ತಮಿಳು ಚಿತ್ರರಂಗದಲ್ಲಿ ಅಚ್ಚರಿಯ ಬೆಳವಣಿಗೆ; ಸೆ.1ರಿಂದ ನೋ ಸಿನಿಮಾ ರಿಲೀಸ್, ನೋ ಶೂಟಿಂಗ್! ಇಂಥ ನಿರ್ಧಾರಕ್ಕೆ ಕಾರಣವೇನು?
ತಮಿಳುನಾಡು ಚಿತ್ರರಂಗ ತೀವ್ರ ಬಿಕ್ಕಟ್ಟಿಗೆ ಸಿಲುಕಿದ್ದು, ಸೆಪ್ಟೆಂಬರ್ 1ರಿಂದ ಚಿತ್ರೀಕರಣ ಮತ್ತು ಸಿನಿಮಾ ಬಿಡುಗಡೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಲು ನಿರ್ಮಾಪಕರ ಮಂಡಳಿ ನಿರ್ಧರಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 8 ವಾರಗಳ ಬಳಿಕವಷ್ಟೇ ಒಟಿಟಿ ಪ್ರಸಾರ ಮಾಡಬೇಕೆಂಬ ವಿತರಕರ ಆಗ್ರಹವೇ ಈ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.
-
ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (TFPC) ಹಾಗೂ ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕರ ಸಂಘ ಜಂಟಿಯಾಗಿ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 1ರಿಂದ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಯಾವುದೇ ಹೊಸ ತಮಿಳು ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಅಲ್ಲದೆ, ಅಂದಿನಿಂದಲೇ ಚಿತ್ರೀಕರಣ ಮತ್ತು ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಇಂಥ ಕಠಿಣ ನಿರ್ಧಾರಕ್ಕೆ ಕಾರಣವೇನು?
ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾಗಳ ಪ್ರಸಾರ ವಿಚಾರವಾಗಿ ತಮಿಳುನಾಡು ವಿತರಕರು ಹಾಗೂ ಚಿತ್ರಮಂದಿರ ಮಾಲೀಕರೊಂದಿಗೆ ಉಂಟಾಗಿರುವ ಭಿನ್ನಾಭಿಪ್ರಾಯವೇ ಈ ಬಿಕ್ಕಟ್ಟಿಗೆ ಮುಖ್ಯ ಕಾರಣ. ನಿರ್ಮಾಪಕರ ಪ್ರಕಾರ, ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದ 8 ವಾರಗಳ ನಂತರವಷ್ಟೇ ಒಟಿಟಿಯಲ್ಲಿ ಪ್ರಸಾರ ಮಾಡಬೇಕೆಂದು ವಿತರಕರ ಹಾಗೂ ಚಿತ್ರಮಂದಿರ ಮಾಲೀಕರ ಸಂಘಗಳು ಷರತ್ತು ವಿಧಿಸುತ್ತಿವೆ. ಇದರ ಜೊತೆಗೆ, ಹೊಸ ತಮಿಳು ಚಿತ್ರಗಳ ಬಿಡುಗಡೆಗೆ ಇನ್ನು ಮುಂದೆ ಯಾವುದೇ ಮುಂಗಡ ಹಣ ನೀಡುವುದಿಲ್ಲ ಎಂಬ ನಿರ್ಧಾರವನ್ನೂ ಕೈಗೊಂಡಿವೆ.
ನಾಲ್ಕು ವಾರಗಳ ನಿಯಮ ಹಾಗೂ ವಿವಾದ
ಇದು ವಿತರಕರು ಮತ್ತು ಚಿತ್ರಮಂದಿರ ಮಾಲೀಕರ ಏಕಪಕ್ಷೀಯ ನಿರ್ಧಾರವಾಗಿದ್ದು, ಈ ಬಗ್ಗೆ ತಮ್ಮೊಂದಿಗೆ ಯಾವುದೇ ಪೂರ್ವ ಸಮಾಲೋಚನೆ ನಡೆಸಿಲ್ಲ ಎಂದು ನಿರ್ಮಾಪಕರು ಆರೋಪಿಸಿದ್ದಾರೆ. ಪ್ರಸ್ತುತ, ತಮಿಳು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಾಲ್ಕು ವಾರಗಳ ಬಳಿಕ ಒಟಿಟಿಗೆ ಬರುತ್ತಿವೆ. ಒಟಿಟಿ ಬಿಡುಗಡೆಯ ಕಾಲಾವಧಿಯ ಬಗೆಗಿನ ಚರ್ಚೆ ಹಲವು ವರ್ಷಗಳಿಂದ ನಡೆಯುತ್ತಿದ್ದರೂ, ಇದುವರೆಗೆ ಯಾವುದೇ ಸ್ಪಷ್ಟ ಹಾಗೂ ಒಮ್ಮತದ ಪರಿಹಾರ ಸಿಕ್ಕಿಲ್ಲ.
