ತಮಿಳು ನಟ ಸೂರ್ಯ ಜೊತೆಗೆ ಕೈಜೋಡಿಸಿದ ಹೊಂಬಾಳೆ ಫಿಲ್ಮ್ಸ್; 'ಜೈ ಭೀಮ್' ನಿರ್ದೇಶಕನಿಗೆ ಮತ್ತೊಂದು ಚಾನ್ಸ್
ಕನ್ನಡದ ಹೆಮ್ಮೆಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್, ನಟ ಸೂರ್ಯ ಮತ್ತು 'ಜೈ ಭೀಮ್' ಖ್ಯಾತಿಯ ನಿರ್ದೇಶಕ ಟಿ.ಜೆ. ಜ್ಞಾನವೇಲ್ ಅವರೊಂದಿಗೆ ತಮ್ಮ ಹೊಸ ತಮಿಳು ಚಿತ್ರವನ್ನು ಅಧಿಕೃತವಾಗಿ ಘೋಷಿಸಿದೆ. ನೈಜ ಘಟನೆಗಳ ಆಧಾರಿತ ಈ ಕಮರ್ಷಿಯಲ್ ಚಿತ್ರಕ್ಕೆ ಕಯಾದು ಲೋಹರ್ ನಾಯಕಿಯಾಗಿದ್ದು, ಸಾಯಿ ಅಭ್ಯಂಕರ್ ಸಂಗೀತ ನೀಡಲಿದ್ದಾರೆ.
-
ಕನ್ನಡದ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಿಂದ ಹೊಸ ಸಿನಿಮಾಗಳು ಘೋಷಣೆ ಆಗುತ್ತಿಲ್ಲ ಎಂಬ ಟಾಕ್ ಜೋರಾಗಿಯೇ ಕೇಳಿಬಂದಿತ್ತು. ಈ ಮಧ್ಯೆ ಕೆಲ ದಿನಗಳ ಹಿಂದೆ ಮರಾಠಿ-ಹಿಂದಿ ಸಿನಿಮಾವೊಂದನ್ನು ಹೊಂಬಾಳೆ ಅನೌನ್ಸ್ ಮಾಡಿತ್ತು. ಈ ಬಾರಿ ದೊಡ್ಡ ಘೋಷಣೆಯನ್ನೇ ಮಾಡಿದೆ. ಹೌದು, ʻರಘು ತಾತʼ ಸಿನಿಮಾದ ನಂತರ ಮತ್ತೊಂದು ತಮಿಳು ಸಿನಿಮಾವನ್ನು ಅನೌನ್ಸ್ ಮಾಡಲು ಹೊಂಬಾಳೆ ಅಣಿಯಾಗಿದೆ. ಅದಕ್ಕಾಗಿ ನಟ ಸೂರ್ಯ ಅವರ ಕಾಲ್‌ಶೀಟ್ ಪಡೆಯುವಲ್ಲಿ ಸಕ್ಸಸ್ ಆಗಿದೆ.
ʻಜೈ ಭೀಮ್ʼ ಡೈರೆಕ್ಟರ್‌ಗೆ ಮತ್ತೊಮ್ಮೆ ಚಾನ್ಸ್
'ಕರುಪ್ಪು' ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಸೂರ್ಯ ಅವರು ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯೊಂದಿಗೆ ಅಧಿಕೃತವಾಗಿ ಕೈಜೋಡಿಸಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಮೂಲಕ ನಟ ಸೂರ್ಯ ಮತ್ತು ನಿರ್ದೇಶಕ ಟಿ.ಜೆ. ಜ್ಞಾನವೇಲ್ ಮತ್ತೆ ಒಂದಾಗುತ್ತಿದ್ದಾರೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ 'ಜೈ ಭೀಮ್' ಚಿತ್ರ ವಿಮರ್ಶಕರಿಂದ ಅಪಾರ ಪ್ರಶಂಸೆ ಗಳಿಸಿತ್ತು.
