ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Pawan Kalyan: ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ಘೋಷಣೆ! ಜೋಡಿ ಬೇರೆಯಾಗಿದ್ದೇಕೆ?

Pawan Kalyan: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan) ಮತ್ತು ಅವರ ಪತ್ನಿ ಅನ್ನಾ ಲೆಜ್ನೆವಾ ( Anna Lezhneva) ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಇಬ್ಬರು ಮಕ್ಕಳನ್ನು ಹೊಂದಿರುವ ಈ ದಂಪತಿ ಪರಸ್ಪರ ಒಪ್ಪಿಗೆ ಹಾಗೂ ಗೌರವದೊಂದಿಗೆ ಬೇರೆಯಾಗುತ್ತಿರುವುದಾಗಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ದಾಂಪತ್ಯ ಜೀವನ ಅಂತ್ಯಗೊಂಡರೂ ಉತ್ತಮ ಸ್ನೇಹಿತರಾಗಿ ಉಳಿಯುವುದರ ಜೊತೆಗೆ ಮಕ್ಕಳ ಜವಾಬ್ದಾರಿಯನ್ನು ಒಟ್ಟಾಗಿ ನಿಭಾಯಿಸುವುದಾಗಿ ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾದ ಕೆಲವೇ ತಿಂಗಳಲ್ಲಿ ವಿಚ್ಛೇದನ ಘೋಷಣೆ!

ಪವನ್‌ ಕಲ್ಯಾಣ್‌ -

Yashaswi Devadiga
Yashaswi Devadiga Nov 10, 2026 10:50 AM

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ (Pawan Kalyan) ಮತ್ತು ಅವರ ಪತ್ನಿ ಅನ್ನಾ ಲೆಜ್ನೆವಾ ( Anna Lezhneva) ತಮ್ಮ 13 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಇಬ್ಬರು ಮಕ್ಕಳನ್ನು ಹೊಂದಿರುವ ಈ ದಂಪತಿ ಪರಸ್ಪರ ಒಪ್ಪಿಗೆ ಹಾಗೂ ಗೌರವದೊಂದಿಗೆ ಬೇರೆಯಾಗುತ್ತಿರುವುದಾಗಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ದಾಂಪತ್ಯ ಜೀವನ ಅಂತ್ಯಗೊಂಡರೂ ಉತ್ತಮ ಸ್ನೇಹಿತರಾಗಿ ಉಳಿಯುವುದರ ಜೊತೆಗೆ ಮಕ್ಕಳ ಜವಾಬ್ದಾರಿಯನ್ನು ಒಟ್ಟಾಗಿ ನಿಭಾಯಿಸುವುದಾಗಿ ತಿಳಿಸಿದ್ದಾರೆ.

ಅಪರೂಪದ ಕ್ಷಣ

ತಮ್ಮ ವೈಯಕ್ತಿಕ ಜೀವನವನ್ನು ಸದಾ ಖಾಸಗಿಯಾಗಿಯೇ ಇಟ್ಟುಕೊಂಡಿದ್ದ ಈ ಜೋಡಿ ಇತ್ತೀಚಿನ ಆರು ತಿಂಗಳ ಅವಧಿಯಲ್ಲಿ ಮಾತ್ರ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕುಟುಂಬದ ಬದುಕಿನ ಕೆಲವು ಅಪರೂಪದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿತ್ತು. ಆದರೆ ಇದೀಗ ಅವರ ವಿಚ್ಛೇದನದ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿದೆ.

ಪವನ್ ಕಲ್ಯಾಣ್ ಮತ್ತು ಅನ್ನಾ ಲೆಜ್ನೆವಾ ಅವರ ಖಾಸಗಿ ವೈವಾಹಿಕ ಜೀವನ

ಪವನ್ ಕಲ್ಯಾಣ್ ಅವರು 2011ರಲ್ಲಿ ಬಿಡುಗಡೆಯಾದ 'ತೀನ್ ಮಾರ್' ಚಿತ್ರದ ಚಿತ್ರೀಕರಣದ ವೇಳೆ ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು ಭೇಟಿಯಾಗಿ ಪ್ರೀತಿಸಿ ವಿವಾಹವಾದರು ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಇವರಿಬ್ಬರು ಯಾವಾಗ ಮತ್ತು ಹೇಗೆ ಭೇಟಿಯಾದರು ಎಂಬ ನಿಖರ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ.

