ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶ್ರೀಲ ಪ್ರಭುಪಾದರ ಜೀವನಾಧಾರಿತ ‘ಶರಣಾಗತಿ’ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್; AI ತಂತ್ರಜ್ಞಾನದಲ್ಲಿ ಮೂಡಿಬರಲಿದೆ ಚಿತ್ರ

ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯು ಇಸ್ಕಾನ್ ಸಂಸ್ಥಾಪಕ ಆಚಾರ್ಯ ಶ್ರೀಲ ಪ್ರಭುಪಾದರ ಜೀವನ ಮತ್ತು ಆಧ್ಯಾತ್ಮಿಕ ಹೋರಾಟವನ್ನು ಬೆಳ್ಳಿತೆರೆಗೆ ತರುತ್ತಿದೆ. ಎಐ ಆಧಾರಿತ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನದಲ್ಲಿ ಈ ಚಿತ್ರವನ್ನು ಅದ್ಭುತವಾಗಿ ರೂಪಿಸಲಾಗುತ್ತಿದೆ. 1965ರಲ್ಲಿ ಅಮೆರಿಕಕ್ಕೆ ಸಾಗಿ ವಿಶ್ವದಾದ್ಯಂತ ಕೃಷ್ಣಪ್ರಜ್ಞೆ ಬೆಳೆಸಿದ ಶ್ರೀಲ ಪ್ರಭುಪಾದರ ಅವರ ತ್ಯಾಗದ ಕಥಾಹಂದರವುಳ್ಳ ಈ ಬಹುನಿರೀಕ್ಷಿತ ಚಿತ್ರವು ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

Hombale Films: ಶ್ರೀಲ ಪ್ರಭುಪಾದರ ಜೀವನಾಧಾರಿತ ‘ಶರಣಾಗತಿ’ ಸಿನಿಮಾ ಘೋಷಣೆ

-

Avinash GR
Avinash GR Nov 10, 2026 4:14 PM

ಭಾರತದ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಹಿರಿಮೆಯನ್ನು ವಿಶ್ವಮಟ್ಟದಲ್ಲಿ ಬಿಂಬಿಸುವ ನಿಟ್ಟಿನಲ್ಲಿ ಮುಂಚೂಣಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಮಹತ್ವದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ (ಇಸ್ಕಾನ್) ಸಂಸ್ಥಾಪಕ ಆಚಾರ್ಯರಾದ ಪರಮಪೂಜ್ಯ ಎ.ಸಿ. ಭಕ್ತಿವೇದಾಂತ ಸ್ವಾಮಿ ಶ್ರೀಲ ಪ್ರಭುಪಾದರ ಜೀವನ ಮತ್ತು ಆಧ್ಯಾತ್ಮಿಕ ಪಯಣವನ್ನು ಬೆಳ್ಳಿತೆರೆಯ ಮೇಲೆ ತರಲು ಸಂಸ್ಥೆ ಮುಂದಾಗಿದ್ದು, ‘ಶರಣಾಗತಿ – ದಿ ಲೈಫ್ ಆಫ್ ಎ ಸರಂಡರ್ಡ್ ಸೋಲ್’ ಹೆಸರಿನ ಚಿತ್ರದ ಅಧಿಕೃತ ಟೈಟಲ್ ಟೀಸರ್ ಅನ್ನು ಬಿಡುಗಡೆ ಮಾಡಿದೆ.