ನಾಯಕಿಯಾಗಿ ಕಯಾದು ಲೋಹರ್ ಆಯ್ಕೆ
2 ವರ್ಷಗಳ ಹಿಂದೆ ರಜನಿಕಾಂತ್ ನಟನೆಯ 'ವೇಟ್ಟೈಯನ್' ಚಿತ್ರವನ್ನು ನಿರ್ದೇಶಿಸಿದ್ದ ಜ್ಞಾನವೇಲ್‌ಗೆ ಪುನಃ ಮತ್ತೊಂದು ಚಾನ್ಸ್ ನೀಡಿದ್ದಾರೆ ಸೂರ್ಯ. ಚಿತ್ರತಂಡದ ಪ್ರಕಾರ, ಇದೊಂದು ಕಮರ್ಷಿಯಲ್ ಅಂಶಗಳ ಜೊತೆಗೆ ನೈಜ ಘಟನೆಗಳ ಆಧಾರಿತ ಕಥಾಹಂದರವನ್ನು ಹೊಂದಿದ ಸಿನಿಮಾವಾಗಿದೆಯಂತೆ. ಡ್ರ್ಯಾಗನ್ ಸಿನಿಮಾ ಖ್ಯಾತಿಯ ನಟಿ ಕಯಾದು ಲೋಹರ್ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಹೇಳಿದ್ದೇನು?
ಈ ಸಿನಿಮಾವನ್ನು ಅನೌನ್ಸ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ಸೂರ್ಯ ಅವರ ಸಿನಿಮಾ ಜರ್ನಿಯನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. "ಅವರು ಇದನ್ನು ಕಟ್ಟುನಿಟ್ಟಾಗಿ ಬೆಳೆಸಿದ್ದಾರೆ. ಪ್ರತಿ ಫ್ರೇಮ್ ಬೈ ಫ್ರೇಮ್, ಸಿನಿಮಾ ಬೈ ಸಿನಿಮಾ, ಫೈಟ್ ಬೈ ಫೈಟ್. ಸತ್ಯವನ್ನು ಬಿಂಬಿಸುವ ಪಾತ್ರಗಳು, ನೈಜ ಜೀವನದ ಭಾರವನ್ನು ಹೊತ್ತ ಕ್ಯಾರೆಕ್ಟರ್‌ಗಳು. ಧೈರ್ಯ, ನಂಬಿಕೆ ಮತ್ತು ಕೌಶಲ್ಯದಿಂದ ಕೂಡಿದ ಪಯಣವಿದು" ಎಂದು ಬರೆದುಕೊಂಡಿದೆ.
"ಬೆಳ್ಳಿತೆರೆಯ ಮೇಲೆ ಮೂರು ದಶಕಗಳ ಕಾಲ ಸತ್ಯವನ್ನು ಜೀವಿಸಿದ್ದಾರೆ. ಅದರಾಚೆಗೂ ಅಸಂಖ್ಯಾತ ಹೃದಯಗಳನ್ನು ಗೆದ್ದಿದ್ದಾರೆ. ಈಗ, ಈ ಪೀಳಿಗೆಯ ಅತ್ಯಂತ ನಿರ್ಭೀತ ನಟ ತನ್ನ ವೃತ್ತಿಜೀವನದ ಅತಿ ದೊಡ್ಡ ವೇದಿಕೆಗೆ ಹೆಜ್ಜೆ ಇಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಹೆಮ್ಮೆಯಿಂದ 'ದ ಒನ್ ಅಂಡ್ ಓನ್ಲಿ' ಸೂರ್ಯ ಅವರನ್ನು ಸ್ವಾಗತಿಸುತ್ತದೆ" ಎಂದು ತಿಳಿಸಿದೆ.
