಿಂಗ್ ಎನಿಸುವಂತಹ ಪಾತ್ರ ಸಿಕ್ಕಿದ್ದು, ಅದನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ.