ʻವಾರಣಾಸಿʼ ಸಿನಿಮಾ 2 ಭಾಗಗಳಲ್ಲಿ ತೆರೆಗೆ ಬರಲಿದೆಯಾ? ಮಿಲಿಯನ್ ಡಾಲರ್ ಪ್ರಶ್ನೆಗೆ ರಾಜಮೌಳಿ ಕೊಟ್ರು ಉತ್ತರ!
ಬಾಹುಬಲಿ ಮತ್ತು ಆರ್‌ಆರ್‌ಆರ್ ಚಿತ್ರಗಳ ಯಶಸ್ಸಿನ ನಂತರ ನಿರ್ದೇಶಕ ಎಸ್.ಎಸ್. ರಾಜಮೌಳಿ, ಮಹೇಶ್ ಬಾಬು ನಾಯಕತ್ವದ 'ವಾರಣಾಸಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸದ್ಯ ಈ ಚಿತ್ರವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ರಾಜಮೌಳಿ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.
-
ʻಬಾಹುಬಲಿʼ, ʻಆರ್‌ಆರ್‌ಆರ್ʼ ಸಿನಿಮಾಗಳ ನಂತರ ನಿರ್ದೇಶಕ ರಾಜಮೌಳಿ ಅವರು ʻವಾರಣಾಸಿʼ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಇದು ಮಹೇಶ್ ಬಾಬು ನಾಯಕತ್ವದಲ್ಲಿ ಸಿದ್ಧಗೊಳ್ಳುತ್ತಿರುವ ಬಹುನಿರೀಕ್ಷಿತ ಸಿನಿಮಾ. ಅಂದಹಾಗೆ, ಈ ಸಿನಿಮಾ ಕೂಡ ಬಾಹುಬಲಿ ಮಾದರಿಯಲ್ಲಿ ಎರಡು ಪಾರ್ಟ್‌ಗಳಲ್ಲಿ ಬರಲಿದೆಯಾ ಎಂಬ ಪ್ರಶ್ನೆ ಮೂಡಿತ್ತು. ಅದಕ್ಕೀಗ ರಾಜಮೌಳಿಯಿಂದಲೇ ಸ್ಪಷ್ಟ ಉತ್ತರ ಸಿಕ್ಕಿದೆ.
ಒಂದೇ ಭಾಗದಲ್ಲಿ ಬರಲಿದೆ ವಾರಣಾಸಿ
ಫ್ರಾನ್ಸ್‌ನಲ್ಲಿ ನಡೆದ ಅನೆಸಿ ಇಂಟರ್ನ್ಯಾಷನಲ್ ಅನಿಮೇಷನ್ ಫಿಲ್ಮ್ ಫೆಸ್ಟಿವಲ್‌ನ ಮಾಸ್ಟರ್‌ಕ್ಲಾಸ್‌ನಲ್ಲಿ ಮಾತನಾಡಿದ ರಾಜಮೌಳಿ, ವಾರಣಾಸಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. "ವಾರಣಾಸಿಯನ್ನು ಒಂದು ಸ್ವತಂತ್ರ ಸಿನಿಮಾವಾಗಿ ರೂಪಿಸಲಾಗುತ್ತಿದೆ. ಬೇರೆ ಪಾರ್ಟ್ ಇರುವುದಿಲ್ಲ. 'ಬಾಹುಬಲಿ' ಚಿತ್ರದಂತೆ ಫ್ರಾಂಚೈಸಿಯಾಗಿ (ಭಾಗ-೧, ಭಾಗ-೨) ವಿಸ್ತರಣೆಯಾಗುವುದಿಲ್ಲ" ಎಂದು ಹೇಳುವ ಮೂಲಕ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ತಂದೆ-ಮಗನ ದೃಶ್ಯಗಳು ಹೈಲೈಟ್
ಸದ್ಯ 'ವಾರಣಾಸಿ' ಚಿತ್ರದ ಶೂಟಿಂಗ್‌ನಿಂದ ಸದ್ಯ ಬಿಡುವು ಪಡೆದಿರುವ ರಾಜಮೌಳಿ, ಈ ಪ್ರಾಜೆಕ್ಟ್‌ನ ಬೃಹತ್ ಕ್ಯಾನ್ವಾಸ್ ಮತ್ತು ಅದರ ಭಾವನಾತ್ಮಕ ತಿರುಳಿನ ಬಗ್ಗೆ ಮಾತನಾಡಿದ್ದಾರೆ. "ಈ ಚಿತ್ರವು ಅಂಟಾರ್ಕ್ಟಿಕಾದ ವಿಪರೀತ ಚಳಿ, ರಾಮಾಯಣದ ಪೌರಾಣಿಕ ಅಂಶಗಳು, ನೈಸರ್ಗಿಕ ವಿಕೋಪಗಳು ಮತ್ತು ಅದ್ಭುತ ಫ್ಯಾಂಟಸಿ ಅಂಶಗಳು ಒಳಗೊಂಡ ಭವ್ಯವಾದ ದೃಶ್ಯಗಳನ್ನು ಹೊಂದಿದೆ. ಇವೆಲ್ಲದರ ಅನುಭವ ನಿಮಗೆ ಸಿಗಲಿದೆ. ಆದರೆ ಈ ಸಿನಿಮಾದ ನಿಜವಾದ ಹೃದಯ ಎಂದರೆ, ಅದು ತಂದೆ-ಮಗನ ಆಳವಾದ ವೈಯಕ್ತಿಕ ಕಥೆಯಲ್ಲಿದೆ" ಎಂದು ರಾಜಮೌಳಿ ಹೇಳಿದ್ದಾರೆ.