ಹಾಲಿವುಡ್‌ನ ‘ಅನಕೊಂಡ’ ಚಿತ್ರದ ಕರ್ನಾಟಕದ ವಿತರಣೆ ಹಕ್ಕುಗಳನ್ನು ಪಡೆದ ಹೊಂಬಾಳೆ ಫಿಲ್ಮ್ಸ್
ಎಲ್ಲರಿಗೂ ಕನೆಕ್ಟ್ ಆಗುವಂತಹ ಕಥೆ ಹೇಳ್ತೀವಿ
ಈ ಕುರಿತು ಮಾತನಾಡಿದ ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರು, "ಸಿನಿಮಾ ಮೇಲಿನ ಅಪಾರ ಪ್ರೀತಿ ಮತ್ತು ಹಂಬಲವಿರುವ ವ್ಯಕ್ತಿಗಳು ಒಂದೇ ದೃಷ್ಟಿಕೋನದೊಂದಿಗೆ ಒಟ್ಟಿಗೆ ಸೇರಿದಾಗ ಶಕ್ತಿಶಾಲಿ ಸಿನಿಮಾ ಜನ್ಮತಾಳುತ್ತದೆ ಎಂದು ಹೊಂಬಾಳೆ ಫಿಲ್ಮ್ಸ್ ಯಾವಾಗಲೂ ನಂಬುತ್ತೇವೆ. ಸೂರ್ಯ ಮತ್ತು ಟಿ.ಜೆ. ಜ್ಞಾನವೇಲ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಪ್ರಾಮಾಣಿಕ, ಅರ್ಥಪೂರ್ಣ ಹಾಗೂ ವಿಶ್ವಾದ್ಯಂತ ಪ್ರೇಕ್ಷಕರಿಗೆ ಕನೆಕ್ಟ್ ಆಗುವಂತಹ ಕಥೆಯನ್ನು ಹೇಳುವ ನಿಟ್ಟಿನಲ್ಲಿ ಇಟ್ಟಿರುವ ಒಂದು ದೊಡ್ಡ ಹೆಜ್ಜೆಯಾಗಿದೆ" ಎಂದಿದ್ದಾರೆ.
ಸಂಗೀತ ನೀಡಲಿದ್ದಾರೆ ಸಾಯಿ ಅಭ್ಯಂಕರ್
ಸದ್ಯದ ಸೆನ್ಸೇಷನಲ್ ಸಂಗೀತ ನಿರ್ದೇಶಕ ಸಾಯಿ ಅಭ್ಯಂಕರ್ ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಎಸ್.ಆರ್. ಕಧಿರ್ ಅವರ ಛಾಯಾಗ್ರಹಣ ಹಾಗೂ ಫಿಲೋಮಿನ್ ರಾಜ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ವಿಜಯ್ ಕಿರಗಂದೂರು ನಿರ್ಮಿಸುತ್ತಿರುವ ಈ ಚಿತ್ರದ ಭರ್ಜರಿ ಮುಹೂರ್ತ ಚೆನ್ನೈನಲ್ಲಿ ನೆರವೇರಿದ್ದು, ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಶೀರ್ಷಿಕೆ ಮತ್ತು ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ತಿಳಿಸಬೇಕಿದೆ.
ಸದ್ಯ ಸೂರ್ಯ ನಟನೆಯ ವಿಶ್ವನಾಥ್ ಆಂಡ್ ಸನ್ಸ್ ಸಿನಿಮಾವು ಆಗಸ್ಟ್‌ನಲ್ಲಿ ರಿಲೀಸ್ ಆಗಲಿದ್ದು, ಅದಾದ ಮೇಲೆ ಜೀತು ಮಾಧವನ್ ನಿರ್ದೇಶನದ ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಸೂರ್ಯ ಅದಾಗಲೇ ಮುಗಿಸಿದ್ದು, ಸದ್ಯ ಹೊಂಬಾಳೆ ಫಿಲ್ಮ್ಸ್‌ನ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲು ಅಣಿಯಾಗಿದ್ದಾರೆ.