ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಅಮರ್ಥ' ಚಿತ್ರಕ್ಕಾಗಿ 3ನೇ ಬಾರಿಗೆ ಒಂದಾದ ಶ್ರೀನಗರ ಕಿಟ್ಟಿ - ಮೇಘನಾ ರಾಜ್: ಸೆಪ್ಟೆಂಬರ್ 18ಕ್ಕೆ ಸಿನಿಮಾ ರಿಲೀಸ್!

ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಮೂರನೇ ಬಾರಿಗೆ ತೆರೆಮೇಲೆ ಒಂದಾಗಿರುವ 'ಅಮರ್ಥ' ಸಿನಿಮಾ ಸೆಪ್ಟೆಂಬರ್ 18 ರಂದು ಬಿಡುಗಡೆಯಾಗಲಿದೆ. ಹಿರಿಯ ನಟ ಸುಂದರ್ ರಾಜ್ ಮೋಷನ್ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಪಂಚರಂಗಿ ಫಿಲಂಸ್ ನಿರ್ಮಿಸಿರುವ, ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ನಿರ್ದೇಶನದ ಈ ಚಿತ್ರಕ್ಕೆ ಯೂ/ಎ ಪ್ರಮಾಣಪತ್ರ ಸಿಕ್ಕಿದೆ.

'ಅಮರ್ಥ' ಚಿತ್ರಕ್ಕಾಗಿ 3ನೇ ಬಾರಿಗೆ ಒಂದಾದ ಶ್ರೀನಗರ ಕಿಟ್ಟಿ - ಮೇಘನಾ ರಾಜ್

-

Avinash GR
Avinash GR Aug 5, 2026 3:52 PM

ಸ್ಯಾಂಡಲ್‌ವುಡ್‌ ನಟ ಶ್ರೀನಗರ ಕಿಟ್ಟಿ ಹಾಗೂ ನಟಿ ಮೇಘನಾ ರಾಜ್ ನಾಯಕ-ನಾಯಕಿಯಾಗಿ ನಟಿಸಿರುವ 'ಅಮರ್ಥ' ಸಿನಿಮಾವು ಇದೇ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರ್‌ ರಾಜ್ ಅವರು ಚಿತ್ರದ ಬಿಡುಗಡೆ ದಿನಾಂಕವನ್ನು ಒಳಗೊಂಡ ಮೋಷನ್ ಪೋಸ್ಟರ್ ಅನಾವರಣಗೊಳಿಸಿದರು.

ಪಂಚರಂಗಿ ಫಿಲಂಸ್ ಲಾಂಛನದಲ್ಲಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಗುರು ಹೆಗ್ಡೆ ಅವರು ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದು, ಗುರು ಹೆಗ್ಡೆ ಮತ್ತು 'ಮಡಮಕ್ಕಿ' ಖ್ಯಾತಿಯ ವಿನಯ್ ಪ್ರೀತಮ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ 'ಯು/ಎ' ಪ್ರಮಾಣಪತ್ರ ದೊರೆತಿದೆ.

ಏನಿದು 'ಅಮರ್ಥ'?

ಶೀರ್ಷಿಕೆಯ ಕುರಿತು ಮಾಹಿತಿ ನೀಡಿದ ನಿರ್ದೇಶಕ-ನಿರ್ಮಾಪಕ ಗುರು ಹೆಗ್ಡೆ, "ಅಮರ್ಥ ಎಂದರೆ ನಮ್ಮೆಲ್ಲರನ್ನು ಮೀರಿದ ಒಂದು ಅದೃಶ್ಯ ಶಕ್ತಿ. ಸಾಮಾನ್ಯವಾಗಿ ಜೀವನದಲ್ಲಿ ಏನೇ ನಡೆದರೂ ದೇವರ ದಯೆ ಅಥವಾ ಹಣೆಬರಹ ಎನ್ನುತ್ತೇವೆ. ಆದರೆ ಅದಕ್ಕೂ ಮೀರಿದ ಒಂದು ಶಕ್ತಿ ಇದೆ ಎಂಬುದೇ ಅಮರ್ಥ" ಎಂದಿದ್ದಾರೆ. ಬಾಲ್ಯದಿಂದ ಆರಂಭವಾಗುವ ಗೆಳೆಯರ ಶಾಲಾ ಜೀವನ, ನಂತರ ಪ್ರತ್ಯೇಕಗೊಳ್ಳುವ ಅವರ ದಾರಿಗಳು ಮತ್ತು ಕೊನೆಗೆ ಎಲ್ಲರೂ ಒಂದೆಡೆ ಸೇರಿದಾಗ ಎದುರಾಗುವ ಘಟನೆಗಳ ಸುತ್ತ ಈ ಸಿನಿಮಾ ಸಾಗಲಿದೆ.‌

