ತಿರುಪರಂಕುಂದ್ರಂ ದೀಪಾಲಂಕಾರ ವಿವಾದ: ಆಡಳಿತ ಮಂಡಳಿ ಅಮಾನತು, ನಾಳೆ ದೀಪ ಬೆಳಗಲು ಸುಪ್ರೀಂ ಆದೇಶ
ತಮಿಳುನಾಡಿನ ಮಧುರೈ ಸಮೀಪದ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ 'ದೀಪತೂಣ್' (ಕಲ್ಲಿನ ಸ್ತಂಭ) ಬಳಿ ಕಾರ್ತಿಕ ದೀಪ ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಐತಿಹಾಸಿಕ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ ದೇವಾಲಯದ ಆಡಳಿತ ಮಂಡಳಿಯನ್ನು ತಕ್ಷಣ ವಜಾಗೊಳಿಸಿದೆ.
ಸಂಗ್ರಹ ಚಿತ್ರ -
ಚೆನ್ನೈ: ತಮಿಳುನಾಡಿನ ಮಧುರೈ ಸಮೀಪದ ತಿರುಪರಂಕುಂದ್ರಂ ಬೆಟ್ಟದ (Thiruparankundram hilltop) ಮೇಲಿರುವ 'ದೀಪತೂಣ್' (ಕಲ್ಲಿನ ಸ್ತಂಭ) ಬಳಿ ಕಾರ್ತಿಕ ದೀಪ ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಐತಿಹಾಸಿಕ ಆದೇಶ ಹೊರಡಿಸಿದೆ. ನ್ಯಾಯಾಲಯದ ಈ ಹಿಂದಿನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಕಾರಣಕ್ಕಾಗಿ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಟ್ರಸ್ಟಿಗಳ ಮಂಡಳಿಯನ್ನು ತಕ್ಷಣ ಅಮಾನತುಗೊಳಿಸಿರುವ ನ್ಯಾಯಾಲಯ, ನಾಳೆ ದೀಪತೂಣ್ ಬಳಿ ಕಾರ್ತಿಕ ದೀಪವನ್ನು ಬೆಳಗಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ದ್ವಿಸದಸ್ಯ ಪೀಠವು, ಅರ್ಜಿಗಳ ವಿಚಾರಣೆ ನಡೆಸಿ ತಮಿಳುನಾಡು ಸರ್ಕಾರದ ಆಡಳಿತ ಯಂತ್ರ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ದೇವಸ್ಥಾನದ ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸಿರುವ ನ್ಯಾಯಾಲಯ, ದೇವಸ್ಥಾನದ ಆಡಳಿತವನ್ನು ತಕ್ಷಣವೇ ವಹಿಸಿಕೊಳ್ಳಲು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಎಸ್. ವೈದ್ಯನಾಥನ್ ಮತ್ತು ವಿ. ಪಾರ್ಥಿಬನ್ ಅವರನ್ನು ಆಡಳಿತಾಧಿಕಾರಿಗಳಾಗಿ ನೇಮಿಸಿದೆ.
ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ತಮಿಳುನಾಡು ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ದೇವಸ್ಥಾನ, ದೀಪತೂಣ್ ಹಾಗೂ ದರ್ಗಾ ಸೇರಿದಂತೆ ಇಡೀ ತಿರುಪರಂಕುಂದ್ರಂ ಬೆಟ್ಟದ ಭದ್ರತೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಗೆ (CRPF) ವಹಿಸಿದೆ . ಎರಡೂ ಧರ್ಮದ ಭಕ್ತರು ತಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಶಾಂತಿಯುತವಾಗಿ ನೆರವೇರಿಸಲು ಅಗತ್ಯ ರಕ್ಷಣೆ ಒದಗಿಸುವಂತೆ ಕೇಂದ್ರ ಪಡೆಗಳಿಗೆ ಸೂಚಿಸಲಾಗಿದೆ.
ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣಕ್ಕಾಗಿ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಎಂ. ಸಾಯಿಕುಮಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಡಾ. ಮಹೇಶ್ ಅಗರ್ವಾಲ್, ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಕಾರ್ಯದರ್ಶಿ ವಿ. ರಾಜಾರಾಮ್, ಆಯುಕ್ತ ಟಿ.ಜಿ. ವಿನಯ್, ಮಧುರೈ ಜಿಲ್ಲಾಧಿಕಾರಿ ನಿಶಾಂತ್ ಕೃಷ್ಣ, ಎಸ್‌ಪಿ ಎಲ್. ದೇವನಾಥನ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಜಿ. ಸೆಲ್ವಿ ಹಾಗೂ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ವಿ. ಷಣ್ಮುಗಸುಂದರಂ ಸೇರಿದಂತೆ ಎಲ್ಲಾ ಟ್ರಸ್ಟಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗಿದೆ.