2013ರಲ್ಲಿ ಪವನ್ ಕಲ್ಯಾಣ್ ಅವರ ಮದುವೆಯ ಸುದ್ದಿ ಹೊರಬಂದಾಗ, 'ತೀನ್ ಮಾರ್' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಡಾನಾ ಮಾರ್ಕ್ಸ್ ಅವರನ್ನೇ ಹಲವರು ಪವನ್ ಅವರ ಪತ್ನಿ ಎಂದು ತಪ್ಪಾಗಿ ಭಾವಿಸಿದ್ದರು.

ಇದನ್ನೂ ಓದಿ: Samantha: ಸಿಂಪಲ್ ಮೆಟರ್ನಿಟಿ ಫೋಟೋಶೂಟ್ ಶೇರ್‌ ಮಾಡಿದ ಸಮಂತಾ!

ಈ ದಂಪತಿಯ ಪುತ್ರಿ ಪೋಲೆನಾ ಅಂಜನಾ ಪವನೋವಾ ಯಾವಾಗ ಜನಿಸಿದರು ಎಂಬ ಮಾಹಿತಿ ಕೂಡ ಸಾರ್ವಜನಿಕವಾಗಿ ಸ್ಪಷ್ಟವಾಗಿಲ್ಲ. ಆದರೆ ಇವರ ಪುತ್ರ ಮಾರ್ಕ್ ಶಂಕರ್ ಪವನೋವಿಚ್ 2017ರಲ್ಲಿ ಜನಿಸಿದ್ದಾರೆ.

2023ರ ಜುಲೈನಲ್ಲಿ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪವನ್ ಕಲ್ಯಾಣ್ ಮತ್ತು ಅನ್ನಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು. ಆಗ ಜನಸೇನಾ ಪಕ್ಷದ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ದಂಪತಿಯ ಸಂತೋಷದ ಫೋಟೋ ಹಂಚಿಕೊಳ್ಳುವ ಮೂಲಕ ಈ ವದಂತಿಗಳಿಗೆ ತೆರೆ ಎಳೆಯಲಾಗಿತ್ತು.

ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟ ಅನ್ನಾ ಲೆಜ್ನೆವಾ!

ಹಲವು ವರ್ಷಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪವನ್ ಕಲ್ಯಾಣ್ ಅವರೊಂದಿಗೆ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಅನ್ನಾ, ಈ ವರ್ಷದ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಇನ್‌ಸ್ಟಾಗ್ರಾಂಗೆ ಅಧಿಕೃತವಾಗಿ ಪ್ರವೇಶಿಸಿದ್ದರು.

ಅನ್ನಾ ಅವರನ್ನು ಸಾಮಾಜಿಕ ಜಾಲತಾಣಕ್ಕೆ ಸ್ವಾಗತಿಸಿದ್ದ ಪವನ್ ಕಲ್ಯಾಣ್, "ನೀವು ಈ ಹೊಸ ವೇದಿಕೆಗೆ ಕಾಲಿಡುತ್ತಿರುವ ಸಂದರ್ಭದಲ್ಲಿ ನಿಮಗೆ ಶುಭ ಹಾರೈಸುತ್ತೇನೆ. ನಿಮ್ಮ ಉಪಸ್ಥಿತಿಯಿಂದ ಅರ್ಥಪೂರ್ಣ ಸಂವಾದಗಳು ಮತ್ತು ಸ್ಫೂರ್ತಿದಾಯಕ ವಿಚಾರಗಳು ಮೂಡಿಬರಲಿ ಎಂದು ಆಶಿಸುತ್ತೇನೆ" ಎಂದು ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಅನ್ನಾ, "ಇದು ಬಹಳ ದಿನಗಳಿಂದ ಬಾಕಿ ಉಳಿದಿತ್ತು. ಈಗ ಇದಕ್ಕೆ ಸೂಕ್ತ ಸಮಯ ಬಂದಿದೆ ಎನಿಸುತ್ತಿದೆ" ಎಂದು ಹೇಳಿದ್ದರು.ಏಪ್ರಿಲ್ ತಿಂಗಳಲ್ಲಿ ಅನ್ನಾ ತಮ್ಮ ಪುತ್ರ ಅಕಿರಾ ನಂದನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದರು. ಇದೇ ವೇಳೆ ಒಂದು ವರ್ಷದ ಹಿಂದೆ ಸಿಂಗಾಪುರದ ಶಾಲೆಯೊಂದರಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ತಮ್ಮ ಪುತ್ರ ಮಾರ್ಕ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ ಘಟನೆಯನ್ನೂ ನೆನಪಿಸಿಕೊಂಡಿದ್ದರು.