Meghana Raj: ಪತಿ ಚಿರಂಜೀವಿ ಸರ್ಜಾ ಕನಸು ಈಡೇರಿಸಿದ ನಟಿ ಮೇಘನಾ ರಾಜ್‌ ! ರಜನಿ ಜೊತೆಗಿನ ಫೋಟೋ ಶೇರ್ ಮಾಡಿದ್ಯಾಕೆ?

ಮೂರನೇ ಬಾರಿಗೆ ಜೋಡಿಯಾದ ಕಿಟ್ಟಿ - ಮೇಘನಾ

'ಬಹು ಪರಾಕ್' ಹಾಗೂ 'ಬುದ್ಧಿವಂತ 2' ಚಿತ್ರಗಳ ನಂತರ ಶ್ರೀನಗರ ಕಿಟ್ಟಿ ಮತ್ತು ಮೇಘನಾ ರಾಜ್ ಮೂರನೇ ಬಾರಿಗೆ 'ಅಮರ್ಥ' ಮೂಲಕ ಒಂದಾಗಿದ್ದಾರೆ. "ಬಾಲ್ಯದಿಂದ ಒಬ್ಬ ಹುಡುಗನ ಪಯಣ ಹೇಗಿರುತ್ತದೆ ಎಂಬುದೇ ಈ ಮುದ್ದಾದ ಕಥೆಯ ಹಂದರ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಮಂಗಳೂರು ಹಾಗೂ ಬೆಂಗಳೂರಿನಲ್ಲಿ 48 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ" ಎಂದು ಶ್ರೀನಗರ ಕಿಟ್ಟಿ ಹೇಳಿದ್ದಾರೆ.

ʻಪ್ರಜ್ವಲ್‌ ಸಜ್ಜನ ವ್ಯಕ್ತಿ, ಯಾವುದೇ ವಿವಾದಗಳಿಗೆ ತಲೆ ಹಾಕಿದವರಲ್ಲʼ; ʻಡೈನಾಮಿಕ್‌ ಪ್ರಿನ್ಸ್‌ʼ ಬೆಂಬಲಕ್ಕೆ ನಿಂತ ಮೇಘನಾ ರಾಜ್ ಸರ್ಜಾ

"ಚಿತ್ರದಲ್ಲಿ ನನ್ನ ಪಾತ್ರದ ಹೆಸರು 'ಲಕ್ಷ್ಮಿ'. ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿರುವ ಈ ಹುಡುಗಿಗೆ ಕಿಟ್ಟಿ ಅವರ ಪಾತ್ರ ಹೇಗೆ ಆಸರೆಯಾಗಿ ನಿಲ್ಲುತ್ತದೆ ಎಂಬುದೇ ಚಿತ್ರದ ಮುಖ್ಯ ಕಥಾವಸ್ತು" ಎಂದು ಮೇಘನಾ ರಾಜ್ ಎಂದು ಹೇಳಿದ್ದಾರೆ.

ಈ ಚಿತ್ರದಲ್ಲಿ ಕೃತಿ ಶೆಟ್ಟಿ, ಉಷಾ ಭಂಡಾರಿ, ಮಂಜು ಭಾಷಿಣಿ, ಗುರು ಹೆಗ್ಡೆ ಮತ್ತು ತಮ್ಮಣ್ಣ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಛಾಯಾಗ್ರಹಣವನ್ನು ಗುರುಪ್ರಶಾಂತ್ ರೈ ಮಾಡಿದ್ದಾರೆ. ಸಂಗೀತ ನಿರ್ದೇಶನವನ್ನು ಶಿನಾಯ್ ವಿ ಜೋಸೆಫ್, ಪಂಚಮ್ ಜೀವ ಮಾಡಿದ್ದರೆ, ಹಿನ್ನೆಲೆ ಸಂಗೀತವನ್ನು ಶ್ರೀಧರ್ ವಿ ಸಂಭ್ರಮ್, ಬಲರಾಮ್ ಮತ್ತು ರಾಕೇಶ್ ಆಚಾರ್ ನಿಭಾಯಿಸಿದ್ದಾರೆ.