ಕರ್ನಾಟಕ ಧನ ವಿನಿಯೋಗ ವಿಧೇಯಕದಡಿ 7042.69 ಕೋಟಿ ರೂ. ಪೂರಕ ಅಂದಾಜು ಪ್ರಸ್ತಾವನೆಗೆ ಉಭಯ ಸದನಗಳಲ್ಲಿ ಅನುಮೋದನೆ
Karnataka Monsoon session: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನ ಮಂಡಲದ ಉಭಯ ಸದನಗಳಲ್ಲಿ ಧನ ವಿನಿಯೋಗ ವಿಧೇಯಕದ ಅಡಿ ಪೂರಕ ಅಂದಾಜುಗಳ ಮೊದಲನೆ ಕಂತಿನ ಪ್ರಸ್ತಾವನೆಯನ್ನು ಮಂಡಿಸಿ, ಅನುಮೋದನೆ ಪಡೆದಿದ್ದಾರೆ. 7,042.69 ಕೋಟಿ ರೂ.ಗಳಲ್ಲಿ 4,324.35 ಕೋಟಿ ರೂ. ರಾಜಸ್ವ ವೆಚ್ಚವಾಗಿದ್ದು, 2718.35 ಕೋಟಿ ರೂ. ಬಂಡವಾಳ ವೆಚ್ಚವಾಗಿದೆ.
-
ಬೆಂಗಳೂರು, ಆ. 24: ಪ್ರಸಕ್ತ ಸಾಲಿನ (2026-27) ಕರ್ನಾಟಕ ಧನ ವಿನಿಯೋಗ ವಿಧೇಯಕದ ಅಡಿ ಪೂರಕ ಅಂದಾಜುಗಳ 7,042.69 ಕೋಟಿ ರೂ. ಮೊತ್ತದ ಮೊದಲನೆ ಕಂತಿನ ಪ್ರಸ್ತಾವನೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಸೋಮವಾರ ಅನುಮೋದನೆ ದೊರೆಯಿತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನ ಮಂಡಲದ (Karnataka Monsoon session) ಉಭಯ ಸದನಗಳಲ್ಲಿ ಪ್ರಸ್ತಾವನೆಯನ್ನು ಮಂಡಿಸಿ ವಿವರಿಸಿದರು.
ಇದರಲ್ಲಿ 4,324.35 ಕೋಟಿ ರೂ. ರಾಜಸ್ವ ವೆಚ್ಚವಾಗಿದ್ದು, 2718.35 ಕೋಟಿ ರೂ. ಬಂಡವಾಳ ವೆಚ್ಚವಾಗಿದೆ. ಬರದಿಂದ ಸಂಕಷ್ಟದಲ್ಲಿರುವ ಜನರಿಗೆ ಕುಡಿಯುವ ನೀರನ್ನು ಒದಗಿಸಲು ಜಲಧಾರೆ- ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ಕೋಟಿ ರೂ.ನಂತೆ ಒಟ್ಟು 289 ಕೋಟಿ ರೂ. ಅನುದಾನ ಹಾಗೂ ಬೆಂಗಳೂರು ನಗರದ ರಸ್ತೆ ಅಭಿವೃದ್ಧಿಗಾಗಿ ಮೂಲ ಸೌಕರ್ಯ ಬಂಡವಾಳದಲ್ಲಿ 1 ಸಾವಿರ ಕೋಟಿ ರೂ.ಗಳ ಬಿಡುಗಡೆಯನ್ನು ಒಳಗೊಂಡಿದೆ.
ಮುಖ್ಯಮಂತ್ರಿಗಳ ಮಂಡಿಸಿದ ಪೂರಕ ಅಂದಾಜುಗಳ ಪ್ರಸ್ತಾವನೆಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ ಗಾರ್ ಯೋಜನೆಗೆ 2,918 ಕೋಟಿ ರೂ.ಗಳು, ಭಾರತ್ ಜೋಡೋ ಯುವ ಸಂಘಗಳಿಗೆ 781 ರೂ., ಅಮೃತ ಯೋಜನೆಯಲ್ಲಿ 708 ಕೋಟಿ ರೂ., ರಸ್ತೆ ಸಾರಿಗೆ ನಿಗಮದ ಸರ್ಕಾರಿ ಮೋಟರ್ ವಾಹನ ತೆರಿಗೆ ಷೇರು ಬಂಡವಾಳ ಬದಲಾವಣೆಗೆ 193.61 ಕೋಟಿ, ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲ ಸೌಕರ್ಯ ಅಭಿಯಾನಕ್ಕೆ 152.72 ಕೋಟಿ, ಪ್ರಧಾನ ಮಂತ್ರಿ ಆವಾಸ್ ಗ್ರಾಮೀಣ ಯೋಜನೆ 93 ಕೋಟಿ, ವಿಶ್ವೇಶ್ವರಯ್ಯ ಜಲನಿಗಮ 91 ಕೋಟಿ, ಕೆಕೆಆರ್ ಟಿಸಿ ಬಸ್ ಖರೀದಿ ಅನುದಾನ 96 ಕೋಟಿ ಇತರೆ ಯೋಜನೆಗಳಿಗೆ 738 ಕೋಟಿ ರೂ.ಗಳು ಒಳಗೊಂಡಿದ್ದು, ಉಭಯ ಸದನಗಳಲ್ಲಿ ಅನುಮೋದನೆ ದೊರೆತಿದೆ ಎಂದು ಹೇಳಿದರು.