"ಇಂದು ನಮ್ಮ ಕುಟುಂಬಕ್ಕೆ ಭಾವನಾತ್ಮಕ ದಿನ. ಇದು ಅಕಿರಾ ಅವರ ಹುಟ್ಟುಹಬ್ಬ. ಅವರು ಬೆಳೆಯುತ್ತಿರುವ ವ್ಯಕ್ತಿತ್ವದ ಬಗ್ಗೆ ನಮಗೆ ಹೆಮ್ಮೆಯಿದೆ. ಆಳವಾಗಿ ಯೋಚಿಸುವ, ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಹೊಂದಿರುವ ಹಾಗೂ ದಯಾಳುವಾದ ವ್ಯಕ್ತಿಯಾಗುತ್ತಿದ್ದಾನೆ. ಇದೇ ದಿನ ಮಾರ್ಕ್ ಪ್ರಾಣಾಪಾಯದಿಂದ ಪಾರಾದ ಆ ಬೆಂಕಿ ಅವಘಡ ಸಂಭವಿಸಿ ಒಂದು ವರ್ಷವಾಗಿದೆ. ಇಂದು ನಮ್ಮ ಇಬ್ಬರು ಮಕ್ಕಳನ್ನೂ ಸಂಭ್ರಮಿಸುತ್ತಿದ್ದೇವೆ. ಆದರೆ ಮಾರ್ಕ್ ಪಾಲಿಗೆ ಇದು ಎರಡನೇ ಹುಟ್ಟುಹಬ್ಬದಂತಿದೆ" ಎಂದು ಅನ್ನಾ ಬರೆದುಕೊಂಡಿದ್ದರು.

ತಮ್ಮ ಮಕ್ಕಳ ಫೋಟೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಈ ದಂಪತಿಯ ಪಾಲಿಗೆ ಅಪರೂಪದ ಸಂಗತಿಯಾಗಿತ್ತು.

ಪವನ್ ಕಲ್ಯಾಣ್ ಅವರ ರಾಜಕೀಯ ಹೋರಾಟದ ದಿನಗಳನ್ನು ನೆನೆದಿದ್ದ ಅನ್ನಾ

2024ರ ವಿಧಾನಸಭಾ ಚುನಾವಣೆಗೆ ಮುನ್ನ ಪವನ್ ಕಲ್ಯಾಣ್ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಎದುರಿಸಿದ ಕಷ್ಟದ ದಿನಗಳ ಬಗ್ಗೆಯೂ ಅನ್ನಾ ಜೂನ್ ತಿಂಗಳಲ್ಲಿ ಭಾವುಕವಾಗಿ ಬರೆದುಕೊಂಡಿದ್ದರು.

"ಅವರು ಸಾರ್ವಜನಿಕವಾಗಿ ಹೋರಾಟಗಳನ್ನು ಎದುರಿಸುತ್ತಿದ್ದಾಗ, ನಾನು ಮನೆಯಲ್ಲಿ ನಮ್ಮ ಮಕ್ಕಳಿಗಾಗಿ ಧೈರ್ಯವಾಗಿರಲು ಪ್ರಯತ್ನಿಸುತ್ತಿದ್ದೆ. ಅನೇಕ ಬಾರಿ ಸಂಪೂರ್ಣ ಒಂಟಿತನ ಅನುಭವಿಸುತ್ತಿದ್ದೆ. ನನಗೂ ಕುಗ್ಗಿಹೋಗಬೇಕು ಎನಿಸಿದ ದಿನಗಳಿದ್ದವು. ಭಯಗೊಂಡ ಕ್ಷಣಗಳೂ ಇದ್ದವು. ಒಬ್ಬ ವ್ಯಕ್ತಿ ತಾನು ನಂಬಿದ ವಿಚಾರಕ್ಕಾಗಿ ಇನ್ನೆಷ್ಟು ಕಷ್ಟಗಳನ್ನು ಸಹಿಸಿಕೊಳ್ಳಲು ಸಾಧ್ಯ ಎಂದು ಯೋಚಿಸಿದ ದಿನಗಳೂ ಇದ್ದವು" ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದರು.