ನಮ್ಮೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ
ಆಗಸ್ಟ್ 22ರಂದು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಮತ್ತು ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕರ ಸಂಘ ಅಧಿಕೃತ ಪ್ರಕಟಣೆ ಹೊರಡಿಸಿದೆ. "ಸೆಪ್ಟೆಂಬರ್ 1ರಿಂದ ಹೊಸ ತಮಿಳು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 8 ವಾರಗಳ ನಂತರವೇ ಒಟಿಟಿಗೆ ಬರಬೇಕು ಎಂದು ತಮಿಳುನಾಡು ಚಿತ್ರಮಂದಿರ ವಿತರಕರ ಸಂಘ ಮತ್ತು ಥಿಯೇಟರ್ ಮಾಲೀಕರ ಸಂಘಗಳು ಜಂಟಿಯಾಗಿ ನಿರ್ಧರಿಸಿವೆ. ಜೊತೆಗೆ ಹೊಸ ಚಿತ್ರಗಳಿಗೆ ಯಾವುದೇ ಮುಂಗಡ ಹಣ ನೀಡುವುದಿಲ್ಲ ಎಂದೂ ತೀರ್ಮಾನಿಸಿವೆ. ಈ ನಿರ್ಧಾರದ ಕುರಿತು ನಿರ್ಮಾಪಕರ ಮಂಡಳಿ, ಸಕ್ರಿಯ ನಿರ್ಮಾಪಕರ ಸಂಘ ಅಥವಾ ಚಿತ್ರರಂಗದ ಇತರೆ ಯಾವುದೇ ಸಂಘಟನೆಗಳೊಂದಿಗೆ ಚರ್ಚೆ ನಡೆಸಿಲ್ಲ. ಆದ್ದರಿಂದ, ಇಂತಹ ಪರಿಸ್ಥಿತಿಯಲ್ಲಿ ಹೊಸ ಚಿತ್ರಗಳನ್ನು ಬಿಡುಗಡೆ ಮಾಡದಿರಲು ನಿರ್ಮಾಪಕರ ಮಂಡಳಿ ತೀರ್ಮಾನಿಸಿದೆ" ಎಂದು ತಿಳಿಸಿದೆ.
ಚಿತ್ರೀಕರಣ, ಪೋಸ್ಟ್-ಪ್ರೊಡಕ್ಷನ್ ಸಂಪೂರ್ಣ ಬಂದ್
"ನಿರ್ಮಾಪಕರನ್ನು ಸಂಪರ್ಕಿಸದೆ ವಿತರಕರ ಮತ್ತು ಚಿತ್ರಮಂದಿರ ಮಾಲೀಕರ ಸಂಘಗಳು ಏಕಪಕ್ಷೀಯವಾಗಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಸೆಪ್ಟೆಂಬರ್ 1ರಿಂದ ಯಾವುದೇ ಹೊಸ ತಮಿಳು ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಿಲ್ಲ. ಜೊತೆಗೆ ತಮಿಳು ಸಿನಿಮಾಗಳಿಗೆ ಸಂಬಂಧಿಸಿದ ಚಿತ್ರೀಕರಣ ಹಾಗೂ ಪೋಸ್ಟ್-ಪ್ರೊಡಕ್ಷನ್ ಕೆಲಸಗಳನ್ನೂ ನಿಲ್ಲಿಸಲು ನಿರ್ಧರಿಸಲಾಗಿದೆ" ಎಂದು ಟಿಎಫ್‌ಪಿಸಿ ಉಪಾಧ್ಯಕ್ಷ ಎಸ್. ಕಮಲಕ್ಕಣ್ಣನ್ ಹಾಗೂ ಕಾರ್ಯದರ್ಶಿಗಳಾದ ಎಸ್. ಕದಿರೇಸನ್, ಆರ್. ರಾಧಾಕೃಷ್ಣನ್ ಅವರು ಸಂಘಟನೆಗಳ ಪರವಾಗಿ ಸ್ಪಷ್ಟಪಡಿಸಿದ್ದಾರೆ.
ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ದೊಡ್ಡ ಹೊಡೆತ
ತಮಿಳು ಚಿತ್ರರಂಗದಲ್ಲಿ ವರ್ಷಕ್ಕೆ ಸುಮಾರು 250 ಸಿನಿಮಾಗಳು ತೆರೆಕಾಣುತ್ತಿದ್ದು, ನಿರ್ಮಾಪಕರು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ದಶಕಗಳಿಂದ ನಡೆದುಕೊಂಡು ಬಂದಿರುವಂತೆ ವಿತರಕರಿಂದ ಮುಂಗಡ ಹಣ ಬಾರದಿದ್ದರೆ, ಹಲವು ನಿರ್ಮಾಪಕರಿಗೆ ತಮ್ಮ ಸಿನಿಮಾಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿ ಬಿಡುಗಡೆ ಮಾಡುವುದು ಅಸಾಧ್ಯವಾಗುತ್ತದೆ. ಪ್ರದರ್ಶಕರ ಈ ನಿರ್ಧಾರವು ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂಬುದು ನಿರ್ಮಾಪಕರ ಆತಂಕವಾಗಿದೆ.
ಸರ್ಕಾರ ಮಧ್ಯಪ್ರವೇಶಕ್ಕೆ ಮನವಿ
ಸೆಪ್ಟೆಂಬರ್ 1ರಿಂದ ತಮಿಳು ಚಿತ್ರರಂಗದ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡರೆ, ಪ್ರಸ್ತುತ ಚಿತ್ರೀಕರಣ ಹಂತದಲ್ಲಿರುವ ಸಿನಿಮಾಗಳ ನಿರ್ಮಾಪಕರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ತಮಿಳುನಾಡು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ನಿರ್ಮಾಪಕರ ಸಂಘಗಳು ಮನವಿ ಮಾಡಿವೆ. ಚಿತ್ರರಂಗವನ್ನೇ ನಂಬಿರುವ ಸಾವಿರಾರು ಕಾರ್ಮಿಕರ ಜೀವನೋಪಾಯದ ದೃಷ್ಟಿಯಿಂದ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.