ಏನಿದು ವಿವಾದ?
ತಿರುಪ್ಪರಂಕುಂದ್ರಂ ಬೆಟ್ಟದ ಕೆಳಭಾಗದಲ್ಲಿರುವ ಉಚ್ಚಿ ಪಿಳ್ಳೈಯಾರ್ ದೇವಸ್ಥಾನದ ಬಳಿಯ 'ದೀಪ ಮಂಟಪ'ದಲ್ಲಿ ದಶಕಗಳಿಂದ ಕಾರ್ತಿಕ ದೀಪ ಬೆಳಗುವುದು ವಾಡಿಕೆಯಾಗಿತ್ತು. ಆದರೆ, ಬೆಟ್ಟದ ಮೇಲ್ಭಾಗದಲ್ಲಿ ದರ್ಗಾದ ಸಮೀಪವಿರುವ ಕಲ್ಲಿನ ಸ್ತಂಭವಾದ 'ದೀಪತ್ತೂಣ್' ಮೇಲೆ ಸಾಂಪ್ರದಾಯಿಕ ದೀಪ ಬೆಳಗಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. 2025ರ ಡಿಸೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್‌ನ ಏಕಸದಸ್ಯ ಪೀಠವು ದೀಪತ್ತೂಣ್‌ನಲ್ಲಿ ದೀಪ ಬೆಳಗಲು ಅನುಮತಿ ನೀಡಿತ್ತು ಹಾಗೂ 2026ರ ಜನವರಿ 6ರಂದು ವಿಭಾಗೀಯ ಪೀಠವು ಅದನ್ನು ಎತ್ತಿಹಿಡಿದಿತ್ತು. ಕಾನೂನು ಸುವ್ಯವಸ್ಥೆ ಮತ್ತು ಧಾರ್ಮಿಕ ಸೂಕ್ಷ್ಮತೆಯ ಕಾರಣ ನೀಡಿ ತಮಿಳುನಾಡು ಸರ್ಕಾರ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಸಂವಿಧಾನದ 25 ಮತ್ತು 26ನೇ ವಿಧಿಯ ಅಡಿಯಲ್ಲಿ ಬರುವ ಧಾರ್ಮಿಕ ಹಕ್ಕುಗಳು ಹಾಗೂ ಸ್ಥಳದ ಮಾಲೀಕತ್ವದ ಕುರಿತ ಮೂಲ ಅರ್ಜಿಗಳ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್ 2027ರ ಜನವರಿ ಎರಡನೇ ವಾರಕ್ಕೆ ಮುಂದೂಡಿದೆ.
Mysuru Dasara 2025: ದಸರಾ ದೀಪಾಲಂಕಾರ ಮತ್ತು ಡ್ರೋನ್ ಶೋ ಪೋಸ್ಟರ್, ಟೀಸರ್ ಬಿಡುಗಡೆ ಮಾಡಿದ ಸಚಿವ ಎಚ್.ಸಿ.ಮಹದೇವಪ್ಪ
ನವೆಂಬರ್ 24ರಂದು ನಡೆದ ಕಾರ್ತಿಕ ದೀಪೋತ್ಸವದಂದು ಬೆಟ್ಟದ ಮೇಲಿರುವ ವಿವಾದಿತ ದೀಪತೂಣ್ ಕಲ್ಲಿನ ಸ್ತಂಭದ ಬಳಿ ದೀಪ ಬೆಳಗಿಸಲು ಸುಪ್ರೀಂ ಕೋರ್ಟ್ ನವೆಂಬರ್ 20ರಂದು ಒಂದು ಬಾರಿಯ ಅನುಮತಿ ನೀಡಿತ್ತು. ಆದರೆ, ದೇವಸ್ಥಾನದ ಟ್ರಸ್ಟಿಗಳ ವಿರೋಧದ ಕಾರಣದಿಂದ ಅಂದು ದೀಪತೂಣ್ ಬದಲಿಗೆ ಸಾಂಪ್ರದಾಯಿಕ ಉಚ್ಚಿಪಿಳ್ಳೈಯಾರ್ ಮಂಟಪದಲ್ಲಿ ಮಾತ್ರ ದೀಪ ಬೆಳಗಿಸಲಾಗಿತ್ತು. ಈ ಕುರಿತು ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಈ ಕಠಿಣ ಕ್ರಮ ಕೈಗೊಂಡಿದೆ.