ಈ ಪೋಸ್ಟ್ ಮೂಲಕ ಕಳೆದ ಕೆಲವು ವರ್ಷಗಳು ತಮ್ಮ ಕುಟುಂಬಕ್ಕೆ ಸುಲಭವಾಗಿರಲಿಲ್ಲ ಎಂಬುದನ್ನು ಅನ್ನಾ ಬಹಿರಂಗಪಡಿಸಿದ್ದರು.

ಅನ್ನಾ ಪದವಿ ಪ್ರದಾನ ಸಮಾರಂಭದಲ್ಲಿ ಪವನ್ ಕಲ್ಯಾಣ್ ಭಾಗಿ

ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಪವನ್ ಕಲ್ಯಾಣ್ ತಮ್ಮ ಪತ್ನಿಯ ಸಾಧನೆಗಳಿಗೆ ಬೆಂಬಲವಾಗಿ ನಿಂತಿದ್ದರು. ಅನ್ನಾ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರೊಂದಿಗೆ ಹಾಜರಿದ್ದು ಸಂತಸ ಹಂಚಿಕೊಂಡಿದ್ದರು.

ಜುಲೈ ತಿಂಗಳಲ್ಲಿ ಅನ್ನಾ ಮತ್ತೊಂದು ವಿಚಾರವನ್ನು ಸ್ಪಷ್ಟಪಡಿಸಿದ್ದರು. ತಮ್ಮನ್ನು ಲೆಜ್ನೆವಾ ಎಂದು ಕರೆಯುವ ಬದಲು ಮದುವೆಯ ನಂತರದ ಉಪನಾಮವಾದ 'ಕೊನಿಡೆಲಾ' ಎಂದು ಕರೆಯುವಂತೆ ಮನವಿ ಮಾಡಿದ್ದರು.

ಇದೇ ವೇಳೆ ಹಳೆಯ ಗಾಯದ ಸಮಸ್ಯೆಯಿಂದ ಪವನ್ ಕಲ್ಯಾಣ್ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದಾಗಲೂ ಅನ್ನಾ ಭಾವುಕ ಪೋಸ್ಟ್ ಹಂಚಿಕೊಂಡಿದ್ದರು.

ಅನ್ನಾ ತಮ್ಮ ಕುಟುಂಬದ ಜೀವನ, ಫಿಟ್‌ನೆಸ್ ಮತ್ತು ವೈಯಕ್ತಿಕ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ನಿರಂತರವಾಗಿ ಹಂಚಿಕೊಳ್ಳುತ್ತಿದ್ದರು. ಪವನ್ ಕಲ್ಯಾಣ್ ಅವರ ಅಭಿಮಾನಿಗಳೂ ಅವರ ಪೋಸ್ಟ್‌ಗಳನ್ನು ಕುತೂಹಲದಿಂದ ಗಮನಿಸುತ್ತಿದ್ದರು. ಆದರೆ ಅಕ್ಟೋಬರ್ ತಿಂಗಳಲ್ಲಿ ಯಾವುದೇ ಮುನ್ಸೂಚನೆ ನೀಡದೆ ಅನ್ನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು. ನವೆಂಬರ್‌ನಲ್ಲಿ ದಂಪತಿ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ.

ವಿಚ್ಛೇದನದ ಬಗ್ಗೆ ಪವನ್ ಕಲ್ಯಾಣ್ ಮತ್ತು ಅನ್ನಾ ಜಂಟಿ ಹೇಳಿಕೆಯಲ್ಲಿ ಏನಿದೆ?

