ಗಾಯಕಿ ಮಂಗ್ಲಿ ಹೆಸರಿನಲ್ಲಿ ನಡೆಯಿತಾ ಮಹಾಮೋಸ? 150 ಕೋಟಿ ರೂ. ವಂಚನೆ ಆರೋಪಕ್ಕೆ ಸಿಕ್ಕ ಉತ್ತರವೇನು?
ಕನ್ನಡದಲ್ಲಿ ಹಲವು ಹಾಡುಗಳನ್ನು ಹಾಡಿ ಫೇಮಸ್ ಆಗಿರುವ ತೆಲುಗು ಗಾಯಕಿ ಮಂಗ್ಲಿ ಅವರ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ವ್ಯವಹಾರ ನಡೆಸಿ ಸುಮಾರು 150 ಕೋಟಿ ರೂಪಾಯಿ ವಂಚಿಸಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ಹಗರಣದಲ್ಲಿ ಮಂಗ್ಲಿ ಅವರ ಸಹೋದರ ಶಿವ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ. ಈ ಬಗ್ಗೆ ಮಂಗ್ಲಿ ಈಗ ತೆರೆ ಎಳೆದಿದ್ದಾರೆ.
-
ಬಹುಭಾಷಾ ಗಾಯಕಿ ಮಂಗ್ಲಿ ಅವರು ಇತ್ತೀಚೆಗೆ ಅನಗತ್ಯ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಕೆಡಿ ಚಿತ್ರದ ಹಿಂದಿ ವರ್ಷನ್‌ನ ‘ಸರ್ಕೆ ಚುನರ್ ತೇರಿ’ ಹಾಡನ್ನು ಇದೇ ಮಂಗ್ಲಿ ಹಾಡಿದ್ದರು. ಆ ಹಾಡು ಎಂಥ ವಿವಾದ ಹುಟ್ಟುಹಾಕಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಆ ವಿಚಾರ ತಣ್ಣಗಾಗುವ ಮುನ್ನವೇ ಈಗ ಮತ್ತೊಂದು ಗಂಭೀರ ಆರೋಪಕ್ಕೆ ಮಂಗ್ಲಿ ಗುರಿಯಾಗಿದ್ದಾರೆ.
ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಂಗ್ಲಿ
ಹೌದು, ಮಂಗ್ಲಿ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ವ್ಯವಹಾರ ನಡೆಯುತ್ತಿದ್ದು, ಆ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಲಾಗಿದೆ ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಸುದ್ದಿಯೊಂದು ಹರಿದಾಡುತ್ತಿತ್ತು. ಇದೀಗ ಆ ಬಗ್ಗೆ ಮಂಗ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸ್ಪಷ್ಟನೆಯನ್ನು ಹಂಚಿಕೊಂಡಿರುವ ಮಂಗ್ಲಿ, "ಇದರ ಬಗ್ಗೆ ನನಗಾಗಲಿ ಅಥವಾ ನನ್ನ ಕುಟುಂಬದವರಿಗಾಗಲಿ ಯಾವುದೇ ಮಾಹಿತಿ ಇರುವುದಿಲ್ಲ" ಎಂದು ಸ್ಪಷ್ಟವಾಗಿ ಮಂಗ್ಲಿ ತಿಳಿಸಿದ್ದಾರೆ.