Varanasi Movie: ರಾಜಮೌಳಿ 'ವಾರಣಾಸಿ' ಚಿತ್ರಕ್ಕೆ ನೀರಿನ ಸಮಸ್ಯೆ; ಶೂಟಿಂಗ್ ಸ್ಥಗಿತ
ಪ್ರೇಕ್ಷಕರು ಮಹಾ ಸಂಘರ್ಷವನ್ನು ನೋಡಲಿದ್ದಾರೆ
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಾಜಮೌಳಿ ತಂದೆ ಹಾಗೂ ವಾರಣಾಸಿ ಸಿನಿಮಾದ ರೈಟರ್ ವಿ. ವಿಜಯೇಂದ್ರ ಪ್ರಸಾದ್, "ವಾರಣಾಸಿ ಚಿತ್ರದಲ್ಲಿ ರಾಮಾಯಣದಿಂದ ಪ್ರೇರಿತವಾದ ಶ್ರೀರಾಮ ಮತ್ತು ಕುಂಭಕರ್ಣನ ನಡುವಿನ 30 ನಿಮಿಷಗಳ ಬೃಹತ್ ಯುದ್ಧದ ಸನ್ನಿವೇಶವಿರಲಿದೆ. ಪ್ರೇಕ್ಷಕರು ಹನುಮಂತನ ಬಾಲ, ರಥ ಮತ್ತು ವೀಕ್ಷಕರನ್ನು ಮಂತ್ರಮುಗ್ಧಗೊಳಿಸುವ ಮಹಾ ಸಂಘರ್ಷವನ್ನು ನೋಡಲಿದ್ದಾರೆ" ಎಂದು ಹೇಳಿದ್ದರು.
Varanasi: ‘ವಾರಣಾಸಿ’ ಸಿನಿಮಾದಲ್ಲಿ ರಾಮ-ಕುಂಭಕರ್ಣನ ಮಧ್ಯೆ ಯುದ್ಧ ಹೇಗಿರಲಿದೆ?
ಮಹೇಶ್ ಬಾಬುಗೆ ಶ್ರೀರಾಮನ ಪಾತ್ರ
'ವಾರಣಾಸಿ' ಈ ಚಿತ್ರದಲ್ಲಿ ಮಹೇಶ್ ಬಾಬು, ಪೃಥ್ವಿರಾಜ್ ಸುಕುಮಾರನ್ ಮತ್ತು ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪುರಾಣ, ಭಾರತೀಯ ಜಾನಪದ ಮತ್ತು ಸೈನ್ಸ್ ಫಿಕ್ಷನ್ ಒಳಗೊಂಡಿರುವ 'ವಾರಣಾಸಿ', ಟೈಮ್ ಟ್ರಾವೆಲ್ ಅಂಶಗಳೊಂದಿಗೆ ಜಗತ್ತಿನಾದ್ಯಂತ ಸಾಗುವ ಸಾಹಸಮಯವಾಗಿ ಮೂಡಿಬರುತ್ತಿರುವ ಚಿತ್ರ ಎಂದು ಹೇಳಲಾಗಿದೆ. ಮಹೇಶ್ ಬಾಬು ಅವರು ಶ್ರೀರಾಮನ ಪಾತ್ರವನ್ನು ಪೋಷಿಸುತ್ತಿರುವುದು ಖಚಿತವಾಗಿದ್ದರೂ, ಪೃಥ್ವಿರಾಜ್ ಸುಕುಮಾರನ್ ಕುಂಭಕರ್ಣನ ಪಾತ್ರವನ್ನು ಮಾಡಲಿದ್ದಾರೆ ಎಂಬ ವರದಿಗಳನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಖಚಿತಪಡಿಸಬೇಕಾಗಿದೆ.