ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಾಶಿ ತಲುಪಿದ 'ಲಕ್ಷ್ಮಿಪುತ್ರ' ಸಿನಿಮಾ: ಮಣಿಕರ್ಣಿಕಾ ಘಾಟ್‌ನಲ್ಲಿ ಚಿಕ್ಕಣ್ಣನ ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್!

Lakshmiputra Movie Updates: ನಿರ್ಮಾಪಕ ಎ.ಪಿ. ಅರ್ಜುನ್ ಮತ್ತು ನಟ ಚಿಕ್ಕಣ್ಣ ಜೋಡಿಯ 'ಲಕ್ಷ್ಮಿಪುತ್ರ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಕಾಶಿಯಲ್ಲಿ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ. ಮಣಿಕರ್ಣಿಕಾ ಘಾಟ್ ಮತ್ತು ಗಂಗಾ ನದಿ ತೀರದಲ್ಲಿ ನಡೆದ ಈ ಚಿತ್ರೀಕರಣದಲ್ಲಿ ತಾರಾ ಸೇರಿದಂತೆ 60ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.

ಕಾಶಿಯಲ್ಲಿ ಚಿಕ್ಕಣ್ಣನ 'ಲಕ್ಷ್ಮಿಪುತ್ರ' ಚಿತ್ರಕ್ಕೆ ಅದ್ದೂರಿ ಕ್ಲೈಮ್ಯಾಕ್ಸ್

-

Avinash GR
Avinash GR Feb 8, 2026 6:27 PM

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಯಶಸ್ಸು ಕಂಡಿರುವ ಖ್ಯಾತ ನಿರ್ದೇಶಕ ಎ.ಪಿ. ಅರ್ಜುನ್, ಇದೀಗ ನಿರ್ಮಾಪಕರಾಗಿ ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ʻನ್ಯಾಚುರಲ್ ಸ್ಟಾರ್ʼ ಚಿಕ್ಕಣ್ಣ ನಾಯಕರಾಗಿ ನಟಿಸುತ್ತಿರುವ 'ಲಕ್ಷ್ಮಿಪುತ್ರ' ಚಿತ್ರದ ಮೂಲಕ ಎ.ಪಿ. ಅರ್ಜುನ್ ಅವರು ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಲು ಸಜ್ಜಾಗಿದ್ದಾರೆ. ತಮ್ಮದೇ ಆದ 'ಎ.ಪಿ. ಅರ್ಜುನ್ ಫಿಲ್ಮ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ ಇದೀಗ ಒಂದು ಬಿಗ್‌ ಅಪ್‌ಡೇಟ್ ಸಿಕ್ಕಿದೆ.

ಕಾಶಿಯಲ್ಲಿ ಅದ್ದೂರಿ ಕ್ಲೈಮ್ಯಾಕ್ಸ್ ಚಿತ್ರೀಕರಣ

ಇತ್ತೀಚೆಗಷ್ಟೇ 'ಲಕ್ಷ್ಮಿಪುತ್ರ' ಚಿತ್ರತಂಡವು ಪುಣ್ಯಕ್ಷೇತ್ರ ಕಾಶಿಯಲ್ಲಿ (ವಾರಣಾಸಿ) ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಸೆರೆಹಿಡಿದಿದೆ. 3 ದಿನಗಳ ಕಾಲ ನಡೆದ ಈ ಚಿತ್ರೀಕರಣದಲ್ಲಿ ನಾಯಕ ಚಿಕ್ಕಣ್ಣ, ಹಿರಿಯ ನಟಿ ತಾರಾ ಅನುರಾಧ ಸೇರಿದಂತೆ ಬರೋಬ್ಬರಿ 60ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಕಾಶಿಯ ಐತಿಹಾಸಿಕ ಮಣಿಕರ್ಣಿಕಾ ಘಾಟ್, ಪವಿತ್ರ ಗಂಗಾ ನದಿ ತೀರ, ಬನಾರಸ್‌ನ ಕಿರಿದಾದ ಬೀದಿಗಳು ಹಾಗೂ ಪ್ರಮುಖ ಸ್ಥಳಗಳಲ್ಲಿ ಚಿತ್ರದ ನಿರ್ಣಾಯಕ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಕಥೆಗೆ ಪೂರಕವಾಗಿರುವ ಈ ಸ್ಥಳಗಳು ಸಿನಿಮಾದ ತೂಕವನ್ನು ಹೆಚ್ಚಿಸಿವೆ ಎನ್ನಲಾಗಿದೆ.