ಗಾಯಕಿ ಮಂಗ್ಲಿಯಿಂದ ಸಾಂಸ್ಕೃತಿಕ ಸಂಜೆ:ಕುಣಿದು ಕುಪ್ಪಳಿಸಿದ ಯುವ ಸಮೂಹ
ಮಂಗ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
"ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ನನ್ನ ಹೆಸರನ್ನು ಬಳಸಿ, ಕೆಲವರು ಹಣ ವಸೂಲಿ ಮಾಡಿದ್ದಾರೆ ಎಂಬ ಸುದ್ದಿಯನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ. ಆ ವ್ಯಕ್ತಿಗಳಿಗಾಗಲಿ ಅಥವಾ ಅವರ ಫೈನಾನ್ಸ್ ವ್ಯವಹಾರಗಳಿಗಾಗಲಿ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ವೃತ್ತಿಪರ ಕಾರ್ಯಕ್ರಮಗಳಿಗಾಗಿ ನನ್ನನ್ನು ಮತ್ತು ನನ್ನ ತಮ್ಮನನ್ನು ಪ್ರತಿದಿನ ಅನೇಕರು ಸಂಪರ್ಕಿಸುತ್ತಾರೆ. ಅದು ಕೇವಲ ಆಹ್ವಾನದ ವಿವರಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಹೊರತು, ಅವರ ವೈಯಕ್ತಿಕ ವ್ಯವಹಾರಗಳ ಬಗ್ಗೆ ನನಗಾಗಲಿ ಅಥವಾ ನನ್ನ ಕುಟುಂಬದವರಿಗಾಗಲಿ ಯಾವುದೇ ಮಾಹಿತಿ ಇರುವುದಿಲ್ಲ" ಎಂದು ಮಂಗ್ಲಿ ತಿಳಿಸಿದ್ದಾರೆ.
ರಾಬರ್ಟ್ ಮಂಗ್ಲಿಯ ಡ್ಯಾನ್ಸ್ ವಿಡಿಯೋ ವೈರಲ್
ಪೊಲೀಸ್ ಇಲಾಖೆಗೆ ಮನವಿ ಮಾಡಿದ ಮಂಗ್ಲಿ
"ಕೆಲವರು ಬೇಕೆಂದೇ ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನೋಟಿನ ಕಂತೆಗಳ ವಿಡಿಯೋಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಸಂಗೀತ ಕಾರ್ಯಕ್ರಮಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ವ್ಯವಹಾರಗಳಿಲ್ಲ. ದಯವಿಟ್ಟು ಯಾರಾದರೂ ನನ್ನ ಹೆಸರು ಹೇಳಿ ದುಡ್ಡು ಕೇಳಿದರೆ ಕೊಡಬೇಡಿ, ಅವರನ್ನು ನಂಬಬೇಡಿ. ಈ ರೀತಿ ಮೋಸ ಹೋದವರಿಗೆ ನ್ಯಾಯ ಒದಗಿಸಬೇಕೆಂದು ನಾನು ಪೊಲೀಸ್ ಇಲಾಖೆಯನ್ನು ವಿನಂತಿಸುತ್ತೇನೆ" ಎಂದು ಮಂಗ್ಲಿ ಮನವಿ ಮಾಡಿದ್ದಾರೆ.
ಅಷ್ಟಕ್ಕೂ ಏನಿದು ವಿವಾದ?
ಮಂಗ್ಲಿ ಹೆಸರಿನಲ್ಲಿ ಸುಮಾರು 150 ಕೋಟಿ ರೂಪಾಯಿ ಮೈಕ್ರೋ ಫೈನಾನ್ಸ್ ಹಗರಣ ನಡೆದಿದೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಹಗರಣದಲ್ಲಿ ಮಂಗ್ಲಿ ಸಹೋದರ ಶಿವ ಭಾಗಿಯಾಗಿದ್ದಾರೆ ಮತ್ತು ಅವರ ಮನೆಯಲ್ಲಿ ನೋಟಿನ ಕಂತೆಗಳಿವೆ ಎಂಬ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಹರಿದಾಡುತ್ತಿದ್ದವು. ಆದರೆ, ಈ ವಿಡಿಯೋಗಳು ಸುಳ್ಳು ಎಂದು ಮಂಗ್ಲಿ ಈಗ ಸ್ಪಷ್ಟನೆ ನೀಡಿದ್ದಾರೆ. ಅಂದಹಾಗೆ, ಈ ಹಿಂದೆ ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡ್ರಗ್ಸ್ ಬಳಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಹೀಗೆ ಸಾಲು ಸಾಲು ವಿವಾದಗಳಲ್ಲಿ ಮಂಗ್ಲಿ ಹೆಸರು ಪದೇಪದೇ ಕೇಳಿಬರುತ್ತಿದೆ.