ಸೋಮವಾರ ತಡರಾತ್ರಿ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ದಂಪತಿ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ.

"ನಮ್ಮ ಹಿತೈಷಿಗಳು ಹಾಗೂ ಆತ್ಮೀಯರೇ, ನಮ್ಮ ಜೀವನದ ಮಹತ್ವದ ಭಾಗವನ್ನು ಒಟ್ಟಿಗೆ ಕಳೆದ ನಂತರ, ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮ ವೈವಾಹಿಕ ಜೀವನ ಅಂತ್ಯಗೊಂಡಿದ್ದರೂ, ನಾವು ಉತ್ತಮ ಸ್ನೇಹಿತರಾಗಿ ಮತ್ತು ನಮ್ಮ ಮುದ್ದಾದ ಮಕ್ಕಳಿಗೆ ಬದ್ಧರಾಗಿರುವ ಪೋಷಕರಾಗಿ ಉಳಿಯುತ್ತೇವೆ. ಅವರ ಸಂತೋಷ ಮತ್ತು ಭವಿಷ್ಯ ಯಾವಾಗಲೂ ನಮ್ಮಿಬ್ಬರ ಮೊದಲ ಆದ್ಯತೆಯಾಗಿರುತ್ತದೆ.

ನಮ್ಮ ಜೀವನದ ಈ ವೈಯಕ್ತಿಕ ಬದಲಾವಣೆಯ ಸಂದರ್ಭದಲ್ಲಿ ದಯವಿಟ್ಟು ನಮ್ಮ ಖಾಸಗಿತನವನ್ನು ಗೌರವಿಸಿ, ನಿಮ್ಮ ತಿಳುವಳಿಕೆ ಮತ್ತು ಸಹಕಾರ ನೀಡಬೇಕೆಂದು ಕೋರುತ್ತೇವೆ. ಈ ಪ್ರಯಾಣದುದ್ದಕ್ಕೂ ನಮ್ಮೊಂದಿಗೆ ನಿಂತ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪವನ್ ಕಲ್ಯಾಣ್ ಕೊನಿಡೆಲಾ ಮತ್ತು ಅನ್ನಾ ಕೊನಿಡೆಲಾ ಎಂಬ ಹೆಸರಿನಲ್ಲಿ ಹೇಳಿಕೆಗೆ ಸಹಿ ಹಾಕಲಾಗಿದೆ.

ಇನ್ನು ಕೊನಿಡೆಲಾ ಕುಟುಂಬಕ್ಕೆ ಹತ್ತಿರದ ಮೂಲವೊಂದು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿರುವ ಮಾಹಿತಿಯ ಪ್ರಕಾರ, ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪವನ್ ಕಲ್ಯಾಣ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರತ್ಯೇಕ ಪ್ರತಿಕ್ರಿಯೆ ನೀಡಿಲ್ಲ.

1997ರಲ್ಲಿ ವಿಶಾಖಪಟ್ಟಣದ ನಂದಿನಿ ಎಂಬುವವರನ್ನು ಪವನ್ ಕಲ್ಯಾಣ್ ವಿವಾಹವಾಗಿದ್ದರು. 1996ರಲ್ಲಿ 'ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅವರು, ನಟನಾ ತರಬೇತಿಗಾಗಿ ವಿಶಾಖಪಟ್ಟಣದಲ್ಲಿ ನಟನಾ ತರಬೇತುದಾರ ಹಾಗೂ ಬರಹಗಾರ ಸತ್ಯಾನಂದ್ ಅವರ ಬಳಿ ಅಭ್ಯಾಸ ಮಾಡಿದ್ದರು.

ವರದಿಗಳ ಪ್ರಕಾರ, ಪವನ್ ಮತ್ತು ನಂದಿನಿ 1999ರಲ್ಲೇ ಬೇರೆಯಾಗಿದ್ದರು. ಆದರೆ ಈ ಮದುವೆ ವಿಚಾರ 2007ರಲ್ಲಿ ನಂದಿನಿ ಅವರು ಪವನ್ ಕಲ್ಯಾಣ್ ಹಾಗೂ ಅವರ ಕುಟುಂಬದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಬಳಿಕ ಸಾರ್ವಜನಿಕವಾಗಿ ಹೆಚ್ಚು ಚರ್ಚೆಗೆ ಬಂದಿತ್ತು.