Chikkanna: ಚಿಕ್ಕಣ್ಣ ಮದುವೆ ಫಿಕ್ಸ್; ಲವ್ವಾ? ಅರೇಂಜ್ಡ್ ಮ್ಯಾರೇಜಾ? ನಟ ಹೇಳಿದ್ದೇನು?

ಈ ಚಿತ್ರಕ್ಕೆ ವಿಜಯ್ ಸ್ವಾಮಿ ಆಕ್ಷನ್ ಕಟ್ ಹೇಳುತ್ತಿದ್ದು, ಎ.ಪಿ. ಅರ್ಜುನ್ ಅವರೇ ಕಥೆ, ಚಿತ್ರಕಥೆ ಹಾಗೂ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಚಿಕ್ಕಣ್ಣ ಅವರಿಗೆ ಜೋಡಿಯಾಗಿ ಹೊಸ ಪ್ರತಿಭೆ ವಂದಿತಾ ಅವರು ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಾರಾ, ಕುರಿ ಪ್ರತಾಪ್, ಧರ್ಮಣ್ಣ ಕಡೂರು ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ.

Actor Chikkanna: ಹಸೆಮಣೆ ಏರಲು ಸಜ್ಜಾದ ನಟ ಚಿಕ್ಕಣ್ಣ; ಹುಡುಗಿ ಯಾರು? ಮದುವೆ ಯಾವಾಗ?

'ಲಕ್ಷ್ಮಿಪುತ್ರ' ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಹಾಡುಗಳು ಹೈಲೈಟ್ ಆಗಲಿವೆ ಎಂಬುದು ಚಿತ್ರತಂಡದ ಮಾತು. ಸಾಹಸ ನಿರ್ದೇಶನವನ್ನು ಮಾಸ್ ಮಾದ ಅವರು ಸಂಯೋಜಿಸಿದ್ದು, ಗಿರೀಶ್ ಆರ್. ಗೌಡ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಆದಷ್ಟು ಬೇಗ ರಿಲೀಸ್‌

ಸದ್ಯ ಕಾಶಿ ಶೆಡ್ಯೂಲ್ ಮುಗಿಸಿರುವ ಚಿತ್ರತಂಡಕ್ಕೆ, ಇನ್ನು ಕೇವಲ ಎರಡು ದಿನಗಳ ಮಾತಿನ ಭಾಗದ ಚಿತ್ರೀಕರಣ ಬಾಕಿ ಇದೆ. ಶೀಘ್ರದಲ್ಲೇ ಹಾಡುಗಳ ಚಿತ್ರೀಕರಣವನ್ನೂ ಕೈಗೆತ್ತಿಕೊಳ್ಳಲು ಚಿತ್ರತಂಡ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಮೇ ಅಥವಾ ಜೂನ್ ತಿಂಗಳಲ್ಲಿ 'ಲಕ್ಷ್ಮಿಪುತ್ರ' ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರಿಲೀಸ್‌ ಮಾಡಲು ನಿರ್ಮಾಪಕಿ ಅನ್ನಪೂರ್ಣ ಅರ್ಜುನ್ ಹಾಗೂ ಸಹ-ನಿರ್ಮಾಪಕ ರವಿಕಿರಣ್ ಗೌಡ ಯೋಜನೆ ಹಾಕಿಕೊಂಡಿದ್ದಾರೆ.