AI ತಂತ್ರಜ್ಞಾನದಲ್ಲಿ ಮೂಡಿಬರಲಿರುವ ಸಿನಿಮಾ

ಟ್ರಾನ್ಸೆಂಡೆಂಟಲ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ರಾಜೇಶ್ ಸಿಂಗ್ ಮತ್ತು ಲೋಹಿತ್ ರಾವ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸಿ ವಿತರಣೆ ಮಾಡಲಿದೆ. ಈ ಚಿತ್ರದ ಪ್ರಮುಖ ಆಕರ್ಷಣೆಯೆಂದರೆ, ಸಿನಿಮಾ ಇತಿಹಾಸದಲ್ಲೇ ವಿನೂತನ ಎನಿಸುವ 'ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೋಷನ್ ಕ್ಯಾಪ್ಚರ್' ತಂತ್ರಜ್ಞಾನವನ್ನು ಇದರಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ವಿಷನ್ ನೆರವಿನಿಂದ ನೈಜ ವ್ಯಕ್ತಿಗಳ ಚಲನವಲನ, ಸೂಕ್ಷ್ಮ ಹಾವಭಾವ ಹಾಗೂ ಶರೀರದ ಭಂಗಿಗಳನ್ನು ಸೆರೆಹಿಡಿದು ಜೀವಂತಿಕೆಯುಳ್ಳ ಡಿಜಿಟಲ್ ಅನಿಮೇಷನ್ ಪಾತ್ರಗಳನ್ನು ಸೃಷ್ಟಿಸುವ ಈ ತಂತ್ರಜ್ಞಾನವು ಪ್ರೇಕ್ಷಕರಿಗೆ ಸಂಪೂರ್ಣ ವಿಭಿನ್ನ ಹಾಗೂ ನವೀನ ದೃಶ್ಯಾನುಭವವನ್ನು ನೀಡಲಿದೆ. ತಮ್ಮ ಆಧ್ಯಾತ್ಮಿಕ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರರ ಮಾರ್ಗದರ್ಶನದಂತೆ, 1965ರಲ್ಲಿ ತಮ್ಮ 69ನೇ ಇಳಿವಯಸ್ಸಿನಲ್ಲಿ ಶ್ರೀಲ ಪ್ರಭುಪಾದರು ಭಗವದ್ಗೀತೆಯ ಸಾರ ಮತ್ತು ಶ್ರೀಕೃಷ್ಣ ಭಕ್ತಿಯ ಸಂದೇಶವನ್ನು ಹೊತ್ತು ಭಾರತದಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು.

‘ಕಾಂತಾರ: ಚಾಪ್ಟರ್‌ 1’ ಸಿನಿಮಾಗೆ ಒಂದು ವರ್ಷ; ಸಂಭ್ರಮಿಸಿದ ರಿಷಬ್‌ ಶೆಟ್ಟಿ – ಹೊಂಬಾಳೆ ಫಿಲ್ಮ್ಸ್! ಆದ್ರೆ, ಈ ಒಂದು ವಿಷಯವನ್ನು ನೀವು ಗಮನಿಸಿದ್ರಾ?

‘ಶರಣಾಗತಿ’ ಚಿತ್ರದ ಕಥಾವಸ್ತು

ಸಂಪನ್ಮೂಲಗಳ ಕೊರತೆಯ ನಡುವೆಯೂ ಕೇವಲ ಅಚಲ ನಂಬಿಕೆ, ದೃಢ ಭಕ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಮುನ್ನಡೆದ ಅವರ ಪಯಣವು, ಕಾಲಾನಂತರದಲ್ಲಿ ವಿಶ್ವದಾದ್ಯಂತ ಲಕ್ಷಾಂತರ ಭಕ್ತರನ್ನು ಆಕರ್ಷಿಸಿ ಜಾಗತಿಕ ಮಟ್ಟದಲ್ಲಿ ಬೃಹತ್ ಕೃಷ್ಣಪ್ರಜ್ಞಾ ಆಂದೋಲನವಾಗಿ ರೂಪಾಂತರಗೊಂಡಿತು. ಪ್ರಭುಪಾದರ ಇದೇ ಸ್ಪೂರ್ತಿದಾಯಕ ಹೋರಾಟ ಮತ್ತು ಆಧ್ಯಾತ್ಮಿಕ ಸಮರ್ಪಣೆಯೇ ‘ಶರಣಾಗತಿ’ ಚಿತ್ರದ ಮುಖ್ಯ ಕಥಾವಸ್ತುವಾಗಿದೆ.

ವಿಷುಯಲ್ ಡೈರೆಕ್ಟರ್ ಶ್ರೀಧರ್ ಶಿಕಾರಿಪುರ

ಚಿತ್ರಕ್ಕೆ ಗೌರ ಶಕ್ತಿ ದಾಸ ಅವರು ಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಶ್ರೀಧರ್ ಶಿಕಾರಿಪುರ ಅವರು ವಿಷುಯಲ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಧ್ಯಾತ್ಮಿಕ ಮಹತ್ವ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನವಾಗಿ ಮೂಡಿಬರಲಿರುವ ಈ ಬಹುನಿರೀಕ್ಷಿತ ಚಿತ್ರವು ಶ್ರೀಲ ಪ್ರಭುಪಾದರ ವ್ಯಾಸಪೂಜೆಯ ಶುಭ ಸಂದರ್ಭವನ್ನು ಪುರಸ್ಕರಿಸಿ, 2027ರ ಆಗಸ್ಟ್ ತಿಂಗಳಲ್ಲಿ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.