ಪವನ್ ಕಲ್ಯಾಣ್ ತಮ್ಮನ್ನು ತೊರೆದಿದ್ದಾರೆ ಮತ್ತು ಎರಡನೇ ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದ ನಂದಿನಿ, ತಿಂಗಳಿಗೆ 5 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಕೋರಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು. ಕೊನೆಗೆ ಪ್ರಕರಣ ಇತ್ಯರ್ಥಗೊಂಡು, 2008ರಲ್ಲಿ ಒಂದು ಬಾರಿಯ ಪರಿಹಾರ ಮೊತ್ತದೊಂದಿಗೆ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿತ್ತು.

ನಟಿ ರೇಣು ದೇಸಾಯಿ ಜೊತೆ ಎರಡನೇ ಮದುವೆ

2000ರಲ್ಲಿ 'ಬದ್ರಿ' ಚಿತ್ರದ ಚಿತ್ರೀಕರಣದ ವೇಳೆ ನಟಿ ರೇಣು ದೇಸಾಯಿ ಮತ್ತು ಪವನ್ ಕಲ್ಯಾಣ್ ಪರಿಚಯವಾಗಿದ್ದರು. ಇವರಿಬ್ಬರ ಸಂಬಂಧದಿಂದ 2004ರಲ್ಲಿ ಪುತ್ರ ಅಕಿರಾ ನಂದನ್ ಜನಿಸಿದ್ದರು.ನಂದಿನಿ ನ್ಯಾಯಾಲಯದ ಮೆಟ್ಟಿಲೇರಿದ ಸಂದರ್ಭದಲ್ಲಿ, ಪವನ್ ಮತ್ತು ರೇಣು ಕಾನೂನುಬದ್ಧವಾಗಿ ವಿವಾಹವಾಗಿಲ್ಲ, ಲಿವ್-ಇನ್ ಸಂಬಂಧದಲ್ಲಿದ್ದಾರೆ ಎಂದು ಪವನ್ ಪರ ವಕೀಲರು ವಾದಿಸಿದ್ದರು ಎನ್ನಲಾಗಿದೆ.

ನಂತರ 2009ರಲ್ಲಿ ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ವಿವಾಹವಾಗಿದ್ದರು. 2010ರಲ್ಲಿ ಇವರಿಗೆ ಆದ್ಯಾ ಎಂಬ ಪುತ್ರಿ ಜನಿಸಿದ್ದರು. ಆದರೆ 2011ರಲ್ಲಿ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, 2012ರಲ್ಲಿ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿತ್ತು.

ಇದನ್ನೂ ಓದಿ: ನಟ ಪವನ್ ಕಲ್ಯಾಣ್ ವೈವಾಹಿಕ ಜೀವನದಲ್ಲಿ ಬಿರುಕು; 3ನೇ ಪತ್ನಿಗೂ ವಿಚ್ಛೇದನ ನೀಡಿದ ಆಂಧ್ರ ಡಿಸಿಎಂ

ಇತ್ತೀಚಿನ ವರ್ಷಗಳಲ್ಲಿ ತಮ್ಮ ವೈಯಕ್ತಿಕ ಸಂಬಂಧದ ಕಾರಣಕ್ಕೆ ಎದುರಿಸುತ್ತಿರುವ ನಿರಂತರ ಟ್ರೋಲಿಂಗ್ ಬಗ್ಗೆ ರೇಣು ದೇಸಾಯಿ ಹಲವು ಬಾರಿ ಧ್ವನಿ ಎತ್ತಿದ್ದಾರೆ. ತಮ್ಮನ್ನು ಕೇವಲ ಪವನ್ ಕಲ್ಯಾಣ್ ಅವರೊಂದಿಗಿನ ಸಂಬಂಧದ ಮೂಲಕ ಗುರುತಿಸುವುದನ್ನು ಅವರು ಖಂಡಿಸಿದ್ದಾರೆ.